ದೇಶದಾದ್ಯಂತ ನಿರುದ್ಯೋಗ ಸಮಸ್ಯೆಯ ಬಗ್ಗೆ ದಿನನಿತ್ಯ ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆಗೆ ಅನ್ವರ್ಥವಾಗುವಂತೆ ಭಟ್ಕಳದ ಪತ್ರಕರ್ತರೊಬ್ಬರು ಮೊಲ ಸಾಕಣೆ ಮೂಲಕ ಆದಾಯ ಗಳಿಸಿ ಸಾಧನೆ ಮಾಡಿದ್ದಾರೆ.

ನಿಜ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮೂಸಾನಗರ ಮಜಿರೆಯ ತಗ್ಗರಗೋಡಿನ ನಿವಾಸಿ ರಿಜ್ವಾನ್ ಗಂಗಾವಳಿ ಅವರೇ ಈ ಸಾಧನೆ ಮಾಡಿದ ಹೀರೋ. "ಕರಾವಳಿ ರ್ಯಾಬಿಟ್ ಬ್ರೀಡರ್ ಫಾರ್ಮ್’ ಎಂಬ ಹೆಸರಿನ ಉದ್ಯಮ ಕೂಡ ಪ್ರಾರಂಭಿಸಿದ್ದಾರೆ.

ಉಚಿತ ತರಬೇತಿ:
ಒಂದು ಹಂತದಲ್ಲಿ ಮೊಲ ಸಾಕಣೆಯಲ್ಲಿ ಏಳಿಗೆ ಕಂಡುಕೊಂಡ ಬಳಿಕ ಕಳೆದ ಎರಡೂವರೆ ವರ್ಷದಿಂದೀಚೆಗೆ ಮೊಲ ಸಾಕಣೆಯ ಉಚಿತ ತರಬೇತಿ ಶಿಬಿರವನ್ನೂ ಆರಂಭಿಸಿದ್ದಾರೆ. ಇವರಿಂದ ತರಬೇತಿ ಪಡೆದ ಸಾಕಷ್ಟು ಶಿಬಿರಾರ್ಥಿಗಳು ಯಶಸ್ವಿ ದಾರಿಯತ್ತ ಸಾಗುತ್ತಿದ್ದಾರೆ. ಪ್ರತಿನಿತ್ಯ ರಾಜ್ಯ ಸೇರಿದಂತೆ ಹೊರರಾಜ್ಯದಿಂದ ಮೊಲ ಸಾಕಣೆಯ ಕುರಿತು ದೂರವಾಣಿಯ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ತಿಂಗಳಲ್ಲಿ ರವಿವಾರ ಮೂರು ಬ್ಯಾಚಿನಂತೆ ತರಬೇತಿ ನೀಡುತ್ತಿರುವ ಇವರು ಎರಡು ಬ್ಯಾಚುಗಳನ್ನು ಕರ್ನಾಟಕದ ರೈತರಿಗೆ ಸೀಮಿತವಾಗಿಟ್ಟಿದ್ದು, ಇನ್ನೊಂದು ಬ್ಯಾಚಿನಲ್ಲಿ ಹೊರರಾಜ್ಯವಾದ ಆಂಧ್ರ, ತೆಲಂಗಾಣ ಸೇರಿದಂತೆ ಇನ್ನೂ ಕೆಲ ಪ್ರದೇಶದಿಂದ ಬರುವ 15-20 ಮಂದಿಗೆ ತರಬೇತಿ ನೀಡುತ್ತಾರೆ. ಅಷ್ಟೇ ಅಲ್ಲ, ತರಬೇತಿಗೆ ಹಾಜರಾದ ಪ್ರತಿಯೊಬ್ಬರಿಗೂ ಖರೀದಿಯಲ್ಲಿ 3 ತಿಂಗಳ ಬಳಿಕ 10 ಮೊಲವನ್ನು ಸಾಕಣೆಗೆ ನಿಯಮಿತ ದರದಲ್ಲಿ ನೀಡುತ್ತಿದ್ದಾರೆ. 

ಮೊಲದೊಂದಿಗೆ ಕಳೆದ 34 ವರ್ಷ:
‘ಕರಾವಳಿ ರ್ಯಾಬಿಟ್ ಬ್ರೀಡರ್’ ರಾಜ್ಯದಲ್ಲಿಯೇ ಮೊದಲ ಯಶಸ್ವಿ ಮೊಲ ಸಾಕಾಣಿಕಾ ಕೇಂದ್ರ ಹಾಗೂ ತರಬೇತಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕಳೆದ 34 ವರ್ಷಗಳಿಂದಲೂ ಈ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ ರಿಜ್ವಾನ್. ಇವುಗಳ ಆಗು-ಹೋಗುಗಳು, ವಿಶೇಷ ಆಹಾರ ಪದ್ಧತಿ, ಸಂತತಿಯ ಅಭಿವೃದ್ಧಿ ಹಾಗೂ ಮುಖ್ಯವಾಗಿ ಮೊಲಗಳಿಗೆ ಬೇಕಾದ ಸ್ವಚ್ಛತೆಯ ಬಗೆಗಿನ ಕಾಳಜಿಯನ್ನೂ ವಹಿಸುತ್ತಾರೆ.  ಪ್ರತಿನಿತ್ಯ ಬೆಳಗ್ಗೆ 7 ಗಂಟೆಗೆ ಫಾರ್ಮಿಗೆ ಬರುವ ಇವರು, ಕೇಂದ್ರದ ಸ್ವಚ್ಛತೆಗೆ ಮುಂದಾಗಿ ಮೊಲಗಳಿಗೆ ನೀಡಬೇಕಾದ ಎಲ್ಲ ಆಹಾರವನ್ನು ನೀಡಿಯೇ ನಂತರ ತಮ್ಮ ಕೆಲಸಕ್ಕೆ ತೆರಳುತ್ತಾರೆ. 

ಆಹಾರ ಪದ್ಧತಿ, ರೋಗಗಳು:
ಮೊಲಗಳಿಗೆ ಆಹಾರವಾಗಿ ಹಲಸಿನ ಎಲೆ, ಬಾಳೆ ಎಲೆ ಮತ್ತು ಹುಲ್ಲುಗಳನ್ನು ನೀಡಬಹುದು. ಪ್ಲವರ್ ಕೋಸ್ ಅನ್ನು ಮಾತ್ರ ಹಾಕಬಾರದು. ಏಕೆಂದರೆ ಅವುಗಳಲ್ಲಿನ ಕೆಮಿಕಲ್ ಪ್ರಮಾಣ ಜಾಸ್ತಿ ಇರುವುದರಿಂದ ಮೊಲಗಳು ಸಾಯುವ ಸಂದರ್ಭ ದಟ್ಟವಾಗಿರುತ್ತದೆ. ದಿನದ ಒಂದು ಹೊತ್ತು ಸೊಪ್ಪು, ಹುಲ್ಲು ಹಾಕಿದರೆ ಇನ್ನೊಂದು ಹೊತ್ತು ರೋಗ ನಿರೋಧಕ ಔಷಧವನ್ನು ನೀಡಬಹುದಾಗಿದೆ. ಇನ್ನು ಮೊಲಗಳಿಗೆ ಬರುವ ರೋಗಗಳೆಂದರೆ ನ್ಯೂಮೋನಿಯಾ, ಮೆಂಜ್ ಮತ್ತು ಕಿವಿಗಳು ದಪ್ಪಗಾಗುವುದು. ಈ ಎಲ್ಲ ರೋಗಗಳಿಗೆ ಔಷಧಗಳಿವೆ. ಮೊಲಗಳಿಗೆ ನೀಡಲಾಗುವ ಔಷಧಗಳು ರೈತರಿಗೆ ಕೈಗೆಟುಕುವ ದರದಲ್ಲಿದ್ದು, ಆಯಾ ಪಶು ಆಸ್ಪತ್ರೆಯಲ್ಲೂ ಲಭ್ಯವಿವೆ.

ರಿಜ್ವಾನ್ ಅವರ ಸಂಪರ್ಕಕ್ಕೆ 9035535702

ಚಿತ್ರ-ಲೇಖನ: 
ಎಂ.ಎಸ್.ಶೋಭಿತ್
(ವಿಜಯವಾಣಿ "ವಿತ್ತವಾಣಿ" ಪುರವಣಿಯಲ್ಲಿ ಪ್ರಕಟಿತ ಲೇಖನ.)