ಸೌಮ್ಯಾ ಭಾಗ್ವತ್, ಕುಮಟಾ
ನೇರಳೆ ಮತ್ತು ಬಿಳಿಯ ಬಣ್ಣದ ‘ಸ್ಕೂಟಿ ಪೆಪ್' ಅವಳ ಎದುರಿಗೆ ನಿಲ್ಲಿಸಿ “ವಟ್ಲರಗೆ ಹೇಂಗೆ?'', ''ಪಾಲಿಗೆ ಹೇಂಗೆ ತೊಂಡೆಕಾಯು? ಗೊಕರ್ಣದ್ದೇ? ಈ ಸರ್ತಿ ಗೋಕರ್ಣ ಮೆಣಸು ಹಾಕ್ಲಿಲ್ವೆ ಗದ್ದೆಲಿ?'' ಎಂದು ಸಾಲಲ್ಲಿ ಪ್ರಶ್ನೆಗಳನ್ನು ಕೇಳಿದ ಕಪ್ಪು ಹೆಲ್ಮೆಟಿನೊಳಗೆ ಕನ್ನಡಕವನ್ನು ಹಾಕಿಕೊಂಡಿರುವ ಗ್ರಾಹಕನೊಬ್ಬನಿಗೆ “ಹರ್ಗಿ ಐವತ್ರುಪಾಯಿಗೆ ಯೋಲು ಕಟ್ಟು, ನಿಮಗೆ ಹೇಲಿ ಎಂಟುಕೊಡ್ತೆ, ತೊಂಡೆಕಾಯಿ ಪಾಲಿಗೆ ಇಪ್ಪತ್ತು. ಗೋಕರ್ಣ ಮೆನಸು ತುಟ್ಟಿ ಅಲ್ರಾ? ಈ ಸಲ ಮಲೆಗೆ ಎಲ್ಲ ಹಾಲಾಗೋಗಿದು'' ಎನ್ನುತ್ತ ವ್ಯವಹಾರ ಕುದುರಿಸಿದ್ದಳು ಕುಂದಾಪುರ ಕುಂಕುಮ ಬಣ್ಣದ ಸೀರೆಯುಟ್ಟ 'ಗಂಗೆ'. ಗ್ರಾಹಕ ಐವತ್ತು ರೂಪಾಯಿಗೆ ಹನ್ನೆರಡು ಕೇಳಿದರೆ ''ಇಲ್ರ ವಡ್ಯಾ ನಾವು ತಂದದ್ದೆ ಹತ್ತಕ್ಕೆ'' ಎಂದಳು. ಅವನೂ ಬಿಡಲಿಲ್ಲ. "ಅದ್ಯೆಂತದೆ ಆ ನಮನಿ ತುಟ್ಟಿ, ಊರಲ್ಲಿಲ್ದಿದ್ ರೇಟಲೆ ನಿಂದು, ಅದೂ ಖಾಯಮ್ ತಕಂಡೋಗು ಜನರಿಗೆ". ಎಂದನವ. ಅದಕ್ಕೆ ಗಂಗೆ "ತಕಲ್ರಾ ನಿಮಗೆ ಮತ್ತೂ ಒಂದು ಕಟ್ಟು ಜಾಸ್ತಿ ಹಾಕ್ತೆ, ವಟ್ಲರ್ಗಿ ಶಮಾ ಆಗ್ಲಿಲ್ರಾ; ಗದ್ದೆಲಿ ಹುಲ ಬಿದ್ದೋಗಿದು, ತರೂಕೆ ಮರ್ವಾದಿ ( ನಿಮಗೊಂದು ಕಟ್ಟನ್ನು ಜಾಸ್ತಿ ಕೊಡ್ತೇನೆ. ಈ ಸಲ ಹರಿವೆ ಸೊಪ್ಪು ಹಾಕಿರುವ ಗದ್ದೆಯಲ್ಲಿ ಹುಳಗಳಗಿರುವುದರಿಂದ ಸೊಪ್ಪನ್ನು ಮಾರಲು ತರಲು ನಾಚಿಕೆಯಾಗುತ್ತದೆ) "ಎಂದವಳು ದೊಡ್ಡ ದನಿಯಲ್ಲಿ ಎಣಿಸುತ್ತ ಒಂಭತ್ತು ವಟ್ಟಲರಿಗೆ ಕಟ್ಟನ್ನು ಲೆಕ್ಕಮಾಡಿ ಅವರ ಚೀಲಕ್ಕೆ ಹಾಕಿದಳು.
ಅವಳ ಬಲ ಬದಿಗೆ ತೊಂಡೆ, ಚವಳಿ ಕಾಯಿಗಳನ್ನು ಪಾಲಿಗೆ ಹಾಕಿಕೊಂಡು ಕೂತಿರುವ 'ಮಾಸ್ತಿ'ಯ ಬಳಿ ಹಸಿರು ಸೀರೆಗೆ ಕೆಂಪು ಬಣ್ಣದ ಅಂಚಿರುವ ಜರತಾರಿ ಸೀರೆಯುಟ್ಟು ತನ್ನ ಹದಿ ಹರೆಯದ ಮಗಳ ಜೊತೆಗೆ ಬಂದಿರುವ ಹೆಂಗಸೊಬ್ಬಳು 'ಎಲ್ಲಿ ಹರ್ಗೆನೆ?' ಕೇಳಿದಾಗ 'ಇಲ್ಲೇ ವಕ್ಕಲಳ್ಳಿದು ಬೇಕ್ರಾ ಅಮ್ಮಾ?" ಎಂದಳು ಮಾಸ್ತಿ. ಆ ಹಸಿರು ಕೆಂಪು ಸೀರೆಯೆ ಹೆಂಗಸೋ ತನ್ನ ಮಗಳಿಗೆ ಪಕ್ಕದ 'ಖಾಜಿ ಅಂಗಡಿ'ಯ ಗತ ವೈಭವವನ್ನು ವರ್ಣಿಸುವುದರಲ್ಲಿ ತಲ್ಲೀನಳಾಗಿದ್ದಾಳೆ. "ದೇವಸ್ಥಾನಕ್ಕೆ ಹೋಗಿ ಬರ್ತೆ, ಕಡೆಗೆ ತಗೊಂಡು ಹೋಗ್ತೆ ಅಡ್ಡಿಲ್ವೆ" ಎಂದವಳು. ಮಗಳ ಕರೆದುಕೊಂಡು ದೇವಸ್ಥಾನದ ಬಳಿಯಿರುವ ಕುಟುಂಬದವರನ್ನು ಸೇರಿಕೊಂಡಳು.
ಅಷ್ಟರಲ್ಲಿ ಆ ದೇವಳದ ಬದಿಯಿಂದಲೇ ''ಯೇ ಕಮಲಿ, ನಾಗಿ ನೋಡೆ ಇಪ್ಪತ್ರುಪಾಯ್ಗೆ ಒಂದು ಬೊಕಳೆ ದಂಡೆ ಕೊಡ್ತಲೆ!! ಬಾರೇ ಕೇಲ್ವನಿ'' ಎನ್ನುತ್ತ ನಾಗಿಯ ಬಳಿಗೆ ಸಣ್ಣ ಆರೋಪದೊಂದಿಗೆ ಹೊರಟಿದ್ದಾಳೆ ಉದ್ದ ಲಂಗ ಮತ್ತು ಗಾಢ ಹಸಿರಿನ ಬಣ್ಣದ ರವಿಕೆ ತೊಟ್ಟ ಲತಾ. ''ಹೋಯ್ ಇಲ್ಬನ್ನಿ ಇಪ್ಪತ್ರುಪಾಯ್ಗೆ ನಾನೂ ಕೊಡ್ತೆ ಅದು ಬಾಡೋಗದೆ ಇದು ಪ್ರೆಸ್ ಅದೆ'' ಎಂದು ಹೇಳುತ್ತಿದ್ದಾಳೆ ಅವಳು. ಆದರೆ, ಗ್ರಾಹಕನ ಖರೀದಿ ಮುಗಿದಿದೆ! ಲತಾಳ ಕಣ್ಣಲ್ಲಿ ಒಂಥರದ ಅಸಮಾಧಾನ. ಆ ಅಸಮಾಧಾನ ಅರೆಕ್ಷಣ ಮಾತ್ರ!! ಮರು ಕ್ಷಣವೇ ಮತ್ತೆ ಕಣ್ಣಲ್ಲಿ ನಿರೀಕ್ಷೆ ತುಂಬಿಕೊಂಡುಬಿಡುತ್ತದೆ. ಇನ್ನೊಬ್ಬಳು ಹಳದಿ ಕುರ್ತಾ ಹಾಕಿಕೊಂಡವಳ ಬಳಿ ಲತಾಳ ವ್ಯವಹಾರ ಕುದುರುತ್ತದೆ.
ಕುಮಟೆಯ ಸಮೀಪದ ಹಳ್ಳಿಗಳಲ್ಲಿ ಗದ್ದೆಗಳಿರುವ ಮನೆಯವರು ತಮ್ಮ ಗದ್ದೆಗಳಲ್ಲಿ 'ಹಿತ್ಲಕಾಯಿ' ಬೆಳೆಯುವುದು ಮಾಮೂಲು. ಮನೆಯ ಹೆಂಗಸರು ಮುಂಜಾನೆ ಕೋಳಿ ಕೂಗಿದೊಡನೆಯೇ ಎದ್ದು ಗದ್ದೆಗಳಿಗೆ ತೆರಳಿ ಸೊಪ್ಪು, ತರಕಾರಿ, ಹೂವು, ಹಣ್ಣುಗಳನ್ನು ಕೊಯ್ದು ಬೆಳಗಾಗುವುದೇ ತಡ ಪೇಟೆಗೆ ಹೊತ್ತು ತಂದು ಮಧ್ಯಾಹ್ನದ ವರೆಗೆ ಮಾರುತ್ತಾರೆ. ಸೀಸನ್ನು ಬದಲಾದಂತೆ ಇವರು ಮಾರಾಟ ಮಾಡುವ ಸರಕುಗಳೂ ಬದಲಾಗುತ್ತವೆ.
ಕುಮಟೆಯ ರಥಬೀದಿಯಲ್ಲೆಲ್ಲ ಕುತ್ತಿಗೆಯ ತುಂಬ ಮಣಿಸರಗಳ ಹಾಕಿ ಜೇಟಿ ಕಟ್ಟಿರುವ ನಾಗಿ, ಹಳೆಯ ಒಂದು ರುಪಾಯಿ ನಾಣ್ಯದಷ್ಟು ಅಗಲದ ಕುಂಕುಮವನ್ನು ಹಣೆಗೆ ಹಚ್ಚುವ ಸ್ವಲ್ಪ ಚೌಕು ಮೋರೆಯ ಮೇಲಿನಮನೆ ಸುಕ್ರಿ, ಉದ್ದ ಜಡೆ ಮತ್ತು ಉದ್ದ ಲಂಗ ಹಾಕಿ ಉದ್ದಕೆ ಸುರಿದ ಬೊಕಳೆ ಮಾಲೆ ಹಿಡಿದು ನಿಲ್ಲುವ ಲತಾ, ನೀಲಿ ಸೀರೆಯುಟ್ಟು ತುಳಸೀ ಮಾಲೆಯ ಜೊತೆಗೆ ಕೆಂಪು ಬಿಳಿಯ ಕಮಲಗಳ ಕೈಯಲ್ಲಿ ಹಿಡಿದು ಹೆಚ್ಚಾಗಿ ಸನ್ನೆ ಭಾಷೆಯಲ್ಲೇ ಮಾತನಾಡುವ ಬಾಯಿ ತುಂಬ ಕವಳ ಹಾಕಿಕೊಂಡ ಲಕ್ಷ್ಮೀ, ಬಗೆಬಗೆಯ ಗೆಣಸುಗಳನ್ನು ಮಾರುವ ಕೂದಲು ಪೂರ್ತಿ ಜಡೆಗಟ್ಟಿರುವ ಯಂಕಮ್ಮ ಹೀಗೆ ಇನ್ನೂ ಹಲವು ನನಗೆ ಹೆಸರು ಗೊತ್ತಿಲ್ಲದ ಹೆಂಗಸರು ಬುತ್ತಿ, ಗೊಂಡೆ, ಬೊಕಳೆ, ಜಾಜಿ, ನಂದಟ್ಲೆ, ಗೆಂಟಿಗೆ, ದಂಡೆಗಳನ್ನು, ವಿವಿಧ ಬಣ್ಣದ ಕಮಲ ಹೂವುಗಳನ್ನು, ಗರಿಕೆ, ಬಿಲ್ಪತ್ರೆಗಳನ್ನು ಪ್ಲೇಟಿನಲ್ಲಿ ಇಟ್ಟುಕೊಂಡು ಮಾರುತ್ತಿದ್ದರೆ; ಇನ್ನು ಕೆಲವರು ಬಜಾರಿನ ಅಂಗಡಿ ಸಾಲುಗಳ ಎದುರಿಗೆ ತಮ್ಮ ಕಪ್ಪು ಬಣ್ಣದ ಸಾದಾ ಕೊಡೆಯನ್ನು ಬಿಚ್ಚಿ ಅದರಡಿಗೆ ಕಬ್ಬಿನ ಗದ್ದೆಯ ಬದಿಗೆ ಬೆಳೆಸುವ ಬೆಂಡೆಕಾಯಿ, ಮೂಲಂಗಿ, ಕೆಂಪುಹರಿವೆ, ಬದನೆ, ಬಸಳೆ ಕಟ್ಟು, ಬಾಳೆಕಾಯಿ, ಬೇರಲಸು, ನೀರಲಸು, ಗೆಣಸುಗಳ ಹರವಿಕೊಂಡು ವ್ಯಾಪಾರ ಮಾಡುತ್ತಿರುತ್ತಾರೆ.
ಈಗ ಚಳಿಗಾಲವಿರುವುದರಿಂದ ಕುಮಟೆಯ ರಥಬೀದಿಯಲ್ಲಿ ಇದೀಗತಾನೆ ಮಿಂದು ಮಡಿಯುಟ್ಟು ಬಂದಂತಿರುವ ಮೆಂತೆ, ಕೊತ್ತುಂಬರಿ, ಸಬ್ಬಸಿಗೆ, ಪಾಲಕ್ , ವಿವಿಧ ಹರಿವೆ ಸೊಪ್ಪುಗಳು (ಕೆಂಪು ಹರಿವೆ , ಹಸಿರು ಹರಿವೆ, ಕಂಬ ಹರಿವೆ , ವಟ್ಟಲು ಹರಿವೆ), ಮೂಲಂಗಿ, ಗೋಕರ್ಣ ಬದನೆ, ಗೋಕರ್ಣದ ಹಸಿಮೆಣಸು ಹೀಗೆ ತರೇವಾರಿ ತರಕಾರಿ ಮತ್ತು ಸೊಪ್ಪುಗಳು ರಥಬೀದಿಯ ಇಕ್ಕೆಲವನ್ನು ಅಲಂಕರಿಸಿರುತ್ತವೆ. ಈ ಎಳೆಯ ಸೊಪ್ಪುಗಳನ್ನು ಬಾಳೆಪಟ್ಟೆಯ ಬಳ್ಳಿಯಲ್ಲಿ ಕಟ್ಟಿರುತ್ತಾರೆ.
ಹದವಾಗಿ ಏರುತ್ತಿರುವ ಬಿಸಿಲಿನ ಜೊತೆಗೆ ರಥಬೀದಿಯೂ ಚುರುಕುಗೊಳ್ಳುತ್ತದೆ. ಮಾರುವವರ ಬುಟ್ಟಿಗಳು ಮಧ್ಯಾಹ್ನದೊಳಗೆ ಖಾಲಿಯಾಗಿಬಿಡಬೇಕು. ಇಲ್ಲದಿದ್ದರೆ ಊಟಮಾಡಿ ಮತ್ತೆ ಮಾರಲು ಕುಳಿತುಕೊಳ್ಳುವ ಉಸಾಬರಿ! ಬುಟ್ಟಿ ಖಾಲಿಯಾಗುವುದೇ ತಡ ಪಕ್ಕದ ಕಿಣಿ ಕೋಲ್ಡ್ರಿಂಕ್ಸಿನಲ್ಲಿ ರಾಗಿ ನೀರನ್ನೋ, ದೂಧ್ ಕೋಲ್ಡನ್ನೋ, ಸೋಡ ಶರಬತ್ತನ್ನೋ ತಣ್ಣಗೆ ಹೀರಿ; ಒಂದು ಪ್ಲೇಟ್ ಬನ್ಸನ್ನೋ, ಬೋಂಡವನ್ನೋ ಸವಿದು, ಮನೆಯಲ್ಲಿರುವ ಮಕ್ಕಳಿಗೆ/ ಮೊಮ್ಮಕ್ಕಳಿಗೆ ಕುರುಕಲು ತಿಂಡಿಯನ್ನು 'ಕಟ್ಟಿಸಿಕೊಂಡು' ತರಾತುರಿಯಲ್ಲಿ ಹೊರಟುಬಿಡುತ್ತಾರೆ. ಇತ್ತ ತರಕಾರಿ, ಸೊಪ್ಪುಗಳ ಕೊಂಡ ಗ್ರಾಹಕ ಹರಿವೆಸೊಪ್ಪಿನ ಪಲ್ಯ, ಬೇರಲಸಿನ ಫೋಡಿ, ಎಳೆತೊಂಡೆಯ ಪಲ್ಯ, ಬಾಳೆಕಾಯಿಯ ಹುಳಿ ಮುಂತಾದ ರುಚಿಕರ ಅಡುಗೆಯನ್ನು ಮಾಡಿಯೋ ಮಾಡಿಸಿಕೊಂಡೋ ಉಂಡು ತೇಗಬೇಕು.
ಆ ಹೂವಕ್ಕಂದಿರ ಒಳಗೆ ಒಂದು ಕುತೂಹಲ, ಅಸಮಾಧಾನ, ಅಸೂಯೆ, ಸಣ್ಣ ಜಗಳ ಎಲ್ಲವೂ ಇರುತ್ತದೆ; ಅದರ ಜೊತೆಗೆ ಚಿಲ್ಲರೆಯನ್ನು ಹೊಂದಿಸುವ, ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಳ್ಳುವಾಗ ಇನ್ನೊಬ್ಬರಿಗೆ ಸಹಕರಿಸುವ, 'ಚಾ' ಕುಡಿಯಲು ಹೋದಾಗ ಒಬ್ಬರ ಬುಟ್ಟಿಯನ್ನು ಇನ್ನೊಬ್ಬರು ಕಾಯುವ ಸಹಕಾರವೂ ಇರುತ್ತದೆ! ಅಲ್ಲಿ ಒಂದೇ ಮನೆಯ ಅಕ್ಕ ತಂಗಿಯರಿದ್ದಾರೆ, ಅತ್ತೆ ಸೊಸೆಯಂದಿರಿದ್ದಾರೆ, ಅಮ್ಮ-ಮಗಳಿದ್ದಾರೆ, ಗೆಳತಿಯರಿದ್ದಾರೆ.
ಗ್ರಾಹಕರಿಲ್ಲದ ಸಮಯದಲ್ಲಿ ಆಪ್ತ ಸಮಾಲೋಚನೆಯೂ ಹೂವಕ್ಕರ ಮಧ್ಯೆ ನಡೆಯುತ್ತದೆ! ಅಲ್ಲಿ 'ನಮ್ಮನೆ ಅಭಿಸೇಕ ನಿನ್ನ ಕುಡ್ಯಂಬಂದ್ಯ ಕಾಂತಿದು ಸಾವುಕೆ ಎಲ್ಲ ಅವನ ಅಪ್ಪನಿಂದ ಕಲೀತೀವಾ,' ಎನ್ನುವುದರಿಂದ ಹಿಡಿದು, ನಮ್ ಕಾವ್ಯಾ ನಿನ್ನೆ ಮಿಂದದ್ಯೇ ಎನ್ನುವ ಮಕ್ಕಳ ಕುರಿತಾದ ಕಳವಳಗಳೂ ಮತ್ತು ಕಾಳಜಿಗಳೂ ಇವೆ, ನಿನ್ನೆ ಬಂಗಡೀ ಸಾರು ಇದ್ರೆ ಇವತ್ತು ಹಾಕಂಡು ಉಣ್ಬೇಕೆ, ನಮ್ಮ ಅಕ್ಕನ ಮಗಳ ಮದ್ವೀ ಬಂತಲೇ ಒಂದು ಚೊಲೊ ಸೀರೆ ತಗಬೇಕೆ ಎಂಬ ಚಂದನೆಯ ಕನಸುಗಳಿವೆ, 'ನಮ್ ಅತ್ತಿ ಅದ್ಯಲೆ ಅದ್ಕೆ ಪೆನ್ಸನ್ ಬಂದ್ರೂ ನಮ್ಮನೆಯವ್ರ ಕೂಡೆ ಗುಳಿಗಿಗೆ ದುಡ್ ಕೇಲ್ತದೆ', ಎಂಬ ಪುಕಾರುಗಳಿವೆ, ಆ ಕಮಲಿ ನೋಡು ಹೊಸ ಕರಿಮಣಿ ಮಾಡ್ಸ್ಕಂಡ್ತಂತೆ ಮಗ ಬೆಂಗಳೂರಾಗೆ ಇರ್ತ್ನಲೆ ಎಂಬ ಸಣ್ಣ ಹೊಟ್ಟೆಕಿಚ್ಚಿದೆ.
ಮನೆ, ಮಕ್ಕಳು, ಕುಡುಕಗಂಡ, ಅತ್ತೆಯ ಕಿರಿಕಿರಿ, ಇನ್ಯಾರದೋ ಅಸೂಯೆ, ಇವೆಲ್ಲದರ ನಡುವೆ ಅವರ ಸಣ್ಣ ಸಣ್ಣ ಕನಸುಗಳು ಎಲ್ಲವನ್ನೂ ತೂಗಿಸಿ ಸಂಭಾಳಿಸುತ್ತಾರೆ ಈ ಹೆಂಗಸರು. ಒಂದಿಬ್ಬರು ಪಿಪ್ಟಿ, ಟ್ವೆಂಟಿ ಹೀಗೆ ಇಂಗ್ಲಿಷ್ ನಂಬರುಗಳನ್ನೂ ಬಳಸುತ್ತಾರೆ.
ಆ ಹೆಂಗಸರು ವ್ಯಾಪಾರ ಕುದರಿಸುವಾಗ, ಗಿರಾಕಿಗಳನ್ನು ಸಂಭಾಳಿಸುವಾಗ, ಲೆಕ್ಕ ಮಾಡಿ ಚಿಲ್ಲರೆಯನ್ನು ಕೊಡುವಾಗ. ಈ ಮಾರ್ಕೆಟಿಂಗ್ ಎಂಬುದು ಯಾರಪ್ಪನ ಮನೆಯ ಸೊತ್ತೂ ಅಲ್ಲ ಅನಿಸಿಬಿಡುತ್ತದೆ. Women Empowerment/ ಮಹಿಳಾ ಸಬಲೀಕರಣ ಎಂಬ ಶಬ್ದಗಳೆಲ್ಲ ಬೆಳಗಿಂದ ಮಧ್ಯಾಹ್ನದ ಒಳಗೆ ಇಲ್ಲಿ ರಸ್ತೆಯಲ್ಲಿ ನಡೆದಾಡಿಕೊಂಡಿರುತ್ತದೆ.
ಪ್ರತಿಯೊಂದು ಪಟ್ಟಣಕ್ಕೂ ಒಂದೊಂದು ಪರಿಮಳವಿದೆ. ಅದರಲ್ಲೂ ಆ ಪಟ್ಟಣದ ರಥಬೀದಿಯ ಘಮವಂತೂ ಒಂಥರದ ಸೆಳೆತವನ್ನು ಸೃಜಿಸಿಬಿಡುತ್ತದೆ. ಆ ರಥಬೀದಿಯ ಓಕುಳಿಯ ಬಣ್ಣಗಳು ಈ ಹೆಂಗೆಳೆಯರು. ಪ್ರತಿ ಬೆಳಗು ಕೂಡ ಅಲ್ಲಿ ಒಂದು ಸಂಭ್ರಮವನ್ನು ಸೃಷ್ಟಿಸಿರುತ್ತದೆ. ಆ ಸಂಭ್ರಮವನ್ನು ನನ್ನೊಳಗೆ ಎಳೆದುಕೊಳ್ಳಲಿಕ್ಕೆ ಆಗಾಗ ನಾನಲ್ಲಿ ಧಾವಿಸುತ್ತೇನೆ. ಹೊಳಪು ಕಳೆದುಕೊಂಡು ಭೂಮಿಗುರುಳಿರುವ ತಾರೆಗಳು ಎನಿಸುವ ಬೊಕಳೆ ಹೂವಿನ ಹಾರ ನನ್ನ ಫೇವರೆಟ್. ಅದು ಕಂಡಾಗಲೆಲ್ಲ ಖರೀದಿಸಬೇಕು ಅನಿಸ್ತದೆ. ಅದನ್ನು ಖರೀದಿಸಿದ ನಂತರ, ಅಲ್ಲಿಯೇ ಪಕ್ಕದಲ್ಲಿ ಕಂಡ ವಟ್ಟಲರಿಗೆ!! ಅದನ್ನು ಖರೀದಿಸುತ್ತಿರುವಾಗಲೇ ಮುಖವೆಲ್ಲ ಸುಕ್ಕುಗಟ್ಟಿರುವ ಅಜ್ಜಿಯೊಬ್ಬಳು ಬಂದು 'ಕಡೇದು ಎರಡು ನಂಜಟ್ಲೆ ದಂಡೆ ಅದೆ ತಕಾ ಮಗಾ? ನಾ ಬಸ್ಸಿಗೆ ಹೋತೆ' ಎನ್ನುವಾಗ ತಡೆಯಲಾಗದೇ ಅದನ್ನೂ ಖರೀದಿಸಿಬಿಡ್ತೇನೆ, ಅವಶ್ಯವಿರದಿದ್ದರೂ! ಆ ಅಜ್ಜಿ ನಾನು ದುಡ್ಡುಕೊಟ್ಟ ನಂತರ ನನ್ನ ಕೈ ಸ್ಪರ್ಶಿಸುತ್ತಾಳೆ ಕಣ್ಣಲ್ಲೇ ಧನ್ಯವಾದವ ಹೇಳಿಬಿಡುತ್ತಾಳೆ.
ಏನೊ ಒಂದು ನಮೂನೆಯ ಖುಷಿ ,ಸಂಭ್ರಮ, ಬೊಕಳೆ ಮಾಲೆಯ ಘಮ , ವಟ್ಟಲರಿಗೆಯ ಬಣ್ಣ ಎಲ್ಲವೂ ಮೇಳೈಸಿ ಹೇಳಿಕೊಳ್ಳಲಾಗದ ಭಾವವನ್ನು ಸೃಷ್ಟಿಸಿಬಿಡುತ್ತದೆ!!
ಬೆಳಗು ಒಂದು ಭಾವವಾಗುತ್ತದೆ,
ಆ ಭಾವವೇ ಬದುಕಾಗಿಬಿಡುತ್ತದೆ!
(ಸೌಮ್ಯಾ ಭಾಗ್ವತ್ ಹುಟ್ಟಿದ್ದು ಕಡಲತಡಿಯ ಸಣ್ಣ ಪಟ್ಟಣ ಕುಮಟೆಯಲ್ಲಿ. ಓದಿದ್ದು ತಂತ್ರಜ್ಞಾನ. ಇಷ್ಟವಾಗುವುದು ಸಾಹಿತ್ಯ, ಛಾಯಾಗ್ರಹಣ, ಕಾಡು ಹೂಗಳು, ತಿರುಗಾಟ, ಚಾರಣ ಮತ್ತು ಪಾಕ ವೈವಿಧ್ಯ.)