ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರಿಗೆ, ಯಕ್ಷಗಾನ ಕಲಾ ವಿದ್ಯಾರ್ಥಿಗಳಿಗೆ, ಕಲಾಭಿಮಾನಿಗಳಿಗೆ ಮೂಡ್ಕಣಿ ನಾರಾಯಣ ಹೆಗಡೆ ಎಂಬುದು ಪ್ರಾತಸ್ಮರಣೀಯ ಹೆಸರು. ಯಾವ ಪುಣ್ಯದ ಫಲವೋ ಮೂಡ್ಕಣಿಯ ಚಿಕ್ಕ ಗ್ರಾಮ ಇಂಥ ಒಂದು ಅದ್ವಿತೀಯವಾದ ಕಲಾ ಜ್ಯೋತಿಯನ್ನು ಬೆಳಗಿಸಿ ನಾಡಿನ ಯಕ್ಷಗಾನ ರಂಗದಲ್ಲೆಲ್ಲಾ ಬೆಳಕು ಬೀರಿದೆ. ನಮ್ಮ ಜಿಲ್ಲೆಯ ಯಕ್ಷಗಾನ ಕಲೆಗೆ ಕೀರ್ತಿಕಲಶವನ್ನಿಟ್ಟ ನಟಶ್ರೇಷ್ಠರು ಮೂಡ್ಕಣಿ ನಾರಾಯಣ ಹೆಗಡೆ.

ಇಂತಹ ಯಕ್ಷದಿಗ್ಗಜನ ತವರಲ್ಲಿ ಹೊನ್ನಾವರ ತಾಲೂಕು ಮಟ್ಟದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನ ರವಿವಾರ (ಮೇ.05) ನಡೆಯಲಿದ್ದು, ಅಕ್ಷರ ಜಾತ್ರೆಗಾಗಿ ಇಡೀ ಗ್ರಾಮ ಸಕಲ ಸಜ್ಜುಗೊಂಡಿದೆ.

ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ನಡೆಯುವ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ವಹಿಸಲಿದ್ದಾರೆ.

ರವಿವಾರ ಬೆಳಿಗ್ಗೆ 8 ಗಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಟಿ. ನಾಯ್ಕ ರಾಷ್ಟ್ರ ಧ್ವಜಾರೋಹಣ, ಕ.ಸಾ.ಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ಬೆಳಿಗ್ಗೆ 8.30 ಕ್ಕೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಟಿ.ಟಿ.ನಾಯ್ಕ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 

ಬಳಿಕ ಬೆಳಿಗ್ಗೆ 9.30 ಕ್ಕೆ ಸಮ್ಮೇಳನವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಶಿವಮೊಗ್ಗದ ಸಾಹಿತಿಗಳಾದ ಸರ್ಜಾ ಶಂಕರ ಹರಳಿಮಠ ಪಾಲ್ಗೊಳ್ಳುವರು. ಸಮ್ಮೇಳನಾಧ್ಯಕ್ಷ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅವರಿಗೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎನ್.ಎಸ್.ಹೆಗಡೆ ಕೆರೆಕೋಣ ಅವರು ಕನ್ನಡ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಿದ್ದಾರೆ. ಹೊನ್ನಾವರದ ತಹಶೀಲ್ದಾರ್ ಮಂಜುಳಾ ಭಜಂತ್ರಿ, ತಾ.ಪಂ. ಪ್ರಭಾರೆ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮುಂತಾದವರು ಭಾಗವಹಿಸಲಿದ್ದಾರೆ.

ಪುಸ್ತಕ ಮಳಿಗೆಯನ್ನು ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಉದ್ಘಾಟಿಸುವರು. ಸಮ್ಮೇಳನದಲ್ಲಿ ಮಾಗೋಡು ರಾಮ ಹೆಗಡೆ ಆತ್ಮಕಥನ 'ದಶಾವತಾರ', ಗಣಪತಿ ಕೊಂಡದಕುಳಿ ಅವರ 'ಮರುಳ ಮನುಜನ ಮರ್ಮರ', ಕೆ.ವಿ.ಹೆಗಡೆ ಹಂದಿಮುಲ್ಲೆ ಅವರ 'ನವಿಲುಗರಿ' ಕಮಲಾ ಕೊಂಡದಕುಳಿ ಅವರ ಹುಣಸೆ ತೊಕ್ಕು ಕೃತಿ ಬಿಡುಗಡೆಗೊಳ್ಳಲಿದೆ. ಕೃತಿಗಳನ್ನು ಡಾ.ವಸುಂಧರಾ ಭೂಪತಿ ಬಿಡುಗಡೆ ಮಾಡುವರು.

ಸಮ್ಮೇಳನದಲ್ಲಿಂದು: 
ಹೊನ್ನಾವರ ಅಪೂರ್ವ ಸ್ಮರಣೆ: 
ಮೊದಲ ಗೋಷ್ಠಿ ಬೆಳಿಗ್ಗೆ 11.30 ರಿಂದ ನಡೆಯಲಿದ್ದು, ವಿ.ಜಿ.ಭಟ್ಟರ ಕಾವ್ಯ ಕುರಿತು ಡಾ.ಜಿ.ಎಸ್.ಹೆಗಡೆ ಹಡಿನಬಾಳ, ಕೃಷ್ಣಾನಂದ ಕಾಮತರ ಗದ್ಯ ಕುರಿತು ಚೈತ್ರ ಹೆಗಡೆ ಕವಲಕ್ಕಿ, ಹೊನ್ನಾವರ-ಹೊಸಗನ್ನಡ ಸಾಹಿತ್ಯ ಕುರಿತು ಡಾ.ಸಂಧ್ಯಾ ಹೆಗಡೆ, ದೊಡ್ಡಹೊಂಡ ಮಾತನಾಡುವವರು. 

ಕವಿ-ಕಾವ್ಯ ಸಮಯ: 
ಡಾ.ರಾಜು ಹೆಗಡೆ ಮಾಗೋಡ ಇವರ ಅಧ್ಯಕ್ಷತೆಯಲ್ಲಿ ಅಪರಾಹ್ನ 2 ರಿಂದ ಕವಿ-ಕಾವ್ಯ ಸಮಯ ನಡೆಯಲಿದೆ. ಜಯಶ್ರೀ ಹೆಗಡೆ ಕಣ್ಣಿ, ಮಂಜುಸುತ ಜಲವಳ್ಳಿ, ಜಿ.ಡಿ.ಭಟ್ಟ ಕೆಕ್ಕಾರ, ಸೀತಾಲಕ್ಷ್ಮೀ ಹೆಗಡೆ ಹೈಗುಂದ, ಡಾ.ಇಸ್ಮಾಯಿಲ್ ತಲಕಣಿ, ರಮೇಶ ಹೆಗಡೆ ಕೆರೆಕೋಣ, ಸರಸ್ವತಿ ಗಂಗೊಳ್ಳಿ, ರಾಘವೇಂದ್ರ ಕಳಸನಮೋಟೆ, ಜೈರಾಜ್ ಜೈನ, ಮನು ವೈದ್ಯ, ಆರ್.ಎನ್.ಹೆಗಡೆ ಬೇರಂಕಿ, ಶ್ರೀಧರ ಹೊಸ್ಮನೆ, ನಾರಾಯಣ ಹೆಗಡೆ ಕರ್ಕಿ, ಸುಬ್ರಹ್ಮಣ್ಯ ಹೆಗಡೆ ಅಬ್ಳಿ, ಜಿ.ಎಸ್.ಹೆಗಡೆ ಬೊಮ್ಮನಹೊಂಡ, ಪ್ರಕಾಶ ರಾಯಸ್, ಮೇಧಾ ಆಚಾರಿ, ನಾಗರಾಜ ನಾಯ್ಕ_ ಕಿಶೋರ ನಾಯ್ಕ ಕಾವ್ಯ ವಾಚನ ಮಾಡುವರು.

ಸಮ್ಮೇಳನಾಧ್ಯಕ್ಷರ ಸಾಹಿತ್ಯ-ಸಂವಾದ: 
ಮಧ್ಯಾಹ್ನ 3.30 ರಿಂದ ಡಾ.ಶ್ರೀಧರ ಹೆಗಡೆ ಭದ್ರನ್ ಇವರ ಅಧ್ಯಕ್ಷತೆಯಲ್ಲಿ ಪ್ರೊ.ಶ್ರೀಪಾದ ಹೆಗಡೆ, ಕಣ್ಣಿಯವರ ಸಾಹಿತ್ಯ ಸಂವಾದ ನಡೆಯಲಿದ್ದು, ಪಿ.ಆರ್.ನಾಯ್ಕ, ಡಾ.ಸುರೇಶ ನಾಯ್ಕ, ಸುರೇಶ ತಾಂಡೇಲ, ಸಂದೀಪ ಭಟ್ಟ, ಜಿ.ಎಸ್.ಹೆಗಡೆ, ಕಣ್ಣಿ, ಜನಾರ್ಧನ ಹರನೀರು, ಎಸ್.ಎಸ್.ಹೆಗಡೆ, ಹಡಿನಬಾಳ, ಲಕ್ಷ್ಮೀಕಾಂತ ಅಸೀಕೇರಿ, ಸುಧಾ ಭಂಡಾರಿ, ಎಂ.ಎಸ್.ಹೆಗಡೆ ಬೊಮ್ಮನಹೊಂಡ, ಸಿ.ಪಿ.ಶಿವಚಂದ್ರ ಸಂವಾದದಲ್ಲಿ ಪಾಲ್ಗೊಳ್ಳುವರು.

ಹೊನ್ನಾವರ: ಪ್ರಕೃತಿ ಮತ್ತು ಸಂಸ್ಕೃತಿ: 
ಮಧ್ಯಾಹ್ನ 4.30 ರಿಂದ ಹೊನ್ನಾವರ: ಪ್ರಕೃತಿ ಮತ್ತು ಸಂಸ್ಕೃತಿ ಗೋಷ್ಠಿ ನಡೆಯಲಿದ್ದು, ಹೊನ್ನಾವರ ಜೀವ ಪರಿಸರ ಹಾಗೂ ಸಂಸ್ಕೃತಿ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ.ಎಂ.ಡಿ.ಸುಭಾಶ್ಚಂದ್ರನ್, ಹೊನ್ನಾವರದ ಯಕ್ಷಗಾನ ಪರಂಪರೆ ಕುರಿತು ಡಾ.ಸತೀಶ ನಾಯ್ಕ ಮಹಿಮೆ, ಮೂಡ್ಕಣಿ-ಚಾರಿತ್ರಿಕ ಚಹರೆಗಳು ಕುರಿತು ಡಾ. ಗಜಾನನ ನಾಯ್ಕ ಅಡಕಾರ ಮಾತನಾಡಲಿದ್ದಾರೆ.

ಸಮಾರೋಪ: ಸಮ್ಮಾನ ಸಮಾರಂಭ: 
ಸಂಜೆ 5.30 ರಿಂದ ಉತ್ತರಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಾಹಿತಿ ನಾರಾಯಣ ಯಾಜಿ ಸಾಲೇಬೈಲು ಸಮಾರೋಪ ನುಡಿಯನ್ನಾಡುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಸುಮುಖಾನಂದ ಜಲವಳ್ಳಿ, ಎಸ್.ಡಿ.ಎಂ. ಪದವಿ ಕಾಲೇಜು ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ನಾಯ್ಕ ಭಾಗವಹಿಸುವರು. ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಅಭಿನಂದನಾ ನುಡಿಯನ್ನಾಡುವರು.

ಈ ಸಂದರ್ಭದಲ್ಲಿ ಡಾ.ಜಿ.ಎಸ್.ಹೆಗಡೆ ಹಡಿನಬಾಳ (ಸಾಹಿತ್ಯ ಪ್ರೀತಿ), ಡಾ.ಬಾಲಚಂದ್ರ ಮೇಸ್ತ (ವೈದ್ಯಕೀಯ), ಕೃಷ್ಣ ಅಂಬಿಗ (ಶಿಕ್ಷಣ), ಅರುಣ ನಾರಾಯಣ ಶೇಟ್ (ಕಾಷ್ಠಶಿಲ್ಪ), ಆರ್.ಪಿ.ಭಟ್ಟ (ಆಡಳಿತ ಸೇವೆ), ಎನ್.ಎಸ್.ಭಂಡಾರಿ ಕವಲಕ್ಕಿ (ವ್ಯಾಪಾರ), ಡಾ.ಜಿ.ಕೆ. ಹೆಗಡೆ (ತಾಳಮದ್ದಳೆ), ವಸಂತ ಭಟ್ಟ ಗುಂಡಿಬೈಲ್ (ಭಕ್ತಿಸಂಗೀತ), ವಿದ್ಯಾಧರ ಜಲವಳ್ಳಿ (ಯಕ್ಷಗಾನ), ಪುರಂದರ ನಾಯ್ಕ ಮೂಡ್ಕಣಿ (ಯಕ್ಷಗಾನ), ಕನ್ಯಾ ಹಳ್ಳೇರ್ ಮೂಡ್ಕಣಿ (ಜನಪದ), ಸುಬ್ರಾಯ ನಾಯ್ಕ ಮೂಡ್ಕಣಿ (ಸಮಾಜ ಸೇವೆ) ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಬಳಗ ಸನ್ಮಾನಿಸಿ ಗೌರವಿಸಲಿದೆ.

ಮನೋರಂಜನಾ ಕಾರ್ಯಕ್ರಮ: 
ರಾತ್ರಿ 7 ರಿಂದ 10 ರ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕೃಷ್ಣಮೂರ್ತಿ ಹೆಬ್ಬಾರ್ ಸಂಗಡಿಗರಿಂದ ಸ್ವಚ್ಛ ಭಾರತ-ರೂಪಕ, ವಿ.ಶಿವಾನಂದ ಭಟ್ಟ ಹಡಿನಬಾಳ ಮತ್ತು ನಾರಾಯಣ ಶಾಸ್ತ್ರಿ ಗುಣವಂತೆ ಸಂಗಡಿಗರಿಂದ ಕರ್ನಾಟಕ ದರ್ಶನ, ವಿವಿಧ ಕಲಾವಿದರಿಂದ ಹೊನ್ನಾವರದ ಕವಿಗಳ ಭಾವಗೀತೆಗಳ ಗಾಯನ - ಭಾವಯಾನ, ಮೂಡ್ಕಣಿಯ ಹವ್ಯಾಸಿ ಕಲಾವಿದರಿಂದ ಶರಸೇತು ಬಂಧನ ಯಕ್ಷಗಾನ ನಡೆಯಲಿದೆ.

ಮೆರಗು ನೀಡಲಿರುವ ದ್ವಾರಗಳು: 
ಸಮ್ಮೇಳನದಲ್ಲಿ ನಾಲ್ಕು ದ್ವಾರಗಳನ್ನು ನಿರ್ಮಿಸಲಾಗಿದೆ. ಯಕ್ಷದಿಗ್ಗಜ ಮೂಡ್ಕಣಿ ನಾರಾಯಣ ಹೆಗಡೆ ಹೆಸರಿನಲ್ಲಿ ಸತೀಶ ನಾಯ್ಕ ಮೂಡ್ಕಣಿ ಮತ್ತು ತಂಡದವರ ಕೈ ಚಳಕದಲ್ಲಿ ಸುಂದರವಾದ ವೇದಿಕೆ ನಿರ್ಮಾಣಗೊಂಡಿದ್ದು, ಇದರಲ್ಲಿ ಸಭಾ ಕಾರ್ಯಕ್ರಮ, ಗೋಷ್ಠಿಗಳು ನಡೆಯಲಿದೆ. ಇನ್ನು ಯಕ್ಷಗಾನ ರಂಗದಲ್ಲಿ 'ಅಭಿನವ ಶನಿ' ಎಂದೇ ಪ್ರಸಿದ್ಧರಾದ ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಒಡನಾಡಿ ಜಲವಳ್ಳಿ ವೆಂಕಟೇಶರಾವ್ ಇವರ ಹೆಸರಿನಲ್ಲಿ ಪ್ರಧಾನ ದ್ವಾರ, ಯಕ್ಷಗಾನ ತಾಳಮದ್ದಳೆಯ ಅನಭಿಷಿಕ್ತ ದೊರೆ ಎಂದೇ ಖ್ಯಾತರಾಗಿದ್ದ ಪಂ.ತಾರಾನಾಥರ ಪರಂಪರೆಯ ಖ್ಯಾತನಾಮ ಡಾ.ಪದ್ಮನಾಭ ಅಯ್ಯ ಹೈಗುಂದ, ಗೇರಸೊಪ್ಪಾ ಶರಾವತಿ ಟೇಲ್ ರಿಸ್ ವಿರುದ್ದ ಹೋರಾಡಿದ, ಕೆರವಳ್ಳಿಯ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವುದಕ್ಕಾಗಿ ತಮಿಳು ಹುಡುಗನನ್ನು ಕರೆತಂದು ಕೆರವಳ್ಳಿಯ ಚಾಪೆಯನ್ನು ಕರಾವಳಿಯುದ್ದಕ್ಕೂ ಪಸರಿಸಿದ, ಸ್ನೇಹಕುಂಜ ರೂವಾರಿ ಡಾ.ಕುಸುಮಾ ಸೊರಬ, ಯಕ್ಷಗಾನ ಕ್ಷೇತ್ರದ ಅಭಿನವ ಸಾಲ್ವ, ರಂಗದಲ್ಲೇ ಕಲಾ ಮಾತೆಗೆ ಪ್ರಾಣಾರ್ಪಣೆ ಮಾಡಿದ ಹುಡಗೋಡ ಚಂದ್ರಹಾಸ ಇವರ ಹೆಸರಿನಲ್ಲಿ ಸುಂದರ ದ್ವಾರಗಳು ನಿರ್ಮಾಣಗೊಂಡಿದೆ. ವೇದಿಕೆ ಹಾಗೂ ದ್ವಾರಗಳ ಪರಿಚಯವನ್ನು ಎಂ.ಎಸ್.ಶೋಭಿತ್ ಮಾಡಲಿದ್ದಾರೆ.

(ಮೇ.5, 2019 ರಂದು ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿ ಪ್ರಕಟಿತ ವಿಶೇಷ ವರದಿ)