ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್. ಪ್ರವೃತ್ತಿಯಲ್ಲಿ ತಾರಸಿ ತೋಟಿಗರಾದ ಹುಬ್ಬಳ್ಳಿ ನಿವಾಸಿ ರಾಘವೇಂದ್ರ ಕೊಣ್ಣೂರು ಅವರ ಮನೆಯ ತಾರಸಿ ಏರಿದರೆ ಬಹು ಬೆಳೆಯ ಬೇಸಾಯ ಕಣ್ಮನ ಸೆಳೆಯಲಿದೆ. ಸಹಜ ಕೃಷಿ, ಸಾವಯವ ಕೃಷಿ, ಮಣ್ಣುರಹಿತ ಕೃಷಿಯಲ್ಲಿ ಹೂವು, ಹಣ್ಣು, ತರಕಾರಿಗಳ ಲೋಕವೇ ಇಲ್ಲಿದೆ...
ಪ್ರಜಾವಾಣಿ ಮೆಟ್ರೊ ಪುರವಣಿಯ ಪಿಡಿಎಫ್ ಪಡೆಯಲು ಇಲ್ಲಿ ಕ್ಲಿಕ್ಕಿಸಿ
ಹುಬ್ಬಳ್ಳಿಯ ವಿದ್ಯಾನಗರದ ಚೇತನಾ ಪಿ.ಯು ಕಾಲೇಜಿನ ಮುಂಭಾಗದಲ್ಲಿ ಮಿತ್ರವಿಶಾಲ್ ಎಂಬ ಎರಡು ಮಹಡಿಯ ಮನೆ ನಮ್ಮನ್ನು ಆಕರ್ಷಿಸುತ್ತದೆ. ತಾರಸಿಯ ಮೇಲಿನ 3,200 ಚದರ ಅಡಿ ಜಾಗದಲ್ಲಿ ತರಕಾರಿ, ಸೊಪ್ಪು, ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಇದರ ರೂವಾರಿ ಮೂಲತಃ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ರಾಘವೇಂದ್ರ ಕೊಣ್ಣೂರು ಮತ್ತು ಕುಟುಂಬ.
ಕೋಸು, ನವಿಲುಕೋಸು, ಮೂಲಂಗಿ, ಬೂದುಗುಂಬಳ, ತೊಂಡೆಕಾಯಿ, ಅವರೆಕಾಯಿ, ಬೀನ್ಸ್, ಬೆಂಡೆ, ಚವಳಿಕೋಡು, ಬದನೆ, ಟೊಮ್ಯಾಟೊ, ನುಗ್ಗೆಕಾಯಿ, ಹಾಗಲ, ಸೊರೆಕಾಯಿ, ಹೀರೇಕಾಯಿ, ಪಾಲಕ್, ಕೊತ್ತಂಬರಿ, ಸಬ್ಬಸಿಗೆ ಜತೆಗೆ ಹಣ್ಣಿನ ಗಿಡಗಳು. ಒಟ್ಟಿನಲ್ಲಿ ಬಹು ಬೆಳೆಯ ಬೇಸಾಯ ಇಲ್ಲಿದೆ. ಅದರಲ್ಲೂ ಸಹಜ ಕೃಷಿ, ಸಾವಯವ ಕೃಷಿ, ಮಣ್ಣುರಹಿತ ಕೃಷಿಯನ್ನು ಅಳವಡಿಸಿದ್ದಾರೆ. ಕೊಕೊಫೀಟ್ ನಲ್ಲಿ ಗಿಡ ಬೆಳೆಸಿರುವ ಅವರು ಕುಂಡದಲ್ಲಿ, ಹಳೆಯ ನೀರಿನ ಟ್ಯಾಂಕ್, ಖಾಲಿ ಪೇಂಟ್ ಡಬ್ಬಿಗಳಲ್ಲಿ ಗಿಡಗಳನ್ನು ನಾಟಿ ಮಾಡಿದ್ದಾರೆ.
ತರಕಾರಿಗಳ ಜತೆಗೆ ಸಣ್ಣ ಗಿಡಗಳಲ್ಲಿ ಮಾವು, ಪಪ್ಪಾಯಿ, ಪೇರಲೆ, ಬಾಳೆ, ಕಲ್ಲಂಗಡಿಗಳನ್ನೂ ಬೆಳೆಸಿದ್ದಾರೆ. ಇವುಗಳ ಜೊತೆಗಿರುವ ಹೂವಿನ ಗಿಡಗಳೂ ಮನಸ್ಸಿಗೆ ಮುದ ನೀಡುವುದಂತೂ ಸತ್ಯ. ಹತ್ತು ಹಲವು ಬಣ್ಣದ ದಾಸವಾಳ, ಮಲ್ಲಿಗೆ, ಸುಗಂಧರಾಜ, ನಿತ್ಯಪುಷ್ಪ, ಬ್ರಹ್ಮಕಮಲ ಇತ್ಯಾದಿ ಇವರ ತಾರಸಿಯಲ್ಲಿ ಪುಷ್ಪಲೋಕವನ್ನೇ ಸೃಷ್ಟಿಸಿದೆ.
ಕಸಿ ಕಟ್ಟುವುದರಲ್ಲೂ ಎತ್ತಿದ ಕೈ:
ಕಸಿ ಕಟ್ಟುವುದರಲ್ಲೂ ಪರಿಣತಿ ಪಡೆದಿರುವ ರಾಘವೇಂದ್ರ ಅವರು ಕಸಿ ಕಟ್ಟುವ ಮೂಲಕ ಒಂದೇ ಗಿಡದಲ್ಲಿ ನಾಲ್ಕು ಜಾತಿಯ ದಾಸವಾಳ ಬೆಳೆಸಿದ್ದಾರೆ. ಕಾಟ್ ಬದನೆಗೆ ಕಸಿ ಮಾಡಿ ವೈವಿಧ್ಯಮಯ ಹತ್ತು ಹಲವು ಬದನೆಗಳನ್ನು ಬೆಳೆಸಿದ್ದಾರೆ. ಇವೆಲ್ಲದರ ಜೊತೆಗೆ ಗಿಡಗಳಿಗೆ ಸಿಂಪಡಿಸಲು ತಾವೇ ಔಷಧಗಳನ್ನು ತಯಾರಿಸುತ್ತಾರೆ. ದೇವರಿಗೆ ಅಲಂಕರಿಸಿದ ಹೂಗಳನ್ನು ಎಸೆಯದೆ ಡಬ್ಬಿಯಲ್ಲಿ ಹಾಕಿಟ್ಟು ಔಷಧಿ ತಯಾರಿಸುತ್ತಾರೆ. ಅದು ಹೇಗೆಂದರೆ ಹೂವುಗಳು ಡಬ್ಬಿ ತುಂಬಿದ ನಂತರ ನೀರು ಹಾಕಿ ಭದ್ರವಾಗಿ ಮುಚ್ಚುತ್ತಾರೆ. ಹದಿನೈದು ದಿನಗಳ ನಂತರ ನೀರು ಸೋಸಿ ತೆಗೆಯಬೇಕು. ಹೀಗೆ ಸೋಸಿದ ನೀರನ್ನು ಗಿಡಗಳಿಗೆ ಸಿಂಪಡಿಸಿದರೆ ಕೀಟಬಾಧೆ ಬಾರದು ಎಂಬುದು ಇವರು ಕಂಡುಕೊಂಡ ಸತ್ಯ.
ಸಾಧನೆಗೆ ಅರಸಿ ಬಂದ ಪ್ರಶಸ್ತಿ:
ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ತಾರಸಿ ಫಾರ್ಮ್ ಗೆ ಧಾರವಾಡ ವಿಶ್ವವಿದ್ಯಾನಿಲಯವು 2017-18 ರಲ್ಲಿ ಇನೋವೇಟಿವ್ ಟೆರೆಸ್ ಫಾರ್ಮರ್ ಸಾಯಿಲ್‌ಲೆಸ್ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಹುಬ್ಬಳ್ಳಿ-ಧಾರವಾಡದ ತೋಟಗಾರಿಕಾ ಇಲಾಖೆ ಅತ್ಯುತ್ತಮ ಟೆರೆಸ್ ಗಾರ್ಡನರ್ ಎಂಬ ಪ್ರಶಸ್ತಿ ನೀಡಿದ್ದು ಇವರ ದಕ್ಷತೆಗೆ ಸಾಕ್ಷಿಯಾಗಿದೆ.
ತೋಟ ನಿರ್ಮಿಸಿ 12 ವರ್ಷ ಕಳೆದಿದ್ದು ಒಂದಿಲ್ಲೊಂದು ಕೃಷಿ ಪ್ರಯೋಗ ನಡೆಸುತ್ತಲೇ ಇದ್ದಾರೆ. ಇದೀಗ ಇಸ್ರೇಲ್ ಮಾದರಿಯ ಕೃಷಿ ಹಾಗೂ ಲ್ಯಾಂಡ್ ಸ್ಕೇಪ್ ಮಾಡಲು ಪ್ರಯೋಗ ನಡೆಸಿದ್ದಾರೆ. ಈಗಲೂ ಲವಲವಿಕೆಯಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಅವರ ಪತ್ನಿ ಪರಿಮಳ ಕೂಡ ಸಾಥ್ ನೀಡಿದ್ದಾರೆ. ತಾರಸಿ ಕೃಷಿ ಕುರಿತು ಕೇಳಿ ಬಂದವರಿಗೆ ಇಲ್ಲ ಎನ್ನದೇ ರಾಘವೇಂದ್ರ ಅವರು ಮನಬಿಚ್ಚಿ ಪ್ರೀತಿಯಿಂದ ಅನುಭವ ಹಾಗೂ ಮಾಹಿತಿ ಹಂಚಿಕೊಳ್ಳುತ್ತಾರೆ. (ಸಂಪರ್ಕ: ರಾಘವೇಂದ್ರ ಕೊಣ್ಣೂರು –7795542361)
-ಎಂ.ಎಸ್.ಶೋಭಿತ್ ಮೂಡ್ಕಣಿ