ಹೊನ್ನಾವರ: ತಾಲೂಕಿನ ಇಡಗುಂಜಿ ಕ್ರಾಸ್ ಬಳಿ ಅರಣ್ಯ ಇಲಾಖೆ ಕಟ್ಟಿಗೆ ತುಂಬಿಡುತ್ತಿದ್ದ ಡೀಪೋ ಇದೀಗ ಸುಂದರ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿದೆ. ಕಟ್ಟಿಗೆ ತುಂಬಿಡುವ ಜಾಗ ಬಿಟ್ಟು ವರ್ಷ ಪೂರ್ತಿ ಖಾಲಿ ಇರುವ 12 ಎಕರೆ  ವ್ಯಾಪ್ತಿಯ ಸ್ಥಳ ಈಗ "ವಿನಾಯಕ ವನ" ಎಂದು ನಾಮಾಂಕಿತಗೊಂಡು ಪ್ರವಾಸಿಗರ ವಿಹಾರ ತಾಣವಾಗಿ ರೂಪುಗೊಂಡಿದೆ.

ತಾಲೂಕಿನ ಪ್ರಸಿದ್ಧ ಕ್ಷೇತ್ರ ಇಡಗುಂಜಿಗೆ ತೆರಳುವ ಮಾರ್ಗದಲ್ಲಿ ಇರುವುದರಿಂದ ಪ್ರವಾಸಿಗರ ಸಂಖ್ಯೆಯೂ ತುಸು ಹೆಚ್ಚು ಎಂದು ಹೇಳಬಹುದು. ರಾಷ್ಟ್ರೀಯ ಹೆದ್ದಾರಿ 66 ರ ಸಮೀಪ ಇರುವ ಈ ಉದ್ಯಾನವನ ಜನಾಕರ್ಷಣೆಯಾಗಿದೆ. ಈ ವಿನಾಯಕ ವನ ಗಣೇಶನ ಜನ್ಮವೃತ್ತಾಂತವನ್ನು ಪರಿಚಯ ಮಾಡಿಕೊಡುತ್ತದೆ. 


ಪ್ರಕೃತಿಯಲ್ಲಿ ದೊರೆಯುವ ಚಿಕ್ಕ ಪುಟ್ಟ ಕಲ್ಲುಗಳನ್ನು ಬಳಸಿ ನಿರ್ಮಿಸಿರುವ ಆವಾರದಲ್ಲಿ ಗಣೇಶನ ಜನ್ಮವೃತ್ತಾಂತ ಪರಿಚಯಿಸುವ ಸುಂದರ ಪ್ರತಿಮೆಗಳು ಮೈದಳೆದಿವೆ. ಇಲ್ಲಿ ಪಾರ್ವತಿ ದೇವಿ ಗಣೇಶನಿಗೆ ಜನ್ಮ ನೀಡುವುದು, ಬಾಲ ಗಣೇಶ ಶಿವನನ್ನು ತಡೆಯುವುದು, ಶಿವನ ಕೋಪಕ್ಕೆ ಗಣೇಶ ತುತ್ತಾಗುವುದು, ಆನೆಯ ತಲೆ ಜೋಡಿಸಿ ಗಜಾನನನಾದದ್ದು, ಗಣೇಶ ಮತ್ತು ಚಂದ್ರರ ಕಥೆ ಹೀಗೆ ವೃತ್ತಾಂತ ಪರಿಚಯಿಸುವ ಪ್ರತಿಮೆಗಳನ್ನು ವೃತ್ತಾಕಾರವಾಗಿ ಸುಂದರವಾಗಿ ನಿರ್ಮಿಸಲಾಗಿದೆ.

ಇಲ್ಲಿ ಪ್ರತಿನಿತ್ಯ ಎರಡು ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ ಅರಣ್ಯ ರಕ್ಷಕರು, ಇಲಾಖಾ ಸಿಬ್ಬಂದಿಗಳೂ ಇರುತ್ತಾರೆ. 

ಗ್ರಾಮ ಅರಣ್ಯ ಸಮಿತಿಯು ಇದರ ನಿರ್ವಹಣಾ ಹೊಣೆ ಹೊತ್ತಿದ್ದು, ವನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

ಏನೇನಿದೆ?: 
•ಉಪಹಾರ ಗೃಹ
• ಪ್ಯಾರಾಗೋಲ
• ಜಿಂಕೆವನ
• ಮಕ್ಕಳ ಆಟಿಕೆಗಳು
• ನೀರಿನ ವ್ಯವಸ್ಥೆ
• ಆಸನದ ವ್ಯವಸ್ಥೆ
• ಸ್ನಾನಗೃಹ
• ಶೌಚಾಲಯ
• ಕುಡಿಯುವ ನೀರು

"ವಿನಾಯಕ ವನಕ್ಕೆ ಪ್ರವಾಸಿಗರ ಭೇಟಿ ನಮ್ಮ ನಿರೀಕ್ಷೆಯಂತಿಲ್ಲ. ಅದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಈ ಉದ್ಯಾನವನದ ನಿರ್ವಹಣೆ ಗ್ರಾಮ ಅರಣ್ಯ ಸಮಿತಿ ಚೆನ್ನಾಗಿ ನಿರ್ವಹಿಸುತ್ತಿದೆ. ಮತ್ತು ಈಗಿರುವ ಉಪಹಾರ ಗೃಹದ ಟೆಂಡರ್ ಈಗಾಗಲೇ ಮುಗಿದಿದ್ದು, ಚುನಾವಣಾ ನೀತಿಸಂಹಿತೆ ತೆರವಾದ ಬಳಿಕ ಟೆಂಡರ್ ಕರೆಯಲಾಗುವುದು." 
•ವಸಂತ್ ರೆಡ್ಡಿ
-ಡಿ.ಎಫ್.ಓ. ಹೊನ್ನಾವರ

"ನಾನು ಹುಬ್ಬಳ್ಳಿಯಿಂದ ಬಂದಿದ್ದೆ. ಮಾರ್ಗ ಮಧ್ಯದಲ್ಲಿ ಈ ಉದ್ಯಾನವನಕ್ಕೆ ಭೇಟಿ ನೀಡಿದ್ದು ಸಂತೋಷ ನೀಡಿತು. ನನಗೆ ಗೊತ್ತಿಲ್ಲದ ಪುರಾಣದ ಕಥೆಗಳನ್ನು ಈ ವಿನಾಯಕ ವನದಿಂದ ತಿಳಿದುಕೊಂಡೆ. ಅರಣ್ಯ ಇಲಾಖೆಗೆ ನನ್ನದೊಂದು ಸಲಾಮ್"
• ಶರಣಪ್ಪ ಹೂಗಾರ್, ಪ್ರವಾಸಿಗ