ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ತ್ರಿಮೂರ್ತಿಗಳ ಸ್ಥಾನವನ್ನು ಕೊಡಲಾಗಿದೆ. ಅಂಥ ಗುರುಗಳಿದ್ದ ದೈವೀಶಕ್ತಿಯ ಪುಣ್ಯಕ್ಷೇತ್ರವೆಂದು ತಿಳಿಯಲ್ಪಟ್ಟಿರುವುದೇ ವರದಪುರದ ಶ್ರೀ ಶ್ರೀಧರಾಶ್ರಮ.

ಸಾಗರದಿಂದ ಕೇವಲ 8 ಕಿ.ಮೀ.ದೂರದ ಸಹ್ಯಾದ್ರಿ ಪರ್ವತಶ್ರೇಣಿಯ ಒಂದು ಭಾಗದ ಮೇಲಿರುವ ಈ ಕ್ಷೇತ್ರ ಹಲವು ವೈಶಿಷ್ಟ್ಯಗಳಿಂದ ಆಸ್ತಿಕರನ್ನು ಸೆಳೆಯುತ್ತದೆ. ಈ ಪರಿಸರವು ಹಿಂದೆ ಎಷ್ಟೋ ಸಿದ್ಧಪುರುಷರ ನೆಲೆವೀಡಾಗಿತ್ತು ಎಂಬ ಐತಿಹ್ಯವಿದೆ. 1908 ರಲ್ಲಿ ದತ್ತಾತ್ರೇಯರ ಕೃಪೆಯಿಂದ ಜನಿಸಿದ ಶ್ರೀಗಳು ಬಾಲ್ಯದಿಂದಲೇ ಆಧ್ಯಾತ್ಮದ ಬಗ್ಗೆ ಆಸಕ್ತರು. ಅವರು ಭಾರತದಾದ್ಯಂತ ಸಂಚರಿಸಿ 1951 ರಲ್ಲಿ ಈ ಪ್ರದೇಶಕ್ಕೆ ಬಂದರು. ಈ ಪ್ರದೇಶದ ಮಹತ್ವವನ್ನರಿತ ಸ್ವಾಮಿಗಳು ಹಾಳುಬಿದ್ದಿದ್ದ ಈ ಕ್ಷೇತ್ರವನ್ನು ಊರ್ಜಿತಾವಸ್ಥೆಗೆ ತಂದು 1954 ರಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು.

ಅವರು ಭಕ್ತರಿಂದ ಯಾವುದೇ ಕಾಣಿಕೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಆದರೂ ಈ ಕ್ಷೇತ್ರಕ್ಕೆ ಬಂದ ಭಕ್ತರು ಹಸಿದು ಹಿಂದಿರುಗಬಾರದೆಂದು ಅನ್ನದಾಸೋಹ ಪ್ರಾರಂಭಿಸಿದರು. ಅದು ಈಗಲೂ ನಡೆಯುತ್ತಿದೆ‌. ಇಲ್ಲಿ ನೀರಿನ ಅಭಾವವನ್ನರಿತ ಸ್ವಾಮಿಗಳು ಪರ್ವತದ ಮಧ್ಯಭಾಗದಲ್ಲಿ ಜಲನಿಧಿಯ ಇರುವಿಕೆಯನ್ನು ಕಂಡು ತಮ್ಮ ಬೊಗಸೆಯಿಂದಲೇ ಅದನ್ನು ಭೂಮಿಯಿಂದ ಹೊರತೆಗೆದರು. ಅದೇ ಇಂದಿನ ಪರಮ ಪವಿತ್ರ ಶ್ರೀಧರತೀರ್ಥ. ಇಲ್ಲಿರುವ ಬಸವನ ಬಾಯಿಯಿಂದ ವರ್ಷವಿಡೀ ನೀರು ಧುಮ್ಮಿಕ್ಕುತ್ತಲೇ ಇರುತ್ತದೆ. ಈ ತೀರ್ಥವನ್ನು ಸೇವಿಸಿದಲ್ಲಿ, ಸ್ನಾನ ಮಾಡಿದ್ದಲ್ಲಿ ಅನೇಕ ವ್ಯಾಧಿಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಇಲ್ಲಿ ಸ್ನಾನ ಮಾಡಲು, ತೀರ್ಥ ಸೇವಿಸಲು ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬರುತ್ತಾರೆ.

ಶ್ರೀಧರತೀರ್ಥದ ಪಕ್ಕ ಸುಮಾರು 150 ಮೆಟ್ಟಿಲುಗಳನ್ನು ಹತ್ತಿದರೆ ಗುಡ್ಡದ ತುದಿಯಲ್ಲಿರುವ ಶ್ರೀಧರಸ್ವಾಮಿಗಳ ಸಮಾಧಿಯನ್ನು ಮತ್ತು ಅಲ್ಲಿರುವ ಪರಮೇಶ್ವರನ ದೇಗುಲವನ್ನು ಕಾಣಬಹುದು. ಇಲ್ಲಿಂದ ಮುಂದೆ ಸುಮಾರು 1 ಕಿ.ಮೀ. ದೂರದಲ್ಲಿ ಬೆಟ್ಟದ ಮೇಲೆ ಸ್ವತಃ ಶ್ರೀಗಳೇ ಸ್ಥಾಪಿಸಿದ 30 ಅಡಿ ಎತ್ತರದ ಧರ್ಮಸ್ಥಂಭವಿದೆ. 

ದೇಶದಾದ್ಯಂತ ಜಾತಿ ಮತ ಭೇದವಿಲ್ಲದೆ ಶ್ರೀಧರಸ್ವಾಮಿಗಳನ್ನು ಆರಾಧಿಸುವವರಿದ್ದಾರೆ. ಶ್ರೀಧರಸ್ವಾಮಿಗಳು 1973 ರಲ್ಲಿ ಭೌತಿಕ ಶರೀರವನ್ನು ತ್ಯಜಿಸಿದರೂ ಅವರ ಕೃಪೆ, ಆಶೀರ್ವಾದ ಇಲ್ಲಿ ಕೇಂದ್ರಿತವಾದುದರಿಂದ ಮನಃಶಾಂತಿಯನ್ನು ಅರಸಿ ಬರುವ ಸರ್ವರಿಗೂ ಇದು ಆಧ್ಯಾತ್ಮಿಕ ನೆಲೆಯಾಗಿದೆ. ಬರುವ ಎಲ್ಲಾ ಭಕ್ತರಿಗೂ ಭೋಜನ ವ್ಯವಸ್ಥೆ, ತಂಗಲು ಕೊಠಡಿಗಳ ಸವಲತ್ತುಗಳಿವೆ. ಇದೇ ಏಪ್ರಿಲ್ 2 ರಂದು ಶ್ರೀಧರಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ.

-ಎಂ.ಎಸ್.ಶೋಭಿತ್ ಮೂಡ್ಕಣಿ

(29 ಮಾರ್ಚ್ 2018 ರಂದು ವಿಜಯವಾಣಿ ದಿನಪತ್ರಿಕೆಯ 'ಸಂಸ್ಕೃತಿ' ಪುರವಣಿಯಲ್ಲಿ ಪ್ರಕಟಿತ ಮೊಟ್ಟಮೊದಲ ಲೇಖನ.)