ಮತ್ತೆ ಗಣೇಶನ ಹಬ್ಬ ಬಂದಿದೆ. ಇಂದಿಗೂ ಕಲೆಯನ್ನು ನಂಬಿ ಮೂರ್ತಿ ತಯಾರಿಸುವಂತಹ ಕಲಾವಿದರು ಸಾಕಷ್ಟಿದ್ದಾರೆ. ಅಂತಹ ಕಲಾವಿದರುಗಳಲ್ಲಿ ಭಿನ್ನವಾಗಿ ಕಾಣ ಸಿಗುತ್ತಾರೆ ಕರ್ಕಿಯ ಭಂಡಾರಿ ಮನೆತನದವರು.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ಭೂಸ್ವರ್ಗಕೇರಿಯಲ್ಲಿರುವ ಭಂಡಾರಿ ಕುಟುಂಬಸ್ಥರ ಮನೆ ನಮ್ಮನ್ನು ಆಕರ್ಷಿಸುತ್ತದೆ. ಗಣೇಶ ಚತುರ್ಥಿ ಬಂದಾಕ್ಷಣ ವಿವಿಧ ಗಾತ್ರದ ಹಾಗೂ ವಿವಿಧ ಭಂಗಿಯ ಗೌರಿ ಗಣೇಶನ ಮೂರ್ತಿಗಳು ಪ್ರತಿ ವರ್ಷ ಇಲ್ಲಿ ಮೈದಳೆಯುತ್ತವೆ. ಭೂಸ್ವರ್ಗಕೇರಿಯ ರಾಮಚಂದ್ರ ಕೇಶವ ಭಂಡಾರಿ, ಗಜಾನನ ಭಂಡಾರಿ, ಮಂಜುನಾಥ ಭಂಡಾರಿ, ಪ್ರಭಾಕರ ಭಂಡಾರಿ, ರಮೇಶ ಭಂಡಾರಿ ಇವರ ಪ್ರತಿ ಮನೆಯಲ್ಲೂ ಪರಿಸರ ಸ್ನೇಹಿ ಮೂರ್ತಿಗಳು ಸಾಲು ಸಾಲಾಗಿ ನಿಂತಿರುತ್ತದೆ.ನೈಸರ್ಗಿಕವಾಗಿ ಕಂಡುಬರುವ ಅಂಟು ಮಣ್ಣಿನಿಂದ ರೂಪಿಗೊಳ್ಳುವ ಇಲ್ಲಿನ ಗಣೇಶ ಮೂರ್ತಿಗಳು ರಾಸಾಯನಿಕ ರಹಿತ ಬಣ್ಣ ಲೇಪನದಿಂದ, ಪರಿಸರ ಸ್ನೇಹಿಯಾಗಿ ತಲೆ ತಲಾಂತರದಿಂದ ರೂಪುಗೊಳ್ಳುತ್ತಿರುವುದು ವಿಶೇಷ!

ಕರ್ಕಿ ಭಂಡಾರಿ ಮನೆತನದ ಸಂಪೂರ್ಣ ಕುಟುಂಬವೇ ವಿವಿಧ ಕಲೆಗಳಲ್ಲಿ ತೊಡಗಿಕೊಂಡಿದ್ದು, ಹಲವಾರು ತಲೆಮಾರುಗಳಿಂದ ತಮ್ಮ ಕಲಾ ವೃತ್ತಿಯನ್ನು ಗೌರವಿಸುತ್ತಿದ್ದಾರೆ. ಭಂಡಾರಿ ಕುಟುಂಬ ಕಲೆ, ಸಂಗೀತ, ಯಕ್ಷಗಾನ ರಂಗದಲ್ಲಿ ಸಕ್ರಿಯವಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಮದ್ದಳೆವಾದಕರಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಪ್ರಭಾಕರ ಭಂಡಾರಿ, ಸಹ ಮದ್ದಳೆ ವಾದಕ ಮಂಜುನಾಥ ಭಂಡಾರಿ ಕುಟುಂಬದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅಲ್ಲದೇ ಕೆಲವು ವಾದ್ಯಗಳ ತಯಾರಿಕೆಯಲ್ಲೂ ಈ ಕುಟುಂಬ ಎತ್ತಿದ ಕೈ.

ನಮ್ಮ ಕುಟುಂಬಗಳಲ್ಲಿ ಮಣ್ಣಿನ ಗಣಪನ ಮೂರ್ತಿ ತಯಾರಿಕೆಯನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ಇದು ನಮಗೆ ಅಜ್ಜನಿಂದ ಬಂದ ಬಳುವಳಿ. ಅವರು ಮೂರ್ತಿಯನ್ನು ತಯಾರಿಸುವುದನ್ನು ನೋಡಿ ನೋಡಿ, ಅವರಿಗೆ ಸಹಾಯ ಮಾಡುತ್ತಾ ಈ ಕಲೆಯನ್ನು ರೂಢಿಸಿಕೊಂಡಿದ್ದೇವೆ. ಮೂರು ತಲೆಮಾರಿನ ಹಿಂದೆ ಅಜ್ಜ ಮಣ್ಣಿನ ಮೂರ್ತಿಗಳಿಗೆ ನೈಸರ್ಗಿಕ ಬಣ್ಣ ಬಳಸುತ್ತಿದ್ದರು. ಬಳಿಕ ವಾಟರ್ ಕಲರ್ ಬಳಕೆ ಪ್ರಾರಂಭವಾಯಿತು. ನಾವು ಕೂಡ ಪರಿಸರಕ್ಕೆ ಯಾವುದೇ ಧಕ್ಕೆ ಆಗಬಾರದು ಎಂಬ ಕಾರಣದಿಂದ ವಾಟರ್ ಕಲರ್ ಬಳಸಿಯೇ ಮೂರ್ತಿ ತಯಾರಿಸುತ್ತಿದ್ದೇವೆ ಎನ್ನುತ್ತಾರೆ ರಮೇಶ ಭಂಡಾರಿ.

ಮಣ್ಣಿನ ಮೂರ್ತಿ ತಯಾರಿಕೆ ಎಂದರೆ ಅದೊಂದು ಯಜ್ಞದಂತೆ. ಮೊದಲು ಗಣಪತಿ ತಯಾರಿಕೆಗೆ ಅಗತ್ಯವಾದ ಶುದ್ಧವಾದ ಜೇಡಿಮಣ್ಣು ಸಂಗ್ರಹಿಸಬೇಕು. ಮೊದಲೆಲ್ಲಾ ಹೇರಳವಾಗಿ ದೊರೆಯುತ್ತಿದ್ದ ಅಂಟು ಮಣ್ಣು ಈಗ ಸುಲಭವಾಗಿ ಸಿಗುತ್ತಿಲ್ಲ. ಆಮೇಲೆ ತಂದ ಮಣ್ಣಿನಲ್ಲಿರುವ ಕಸ-ಕಡ್ಡಿ ಬೇರ್ಪಡಿಸಿ ಹದಗೊಳಿಸಿ, ತರುವಾಯ ಹಂತಹಂತವಾಗಿ ಮೂರ್ತಿ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು. ಮೂರ್ತಿಗಳನ್ನು ಆಕಾರಕ್ಕೆ ತಕ್ಕಂತೆ ನುಣುಪುಗೊಳಿಸಿ, ಹಾರ ಕಿರೀಟ ಸೇರಿದಂತೆ ಶಾಸ್ತ್ರೋಕ್ತ ಪ್ರಮಾಣದಲ್ಲಿ ಅಂಗ ವಿನ್ಯಾಸ ಮಾಡಿ, ಬಣ್ಣಗಾರಿಕೆ ಮಾಡಬೇಕು. ಎಲ್ಲಾ ಹಂತಗಳು ಅವಸರದಿಂದ ಆಗುವುದಿಲ್ಲ. ಮೂರ್ತಿಯ ನಿರ್ಮಾಣದಿಂದ ಹಿಡಿದು ಬಣ್ಣಗಾರಿಕೆಯವರೆಗೆ ಈ ಕೆಲಸದಲ್ಲಿ ಕುಟುಂಬದ ಐದಾರು ಜನ ಹಗಲು ರಾತ್ರಿ ತೊಡಗಿಕೊಂಡರೂ ಮುಗಿಯುವುದಿಲ್ಲ. ಮೂರು ತಿಂಗಳುಗಳ ಕಾಲ ನಮ್ಮ ಇಡೀ ಕುಟುಂಬವೇ ಈ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ ಎನ್ನುತ್ತಾರೆ ರಾಮಚಂದ್ರ ಭಂಡಾರಿ.ಭಕ್ತರ ಇಷ್ಟದಂತೆ ಆಚಾರ್ಯ ಶಂಕರ ಸ್ವರೂಪಿ, ಗರುಡ ವಾಹನ, ಢಮರು ವಾಹನ, ಪಾರ್ವತಿ ಪರಮೇಶ್ವರ ಗಣಪತಿ ಮೊದಲಾದ ವೈವಿಧ್ಯಮಯ ಗಣಪತಿಗಳನ್ನು ಭಂಡಾರಿ ಕುಟುಂಬದವರು ಸಿದ್ಧಪಡಿಸಿದ್ದಾರೆ.

ಮಳೆಯ ಕಾರಣ ಮೂರ್ತಿಗಳು ಒಣಗುವುದಿಲ್ಲ, ಒಣಗದಿದ್ದರೆ ಬಣ್ಣ ನಿಲ್ಲುವುದಿಲ್ಲ. ದರ ಎಂದಿನಂತೆ. ಕೊಳ್ಳುವ ಮಣ್ಣು, ಬಣ್ಣ ದುಬಾರಿ. ಎಲ್ಲವನ್ನೂ ಕೈಯಿಂದಲೇ ಮಾಡಬೇಕು. ಸಿಗುವ ಪ್ರತಿಫಲ ಕಡಿಮೆ. ಇಂತಹ ಸಂದರ್ಭದಲ್ಲೂ ವಂಶ ಪಾರಂಪರ್ಯವಾಗಿ ಬಂದ ಈ ಕೆಲಸ ಶೃದ್ಧೆಯಿಂದ ಮಾಡುತ್ತಿದ್ದೇವೆ ಎನ್ನುತ್ತಾರೆ ಗಜಾನನ ಭಂಡಾರಿ.

ದೂರದ ಊರುಗಳಿಗೂ ಗಣೇಶನ ಪಯಣ...!:
ಕರ್ಕಿ ಭೂಸ್ವರ್ಗಕೇರಿಯಲ್ಲಿ ತಯಾರಾಗುವ ಗಣಪನ ಮೂರ್ತಿಗಳಿಗೆ ದೂರ ದೂರದ ಊರುಗಳಿಂದಲೂ ಬೇಡಿಕೆ ಇರುವುದು ವಿಶೇಷ. ಉಡುಪಿ ಜಿಲ್ಲೆಯ ಬಾರ್ಕೂರು, ಶಿರಸಿ, ಕುಂದಾಪುರ, ಗೋವಾದಿಂದಲೂ ಇಲ್ಲಿ ಸಿದ್ಧವಾಗುವ ಮೂರ್ತಿಗಳಿಗೆ ಬೇಡಿಕೆಯಿದೆ. ಈ ಕಲಾ ಪ್ರಪಂಚ ಹೊಟ್ಟೆ ತುಂಬಿಸದಿರುವುದರಿಂದ ಈಗಿನ ಯುವ ಪೀಳಿಗೆಗೆ ಆಸಕ್ತಿ ಇಲ್ಲ. ಹಿರಿಯರಿಗೆ ಶಕ್ತಿ ಕುಂಠಿತವಾಗುತ್ತಿದೆ. ಆದ್ದರಿಂದ ದೂರದ ಊರುಗಳಿಂದ ಬರುವ ಬೇಡಿಕೆಗಳನ್ನು ಪೂರೈಸಲಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಕಲಾವಿದರು.