ಗುಬ್ಬಚ್ಚಿಯ ಸಂತತಿ ನಾಶವಾಗುತ್ತಿರುವುದರ ಕುರಿತು ಜಾಗೃತಿ ಮೂಡಿಸಿ, ಅವುಗಳನ್ನು ರಕ್ಷಿಸುವುದಕ್ಕಾಗಿಯೇ ಮಾ.20ರಂದು ಅಂತಾರಾಷ್ಟ್ರೀಯ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದನ್ನು ಒಂದು ದಿನದ ಆಚರಣೆಯಾಗಿಸದೇ ವರ್ಷಪೂರ್ತಿ ಈ ಪುಟ್ಟ ಹಕ್ಕಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಮೂವರು ಸಾಧಕರ ಪರಿಚಯ ಇಲ್ಲಿದೆ.

ಮಕ್ಕಳಲ್ಲೂ ಪ್ರೀತಿ ಉಕ್ಕಿಸುವ ಪ್ರಕಾಶ್​

ಬಾಲ್ಯದಲ್ಲಿ ತಮ್ಮ ಮನೆಯಂಗಳದಲ್ಲಿ ಹಿಂಡುಹಿಂಡಾಗಿ ಬರುತ್ತಿದ್ದ ಗುಬ್ಬಿಗಳ ಚಿಲಿಪಿಲಿ ನಾದವನ್ನು ಆಲಿಸುತ್ತಲೇ ಬೆಳೆದವರು ತುಮಕೂರಿನ ಪ್ರಕಾಶ್ ಕೆ.ನಾಡಿಗ್. ಪ್ರಾಣಿ ಶಾಸ್ತ್ರದ ವಿದ್ಯಾರ್ಥಿಯಾದ ಇವರು, ದಿನಗಳೆದಂತೆಲ್ಲಾ ಗುಬ್ಬಿಗಳು ಮಾಯವಾಗುತ್ತಿರುವುದನ್ನು ಗಮನಿಸುತ್ತಲೇ ಬಂದರು. ಇದಕ್ಕೆ ಕಾರಣ ಹುಡುಕುತ್ತಾ ಹೋದ ಅವರಿಗೆ ನಾಸಿಕ್​ನ ‘ಸ್ಪಾ್ಯರೋ ಮ್ಯಾನ್’ ಮೊಹಮ್ಮದ್ ದಿಲಾವರ್. ಅವರ ಕೆಲಸದಿಂದ ಪ್ರೇರಿತರಾದ ಪ್ರಕಾಶ್ ಗುಬ್ಬಚ್ಚಿಗಳ ಸಂತತಿಯನ್ನು ಉಳಿಸಿ ಬೆಳೆಸಲು ತೀರ್ವನಿಸಿದರು.

ಅದರ ಫಲವಾಗಿ ಇಂದು ಅವರ ಮನೆಯ ತುಂಬಾ ವಿವಿಧ ಪಕ್ಷಿಗಳ ಕಲರವ. ಡಬ್ಬದಲ್ಲಿನ ಆಹಾರ ಖಾಲಿಯಾದರೆ ಚಿವ್​ಚಿವ್ ಎನ್ನುತ್ತಾ ಪ್ರಕಾಶ್ ಅವರನ್ನು ಎಚ್ಚರಿಸುವ ಪರಿ ನಿಜಕ್ಕೂ ಅದ್ಭುತ!

ಮಕ್ಕಳಿಗೆ ಪ್ರಾಣಿ ಪಕ್ಷಿಗಳೆಂದರೆ ಕುತೂಹಲ ಜಾಸ್ತಿ. ಈ ಕುತೂಹಲವನ್ನು ಪೋಷಿಸಿದರೆ ಉಪಯೋಗವಾಗಬಹುದೆಂಬುದನ್ನು ಮನಗಂಡ ಪ್ರಕಾಶ್ ಮಕ್ಕಳಿಗೆ ಗುಬ್ಬಚ್ಚಿಗಳ ಬಗ್ಗೆ ಪ್ರೀತಿ ಬೆಳೆಸಿ ಗುಬ್ಬಚ್ಚಿಗಳ ಸಂತತಿಯನ್ನು ಬೆಳೆಸಲು ನಿರ್ಧರಿಸಿದರು. ಅದಕ್ಕಾಗಿ ‘ಗುಬ್ಬಚ್ಚಿ ಸಂಘ’ವನ್ನು ಸ್ಥಾಪಿಸಿ ಅದಕ್ಕೆ ತಮ್ಮ ಮಗ ಅಭಯ್ನನ್ನೇ ಅಧ್ಯಕ್ಷನನ್ನಾಗಿ ಮಾಡಿದರು. ಹಲವಾರು ಮಕ್ಕಳನ್ನು ಸಂಘಕ್ಕೆ ಸದಸ್ಯರನ್ನಾಗಿ ಮಾಡಿಸಿದರು. ಈ ಮೂಲಕ ಮಕ್ಕಳಲ್ಲಿ ಗುಬ್ಬಿಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪ್ರಾರಂಭಿಸಿದರು. ಈ ಸಂಘದ ಮೂಲಕವೇ ಅನೇಕ ವರ್ಷಗಳಿಂದ ಮಕ್ಕಳಿಗಾಗಿ ಪರಿಸರಕ್ಕೆ ಸಂಬಂಧಿಸಿದಂತೆ ಇರುವ ವಿವಿಧ ದಿನಗಳಂದು ವಿವಿಧ ಸ್ಪರ್ಧೆ ಏರ್ಪಡಿಸಿ ಅವರಲ್ಲಿ ಪರಿಸರ ಪ್ರೀತಿ ತುಂಬುತ್ತಿದ್ದಾರೆ. ಜತೆಗೆ, ಮಕ್ಕಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಹಕ್ಕಿಗಳಿಗೆ ಆಹಾರ ಹಾಕುವ ಡಬ್ಬಿಗಳು, ಗೂಡುಕಟ್ಟಲು ಅನುಕೂಲವಾಗುವಂತಹ ಹಕ್ಕಿ ಗೂಡುಗಳನ್ನೇ ಉಡುಗೊರೆಯಾಗಿ ಕೊಡಿಸುತ್ತಾರೆ. ನೀರು ಹಾಗೂ ತಂಪುಪಾನೀಯಗಳ ಬಾಟಲಿಗಳನ್ನು ಉಪಯೋಗಿಸಿ ಹಕ್ಕಿಗಳ ಆಹಾರದ ಡಬ್ಬಿಗಳನ್ನು ತಯಾರಿಸುವುದನ್ನು ಕಲಿತು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ.

‘ಮನೆಯ ಕಾಂಪೌಂಡ್ ಮೇಲೆ ಒಂದಷ್ಟು ಅಕ್ಕಿ ಕಾಳು ಹಾಕಿದರೆ, ಕೆಲದಿನಗಳಲ್ಲಿಯೇ ನಿಮ್ಮ ಮನೆಯಲ್ಲಿ ಗುಬ್ಬಿಗಳ ಚಿಲಿಪಿಲಿ ಕೇಳಬಹುದು. ಹಕ್ಕಿಯ ಆಹಾರದ ಡಬ್ಬಿಯಲ್ಲಿ ಅಕ್ಕಿ ನುಚ್ಚನ್ನು ಹಾಕಿಟ್ಟರೆ ಜಾಸ್ತಿ ಗುಬ್ಬಿಗಳು ಬರುತ್ತವೆೆ. ನುಚ್ಚಿನ ಜೊತೆ ನವಣೆ, ಸಜ್ಜೆ ಸಿರಿಧಾನ್ಯಗಳನ್ನು ಹಾಕಿಟ್ಟರೆ ಬೇರೆ ರೀತಿಯ ಹಕ್ಕಿಗಳು ಬರುತ್ತವೆೆ’ ಎನ್ನುತ್ತಾರೆ ಅವರು. 

ಹಕ್ಕಿಗಳು ತಮ್ಮ ಮರಿಗಳಿಗೆ ಕೀಟಗಳು ಹಾಗೂ ಅದರ ಲಾರ್ವಗಳನ್ನು ತಿನ್ನಿಸುವುದರಿಂದ ಬೆಳೆಗಳಿಗೆ ಬರಬಹುದಾದ ಕೀಟ ಬಾಧೆಯೂ ತಪ್ಪುತ್ತದೆ ಜತೆಗೆ ಸುತ್ತಮುತ್ತಲ ಹೂ ಹಣ್ಣಿನ ಗಿಡಗಳ ಪರಾಗಸ್ಪರ್ಶ ಕ್ರಿಯೆಗೂ ಸಹಾಯವಾಗುತ್ತದೆ. ಹಕ್ಕಿಗಳ ವೀಕ್ಷಣೆಯಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಪ್ರಕಾಶ್. ಅವರು, ಶಿವಮೊಗ್ಗದಲ್ಲಿ ಹಾಗೂ ತುಮಕೂರಿನ ಊರುಕೆರೆಯಲ್ಲಿ ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿ ಅವುಗಳನ್ನು ಪೋಷಿಸುತ್ತಿದ್ದಾರೆ ಕೂಡ. ಸಂಪರ್ಕಕ್ಕೆ: 9845529789 (ರಾತ್ರಿ 8ರ ನಂತರ)

ಗುಬ್ಬಿಗಳಿಗಿಲ್ಲಿಲ್ಲ ಜಾಗ!

ಈಗ ತಾರಸಿ ಮನೆಗಳು ಜಾಸ್ತಿಯಾಗುತ್ತಿರುವುದರಿಂದ ಗುಬ್ಬಿಗಳಿಗೆ ಗೂಡು ಕಟ್ಟಲು ಜಾಗ ಸಿಗುತ್ತಿಲ್ಲ. ಹಿಂದೆಲ್ಲಾ ಹಂಚಿನ ಮನೆಯ ಸಂದು ಗೊಂದುಗಳಲ್ಲಿ, ಮನೆಯಲ್ಲಿ ಹಾಕುತ್ತಿದ್ದ ದೇವರ ಫೋಟೊಗಳ ಹಿಂದೆ ಹಕ್ಕಿಗಳು ಗೂಡು ಕಟ್ಟುತ್ತಿದ್ದವು. ಈಗ ಗೂಡು ಕಟ್ಟಲು ಜಾಗವಿಲ್ಲ. ಮೊದಲೆಲ್ಲ ಅಂಗಡಿಯಿಂದ ತಂದ ದಿನಸಿ ಸಾಮಾನುಗಳನ್ನು ಹಸನುಗೊಳಿಸಿ ಉಳಿದ ಕಾಳು ಕಡಿಗಳನ್ನು ಹೊರಗೆಸೆಯುತ್ತಿದ್ದರು. ಆದರೆ ಈಗ ಸ್ವಚ್ಛ ಮಾಡಿದ ದಿನಸಿ ಪದಾರ್ಥಗಳು ಸೂಪರ್ ಮಾರ್ಕೆಟ್​ನಿಂದ ತರುವುದರಿಂದ ಪಕ್ಷಿಗಳಿಗೆ ಆಹಾರದ ಕೊರತೆಯೂ ಆಗಿದೆ. ಇಷ್ಟೆ ಅಲ್ಲ ನಗರಗಳಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯ ಬೇರೆ!

ನೀವೂ ಪಕ್ಷಿರಕ್ಷಕರಾಗಬಹುದು

ಇತ್ತೀಚೆಗೆ ಗುಬ್ಬಿಗಳು ಗೂಡು ಕಟ್ಟಲು ಜಾಗ ಹುಡುಕುವ ಪರಿಸ್ಥಿತಿ ಇದೆ. ಗುಬ್ಬಿಗಳಿಗೆ ಗೂಡು ಕಟ್ಟಲು ಮನೆಯ ಬಳಿ ಸ್ಥಳಗಳಿದ್ದರೆ ಅವಕಾಶ ಮಾಡಿಕೊಡಬಹುದು. ಖಾಲಿ ಡಬ್ಬ ಸಿಕ್ಕರೆ ಅದನ್ನು ಬಿಸಾಡಬೇಡಿ. ಅದಕ್ಕೊಂದು ರಂಧ್ರ ಮಾಡಿ ಮನೆಯ ಹೊರಗೆ ಸೂಕ್ತ ಸ್ಥಳದಲ್ಲಿಡಿ. ಸ್ವಲ್ಪ ದಿನದಲ್ಲೇ ಅಲ್ಲಿ ಗುಬ್ಬಿಯೂ ಸೇರಿದಂತೆ ವಿವಿಧ ಹಕ್ಕಿಗಳು ಗೂಡು ಕಟ್ಟುತ್ತವೆ. ಮನೆಯಂಗಳ ಪುಟ್ಟ ಪಕ್ಷಿಧಾಮದಂತಾಗುತ್ತದೆ. ಪ್ರಕಾಶ್ ಅವರ ಮನೆಯಲ್ಲಿ ಈ ರೀತಿ ಇಟ್ಟಿರುವ ಈ ಡಬ್ಬದಲ್ಲಿ ಒಮ್ಮೆ ಗುಬ್ಬಿ ಗೂಡು ಕಟ್ಟಿ ಮರಿ ಮಾಡಿದರೆ ಕೆಲವೊಮ್ಮೆ ಮೈನಾ, ಮಗದೊಮ್ಮೆ ಬುಲ್ ಬುಲ್ ಹಕ್ಕಿ ಗೂಡು ಕಟ್ಟಿ ಮರಿ ಮಾಡುತ್ತಾ ಇವರ ಮನೆಯಲ್ಲಿ ಹಕ್ಕಿಗಳ ಬಾಣಂತನ ಕಾರ್ಯ ನಿರಂತರವಾಗಿರುತ್ತದೆ.

ಗುಬ್ಬಚ್ಚಿಗಾಗಿಯೇ ಟ್ರಸ್ಟ್ ಸ್ಥಾಪಿಸಿರುವ ಕಾರ್ತಿಕ್

ಚಿತ್ರದುರ್ಗದಲ್ಲಿ 200ಕ್ಕೂ ಹೆಚ್ಚು ವಿಭಿನ್ನ ಪ್ರಭೇದದ ಪಕ್ಷಿಗಳನ್ನು ಪರಿಚಯಿಸಿದ ಕೀರ್ತಿ ಹೊಂದಿರುವ ಪರಿಸರ, ಪಕ್ಷಿ, ವನ್ಯಜೀವಿ ಛಾಯಾಗ್ರಾಹಕ ಎಂ.ಕಾರ್ತಿಕ್ ಗುಬ್ಬಚ್ಚಿಗಳ ಸಂರಕ್ಷಕರೂ ಹೌದು. ಕಳೆದ 10 ವರ್ಷಗಳಿಂದ ಇವರು ಗುಬ್ಬಚ್ಚಿಗಳ ಉಳಿವಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಬಾಲ್ಯದಿಂದಲೂ ಗುಬ್ಬಚ್ಚಿ ಬಗ್ಗೆ ಒಲವು ಹೊಂದಿದ್ದ ಕಾರ್ತಿಕ್, ಅವುಗಳ ರಕ್ಷಣೆಯನ್ನು ತಮ್ಮ ಮನೆಯಿಂದಲೇ ಆರಂಭಿಸಿದರು. ಮನೆಯ ವಿವಿಧ ಭಾಗಗಳಲ್ಲಿ ತಾವೇ ತಯಾರಿಸಿದ ಗೂಡು ಇಟ್ಟರು. ಗುಬ್ಬಿಗಳು ಬರಲಾರಂಭಿಸಿದವು. ನಂತರ, ಸ್ನೇಹಿತರ ಮನೆಗಳಲ್ಲೂ ಗೂಡುಗಳನ್ನಿಟ್ಟರು.ಕೆಲವು ಕಡೆ ಪ್ರಯತ್ನ ವಿಫಲವಾದರೂ ಕೆಲವು ಕಡೆ ಯಶಸ್ಸನ್ನೂ ಸಾಧಿಸಿದರು. ನಂತರ ಗುಬ್ಬಚ್ಚಿ ಸಂರಕ್ಷಣೆ ಕಾರ್ಯ ರಾಜ್ಯಾದ್ಯಂತ ವಿಸ್ತರಿಸಬೇಕೆಂದು ಕನಸು ಕಂಡರು. ಅದರ ಫಲವಾಗಿಯೇ ಮೂರು ವರ್ಷಗಳ ಹಿಂದೆ ಇವರ ಸಾರಥ್ಯದಲ್ಲಿ ‘ಗುಬ್ಬಚ್ಚಿ ಬರ್ಡ್ ಟ್ರಸ್ಟ್’ ಉದಯಿಸಿತು. ತಮ್ಮ ಟ್ರಸ್ಟ್ ಮೂಲಕ ಚಿತ್ರದುರ್ಗ ಬರ್ಡ್ ಫೆಸ್ಟಿವಲ್ ಸೇರಿದಂತೆ ಹಲವಾರು ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ. ಗುಬ್ಬಚ್ಚಿ ಪೋಷಿಸುವ ಆಸಕ್ತಿ ಹೊಂದಿರುವವರಿಗೆ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಗೂಡುಗಳನ್ನು ವಿತರಣೆ ಮಾಡಿದ್ದಾರೆ.

ಕಾರ್ತಿಕ್ ಅವರ ಆಸಕ್ತಿ, ಅಭಿರುಚಿಯನ್ನು ಮೆಚ್ಚಿ ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಚಿತ್ರದುರ್ಗ ಜಿಲ್ಲೆಯ ಮೊಟ್ಟಮೊದಲ ಪಕ್ಷಿಧಾಮವನ್ನು ಸಿರಿಗೆರೆಯಲ್ಲಿ ಅಭಿವೃದ್ಧಿಗೊಳಿಸುವ ಜವಾಬ್ದಾರಿಯನ್ನು ಕಾರ್ತಿಕ್​ಗೆ ನೀಡಿದ್ದಾರೆ. ಸಂಪರ್ಕಕ್ಕೆ: 9986818001

ಮೊಬೈಲ್ ಟವರ್ ಕಾರಣವಲ್ಲ!

ಗುಬ್ಬಚ್ಚಿ ಅಳಿವಿಗೆ ಮೊಬೈಲ್ ಟವರ್ ಹೊರಸೂಸುವ ವಿಕಿರಣಗಳು ಕಾರಣ ಎಂಬುದು ಬಹುತೇಕ ಎಲ್ಲರ ವಾದ. ಆದರೆ ಈ ವಾದ ತಪ್ಪು ಎನ್ನುತ್ತಾರೆ ಸಿಟಿಜನ್ ಸ್ಪಾ್ಯರೋ ಸಂಸ್ಥೆ ತಜ್ಞರು. ಅವರು ನಡೆಸಿರುವ ಸಮೀಕ್ಷೆಯ ಪ್ರಕಾರ ಭಾರತದ ಚೆನ್ನೈ ಹಾಗೂ ಹೈದರಾಬಾದ್​ಗಳಲ್ಲಿ ಹೆಚ್ಚು ಗುಬ್ಬಚ್ಚಿಗಳಿರುವುದು ದೃಢಪಟ್ಟಿದೆ. ಇದರರ್ಥ ಅತಿಹೆಚ್ಚು ವಿಕಿರಣಗಳನ್ನು ಹೊರಸೂಸುವ ರಾಜ್ಯಗಳಲ್ಲೂ ಗುಬ್ಬಚ್ಚಿಗಳಿವೆ. ಆದರೆ ನಮ್ಮ ರಾಜ್ಯವೂ ಸೇರಿದಂತೆ ಕೆಲವು ಕಡೆ ಗುಬ್ಬಚ್ಚಿ ಸಂತತಿ ಸಂಪೂರ್ಣವಾಗಿ ಕ್ಷೀಣಿಸಲು ಕಾರಣ ನಶಿಸುತ್ತಿರುವ ಪರಿಸರ ಹಾಗೂ ರಾಸಾಯನಿಕಯುಕ್ತ ಧಾನ್ಯಗಳು.

| ಎಂ.ಎಸ್​.ಶೋಭಿತ್​ ಮೂಡ್ಕಣಿ