'ರೈತನೇ ದೇಶದ ಬೆನ್ನೆಲುಬು' ಎಂಬ ಮಾತಿದೆ. ಆದರೆ ನಗರೀಕರಣದ ಪ್ರಭಾವದಿಂದ ಹೆಚ್ಚಿನ ಯುವಕ- ಯುವತಿಯರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಹೊಲ-ಗದ್ದೆಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ, ಕೂಲಿಯಾಳುಗಳು ಸಿಗದೇ ಹಳ್ಳಿಯಲ್ಲಿ ಇರುವವರೂ, ಹೊಲ- ಗದ್ದೆಗಳಲ್ಲಿ ಕೆಲಸ ಮಾಡಲು ಇಷ್ಟ ಇರುವವರೂ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ.

ಈ ಸಮಸ್ಯೆಯನ್ನು ಅರಿತ ಏಳನೇ ತರಗತಿಯ ಬಾಲಕಿಯೊಬ್ಬಳು ರೈತನ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ಯಂತ್ರ ಕಂಡುಹಿಡಿದಿದ್ದಾಳೆ. ಅತ್ಯಂತ ಸರಳವಾಗಿ ಯಾರು ಬೇಕಾದರೂ ಉಪಯೋಗಿಸಬಹುದಾದ 'ಸರಳ ನೇಗಿಲು' ಯಂತ್ರವಿದು. ಈ ಯಂತ್ರವೀಗ ರಾಷ್ಟ ಮಟ್ಟದ ಕೃಷಿ ಮೇಳದ ಭಾಗವಾಗಲಿದೆ.

ಸರಳ ನೇಗಿಲಿನ ರೂವಾರಿ ರೇವತಿ ಮುಕ್ರಿ. ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೆಗಡೆಯ ಈಕೆ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಮಾಸ್ತಿ ಮುಕ್ರಿ ಮತ್ತು ನಾಗಮ್ಮ ಅವರ ಪುತ್ರಿ.


ನಾಲ್ಕರಿಂದ ಐದು ಜನ ಮಾಡುವ ಕೆಲಸವನ್ನು ರೇವತಿ ಸಂಶೋಧಿಸಿರುವ ಸರಳ ನೇಗಿಲು ಒಂದೇ ಮಾಡುತ್ತದೆ. ಹೊಲವನ್ನು ಉಳುಮೆ ಮಾಡಲು ಎರಡು ನೇಗಿಲು, ಬೀಜ ಬಿತ್ತಲು ಕುರಿಗೆ, ಭೂಮಿಯನ್ನು ಸಮತಟ್ಟುಗೊಳಿಸಲು ಹಲಗೆ, ಕೀಟನಾಶಕ ಸಿಂಪಡಿಸಲು ಸಿಂಪರಣೆ, ಇದೇ ಸಿಂಪರಣೆಯಿಂದ ಹನಿ ನೀರಾವರಿ ಮಾದರಿಯಲ್ಲಿ ನೀರು ಹರಿಸಲು ಬದಲಿ ವ್ಯವಸ್ಥೆ… ಹೀಗೆ ಒಂದೇ ಯಂತ್ರದಲ್ಲಿ ಎಲ್ಲ ಕೆಲಸಗಳನ್ನು ಮಾಡಬಹುದು. ಇದು ಮಿನಿ ಟ್ರಾ್ಯಕ್ಟರ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ಯಂತ್ರವನ್ನು ಸ್ವತಃ ರೈತನೇ ಸಿದ್ಧಪಡಿಸಿಕೊಳ್ಳಬಹುದಾದಷ್ಟು ಸರಳವಾಗಿದೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ತುಂಡು ಭೂಮಿಯ ರೈತರು ಅಧಿಕವಾಗಿದ್ದು, ದೊಡ್ಡ ದೊಡ್ಡ ಟ್ರಾ್ಯಕ್ಟರ್​ಗಳು ಚಿಕ್ಕ ಹಿಡುವಳಿದಾರರ ಗದ್ದೆಯ ಬದುಗಳನ್ನು ಹಾಳುಮಾಡುವುದಲ್ಲದೇ ವೆಚ್ಚ ಕೂಡ ಅಧಿಕ. ಆದರೆ ವಿದ್ಯಾರ್ಥಿನಿ ಸಂಶೋಧಿಸಿರುವ ನೇಗಿಲಿನ ಕೆಲಸದ ವೆಚ್ಚ ಕೂಡ ಕಡಿಮೆ. ಯಂತ್ರಕ್ಕೆ ಕ್ರಿಮಿನಾಶಕ ಸಿಂಪಡಿಸುವ ವ್ಯವಸ್ಥೆ ಇರುವುದರಿಂದ, ಕೀಟಬಾಧೆಯಿಂದ ರೈತನಿಗೆ ಬೆಳೆ ರಕ್ಷಿಸಿಕೊಳ್ಳುವುದು ಅನುಕೂಲ ಹಾಗೂ ನೀರನ್ನು ಚಿಮುಕಿಸುವ ವ್ಯವಸ್ಥೆಯನ್ನು ಸಹ ಮಾಡಲು ಸಾಧ್ಯವಾಗಿದೆ. ಮೆಕ್ಯಾನಿಕಲ್ ಇಂಜಿನಿಯರ್ ಆಗಬೇಕೆಂಬ ಹಂಬಲ ಹೊಂದಿರುವ ರೇವತಿ, ಓದಿನಲ್ಲೂ ಚುರುಕು. ಪಠ್ಯದ ಜತೆ ಶಾಲೆಗಳಲ್ಲಿ ಏರ್ಪಡಿಸುವ ಪಠ್ಯೇತರ ಚಟುವಟಿಕೆಗಳಲ್ಲೂ ತಪ್ಪದೇ ಭಾಗವಹಿಸುತ್ತಾಳೆ.

'ಇದೇ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಇನ್​ಸ್ಪೈರ್ಡ್ ಅವಾರ್ಡ್ ಕಾರ್ಯಕ್ರಮದ ವೇಳೆಗೆ ಈ ಕೃಷಿಯಂತ್ರದ ಪ್ರದರ್ಶನ ಮಾಡಲಾಗುತ್ತಿದೆ. ಯಂತ್ರವನ್ನು ಮತ್ತಷ್ಟು ಉತ್ತಮಪಡಿಸಲಾಗುವುದು. ಇದು ತುಂಬಾ ಅತ್ಯುತ್ತಮ ಯಂತ್ರವಾಗಿದ್ದು, ಪ್ರದರ್ಶನದಲ್ಲಿ ಉತ್ತಮ ಪ್ರತಿಕ್ರಿಯೆ ಬರುವ ವಿಶ್ವಾಸವಿದೆ' ಎನ್ನುತ್ತಾರೆ ಈಕೆಯ ಶಾಲೆಯ ಶಿಕ್ಷಕರು ಹಾಗೂ ಮಾರ್ಗದರ್ಶಕರು ಆಗಿರುವ ಡಾ. ಶ್ರೀಧರ ಗೌಡ, ಉಪ್ಪಿನಗಣಪತಿ.

| ಎಂ.ಎಸ್.ಶೋಭಿತ್ ಮೂಡ್ಕಣಿ

(ಫೆಬ್ರವರಿ 29 ರ ವಿಜಯವಾಣಿ ಪುಟಾಣಿ ಪುರವಣಿಯಲ್ಲಿ ಪ್ರಕಟಿತ ಲೇಖನ...)