ಇಡೀ ಪ್ರಪಂಚವೇ ಮಾರಕ ಕೊರೋನಾ ವೈರಸ್‌ನೊಂದಿಗೆ ಸಮರ ನಡೆಸುತ್ತಿದೆ. ಭಾರತ ಕಳೆದ 15 ದಿನಗಳಿಂದ ಲಾಕ್‌ಡೌನ್ ಆಗಿದ್ದು, ಸಾರಿಗೆ, ಕೃಷಿ, ಕೈಗಾರಿಕೆ.... ಹೀಗೆ ವಿವಿಧ ಉದ್ಯಮ ಕ್ಷೇತ್ರಗಳಿಗೆ ಬೃಹತ್ ಆಘಾತವನ್ನುಂಟು ಮಾಡಿದೆ.

ಇದರ ಪರಿಣಾಮ ತನ್ನದೇ ಆದ ವಿಶಿಷ್ಟ ಪರಿಮಳದಿಂದಾಗಿ ಗುರುತಿಸಿಕೊಂಡಿರುವ ಮತ್ತು ಅಷ್ಟೇ ಬೇಡಿಕೆಯನ್ನು ಹೊಂದಿರುವ ಭಟ್ಕಳ ಮಲ್ಲಿಗೆಯ ಬೆಳೆಗಾರರು ಕಂಗಾಲಾಗಿದ್ದಾರೆ.

ಒಳ್ಳೆಯ ಪರಿಮಳ, ಉತ್ತಮ ಬೇಡಿಕೆ:
ಭಟ್ಕಳದ ಮಲ್ಲಿಗೆಗೆ ಕೇವಲ ಭಟ್ಕಳ ಅಥವಾ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ, ಮಂಗಳೂರು, ಉಡುಪಿ ಸೇರಿದಂತೆ ಬೇರೆಬೇರೆ ರಾಜ್ಯಗಳು ಹಾಗೂ ದೂರದ ದುಬೈಗಳಿಗೂ ರಫ್ತಾಗುತ್ತದೆ. ಮದುವೆ, ಉಪನಯನ, ಸಭೆ-ಸಮಾರಂಭಗಳಲ್ಲಿ ಭಟ್ಕಳ ಮಲ್ಲಿಗೆಯೇ ಹೀರೋ! ಹೀಗಾಗಿ ಭಟ್ಕಳ ಮಲ್ಲಿಗೆಯ ಒಂದು ಅಟ್ಟೆಗೆ ಮಾರುಕಟ್ಟೆಯಲ್ಲಿ 250 ರೂ. ತನಕವೂ ದರವಿದೆ. ಆದರೆ ಈ ಬಾರಿ ಕೊರೋನಾದಿಂದಾಗಿ ಮಾರುಕಟ್ಟೆಗಳು ಸ್ಥಬ್ಧಗೊಂಡಿದ್ದು, ಬೆಳೆಗಾರರು ವಿಲವಿಲ ಒದ್ದಾಡುವಂತಾಗಿದೆ.


90 ಹೆಕ್ಟೇರ್ ಪ್ರದೇಶದಲ್ಲಿ ನಾಟಿ:
ನಿರೀಕ್ಷೆಗೂ ಮೀರಿರುವ ಬೇಡಿಕೆಯಿರುವ ಕಾರಣ ಭಟ್ಕಳದ ಸುಮಾರು 8 ರಿಂದ 10 ಸಾವಿರ ಕುಟುಂಬಗಳು ಮಲ್ಲಿಗೆ ಬೆಳೆಯನ್ನೇ ಆಶ್ರಯಿಸಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ಭತ್ತ, ಗೋಧಿ ಮುಂತಾದ ಬೆಳೆಗಳ ಜೊತೆಗೆ 90 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆಯನ್ನು ಕೂಡ ಕೃಷಿಕರು ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ. 

1.1 ಲಕ್ಷ ಮೊಳ ನಷ್ಟ:
ಭಟ್ಕಳದಲ್ಲಿ ಪ್ರತಿದಿನ 1.1 ಲಕ್ಷ ಮೊಳ (11 ಸಾವಿರ ಅಟ್ಟೆ) ಮಲ್ಲಿಗೆ ಹೂವು ಉತ್ಪಾದನೆಯಾಗುತ್ತಿದ್ದು, ಮಂಗಳೂರು ಭಟ್ಕಳ ಮಲ್ಲಿಗೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆದರೆ ಕೇಂದ್ರ ಸರ್ಕಾರ ಗುರುತಿಸಿರುವ ಪ್ರಮುಖ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಮಂಗಳೂರು ಕೂಡ ಸೇರಿರುವುದರಿಂದ ಮಾರುಕಟ್ಟೆ ಸ್ಥಬ್ಧವಾಗಿದೆ. ಇದು ಕೂಡ ಭಟ್ಕಳ ಮಲ್ಲಿಗೆಯ ಬೇಡಿಕೆ ಕುಸಿಯುವುದಕ್ಕೆ ಕಾರಣವಾಗಿದೆ.


ಕೊರೋನಾಘಾತದಿಂದಾಗಿ ಮಾರುಕಟ್ಟೆ ಇಲ್ಲದೇ ಬೆಳೆಗಾರರು ಇದೀಗ ಮೊಗ್ಗನ್ನು ಕೊಯ್ದು ಉಚಿತವಾಗಿ ಹಂಚುತ್ತಿದ್ದಾರೆ. 'ನಾವು ಮಲ್ಲಿಗೆ ಬೆಳೆಯನ್ನೇ ಆಶ್ರಯಿಸಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಈಗ ಸೂಕ್ತ ಮಾರುಕಟ್ಟೆ ಸಿಗದೇ ಬೇಡಿಕೆಯೂ ಇಲ್ಲದೆ ಕಂಗಾಲಾಗಿದ್ದೇವೆ. ಮೊಗ್ಗನ್ನು ಕೊಯ್ಯದೆ ಹಾಗೇ ಗಿಡದಲ್ಲಿ ಬಿಟ್ಟರೆ ಹುಳುಗಳ ಕಾಟದಿಂದ ಗಿಡಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಬೇಡಿಕೆಯಿಲ್ಲದಿದ್ದರೂ ಮೊಗ್ಗನ್ನು ಕೊಯ್ದು ದೇವರ ಪೂಜೆಗಳಿಗೆ, ಹೂವನ್ನು ಮುಡಿಯುವವರಿಗೆ ಉಚಿತವಾಗಿ ಹಂಚಿ ಗಿಡವನ್ನು ಉಳಿಸಿಕೊಳ್ಳುತ್ತಿದ್ದೇವೆ" ಎನ್ನುತ್ತಾರೆ ಮಲ್ಲಿಗೆ ಬೆಳೆಗಾರ್ತಿ ಭಟ್ಕಳದ ಪಾರ್ವತಿ.


ಖರ್ಚೇ ಎಲ್ಲಾ; ಲಾಭವೇ ಇಲ್ಲ!:
ಭಟ್ಕಳ ಮಲ್ಲಿಗೆಗೆ ಫೆಬ್ರವರಿಯಿಂದ ಮೇ ತನಕ 4 ತಿಂಗಳುಗಳ ಕಾಲ ಮದುವೆ, ಉಪನಯನ, ಸಭೆ-ಸಮಾರಂಭ ಹೀಗೆ ವಿವಿಧ ಕಾರ್ಯಕ್ರಮಗಳು ಕೂಡ ನಡೆಯುತ್ತಿದ್ದರಿಂದ ಬೇಡಿಕೆ ಕೂಡ ಹೆಚ್ಚಿರುತ್ತಿದ್ದವು. ಆದರೆ ಪ್ರಳಯಾಂತಕ ಕೊರೋನಾ ಈ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ನೀಡಿದೆ. ಇದು ಕೂಡ ಭಟ್ಕಳ ಮಲ್ಲಿಗೆಯ ಬೇಡಿಕೆ ಕುಸಿಯಲು ಒಂದು ಪ್ರಮುಖ ಕಾರಣವಾಗಿದೆ. "ಪ್ರತಿಯೊಂದು ಗಿಡಕ್ಕೂ ಕಾಲಕಾಲಕ್ಕೆ ತಕ್ಕಂತೆ ನೀರು, ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಿ ಮಲ್ಲಿಗೆ ಗಿಡವನ್ನು ಕೂಡ ಮನೆಯ ಸದಸ್ಯರಂತೆ ನೋಡಿಕೊಂಡಿದ್ದೇವೆ. ಆದರೆ ಈ ರೀತಿಯಾಗಿ ಪಾಲನೆ ಪೋಷಣೆ ಮಾಡಿದ ಖರ್ಚನ್ನು ಕೂಡ ಹಿಂಪಡೆಯುವುದು ಕಷ್ಟವಾಗಿದೆ" ಎನ್ನುವುದು ಮಲ್ಲಿಗೆ ಬೆಳೆಗಾರರಾದ ಗಿರಿಜಾ ಅವರ ಅಂಬೋಣ. 

‘ಕಳೆದ ವರ್ಷ ಇದೇ ಮಾರ್ಚನಿಂದ ಮೇ ತಿಂಗಳ ತನಕ ದಿನಕ್ಕೆ ನೂರಾರು ಮಲ್ಲಿಗೆ ಮೊಳ ಸಿಗುತ್ತಿದ್ದು ಭಾರಿ ಬೇಡಿಕೆಯೊಂದು ಉತ್ತಮ ದರವೂ ಲಭಿಸಿತ್ತು. ಅದರಂತೆ ಈ ವರ್ಷವೂ ಒಳ್ಳೆಯ ಬೇಡಿಕೆ ಬರಲಿದೆ ಎಂದು ಭರವಸೆಯಿಟ್ಟಿದ್ದೇವೆ ಆದರೆ ದೇಶಕ್ಕೆ ಬಂದ ಕೋರೋನಾ ರೋಗದಿಂದ ಮಲ್ಲಿಗೆ ಬೆಳೆಗೆ ಬೇಡಿಕೆ ಕುಸಿದಿದೆ. ಇದನ್ನೇ ನಂಬಿ ಬದುಕು ಸಾಗಿಸುವ ನಮಗೆ ಆಕಾಶವೇ ಬಿದ್ದಂತಾಗಿದೆ' ಎಂಬುದು ಮತ್ತೊರ್ವ ಬೆಳೆಗಾರರಾದ ಶಾಂತಿ ದೇವಾಡಿಗ ಅವರ ಅಭಿಪ್ರಾಯ.

-ಎಂ.ಎಸ್.ಶೋಭಿತ್ ಮೂಡ್ಕಣಿ
ಚಿತ್ರಗಳು: ಎಸ್‌.ಉದಯ್ ನಾಯ್ಕ, ಭಟ್ಕಳ