ಸುಬ್ರಹ್ಮಣ್ಯ ಹೆಗಡೆ ಹಡಿನಬಾಳ ಇವರ "ಜೀವನ ಸುಧಾ" ಎಂಬ 48 ಪುಟಗಳ ಕೃತಿ ಬದುಕಿಗೊಂದು ಮೌಲ್ಯ ಕಟ್ಟಿಕೊಡುತ್ತದೆ.

ಈ ಒಂದು ಕೃತಿಯಲ್ಲಿ ಬದುಕಿಗೆ ಬೇಕಾಗುವ ಮೌಲ್ಯಗಳಿವೆ. ಕೃತಿ ಚಿಕ್ಕದಾಗಿದ್ದರೂ ಕೂಡ ಅದರ ಹರಹು ದೊಡ್ಡದು. ಇಂದು ಮಕ್ಕಳಿಗೆ ಆದರ್ಶದ ಕತೆಗಳು ಬೇಕು. ಜೀವನ ಮೌಲ್ಯಗಳು ಬೇಕು. ಅದರಲ್ಲೂ ಜೀವನದಲ್ಲಿ ಒಳ್ಳೆಯ ನಡವಳಿಕೆ, ಪ್ರಾಮಾಣಿಕತೆಗಳಿಂದ ಮುಂದೆ ಒಳ್ಳೆಯದಾಗುತ್ತದೆ ಎಂಬ ಭರವಸೆಯನ್ನು ಇಂದಿನ ಪೀಳಿಗೆಗೆ ನಾವು ನೀಡಬೇಕಾಗಿದೆ. ಹಾಗೆ ನೀಡುವುದಕ್ಕೆ ಬೇಕಾದಷ್ಟು ಸಾಮಾಗ್ರಿಗಳು ಇವೆ. "ಜೀವನ ಸುಧಾ" ಕೃತಿಯಲ್ಲಿ ಲೇಖಕರು ಅಂಥ ಕೆಲವನ್ನು ನೀಡುವ ಪ್ರಯತ್ನ ಮಾಡಿದ್ದಾರೆ.

ಡಾ.ಗಜಾನನ ಹೆಗಡೆ ಅವರು ಮಕ್ಕಳಿಗಾಗಿ ನಡೆಸುತ್ತಿದ್ದ ಸಹ್ಯಾದ್ರಿ ಸೌರಭ ಪತ್ರಿಕೆಯ 'ವಿಚಾರ ಸೌರಭ' ದ ಅಂಕಣದಲ್ಲಿ ಬರೆದ ವಿಚಾರಗಳ ಜೊತೆಗೆ ಇನ್ನಷ್ಟು ಸೇರಿ ಕೃತಿ ಸಿದ್ಧವಾಗಿದೆ.

ಈ ಕೃತಿಯಲ್ಲಿ ಕನಕದಾಸ, ಕಬೀರ, ಡಿ.ವಿ.ಜಿ.ಯಂಥವರ ಸಾಹಿತ್ಯ; ಸಿ.ವಿ.ರಾಮನ್, ವಿಶ್ವೇಶ್ವರಯ್ಯ, ವಿವೇಕಾನಂದ, ರಾಧಾಕೃಷ್ಣನ್, ಎಚ್ಚೆನ್, ಕಲಾಂರಂಥವರ ಜೀವನಾದರ್ಶಗಳು ಹಾಗೂ ಈಗಲೂ ಮಾದರಿಯಾಗಿರುವ ಡಾ.ಕೆ.ಎಸ್. ಭಟ್-ರಾಧಕ್ಕ, ಎಸ್.ಜಿ.ಕೃಷ್ಣ, ಜಿ.ಡಿ‌.ಭಟ್, ಶ್ರೀಪಡ್ರೆ ಮುಂತಾದವರ ವಿಶೇಷತೆಗಳು ಸುಬ್ರಹ್ಮಣ್ಯ ಅವರ ಲೇಖನಿಯಿಂದ ಸುಂದರವಾಗಿ ಮೂಡಿಬಂದಿದೆ.

ಲೇಖಕರ ಅಣ್ಣ ಡಾ.ಜಿ.ಎಸ್.ಹೆಗಡೆ ಕೃತಿಯ ಮುನ್ನುಡಿಯಲ್ಲಿ ಹೇಳಿರುವಂತೆ ಈ ಕೃತಿ ಜೀವನದಾಟದಲ್ಲಿ ಆಗಾಗ ಕೊಳೆಯಾಗುವ ಮನಸ್ಸನ್ನು ತೊಳೆದುಕೊಳ್ಳುವ 'ಸೋಪು' ಆಗಿದೆ. ಮಗನ ಉಪನಯನದ ಸಂದರ್ಭದಲ್ಲಿ ಇದನ್ನು ಬಿಡುಗಡೆ ಮಾಡಿ, ಮಂಗಳ ಕಾರ್ಯದಲ್ಲಿ ಐಸ್ ಕ್ರೀಂ, ಸ್ವೀಟ್ ಪಾನ್, ಸ್ಟೀಲ್ ಕಿಟ್ ಇತ್ಯಾದಿ ಕೊಡದೇ ಪುಸ್ತಕವನ್ನೇ ಉಚಿತವಾಗಿ ನೀಡಿ 'ಅಕ್ಷರಪ್ರೀತಿ' ಮೆರೆದಿರುವ ಇವರ ಕಾರ್ಯ ಶ್ಲಾಘನೀಯ.

ಬಹುಕಾಲ ಗುಂಡಬಾಳ ಮೇಳದ ಮುಖ್ಯಸ್ಥರಾದ ಹಿರಿಯ ಯಕ್ಷಗಾನ ಕಲಾವಿದ ದಿ.ಹಡಿನಬಾಳ ಸತ್ಯ ಹೆಗಡೆ ಅವರ ಮಗ ಸುಬ್ರಹ್ಮಣ್ಯ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಡಿನ ಶರಾವತಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕರಾಗಿದ್ದಾರೆ. ಸುಬ್ರಹ್ಮಣ್ಯ ಅವರ ಲೇಖನಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೃತಿ ಬರಲಿ ಎಂದು ಆಶಿಸೋಣ.

ಪುಸ್ತಕ: ಜೀವನ ಸುಧಾ (ಬದುಕಿಗೆ ಮೌಲ್ಯಗಳು)
ಲೇಖಕರು: ಸುಬ್ರಹ್ಮಣ್ಯ ಹೆಗಡೆ 
ಪ್ರಕಾಶಕರು: ಶ್ರೀಶಕ್ತಿ ಪ್ರಕಾಶನ ಹಡಿನಬಾಳ 
ಪುಟ: 48     ಬೆಲೆ: 30/- 
ಸಂಪರ್ಕ: 9482190097

-ಎಂ.ಎಸ್.ಶೋಭಿತ್
(ನಾಗರಿಕ ವಾರಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಗೊಂಡಿದೆ.)