ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ಸುಮಾರು 20 ವರ್ಷಗಳ ಹಿಂದೆಯೂ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳಗಳಲ್ಲಿ, ಪೇಟೆ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಅವುಗಳ ಪುಕ ಪುಕ ಓಡಾಟಗಳೊಂದಿಗೆ ಬಾಲ್ಯದಲ್ಲಿ ಅದೆಷ್ಟೋ ಕ್ಷಣಗಳನ್ನು ಅನುಭವಿಸುವ ಮಜಾ ಮಕ್ಕಳಿಗಿತ್ತು. ಆದರೆ ಮನೆಯ ಸದಸ್ಯರಂತೆಯೇ ಹಾರಾಡಿಕೊಂಡು, ಚಿಲಿಪಿಲಿ ಎನ್ನುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳನ್ನೂ ಸಹ ಇಂದಿನ ಮಕ್ಕಳಿಗೆ ಸಿಂಹ, ಹುಲಿ ಎಂದು ಚಿತ್ರಗಳನ್ನು ತೋರಿಸುವ ಸಾಲಿಗೆ ಗುಬ್ಬಚ್ಚಿಗಳು ಸೇರಿರುವುದು ಬೇಸರದ ಸಂಗತಿ. ಇಂತಹ ಗುಬ್ಬಚ್ಚಿಯ ಸಂತತಿ ನಾಶವಾಗುತ್ತಿರುವುದರ ಕುರಿತು ಜಾಗೃತಿ ಮೂಡಿಸಿ, ಅವುಗಳನ್ನು ರಕ್ಷಿಸುವುದಕ್ಕಾಗಿಯೇ ಮಾ.20 ರಂದು ಅಂತಾರಾಷ್ಟ್ರೀಯ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ.

ಗುಬ್ಬಚ್ಚಿಗಳು ಮರೆಯಾಗುತ್ತಿರಲು ಕಾರಣಗಳೇನು?:
ಇತ್ತೀಚಿನ ದಿನಗಳಲ್ಲಿ ತಾರಸಿ ಮನೆಗಳು ಜಾಸ್ತಿಯಾಗುತ್ತಿರುವುದರಿಂದ ಗುಬ್ಬಿಗಳಿಗೆ ಗೂಡು ಕಟ್ಟಲು ಜಾಗ ಸಿಗುತ್ತಿಲ್ಲ. ಹಿಂದೆಲ್ಲಾ ಹಂಚಿನ ಮನೆಯ ಸಂದು ಗೊಂದುಗಳಲ್ಲಿ, ಮನೆಯಲ್ಲಿ ಹಾಕುತ್ತಿದ್ದ ದೇವರ ಫೋಟೊಗಳ ಹಿಂದೆ ಹಕ್ಕಿಗಳು ಗೂಡು ಕಟ್ಟುತ್ತಿದ್ದವು. ಈಗ ಗೂಡು ಕಟ್ಟಲು ಜಾಗವಿಲ್ಲ. ಮೊದಲೆಲ್ಲ ಅಂಗಡಿಯಿಂದ ತಂದ ದಿನಸಿ ಸಾಮಾನುಗಳನ್ನು ಹಸನುಗೊಳಿಸಿ ಉಳಿದ ಕಾಳು ಕಡಿಗಳನ್ನು ಹೊರಗೆಸೆಯುತ್ತಿದ್ದರು. ಆದರೆ ಈಗ ಸ್ವಚ್ಛ ಮಾಡಿದ ದಿನಸಿ ಪದಾರ್ಥಗಳು ಸೂಪರ್ ಮಾರ್ಕೆಟ್‌ನಿಂದ ತರುವುದರಿಂದ ಪಕ್ಷಿಗಳಿಗೆ ಆಹಾರದ ಕೊರತೆಯೂ ಆಗಿದೆ. ಇಷ್ಟೆ ಅಲ್ಲ ನಗರಗಳಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯ ಬೇರೆ! ಇವುಗಳು ಗುಬ್ಬಚ್ಚಿಗಳ ಸಂತತಿಯು ಕ್ಷೀಣಿಸಲು ಪ್ರಮುಖ ಕಾರಣವಾಗಿದೆ.

ಗುಬ್ಬಚ್ಚಿಗಳ ರಕ್ಷಣೆಗೆ ನೀವೇನು ಮಾಡಬಹುದು?:
ಇತ್ತೀಚೆಗೆ ಗುಬ್ಬಿಗಳು ಗೂಡು ಕಟ್ಟಲು ಜಾಗ ಹುಡುಕುವ ಪರಿಸ್ಥಿತಿ ಇದೆ. ಇದಕ್ಕಾಗಿ ನೀವು ಈ ರೀತಿಯಲ್ಲಿ ಸಹಾಯ ಮಾಡಬಹುದು.
೧) ಗುಬ್ಬಿಗಳಿಗೆ ಗೂಡು ಕಟ್ಟಲು ಮನೆಯ ಬಳಿ ಸ್ಥಳಗಳಿದ್ದರೆ ಅವಕಾಶ ಮಾಡಿಕೊಡಬಹುದು.
೨) ಖಾಲಿ ಡಬ್ಬ ಸಿಕ್ಕರೆ ಅದನ್ನು ಬಿಸಾಡಬೇಡಿ. ಅದಕ್ಕೊಂದು ರಂಧ್ರ ಮಾಡಿ ಮನೆಯ ಹೊರಗೆ ಸೂಕ್ತ ಸ್ಥಳದಲ್ಲಿಡಿ.
೩) ಸ್ವಲ್ಪ ದಿನದಲ್ಲೇ ಅಲ್ಲಿ ಗುಬ್ಬಿಯೂ ಸೇರಿದಂತೆ ವಿವಿಧ ಹಕ್ಕಿಗಳು ಗೂಡು ಕಟ್ಟುತ್ತವೆ.
೪) ಇದೀಗ ಬೇಸಿಗೆ ಕಾಲ ಆಗಿರುವುದರಿಂದ ಬಿರು ಬಿಸಿಲು ಉಂಟಾಗಿದೆ. ಆದ್ದರಿಂದ ನಿಮ್ಮ ಮನೆಯ ಟೆರೇಸ್‌ಗಳ ಮೇಲೆ ಗುಬ್ಬಿಗಳಿಗೆ ಕುಡಿಯಲು ನೀರನ್ನು ಇಡಿ.

ಮೊಬೈಲ್ ಟವರ್ ಕಾರಣವಲ್ಲ!
ಗುಬ್ಬಚ್ಚಿ ಅಳಿವಿಗೆ ಮೊಬೈಲ್ ಟವರ್ ಹೊರಸೂಸುವ ವಿಕಿರಣಗಳು ಕಾರಣ ಎಂಬುದು ಬಹುತೇಕ ಎಲ್ಲರ ವಾದ. ಆದರೆ ಈ ವಾದ ತಪ್ಪು ಎನ್ನುತ್ತಾರೆ ಸಿಟಿಜನ್ ಸ್ಪಾ್ಯರೋ ಸಂಸ್ಥೆ ತಜ್ಞರು. ಅವರು ನಡೆಸಿರುವ ಸಮೀಕ್ಷೆಯ ಪ್ರಕಾರ ಭಾರತದ ಚೆನ್ನೈ ಹಾಗೂ ಹೈದರಾಬಾದ್‌ಗಳಲ್ಲಿ ಹೆಚ್ಚು ಗುಬ್ಬಚ್ಚಿಗಳಿರುವುದು ದೃಢಪಟ್ಟಿದೆ. ಇದರರ್ಥ ಅತಿಹೆಚ್ಚು ವಿಕಿರಣಗಳನ್ನು ಹೊರಸೂಸುವ ರಾಜ್ಯಗಳಲ್ಲೂ ಗುಬ್ಬಚ್ಚಿಗಳಿವೆ. ಆದರೆ ನಮ್ಮ ರಾಜ್ಯವೂ ಸೇರಿದಂತೆ ಕೆಲವು ಕಡೆ ಗುಬ್ಬಚ್ಚಿ ಸಂತತಿ ಸಂಪೂರ್ಣವಾಗಿ ಕ್ಷೀಣಿಸಲು ಕಾರಣ ನಶಿಸುತ್ತಿರುವ ಪರಿಸರ ಹಾಗೂ ರಾಸಾಯನಿಕಯುಕ್ತ ಧಾನ್ಯಗಳು.

ನೇ‍ಚರ್ ಫಾರೆವರ್ ಸೊಸೈಟಿ ಬಗ್ಗೆ ಒಂದಿಷ್ಟು....
ಗುಬ್ಬಚ್ಚಿಗಳ ಮತ್ತು ಇತರ ಸಾಮಾನ್ಯ ಸಸ್ಯ ಮತ್ತು ಪ್ರಾಣಿಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ 2006 ರಿಂದ ಪ್ರಾರಂಭಗೊಂಡಿರುವ ಲಾಭರಹಿತ, ಸರ್ಕಾರೇತರ ಸಂಸ್ಥೆಯೇ ನೇಚರ್ ಫಾರೆವರ್ ಸೊಸೈಟಿ. 'ಸ್ಪ್ಯಾರೋ ಮ್ಯಾನ್' ಮೊಹಮ್ಮದ್ ದಿಲಾವರ್ ಅವರು ಸ್ಥಾಪಿಸಿದ ಈ ಸಂಸ್ಥೆ ಇಂದು ಅವರ ಅಧ್ಯಕ್ಷತೆಯಲ್ಲೇ ಮುಂದುವರಿಯುತ್ತಿದೆ.


ಮೊಹಮ್ಮದ್ ದಿಲಾವರ್

ಭಾರತದಲ್ಲಿನ ಸಂರಕ್ಷಣಾ ಆಂದೋಲನದಲ್ಲಿ ನಾಗರಿಕರನ್ನು ಒಳಗೊಳ್ಳುವುದು ಈ ಸಂಸ್ಥೆಯ ಧ್ಯೇಯವಾಗಿದೆ. ನೇಚರ್ ಫಾರೆವರ್ ಸೊಸೈಟಿ ಗುಬ್ಬಚ್ಚಿಗಳ ಸಂರಕ್ಷಣೆಗೆ ಕೈಗೊಂಡ ಕಾರ್ಯಕ್ರಮಗಳು ಅನೇಕ. ವಿಶ್ವ ಗುಬ್ಬಿ ದಿನ, ಪ್ರಾಜೆಕ್ಟ್ ಎನ್‌ಒಎಸ್, ಸ್ಪ್ಯಾರೋ ಅವಾರ್ಡ್ಸ್, ಆಸಕ್ತರಿಗೆ ಗೂಡುಗಳ ಹಂಚಿಕೆ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಈ ಸಂಸ್ಥೆ ರೂಪಿಸಿ ಕಾರ್ಯಗತಗೊಳಿಸಿದೆ. 'ಸ್ಪ್ಯಾರೋ ಮ್ಯಾನ್' ಮೊಹಮ್ಮದ್ ದಿಲಾವರ್ ಅವರ ಅಧ್ಯಕ್ಷತೆಯಲ್ಲಿ 2009 ರಲ್ಲಿ ಮೊದಲ ಬಾರಿಗೆ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ನಂತರದ ದಿನಗಳಲ್ಲಿ ಈ ದಿನವನ್ನು ವಿಶ್ವದಾದ್ಯಂತ 50 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತಿದೆ. ಇದು ಯೂರೋಪ್ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದೆ.

ಮೊಹಮ್ಮದ್ ದಿಲಾವರ್ ಅವರು ಕಳೆದ ಹಲವಾರು ವರ್ಷಗಳಿಂದ ಸಂರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಗುಬ್ಬಚ್ಚಿ ಮತ್ತು ಇತರ ಪಕ್ಷಿಗಳ ಪಾತ್ರದ ಜಾಗೃತಿ ಮೂಡಿಸಲು ನೇಚರ್ ಫಾರ್ ಎವರ್ ಸೊಸೈಟಿ, ಎಕೋಸಿಸ್ ಆಕ್ಷನ್ ಫೌಂಡೇಷನ್ ಫ್ರಾನ್ಸ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು 2010 ರಿಂದ ‘ವಿಶ್ವ ಗುಬ್ಬಚ್ಚಿ ದಿನ’ ಆಚರಿಸುತ್ತಿವೆ.

-ಎಂ.ಎಸ್.ಶೋಭಿತ್

(ಮಾರ್ಚ್ 20, 2020 ರ ಜನಮಾಧ್ಯಮ ಮತ್ತು ಕಡಲವಾಣಿ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.)


ಜನಮಾಧ್ಯಮ ದಿನಪತ್ರಿಕೆ (20/03/2020)