ನಮ್ಮ ರಾಜ್ಯದಲ್ಲಿ ಅನೇಕ ವಿಷ್ಣುಮೂರ್ತಿ ದೇವಾಲಯಗಳಿವೆ.ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಸಿದ್ಧ ವಿಷ್ಣುಮೂರ್ತಿ ದೇವಾಲಯ ಮೂಡ್ಕಣಿ ಸಮೀಪದ ತುಂಬೊಳ್ಳಿ ಗ್ರಾಮದಲ್ಲಿದೆ. ಹೊನ್ನಾವರ ಗೇರಸೊಪ್ಪಾ ರಸ್ತೆಯಲ್ಲಿ ಹೊನ್ನಾವರದಿಂದ 19 ಕಿ.ಮೀ.ಅಂತರದ ಎಡಬದಿಯಲ್ಲಿ "ತುಂಬೊಳ್ಳಿ ವಿಷ್ಣುಮೂರ್ತಿ ದೇವರು" ಎಂಬ ಫಲಕ ನಮ್ಮನ್ನು ಸ್ವಾಗತಿಸುತ್ತದೆ.ಹೊನ್ನಾವರ ತಾಲೂಕಿನ ಮೂಡ್ಕಣಿ ಗ್ರಾಮದ ಸಮೀಪದ ಗ್ರಾಮ ತುಂಬೊಳ್ಳಿ. ಸುಮಾರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಜನಸಂಖ್ಯೆ ಅಧಿಕವಾಗಿದ್ದರಿಂದ ಈ ಗ್ರಾಮಕ್ಕೆ ತುಂಬೊಳ್ಳಿ ಎಂಬ ಹೆಸರು ಬಂದಿತೆಂದು ಪ್ರತೀತಿ ಇದೆ. ದಟ್ಟವಾದ ಕಾಡು, ತೆಂಗು- ಅಡಿಕೆಯ ತೋಟದ ಮಧ್ಯದಲ್ಲಿ ಎಲೆಮರೆಯ ಕಾಯಿಯಂತೆ ಈ ದೇವಸ್ಥಾನ ಅಸ್ತಿತ್ವದಲ್ಲಿದೆ.
ಸ್ಥಳೀಯ ಸುಮಾರು 45 ಕುಟುಂಬಗಳಿದ್ದು ಅವರಿಂದ ಕ್ರಮವಾಗಿ ನಿತ್ಯಪೂಜೆ, ಹಬ್ಬಹರಿದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ವಾರ್ಷಿಕ ವರ್ಧಂತ್ಯುತ್ಸವ ಮತ್ತು ಅನಂತ ಚತುರ್ದಶಿಯಂದು ಅನ್ನ ಸಂತರ್ಪಣೆ, ಕಾರ್ತಿಕದಲ್ಲಿ ವಿಶೇಷ ಪೂಜೆ, ದೀಪೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಈ ಸುಂದರವಾದ ಪರಿಸರದಲ್ಲಿ ಎಪ್ರಿಲ್ 28, 2013 ರಂದು ಊರಿನ ಜನ, ದಾನಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳ ಸಹಕಾರಗಳೊಂದಿಗೆ ಮೂಡ್ಕಣಿಯ ಶ್ರೀ ಪರಮೇಶ್ವರ ತಿಪ್ಪಯ್ಯ ನಾಯ್ಕ ಇವರು ಅಜೀರ್ಣವಾಗಿದ್ದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು. ಇಲ್ಲಿ ಈಗ ಅತ್ಯದ್ಭುತ ದೇವಾಲಯ ಕಟ್ಟಡವನ್ನು ನೋಡಬಹುದು.
ಇಲ್ಲಿರುವ ಮೂರ್ತಿಗೆ ಎರಡೂ ಕೈಗಳಲ್ಲಿ ಶಂಖ-ಚಕ್ರಗಳಿದ್ದು ಕೆಳಗಿನ ಕೈಗಳಲ್ಲಿ ಗಧಾಪದ್ಮಗಳಿವೆ.ಈ ಮೂರ್ತಿಯನ್ನು ನೋಡಿದಾಗ ಮೈತುಂಬಾ ಆಭರಣಗಳಿರುವುದು ಕಂಡುಬರುತ್ತದೆ. ಈ ಮೂರ್ತಿಯ ಪಾದದ ಹತ್ತಿರ ಚಿಕ್ಕದಾದ ಲೋಹದ ಗಣಪತಿ ಮೂರ್ತಿ ಇದೆ. ಇಲ್ಲಿರುವ ಮೂರ್ತಿಯು ಕಾನಗೋಡದ ಶ್ರೀ ಚೆನ್ನಕೇಶವ ಮೂರ್ತಿ, ಯಲಗುಪ್ಪಾ ಧನ್ವಂತರಿಯ ಮೂರ್ತಿಯನ್ನು ಹೋಲುತ್ತದೆ. ಈ ದೇವಸ್ಥಾನದ ಎದುರು ಒಂದು ಕೆರೆ ಇದ್ದು ಈ ಕೆರೆಯಲ್ಲಿ ಸ್ನಾನ ಮತ್ತು ತೀರ್ಥಸೇವನೆ ಮಾಡುವುದರಿಂದ ಅನೇಕಾನೇಕ ರೋಗಿಗಳು ದೂರವಾಗುತ್ತವೆ ಎಂಬ ಪ್ರತೀತಿ ಇದೆ.
ವರ್ಧಂತ್ಯುತ್ಸವದ ಕಾರ್ಯಕ್ರಮಗಳು:-
ಈ ವರ್ಷದ ವಾರ್ಷಿಕ ವರ್ಧಂತ್ಯುತ್ಸವವು ಎಪ್ರಿಲ್ 17 ರಂದು ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ದೇವತಾ ಪ್ರಾರ್ಥನೆ, ಶುದ್ಧಿಕರ್ಮ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ, ಸತ್ಯನಾರಾಯಣ ಪೂಜೆ, ಅಧಿವಾಸ ಹೋಮ, ತತ್ವಹೋಮಾದಿಗಳು, ಪೂರ್ಣಾಹುತಿ, ಕುಂಬಾಭಿಷೇಕ, ಮಧ್ಯಾಹ್ನ ಪೂಜಾ, ಮಧ್ಯಾಹ್ನ ಬಲಿ, ತೀರ್ಥಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಆ ದಿನ ಸಂಜೆ ಕೂಡ ವೈದಿಕ ಕಾರ್ಯಕ್ರಮ ನೆರವೇರಲಿದೆ.
ಹೋಗುವ ಮಾರ್ಗ :-
ಹೊನ್ನಾವರದಿಂದ ರಾ.ಹೆ. 206 ರ ಮೂಲಕ ಗೇರಸೊಪ್ಪಾ ಮಾರ್ಗವಾಗಿ ಮೂಡ್ಕಣಿಗೆ 19 ಕಿ.ಮೀ.ಕ್ರಮಿಸಿ ಅಲ್ಲಿಂದ ತುಂಬೊಳ್ಳಿ ಕ್ರಾಸ್ ಮಾರ್ಗವಾಗಿ 1 ಕಿ.ಮೀ ಹೋದರೆ ವಿಷ್ಣುಮೂರ್ತಿ ದೇವಾಲಯ ಸಿಕ್ಕುತ್ತದೆ.