ಹರ್ಷಲಾರ ಪತಿ ಅಗರಬತ್ತಿ ಫ್ಯಾಕ್ಟರಿ ನಡೆಸುತ್ತಿದ್ದರು. ಉದ್ಯಮದಲ್ಲಿ ನಷ್ಟವಾಗಿ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಯ್ತು. ಮುಂದೆ ಬದುಕು ನಡೆಸುವುದು ಹೇಗಪ್ಪಾ ಅಂತ ಕಂಗಾಲಾದ ಪತಿಗೆ ಹೆಗಲು ನೀಡಿದ ಹರ್ಷಲಾ, ಹಪ್ಪಳ ತಯಾರಿಕೆಗೆ ತೊಡಗಿದರು.

ಸಂಸಾರದ ಬಂಡಿಗೆ, ಪತಿ-ಪತ್ನಿಯರು ಜೋಡಿ ಎತ್ತುಗಳು. ಕಷ್ಟ, ಸುಖದಲ್ಲಿ ಒಬ್ಬರಿಗೊಬ್ಬರು ನೆರವಾಗಬೇಕು ಎಂಬ ಮಾತಿದೆ. ಈ ಮಾತನ್ನು, ಹರ್ಷಲಾ-ಹೇಮಣ್ಣ ಅವರ ದಾಂಪತ್ಯವನ್ನು ನೋಡಿಯೇ ಹೇಳಿದಂತಿದೆ. ಪತಿ ನಡೆಸುತ್ತಿದ್ದ ಅಗರಬತ್ತಿ ಫ್ಯಾಕ್ಟರಿ ದಿಢೀರ್‌ ನಷ್ಟಕ್ಕೆ ಸಿಲುಕಿ, ಬದುಕಿನ ಬುನಾದಿಯೇ ಅಲುಗಾಡಿದಾಗ, ಹರ್ಷಲಾ ತೋರಿದ ಧೈರ್ಯ ಎಲ್ಲ ಮಹಿಳೆಯರಿಗೆ ಮಾದರಿ ಆಗುವಂಥದ್ದು.


ಬದುಕು ಬದಲಿಸಿದ ಕಷ್ಟ
ತುಮಕೂರು ಜಿಲ್ಲೆ ಸಿರಾ ತಾಲೂಕಿನ, ಬನ್ನಿನಗರದ ಹರ್ಷಲಾರ ಪತಿ ಅಗರಬತ್ತಿ ಫ್ಯಾಕ್ಟರಿ ನಡೆಸುತ್ತಿದ್ದರು. ಉದ್ಯಮದಲ್ಲಿ ನಷ್ಟವಾಗಿ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಯ್ತು. ಮುಂದೆ ಬದುಕು ನಡೆಸುವುದು ಹೇಗಪ್ಪಾ ಅಂತ ಕಂಗಾಲಾದ ಪತಿಗೆ ಹೆಗಲು ನೀಡಿದ ಹರ್ಷಲಾ, ಹಪ್ಪಳ ತಯಾರಿಕೆಗೆ ತೊಡಗಿದರು. ಪ್ರಾರಂಭದಲ್ಲಿ, ಮನೆಯಲ್ಲಿಯೇ ಚಿಕ್ಕ ಮಟ್ಟದಲ್ಲಿ ಹಪ್ಪಳ, ಉಪ್ಪಿನಕಾಯಿ, ಚಟ್ನಿಪುಡಿ ಸಿದ್ಧ ಪಡಿಸಿ, ಸಮೀಪದ ಮನೆಗಳಿಗೆ ಮಾರಾಟ ಮಾಡಿದರು. ಕ್ರಮೇಣ, ಕೆಲವು ಅಂಗಡಿಗಳಿಂದ ಬೇಡಿಕೆ ಬರತೊಡಗಿತು. ಹೆಚ್ಚಿನ ದುಡ್ಡು, ಕೆಲಸಗಾರರ ಅಗತ್ಯ ತಲೆದೋರಿತು.

ಯೋಜನೆಯಿಂದ ನೆರವು
ಸಿರಾ ನಗರದಲ್ಲಿ ಆಗಷ್ಟೇ “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯ ಚಟುವಟಿಕೆಗಳು ಮೊಳಕೆಯೊಡೆದಿದ್ದವು. ಆ ಯೋಜನೆಯಿಂದ, ಹರ್ಷಲಾರಿಗೆ ಧನ ಸಹಾಯ ಸಿಕ್ಕಿತು. ಹಗಲು-ರಾತ್ರಿಯೆನ್ನದೇ ಕಷ್ಟಪಟ್ಟು, ಹಪ್ಪಳ ತಯಾರಿಕೆಯನ್ನೇ ಸಣ್ಣ ಉದ್ಯಮವಾಗಿ ಬೆಳೆಸಿದರು. ಆಕೆಯ ವೃತ್ತಿಪರತೆ, ಉದ್ಯಮ ಕೌಶಲ್ಯತೆ ಗಮನಿಸಿ, ಯೋಜನೆ ಹೆಚ್ಚಿನ ಪ್ರಮಾಣದ ಆರ್ಥಿಕ ಸಹಾಯ ನೀಡಿತು. ಆ ನೆರವಿನಿಂದ ಅವರ ಉತ್ಪಾದನಾ ಪ್ರಮಾಣ ಹೆಚ್ಚಿತು. ಹಾಗೆಯೇ, ಬೇಡಿಕೆಯೂ ಹೆಚ್ಚಿತು.

ಹಳ್ಳಿ ರುಚಿ ಹಪ್ಪಳ
ಉದ್ಯಮವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಪಣ ತೊಟ್ಟರು ಹರ್ಷಲಾ. ಬ್ಯಾಂಕ್‌ನಿಂದ ಸಾಲ ಪಡೆದು, ಕೊಯಮತ್ತೂರಿನಿಂದ ಹಪ್ಪಳ ಉತ್ಪಾದನಾ ಯಂತ್ರ ಖರೀದಿಸಿ ತಂದು, ತಮ್ಮ ಸ್ವಂತ ಜಾಗದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿಯೇಬಿಟ್ಟರು. ಇದು, ಏಳು ವರ್ಷಗಳ ಹಿಂದೆ “ಹಳ್ಳಿ ರುಚಿ’ ಹೆಸರಿನ ಬ್ರ್ಯಾಂಡ್‌ ಹುಟ್ಟಿದ ಕಥೆ. ಪ್ರಸ್ತುತ, ಇವರ ಉತ್ಪಾದನಾ ಘಟಕದಲ್ಲಿ 12-16 ಮಹಿಳೆಯರು ಪ್ರತಿನಿತ್ಯ ಕೆಲಸ ಮಾಡುತ್ತಾರೆ. ದಿನವೊಂದಕ್ಕೆ ಸುಮಾರು 120- 150 ಕೆ.ಜಿ.ಗಳಷ್ಟು ವಿವಿಧ ಬಗೆಯ ಹಪ್ಪಳ ಸಿದ್ಧವಾಗುತ್ತದೆ. ಜೊತೆಗೆ ಎಳ್ಳಿಕಾಯಿ, ಮಾವು ಹಾಗೂ ಲಿಂಬೆಕಾಯಿ ಉಪ್ಪಿನಕಾಯಿಯನ್ನೂ ಮಾರಾಟ ಮಾಡುತ್ತಾರೆ.

ಬೆಳಗ್ಗೆ ಉತ್ಪಾದನಾ ಕಾರ್ಯದಲ್ಲಿ ತೊಡಗುವ ಹರ್ಷಲಾರ ತಂಡ, ಮಧ್ಯಾಹ್ನದ ಬಳಿಕ ಪ್ಯಾಕೆಟ್‌ ಮಾಡಿ ಮಾರುಕಟ್ಟೆಗೆ ಕಳುಹಿಸುತ್ತಾರೆ. ಈ ಉತ್ಪನ್ನಗಳನ್ನು ವಿತರಿಸುವ ಕೆಲಸ ಪತಿ ಹೇಮಣ್ಣ ಅವರದ್ದು. “ಹಳ್ಳಿರುಚಿ’ ಉತ್ಪನ್ನವು ಯಾವುದೇ ಜಾಹೀರಾತು ನೀಡದೇ, ಜನರಿಂದಲೇ ಪ್ರಚಾರಗೊಂಡಿರುವುದು ವಿಶೇಷ! ಮುಂದಿನ ದಿನದಲ್ಲಿ ಇನ್ನೂ ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿ, ಅನೇಕ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುವ ಆಸೆ ಹರ್ಷಲಾ ದಂಪತಿಗಳದ್ದು.
ಸಂಪರ್ಕ: 8050176265

ಎಂ.ಎಸ್‌. ಶೋಭಿತ್‌ ಮೂಡ್ಕಣಿ

ಉದಯವಾಣಿ "ಅವಳು" ಪುರವಣಿಯಲ್ಲಿ ಪ್ರಕಟಿತ ಲೇಖನ....

ಡೈಲಿಹಂಟ್ ಲಿಂಕ್: