ಭೂಮಿಯ ಎಲ್ಲಕಡೆ ಮೊಬೈಲ್ ಫೋನ್ ಸಂಪರ್ಕ ಜಾಲ ಸೃಷ್ಟಿಸಿರುವ ಮನುಷ್ಯ, ಇದೀಗ ಚಂದ್ರ ಲೋಕದಲ್ಲೂ ಮೊಬೈಲ್ ಫೋನ್ ಜಾಲ ನಿರ್ಮಿಸುತ್ತಿದ್ದಾನೆ. ಮುಂದಿನ ವರ್ಷದಿಂದ ಚಂದ್ರ ಲೋಕದಲ್ಲೂ ಮೊಬೈಲ್ ನೆಟ್ ವರ್ಕ್ ಸ್ಥಾಪನೆಯಾಗಲಿದ್ದು, ಆ ನಂತರ ಚಂದ್ರನಿಂದಲೇ ಹೈ ಡೆಫನಿಷನ್ ವಿಡಿಯೊಗಳನ್ನು ನೇರವಾಗಿ ಭೂಮಿಗೆ ವರ್ಗಾಯಿಸಬಹುದು.
ಜರ್ಮನಿಯ ವೊಡಫೋನ್ ಕಂಪನಿ, ಪ್ರಸಿದ್ಧ ಫೋನ್ ತಯಾರಿಕಾ ಕಂಪನಿ ನೊಕಿಯ ಮತ್ತು ಕಾರು ಉತ್ಪಾದಕ ಕಂಪನಿ ಆಡಿ ಜೊತೆಗೂಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿವೆ. ಇದರ ತಾಂತ್ರಿಕ ವ್ಯವಸ್ಥೆಯ ಹೊಣೆಯನ್ನು ನೊಕಿಯ ಹೊತ್ತಿದ್ದು ಬರ್ಲಿನ್ ಮೂಲದ ಪಿಟಿ ಸೈಂಟಿಸ್ಟ್ಸ್ ಎಂಬ ಕಂಪನಿ ಇವರಿಗೆ ಸಹಯೋಗ ನೀಡುತ್ತಿದೆ.
ಇವರು 2019ರಲ್ಲಿ ಕೇಪ್ ಕೆನಾವೆರಾಲ್ ನಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಉಡಾವಣೆಗೆ ಉದ್ದೇಶಿಸಿದ್ದಾರೆ. ಅಮೆರಿಕದ ಆಸ್ಟ್ರೊನಾಟ್ಗಳು ಚಂದ್ರನ ಮೇಲೆ ಕಾಲಿರಿಸಿ 50 ವರ್ಷಗಳು ಕಳೆದ ಬಳಿಕ, ಇದೇ ಮೊದಲ ಬಾರಿಗೆ ಖಾಸಗಿ ವಲಯದವರು ಇಂಥ ಮೊದಲ ಯೋಜನೆ ಕೈಗೊಳ್ಳುತ್ತಿದ್ದಾರೆ.
(ವಿಶ್ವವಾಣಿ ಗೆಜೆಟಿಯರ್ ಪುರವಣಿಯಲ್ಲಿ ಪ್ರಕಟಿತ ಲೇಖನ)