ನ್ನತ ಶಿಕ್ಷಣಕ್ಕಾಗಿ ನನ್ನೂರು ಬಿಟ್ಟು ಬಂದರೂ ಸಹ ಕ್ಲಾಸಿನಲ್ಲಿ ನಿಮ್ಮ ಪರಿಚಯ ಮಾಡಿಕೊಳ್ಳಿ ಎಂದು ಮಾಸ್ತರು ಹೇಳಿದಾಗ ನಮ್ಮ ಹೆಸರು ಹೇಳಿದ ನಂತರ 'ತೀರ್ಥಹಳ್ಳಿ' ಇಂದ ಬಂದಿದ್ದೇನೆ ಎಂದು ಹೇಳಲು ಏನೋ ಒಂದು ಹೆಮ್ಮೆ ಮತ್ತು ಗರ್ವ. ಕಾರಣ ಇಷ್ಟೇ - ಅದು ನನ್ನೂರು! ನನಗೆ ಬರಹಗಳನ್ನು ಬರೆದು ಗೊತ್ತಿಲ್ಲ ಎಂದು ಎಷ್ಟೇ ಹೇಳಿದರೂ ಕೂಡ ನನ್ನ ಸ್ನೇಹಿತ ನಿನಗೆ ತೋಚಿದ್ದನ್ನು ಬರಿ, ಅದರಲ್ಲಿ ಏನೇ ತಪ್ಪಾದರೂ ನಾನು ಸಹಾಯ ಮಾಡಲು ಇರುತ್ತೇನೆ ಎಂದು ಹೇಳಿದ ಕಾರಣ ಸ್ವಲ್ಪ ಧೈರ್ಯದಿಂದ ಹಾಗಾದರೆ ಬರೆಯುವೆ ಎಂದು ಒಪ್ಪಿಕೊಂಡೆ. ಒಪ್ಪಿಕೊಂಡ ನಂತರ ಯಾವುದರ ಬಗ್ಗೆ ಬರಹವನ್ನು ಬರೆಯುವುದು ಎಂದು ಯೋಚಿಸುವ ಮುನ್ನ ನನ್ನೂರಿನ ಬಗ್ಗೆಯೇ ಏಕೆ ಬರೆಯಬಾರದೆಂದು ಐಡಿಯಾ ಹೊಳೆಯಿತು. ಹಾಗಾದ್ರೆ ಬನ್ನಿ 'ನಮ್ಮ ತೀರ್ಥಹಳ್ಳಿ'ಗೆ ಒಂದು ಸಣ್ಣ ಟ್ರಿಪ್ ಹೋಗಿ ಬರುವ..

ಹಿಂದೆ ಇಲ್ಲಿನ ತುಂಗಾ ನದಿಯಲ್ಲಿ ಹಲವಾರು ತೀರ್ಥಗಳಿದ್ದ ಕಾರಣ ತೀರ್ಥರಾಜಪುರ ಎಂದು ಕರೆಯಲಾಗುತ್ತಿದ್ದ ಊರು ಮುಂದೆ ತೀರ್ಥಹಳ್ಳಿ ಎಂದು ಬದಲಾಯಿತು. ತೀರ್ಥಹಳ್ಳಿ ಎಂದ ತಕ್ಷಣ ಮೊದಲು ಕಣ್ಣ ಮುಂದೆ ಬರುವುದು ಅಲ್ಲಿನ ಮಲೆನಾಡಿನ ಪರಿಸರ, ಇಲ್ಲಿನ ಜನರ ಬದುಕು, ಚಳಿ, ಮಳೆ ಹೀಗೆ ಮತ್ತೂ ಒಂದಷ್ಟು ಸಂಗತಿಗಳು. 'ಮಲೆನಾಡಿನ ಹೆಬ್ಬಾಗಿಲು' ಎಂದೇ ಪ್ರಸಿದ್ಧವಾದ ಶಿವಮೊಗ್ಗದ ಸಪ್ತ ತಾಲ್ಲೂಕಿನಲ್ಲಿ ಒಂದಾದ ತೀರ್ಥಹಳ್ಳಿಯೂ ಕೂಡ ಸಂಪೂರ್ಣ ಮಲೆನಾಡು ಪ್ರದೇಶ. ಇಲ್ಲಿನ ಬಹುತೇಕ ಜನರು ತಮ್ಮ ಆದಾಯ ಮೂಲವಾಗಿ ಅಡಕೆ ಬೆಳೆಯನ್ನು ಅವಲಂಬಿಸಿಕೊಂಡಿದ್ದಾರೆ. 

ಈ ಅಡಕೆ ಅಂದ ತಕ್ಷಣ ನೆನಪಾಗುವುದು ಅಡಕೆ ಕೊಯ್ಲಿನ ಸಮಯದ ಕೆಲಸಗಳು. ಅಡಿಕೆ ಒಣಗಿಸುವ ಚಪ್ಪರ, ಮುಂಜಾನೆ ಬೆಳಕಾಗುವ ಮುಂಚೆಯೇ ಅಡಿಕೆ ಬೇಯಿಸಲು ಒಲೆಗೆ ಒಂದು ದೊಡ್ಡ ಹಂಡೆಯನ್ನಿಟ್ಟು ಬೆಂಕಿ ಹಾಕಿದಾಗ ನಾವು ಎದ್ದ ತಕ್ಷಣವೇ ಮುಖ ತೊಳೆದುಕೊಂಡು ಆ ಒಲೆ ಮುಂದೆ ಕೂತು ಬೆಂಕಿಯ ಶಾಖವನ್ನು ತೆಗೆದುಕೊಳ್ಳುತ್ತಾ ಅಲ್ಲಿಂದಲೇ ಅಮ್ಮಾ ಬಿಸಿ ಬಿಸಿ ಕಾಫಿ ಎಂದು ಕೂಗುವುದು. “ನಿಂಗೆ ಎಲ್ಲಾ ಕೈ ಬುಡಕ್ಕೆ ತಂದುಕೊಡಬೇಕಲಾ” ಅಂತ ನಮ್ಮ ಸೋಮಾರಿತನವನ್ನು ಹೊಗಳುತ್ತಾ ಬಂದರೂ ಕೂಡ ಅಮ್ಮ ಮಾಡಿದ ಕಾಫಿಯು ಬೆಳಗಿನ ಚಳಿಗೆ ಮತ್ತೂ ಒಲೆಯ ಶಾಖಕ್ಕೆ ಒಳ್ಳೆ ಕಂಪೆನಿಯನ್ನು ನೀಡುತ್ತಿತ್ತು.

ಅಡಕೆ ಕೊಯ್ಲಿನ ಬಹು ದೊಡ್ಡ ಸಮಸ್ಯೆಯೆಂದರೆ ಕೊನೆಗಾರನನ್ನು ಹಿಡಿಯುವುದು. ಆ ಕೊನೆಗಾರನು ಬೇರೆ ಕಡೆಯೆಲ್ಲಾ ಮುಗಿಸಿ ಬರುವುದರೊಳಗೆ ನಮ್ಮ ತೋಟದ ಅಡಕೆ ಕೊನೆಯೆಲ್ಲಾ ಹಣ್ಣಾಗಿ ಗೋಟಾಗಿಬಿಡುತ್ತಿದ್ದವು. ಆದರೂ ನಾವು ಸಣ್ಣವರಾಗಿದ್ದಾಗ ಕೊನೆ ತೆಗೆಯುವಾಗ ಅಪ್ಪನೊಂದಿಗೆ ತೋಟಕ್ಕೆ ಹೋಗಿ ಕೊನೆಗಾರನು ಅಷ್ಟುದ್ದದ ಅಡಕೆ ಮರವನ್ನು ಹತ್ತುವ ಬಗೆಯನ್ನು ಕಣ್ಣು ಮೂಗು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು.

ಈ ಅಡಿಕೆಯು ಕ್ಯಾನ್ಸರಿಗೆ ಕಾರಣವೆಂದು ಒಂದು ಸುದ್ದಿಯೂ ಎಲ್ಲೆಡೆ ಹಬ್ಬಿ, ಕೇಂದ್ರ ಸರ್ಕಾರವು ಅಡಿಕೆ ಬೆಳೆಯನ್ನು ಬ್ಯಾನ್ ಮಾಡುತ್ತದೆ ಎಂಬ ಗಾಳಿ ಮಾತೂ ಸಹ ಅಡಿಕೆ ಬೆಳೆಗಾರರಲ್ಲಿ ಭಯ ಹುಟ್ಟಿಸಿದಾಗ ನಮ್ಮ ತೀರ್ಥಹಳ್ಳಿ ಸಮೀಪದ ಮಂಡಗದ್ದೆಯ ನಿವೇದನ್ ನೆಂಪೆ ಎಂಬ ಯುವ ವಿಜ್ಞಾನಿಯು ಈ ಅಡಕೆಯ ಬಗ್ಗೆ ನಾನಾ ವಿಧದಲ್ಲಿ ಸಂಶೋಧನೆ ನಡೆಸಿ ಅಡಕೆಯ ಸೇವನೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂಬುದನ್ನು ಪತ್ತೆಹಚ್ಚಿದರಲ್ಲದೇ ಅರೆಕಾ ಟೀ (ಅಡಕೆಯಿಂದ ಮಾಡುವ ಚಹಾ) ವನ್ನು ಕೂಡಾ ಕಂಡುಹಿಡಿದರು. ನಿವೇದನ್ ಅವರು ಇನ್ನೂ ಮುಂದುವರೆದು ಅಡಕೆಯಿಂದ ಏರ್ ಫ್ರೆಶ್ನರ್ ಅನ್ನು ತಯಾರಿಸುವ ಹಾಗೇ ಅಡಕೆಯಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಯಾಗದಂತಹ ಇನ್ನೂ ಅನೇಕ ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.

ಇನ್ನು ತೀರ್ಥಹಳ್ಳಿಯವನಾಗಿ ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆಯ ಬಗ್ಗೆ ಹೇಳಿಲ್ಲವೆಂದರೆ ಹೇಗೆ. ಪ್ರತಿ ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿ ಅರ್ಧಾತ್ಯದ ಒಳಗೆ ಬರುವ ಅಮವಾಸ್ಯೆಯ ದಿನದಂದು ಜರುಗುತ್ತದೆ. ಇಲ್ಲಿನ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಉತ್ಸವವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಜಾತ್ರೆ ಮತ್ತು ರಾಮೇಶ್ವರ ದೇವಸ್ಥಾನದ ಹಿಂದಿನ ಕಥೆಯು ಹೀಗಿದೆ - ಹಿಂದೆ ಪರಶುರಾಮನು ತನ್ನ ತಂದೆಯ ಆಜ್ಞೆಯಂತೆ ತನ್ನ ತಾಯಿಯ ತಲೆಯನ್ನು ಕಡಿದು ಎಷ್ಟೋ ನದಿಯ ನೀರಿನಲ್ಲಿ ತನ್ನ ಕೊಡಲಿಯನ್ನು ತೊಳೆದರೂ ಅದರಲ್ಲಿ ರಕ್ತದ ಕಲೆಯು ಹೋಗದೆ ಇದ್ದಾಗ ಪರಶುರಾಮನ ಕೊಡಲಿಗೆ ಇಲ್ಲಿಯ ತುಂಗಾ ನದಿಯ ನೀರಿನ ಸ್ಪರ್ಶವಾಗುತ್ತಿನಂತೆಯೇ ಅವನ ತಾಯಿಯ ರಕ್ತದ ಕಲೆಯು ಹೋಗುತ್ತದೆ ಮತ್ತು ಅದರ ಜೊತೆಗೇ ಅವನ ಪಾಪವೂ ಕಳೆಯಿತು ಎಂಬ ಹಿನ್ನಲೆಯಿದೆ. ಹಾಗೂ ಶ್ರೀ ರಾಮೇಶ್ವರ ದೇವರನ್ನು ಸ್ವತಃ ಪರಶುರಾಮನೇ ಸ್ಥಾಪಿಸಿದ್ದು ಎಂಬ ಪ್ರತೀತಿಯೂ ಇದೆ. ಹಾಗಾಗಿ ಎಳ್ಳಮವಾಸ್ಯೆಯ ದಿನದಂದು ಸಾವಿರಾರು ಭಕ್ತರು ರಾಮೇಶ್ವರ ದೇವಸ್ಥಾನ ತಟದಲ್ಲಿರುವ ರಾಮಕೊಂಡದಲ್ಲಿ ಸ್ನಾನಕ್ಕಾಗಿ ಬರುತ್ತಾರೆ. ಹಾಗೆಯೇ ಇದರ ಮರುದಿನ ರಾಮೇಶ್ವರ ದೇವರ ರಥೋತ್ಸವವೂ ಕೂಡ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. 

ಇನ್ನು ಈ ಜಾತ್ರೆಯ ಕೊನೆಯ ದಿನದ ತೆಪ್ಪೋತ್ಸವದ ಬಗ್ಗೆ ನಾನು ತಿಳಿಸಲಿಲ್ಲವೆಂದರೆ ಅದು ಮದುವೆ ಮನೆಯ ಊಟಕ್ಕೆಂದು ಹೋಗಿ ಹೋಳಿಗೆ-ರಸಾಯನವನ್ನು ತಿನ್ನದೆ ಬಂದ ಹಾಗೆ. ತೆಪ್ಪೋತ್ಸವವೆಂದರೆ ದೇವರ ಉತ್ಸವ ಮೂರ್ತಿಯನ್ನು ಬಹಳ ಸುಂದರವಾಗಿ ಅಲಂಕೃತವಾದ ತೆಪ್ಪದಲ್ಲಿ ಕೂರಿಸಿ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗಿ ಮರಳುವುದು. ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆಯ ಬಹು ಮುಖ್ಯ ಅಂಗವಾದ ತೆಪ್ಪೋತ್ಸವಕ್ಕೆ ಬೇರೆಬೇರೆ ಜಿಲ್ಲೆಯ ಜನರೆಲ್ಲರೂ ಸಹ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ತೆಪ್ಪೋತ್ಸವದ ಮುಖ್ಯ ಆಕರ್ಷಣಾ ಭಾಗವೆಂದರೆ ಪಟಾಕಿ. ದೇವರ ಉತ್ಸವದ ತೆಪ್ಪವು ಈ ದಡದಿಂದ ಹೊರಟು ಮರಳಿ ಬರುವವರೆಗೂ ಅನೇಕ ಬಗೆಯ ಬಣ್ಣ ಬಣ್ಣದ ಲಕ್ಷಾಂತರ ಮೌಲ್ಯದ ಪಟಾಕಿಗಳನ್ನು ಹೊಡೆಯುತ್ತಾರೆ.

ಮರ್ತಿದ್ದೆ, ತೀರ್ಥಹಳ್ಳಿ ಅಂತ ಹೇಳಿ ತುಂಗಾ ಸೇತುವೆಯ ಬಗ್ಗೆಯೇ ನಾನಿನ್ನೂ ಹೇಳಿಲ್ಲ. ಈ ತುಂಗಾ ಸೇತುವೆಯು ತೀರ್ಥಹಳ್ಳಿ ಪಟ್ಟಣದಿಂದ ಮೃಗವಧೆ ಮತ್ತು ಕೊಪ್ಪಗೆ ದಾರಿ ಕಲ್ಪಿಸುವ ಮಾರ್ಗವಾಗಿದೆ. ಜಯಚಾಮರಾಜೇಂದ್ರ ಒಡೆಯರ್ ಸೇತುವೆ ಎಂದು ನಾಮಕರಣವಾಗಿರುವ ಈ ಸೇತುವೆಯ ಇಂಜಿನಿಯರ್ ನಮ್ಮ ಕರ್ನಾಟಕದ ಹೆಮ್ಮೆಯ  ಸರ್ ಎಂ ವಿಶ್ವೇಶ್ವರಯ್ಯ ಅವರು. ಇದು ಸುಮಾರು ಎಪ್ಪತ್ತೈದು ವರ್ಷ ಹಳೆಯ ಸೇತುವೆಯಾಗಿದ್ದು ಈಗ ಶಿವಮೊಗ್ಗ - ಶೃಂಗೇರಿ ಹೈವೆಯನ್ನು ಕಲ್ಪಿಸುವ ಸಲುವಾಗಿ ಹೊಸ ಸೇತುವೆಯ ನಿರ್ಮಾಣವು ಕಾರ್ಯನಿರತದಲ್ಲಿದೆ.

ರಾಮಮಂಟಪ ಇದು ಮೇಲೆ ತಿಳಿಸುವ ರಾಮಕೊಂಡದ ಪಕ್ಕದಲ್ಲೇ ಇದ್ದು, ಮಳೆಗಾಲದಲ್ಲಿ ನಮ್ಮ ಖುಷಿಗೆ ಕಾರಣವಾಗುವಂತಹ ಮಂಟಪ ಇದಾಗಿದೆ. ಹೇಳಿ ಕೇಳಿ ನಮ್ಮದು ಮಲೆನಾಡು ಅಂದ್ಮೇಲೆ ಮಳೆಗೇನೂ ಕಮ್ಮಿ ಇಲ್ಲ ಬಿಡಿ. ಅಂದಹಾಗೆ ಈ ಮಂಟಪ ನಮಗೆ ಹೇಗೆ ಖುಷಿಯನ್ನುಂಟು ಮಾಡುತ್ತದೆ ಎಂದು ಕೇಳುವಿರಾ.. ಜೋರು ಮಳೆಗಾಲದಲ್ಲಿ ಉಕ್ಕಿ ಹರಿಯುವ ತುಂಗೆಯು ಈ ರಾಮಮಂಟಪವನ್ನು ಮುಚ್ಚಿದರೆ ಶಾಲೆಗೆ ಆ ದಿನ ರಜೆ. ಹಾಗಾಗಿ ನಾವು ಮಳೆಗಾಲದಲ್ಲಿ ಶಾಲೆಗೆ ಹೋಗಿ ಬರುವಾಗಲೆಲ್ಲಾ ಬಸ್ಸಿನ ಕಿಟಕಿಯಿಂದ ಇಣುಕಿ ರಾಮಮಂಟಪ ಎಷ್ಟು ಕಾಣುತ್ತಿದೆ ಎಂದು ನೋಡುವುದೇ ಕುತೂಹಲ ಮತ್ತು ಆನಂದ.

ಇನ್ನು ತೀರ್ಥಹಳ್ಳಿಯ ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳು ಎಂದರೆ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿ, ಕವಲೇದುರ್ಗ ಕೋಟೆ, ಮೃಗವಧೆ (ರಾಮಾಯಣದ ರಾಮನು ಸೀತೆಯ ಆಸೆಗೆ ಕಾರಣವಾದ ಮಾಯಾ ಜಿಂಕೆಯನ್ನು ಬೇಟೆಯಾಡಿದ ಸ್ಥಳ. ಮೃಗ-ಜಿಂಕೆ, ವಧೆ-ಸಂಹಾರ), ಸಿದ್ಧೇಶ್ವರ ಗುಡ್ಡ, ಕುಂದಾದ್ರಿ ಬೆಟ್ಟ, ಆಗುಂಬೆ ಸನ್ಸೆಟ್ ಪಾಯಿಂಟ್, ಸಕ್ಕರೆಬೈಲು ಆನೆ ಬಿಡಾರ, ಮಂಡಗದ್ದೆ ಪಕ್ಷಿಧಾಮ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಅರುಣಗಿರಿ (ವೆಂಕಟರಮಣನು ತಿರುಪತಿಗೆ ಈ ಕ್ಷೇತ್ರದಿಂದಲೇ ಹಾರಿದ್ದು ಎಂಬ ಪ್ರತೀತಿ) ಹಾಗೆಯೇ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ.

ಬರೆಯುತ್ತಾ ಹೋದರೆ ಇನ್ನೂ ಪೇಜುಗಟ್ಟಲೆ ಬರೆಯಬಹುದಾದರೂ, ಅದರ ತಪ್ಪೇಲ್ಲವನ್ನೂ ನನ್ನ ಸ್ನೇಹಿತನೇ ಸರಿ ಮಾಡುವುದರಿಂದ ಅವನಿಗೆ ಕಷ್ಟ ಕೊಡಲು ಮನಸಾಗದೆ ಇಲ್ಲಿಗೆ ನಿಲ್ಲಿಸುತ್ತೇನೆ. ಹಾಂ ಹಾಗೆಯೇ ನಾನು ಬರೀ ನನ್ನ ಪದಗಳಲ್ಲಿ ಮಾತ್ರ ನಿಮ್ಮನ್ನು ಟ್ರಿಪ್ ಕರೆದುಕೊಂಡು ಹೋಗಿದ್ದು, ನಮ್ಮ ತೀರ್ಥಹಳ್ಳಿಯ ಸೌಂದರ್ಯವನ್ನು ನೀವು ನಿಜವಾಗಿಯೂ ಸವಿಯಲು ಬಯಸುವುದಾದರೆ ನಮ್ಮೂರಿಗೆ ಬಂದೇ ಕಣ್ತುಂಬಿಕೊಳ್ಳಲು ಸಾಧ್ಯ.

ಅಮಿತ್‌ ಎಮ್‌ ಜಿ