ಸೋಮೇಶ್ವರ ಗುರುಮಠ
ಆಧ್ಯಾತ್ಮ ಎಂಬುದನ್ನು ಅತ್ಯಂತ ಸರಳ ರೀತಿಯಲ್ಲಿ ಯುವಮನಗಳೆದುರು ತೆರೆದಿಡಬೇಕೆಂದರೆ, ಅದನ್ನು ''ಸೈನ್ಸ್ ಆಫ್ ಸೆಲ್ಫ್ ರಿಯಲೈಝೇಷನ್'' ಅಂದರೆ ''ಸ್ವಯಂ-ಸ್ವರೂಪವನ್ನು ಅರಿಯುವ ವಿಜ್ಞಾನವೆನ್ನುವ ಮೂಲಕ ಅವರೆದುರಿಡಬಹುದು. ಮನುಷ್ಯನನ್ನು ಸಮಾಜ ಅಥವಾ ಸಂಘಜೀವಿಯೆನ್ನುತ್ತಾರೆ. ಆತನಿಗೆ ಹವ್ಯಾಸಗಳಿವೆ, ಆಸಕ್ತಿಗಳಿವೆ, ವಿಭಿನ್ನ ರುಚಿಗಳಿವೆ, ಕನಸುಗಳಿವೆ ಮತ್ತು ಪ್ರತ್ಯೇಕ ಗುರಿಗಳಿವೆ. ಇಷ್ಟೊಂದು ವೈವಿಧ್ಯ ಅಭಿರುಚಿಯುಳ್ಳ ಮನಸ್ಸುಗಳೆಲ್ಲ ಒಂದೇ ಭುವಿಯಲ್ಲಿ ಮತ್ತು ಸಮಾಜದಲ್ಲಿ ಬದುಕುತ್ತಿವೆ. 

ಧ್ಯಾತ್ಮ, ಎಂಬ ಪದವನ್ನು ಕೇಳಿದಾಕ್ಷಣ ಬಹುಪಾಲು ಯುವಮನಗಳಿಂದ ಹಿಡಿದು, ಸಂಸಾರವನ್ನು ನಡೆಸುತ್ತಿರುವ ವಯೋವೃದ್ಧರವರೆಗೂ ತತ್ಕ್ಷಣಕ್ಕೆ ಮನಸ್ಸಿಗೆ ನಾಟುವಂತಹ ಸಂಗತಿಯೆಂದರೆ 'ಲೋಕತ್ಯಜಿಪ ಸನ್ಯಾಸಿಯ ಚಿತ್ರಣ', ಭಗವಂತನ ನಿರಂತರ ನಾಮಸ್ಮರಣೆಯಲ್ಲಿ ತೊಡಗಿರುವ ಬ್ರಹ್ಮಚಾರಿ ಮತ್ತು ಕಾಡುಮೇಡುಗಳಿಂದ ಹಿಡಿದು ಮಠಮಾನ್ಯಗಳಸಮೇತ ಲೋಕಸಂಚಾರಿಯಾಗಿ ಲೋಕಸಂಗ್ರಹದಲ್ಲಿ ತೊಡಗಿಕೊಂಡಿರುವ ಪ್ರವರ್ಗ. ಸಹಜವಾಗಿ ಮೂಡುವ ಈ ಕಲ್ಪನೆಗತೀತವಾದ ವೈಚಾರಿಕತೆಯವರಲ್ಲಿ ಮೂಡಿದರೆ, ಸಮಾಜವೇ ಅದೊಂದು ಅಸಹಜ ಪ್ರವೃತ್ತಿಯೆಂದು ತೀರ್ಮಾನಿಸಿಬಿಡುತ್ತದೆ. ಭಾರತೀಯ ಪರಂಪರೆಯಲ್ಲಿ ಕರ್ಮಕ್ಕನುಗುಣವಾದ ಪುನರ್ಜನ್ಮ ಕಲ್ಪನೆಯಿದೆ. ಹುಟ್ಟುತ್ತಲೇ ವ್ಯಕ್ತಿಯೋರ್ವನು ಏನನ್ನೂ ಪಡೆದುಕೊಂಡು ಬಂದಿರುವುದಿಲ್ಲವೆಂಬ ಪ್ರತೀತಿ ಇದೆಯಾದರೂ, ಆತನ ಪೂರ್ವಜನ್ಮದ ಕರ್ಮಗಳಿಗನುಸಾರವಾಗಿ ಬಂದಿರುವಂತಹ ಹಲವಾರು ವಿಶೇಷಣಗಳನ್ನು ಆತನಲ್ಲಿ ಗಮನಿಸಬಹುದು. ಯಾವ ತರಬೇತಿಯಿಲ್ಲದೆಯೂ ಮಗುವೊಂದು ಅತ್ಯಂತ ಕಿರುವಯಸ್ಸಿನಲ್ಲೇ ಅದ್ಭುತವಾಗಿ ಹಾಡುವುದನ್ನು, ಚಿತ್ರಬಿಡಿಸುವುದನ್ನು, ನಾಟ್ಯಮಾಡುವುದನ್ನು, ಅಭಿನಯ ಅಥವಾ ಕಥೆಹೇಳುವ ಕಲೆಯನ್ನು ಕೆಲವೊಮ್ಮೆ ಗಮನಿಸಬಹುದು. ಅಷ್ಟು, ಚಿಕ್ಕ ವಯಸ್ಸಿನಲ್ಲೇ ಆ ಕಲೆ ಹೇಗೆ ಸಿದ್ಧಿಸಿತು? ಒಂದೊಮ್ಮೆ ವಿಜ್ಞಾನದತ್ತ ಕಣ್ಣು ಹಾಯಿಸಿದರೆ ಇದಕ್ಕೆ ಸ್ಪಷ್ಟಉತ್ತರ ಸಿಗಬಲ್ಲದು. ''Energy can Neither be Created , nor be destroyed'' ಅಂದರೆ 'ಶಕ್ತಿಯನ್ನು ಸೃಷ್ಟಿಸಲೂ ಆಗದು, ಮತ್ತೆ ನಾಶ ಮಾಡಲೂ ಆಗದು', ಎಂಬ ವಿಚಾರಕ್ಕನುಗುಣವಾಗಿಯೇ ಸಹಸ್ರಾರು ಸಂವತ್ಸರಗಳ ಹಿಂದೆಯೇ ಮಾನವ ಶರೀರಕ್ಕತೀತವಾದ ಆತ್ಮಸ್ವರೂಪಿ ಅಂಶವಾತನಲ್ಲಿದೆಯೆಂಬುದನ್ನು ಭಾರತೀಯರು ಮನಗಂಡಿದ್ದರು. ಇದಕ್ಕೆ ಸರಿಹೊಂದುವ ಮಗದೊಂದು ನಂಬಿಕೆಯೇ 'History Repeats ' ಎಂಬ ಸಂಗತಿ. ಇತಿಹಾಸವೆಂದಿಗೂ ಕಳೆದು ಹೋಗದು, ಕಾಲಕ್ಕೆ ತಕ್ಕಂತೆ ಮತ್ತೆ ಮತ್ತೆ ನವರೂಪಹೊತ್ತು ಪುನರಾವರ್ತನೆಗೊಳ್ಳುತ್ತದೆ. 

     ಹಾಗಿದ್ದಲ್ಲಿ ಅಧ್ಯಾತ್ಮ ಎಂಬುದನ್ನು ಅತ್ಯಂತ ಸರಳ ರೀತಿಯಲ್ಲಿ ಯುವಮನಗಳೆದುರು ತೆರೆದಿಡಬೇಕೆಂದರೆ, ಅದನ್ನು ''ಸೈನ್ಸ್ ಆಫ್ ಸೆಲ್ಫ್ ರಿಯಲೈಝೇಷನ್'' ಅಂದರೆ ''ಸ್ವಯಂ-ಸ್ವರೂಪವನ್ನು ಅರಿಯುವ ವಿಜ್ಞಾನವೆನ್ನುವ ಮೂಲಕ ಅವರೆದುರಿಡಬಹುದು. ಮನುಷ್ಯನನ್ನು ಸಮಾಜ ಅಥವಾ ಸಂಘಜೀವಿಯೆನ್ನುತ್ತಾರೆ. ಆತನಿಗೆ ಹವ್ಯಾಸಗಳಿವೆ, ಆಸಕ್ತಿಗಳಿವೆ, ವಿಭಿನ್ನ ರುಚಿಗಳಿವೆ, ಕನಸುಗಳಿವೆ ಮತ್ತು ಪ್ರತ್ಯೇಕ ಗುರಿಗಳಿವೆ. ಇಷ್ಟೊಂದು ವೈವಿಧ್ಯ ಅಭಿರುಚಿಯುಳ್ಳ ಮನಸ್ಸುಗಳೆಲ್ಲ ಒಂದೇ ಭುವಿಯಲ್ಲಿ ಮತ್ತು ಸಮಾಜದಲ್ಲಿ ಬದುಕುತ್ತಿವೆ. ಮೊನ್ನೆತಾನೇ ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ನಿಮ್ಮ ಮುಂದಿನ ಯೋಜನೆಯೇನೆಂದು ಕಾಂತಾರ ಸಿನೆಮಾದ ನಿರ್ದೇಶಕರಿಗೆ ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ''ಕಾಯಕವೇ ಕೈಲಾಸ''. ಈ ತತ್ವವನ್ನೊಮ್ಮೆ ಆಳವಾಗಿ ಗಮನಿಸಿದ್ದೇ ಆದಲ್ಲಿ ಮಾನವನ ವಿಭಿನ್ನ ಅಭಿರುಚಿಗಳ ಮೂಲವನ್ನು ಮತ್ತವುಗಳು ಸಂಧಿಯಾಗುವ ಬಿಂದುವನ್ನು ಕಾಣಬಹುದು. ನಮ್ಮ ನಮ್ಮ ಕೆಲಸಗಳ ಮುಖಾಂತರವೇ ಭಗವಂತನನ್ನು ಪಡೆಯಬಹುದೆಂಬ ಅತ್ಯಂತ ಸರಳ ಮತ್ತು ಶ್ರೇಷ್ಠ ತತ್ವವಿದಾಗಿದೆ. ನಿಮ್ಮನ್ನು ಕಾವ್ಯ ಆಕರ್ಷಿಸುತ್ತಿದೆಯೋ, ಅದರಾಳವನ್ನು ಅರಸಲು ಯತ್ನಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಕೈಬೀಸಿ ಕರೆಯುತ್ತಿದೆಯೋ ಅದರಂತರಂಗವನ್ನು ಭೇಧಿಸಯತ್ನಿಸಿ, ಶಿಕ್ಷಣದ ಕುರಿತಾದ ಒಲವಿದೆಯೋ, ಅದರುತ್ತುಂಗವನ್ನೇರಲು ಯತ್ನಿಸಿ. ಹೀಗೆ ನೋಡಿದರೆ,  ನಿಮಗಿಷ್ಟವಾದ ಯಾವುದೇ ಕೆಲಸವನ್ನೇ ಮಾಡಿದರು,  ಅತ್ಯಂತ ನಿಷ್ಠೆಯಿಂದ ಕೈಗೊಂಡು ಕರ್ತವ್ಯಕ್ಕೆ ಬದ್ಧರಾಗಿ ನಡೆದಾಗ ಚಮತ್ಕಾರಗಳಲ್ಲಿ ಉಂಟಾಗುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ನಿಮಗಿಷ್ಟವಾದ ಕಾರ್ಯಗಳಲ್ಲಿ ನೀವು ನಿಮ್ಮದೇ ಸ್ವರೂಪವನ್ನು ನೋಡಬೇಕೆಂದು ಬಯಸುತ್ತೀರಲ್ಲವೇ? ನಿಮ್ಮ ಕುರಿತಾಗಿ ನಿಮ್ಮನ್ನೇ ನೀವು ಅನ್ವೇಷಿಸುವ ಈ ವಿಧಾನವನ್ನು ಆಧ್ಯಾತ್ಮ ಎನ್ನಬಹುದೇ? ಎಂದು ವ್ಯಕ್ತಿಯೋರ್ವನು ಪ್ರಪಂಚದ ಭೌತಿಕತೆಯಲ್ಲಿ ತನ್ನನ್ನು ಹುಡುಕಿ ಆಯಾಸಗೊಂಡು ಅದನ್ನಪೂರ್ಣವೆಂದು ಭಾವಿಸುವನೋ, ಮರುಕ್ಷಣವೇ ಆತ ಅತಿಭೌತಿಕತೆಯತ್ತ ಮುಖಮಾಡುವನು. ಸಹಸ್ರ ಮಾನವಕೋಟಿಯೂ ನಿರಂತರವಾಗಿ ಅರಸುತ್ತಿರುವುದು ಇದನ್ನೇ! ಆದರೆ ಅದರ ಮಾರ್ಗಗಳು ಮಾತ್ರ ಭಿನ್ನವಾಗಿವೆ. ಇದನ್ನೇ ಭಾರತೀಯರು ತಮ್ಮೆಲ್ಲ  ಸಂಪ್ರದಾಯಗಳ  ಮೂಲವಾಗಿ ''ಏಕಂ ಸತ್ ವಿಪ್ರಾ ಬಹುಧಾ ವದಂತಿ'' ಎಂದು ಸಂಭೋಧಿಸುವರು. 

     ನಮ್ಮ ದೇಶದ ಮೂಲನೆಲೆಯೇ ಆಧ್ಯಾತ್ಮ. ಅದರ ಪ್ರಸರಣ ಮತ್ತು ಸತ್ಪ್ರಭಾವ ಲೌಕಿಕರಿಗೂ ತಲುಪಲೆಂಬ ಸದುದ್ದೇಶವಿಲ್ಲಿದೆ. ಒಂದೊಮ್ಮೆ ಅಧ್ಯಾತ್ಮವೇನಾದರೂ ಭಾರತದ ಆತ್ಮವಾಗಿರದೆ ಹೋಗಿದ್ದರೆ, ಏನಾಗುತ್ತಿತ್ತೆಂಬ ಸಂಗತಿಯನ್ನು ಸ್ವಾಮೀ ವಿವೇಕಾನಂದರು ಹೀಗೆ ವಿವರಿಸುತ್ತಾರೆ. ''ಭರತಖಂಡ ನಾಶವಾಗುವುದೇ ? ಆಗ ಪ್ರಪಂಚದ ಆಧ್ಯಾತ್ಮಿಕತೆಯೆಲ್ಲ ಮಾಯವಾಗುವುದು; ನೈತಿಕೋನ್ನತಿಯೆಲ್ಲ ನಿರ್ನಾಮವಾಗುವುದು. ಧಾರ್ಮಿಕ ಭಾವನೆಗಳಿಗೆ ತೋರುವ ಹೃತ್ಪೂರ್ವಕ ಸಹಾನುಭೂತಿ ಮಾಯವಾಗುವುದು. ಎಲ್ಲಾ ಭವ್ಯ ಉದ್ದೇಶಗಳೂ ಮಾಯವಾಗುವುದು. ಅದರ ಸ್ಥಳದಲ್ಲಿ ಕಾಮ ಮತ್ತು ಭೋಗವೆಂಬ ಸ್ತ್ರೀ ಪುರುಷ ದೇವರು ಆಳುವರು. ಹಣವೇ ಪುರೋಹಿತನ ಸ್ಥಾನದಲ್ಲಿ , ಮೋಸ ಬಲಾತ್ಕಾರಗಳ ಸ್ಪರ್ಧೆಯೇ ಆಚಾರಗಳ ಸ್ಥಾನದಲ್ಲಿ ಜೀವಾತ್ಮನೇ ಯಜ್ಞ ಪಶುವಿನ ಸ್ಥಾನದಲ್ಲಿ ನಿಲ್ಲುವವು. ಇಂತಹ ಪ್ರಸಂಗ ಎಂದಿಗೂ ಬರಲಾರದು... ಭರತಖಂಡ ನಾಶವಾಗುವುದೇ? ಭವ್ಯವಾಗಿರುವುದಕ್ಕೆಲ್ಲ, ನೀತಿಗೆಲ್ಲ, ಆಧ್ಯಾತ್ಮಕ್ಕೆಲ್ಲ ತೌರೂರಾದ ಭರತಖಂಡ ನಾಶವಾಗುವುದೇ? ಪುರಾತನ ಮಾತೆಯಾದ ಈ ಭರತಖಂಡ, ಸಾಧುಸಂತರ ಪಾದಧೂಳಿಯಿಂದ ಪವಿತ್ರವಾದ ಭರತಖಂಡ, ಈಗಲೂ ಕೂಡ ಭಗವತ್ಸ್ವರೂಪವಾದ ಮಹಾಮಹಿಮರು ಜೀವಿಸುತ್ತಿರುವ ಭರತಖಂಡ ನಾಶವಾಗುವುದೇ? ಸಹೋದರರೇ, ನಾನು ಅಥೆನ್ಸ್ ನಗರದ ಜ್ಞಾನಿಯ ಜ್ಯೋತಿಯನ್ನು ಎರವಲಾಗಿ ತೆಗೆದುಕೊಂಡು ಈ ವಿಶಾಲ ಪ್ರಪಂಚದ ಗ್ರಾಮನಗರಗಳನ್ನು, ಬಯಲು ಕಾನನಗಳನ್ನು ಹುಡುಕಾಡಲು ನಿಮ್ಮೊಡನೆ ಬರುವೆನು. ಸಾಧ್ಯವಿದ್ದರೆ ಇತರೆ ದೇಶಗಳಲ್ಲಿ ಇಂತಹ ವ್ಯಕ್ತಿಗಳನ್ನು ತೋರಿಸಿ? ಎಂದು ಪ್ರಶ್ನಿಸುತ್ತಾರೆ. ಹೌದಲ್ಲವೇ? ಈ ದೇಶದ ಮಹಾನ್ ಆಧ್ಯಾತ್ಮಿಕ ಸಂತರುಗಳಾದ ಸ್ವಾಮೀ ವಿವೇಕಾನಂದರು, ಶ್ರೀ ಅರವಿಂದರು, ರಮಣ ಮಹರ್ಷಿಗಳು, ಶ್ರೀ ಶಿವಕುಮಾರ ಸ್ವಾಮೀಜಿಗಳು, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು, ಮಾತಾ ಶ್ರೀ ಅಮೃತಾನಂದಮಯಿಯವರು ಸದಾ ಜನಮಾನಸದಲ್ಲಿ ನೆಲೆಯೂರಲೂ ಕಾಣವೇನೆಂದು ಒಮ್ಮೆ ಯೋಚಿಸಬಹುದೇ? ಜನಸೇವೆಯೇ ಜನಾರ್ಧನಸೇವೆಎಂಬ ತತ್ವಕ್ಕೆ ಕನ್ನಡಿಯಾಗಿ ಅವರು ನಿಂತರಲ್ಲವೇ? ಅಂತೆಯೇ ನಾವು ಕೂಡ ಆಧ್ಯಾತ್ಮಿಕತೆಯ ತೌರೂರಾದ ನಮ್ಮ ದೇಶದ ಅಂತಸ್ಸತ್ವವನ್ನು ಅರಿವ ಪ್ರಯತ್ನವನ್ನು ಒಮ್ಮೆಯಾದರೂ ಮಾಡೋಣ. ಏಕೆಂದರೆ, ಆಧ್ಯಾತ್ಮವೆಂಬುದು ನಮ್ಮೊಳಗೇ ಇದೆ, ನಾವೆಲ್ಲರೂ ಸಂಕಲ್ಪಗೈದರೆ ಅದನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿ ಪುರುಷಾರ್ಥ ಸಿದ್ಧಿಯೆಡೆಗೆ ಸಾಗಬಹುದು. ಅಲ್ಲವೇ?