•ಮುಖ್ಯಮಂತ್ರಿಯ ಆಯ್ಕೆಗೆಂದು ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಶ್ನೆಪತ್ರಿಕೆಯ ಸವಾಲುಗಳಿಗೆ 'ಸಮರ್ಥವಾಗಿ' ಉತ್ತರಿಸುವವರಿಗಷ್ಟೇ ಗಾದಿ ಎಂದು ಹೈಕಮಾಂಡ್ 'ಸೂಚ್ಯವಾಗಿ' ಹೇಳಿತ್ತು. ಉತ್ತರಿಸಿದ ನಂತರ ಉತ್ತರಪತ್ರಿಕೆಯನ್ನು ಲಕೋಟೆಯೊಳಗಿಟ್ಟು ಅಂಟಿಸಿ ಹೈಕಮಾಂಡ್ ಕಚೇರಿಗೆ ಕಳುಹಿಸಬೇಕಿತ್ತು. ಉತ್ತರಿಸಲು ಆಕಾಂಕ್ಷಿಗಳು ತಿಣುಕಾಡುತ್ತಿದ್ದುದನ್ನು ಅವಲೋಕಿಸಿದ ಎಡವಟ್ರಾಯರು ನಸುನಕ್ಕು, ತಾವು ತಂದಿದ್ದ ಬ್ಯಾಂಕಿನ ಚೆಕ್ ನಲ್ಲಿ ಪಕ್ಷಾಧ್ಯಕ್ಷರ ಹೆಸರು ಬರೆದು ಮೊತ್ತದ ಜಾಗವನ್ನು ಖಾಲಿ ಬಿಟ್ಟು, ಲಕೋಟೆಯೊಳಗಿಟ್ಟು ಅಂಟಿಸಿ ನಿರುಮ್ಮಳವಾಗಿ ಮನೆಗೆ ಮರಳಿದರು. ಮರುದಿನ ಮುಖ್ಯಮಂತ್ರಿ ಗಾದಿಗೆ ಅವರ ಹೆಸರೇ ಘೋಷಣೆಯಾಗಿತ್ತು! 
                        *********
•ಹಳ್ಳಿಯ ಅರಳೀಕಟ್ಟೆಯಲ್ಲಿ ಲೋಕಾಭಿರಾಮದ ಹರಟೆ ಸಾಗುತ್ತಿತ್ತು. 'ಚುನಾವಣೆಗೂ ಮದುವೆಗೂ ಅಂಥದ್ದೇನೂ ವ್ಯತ್ಯಾಸವಿಲ್ಲ ಕಣ್ರೀ' ಅಂದ್ರು ಶ್ರೀಕಂಠಯ್ನೋರು. 'ಅದ್ಯಾಕೆ?' ಎಂಬ ಆರಾಧ್ಯರ ಪ್ರಶ್ನೆಗೆ, 'ಎರಡರಲ್ಲೂ ಅಭಿರುಚಿಗೆ ಬೆಲೆಯೇ ಇಲ್ಲ; ನೋಡೀ, ಮದುವೆಮನೇಲಿ ಪ್ರತಿಬಾರಿಯೂ ವರನೊಬ್ಬನನ್ನು ಕಂಡಾಗ, 'ಹೋಗೀಹೋಗೀ ಇವನನ್ನೇಕೆ ಆರಿಸಿದ್ರು?' ಎಂಬ ಪ್ರಶ್ನೆ ಹುಟ್ಕೊಳ್ಳುತ್ತೆ.
ಚುನಾವಣೆಯಲ್ಲಿ ಆಯ್ಕೆಯಾದ ಕೆಲವರನ್ನು ನೋಡಿದಾಗಲೂ ಬಹುತೇಕರ ಮನದಲ್ಲಿ ಸುಳಿದಾಡೋದೂ ಇದೇ ಪ್ರಶ್ನೆಯೇ....!' ಎನ್ನುತ್ತ ನಶ್ಯವನ್ನು ಮೂಗಿಗೇರಿಸಿದರು. ಅದರ ಭೀಕರಘಾಟು ತಡೆಯಲಾಗದೇ ಆರಾಧ್ಯರು 'ಆಕ್ಷೀ...' ಅಂದರು! 

                        *********
•ಅನಕ್ಷರಸ್ಥ ಎಡವಟ್ರಾಯ ಪಕ್ಷೇತರನಾಗಿ ಚುನಾವಣೆಯಲ್ಲಿ ಗೆದ್ದೇಬಿಟ್ಟ. ಸರ್ಕಾರ ರಚಿಸಲು ಪಕ್ಷವೊಂದಕ್ಕೆ ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆಯಿದ್ದು ಬೆಂಬಲ ಕೋರಿದ್ದಕ್ಕೆ 'ಮಂತ್ರಿ ಮಾಡ್ಬೇಕು' ಅಂತ ಕಂಡೀಷನ್ ಹಾಕಿದ. ವಿಧಿಯಿಲ್ಲದೆ ಒಪ್ಪಿ ಪ್ರಮಾಣವಚನವನ್ನೂ ಮತ್ತೊಬ್ಬರು ಹೇಳಿಕೊಡಬೇಕಾಯ್ತು. ಈತನಿಗೆ ಯಾವ ಖಾತೆ ನೀಡೋದೆಂಬ ಜಿಜ್ಞಾಸೆಯಲ್ಲಿದ್ದಾಗ 'ಎಜುಕೇಸನ್ನೇ ಬೇಕು, ಇಲ್ಲಾಂದ್ರೆ ಸಪೋಲ್ಟ್ ವಾಪಸ್' ಎಂದು ಎಡವಟ್ರಾಯ ಬೆದರಿಸಿದ್ದಕ್ಕೆ ಪಕ್ಷಾಧ್ಯಕ್ಷರು ಬಗ್ಗಿದರು. ಶಿಕ್ಷಣ ಸಚಿವನಾಗಿ ಎಡವಟ್ರಾಯ ಪ್ರಜ್ವಲಿಸಿದ; ಆ ಪ್ರಖರತೆಗೆ ಜ್ಞಾನಸೂರ್ಯನೂ ನಾಚಿಕೊಂಡ! 
                        *********

•ತಮ್ಮ 'ಅಂಬೆಗಾಲು-ಶಿಶು' ಮುಂದೇನಾಗಬಹುದು ಎಂದು ತಿಳಿಯಲು ತವಕಿಸುತ್ತಿದ್ದ ದಂಪತಿ, ಸಾಕಷ್ಟು ದೂರದಲ್ಲಿ ಒಂದು ಮೈಕ್ರೊಫೋನ್, ವಿಸ್ಕಿ ಬಾಟಲಿ ಮತ್ತು ನೋಟಿನ ಕಂತೆ ಇಷ್ಟನ್ನೂ ಇಟ್ಟರು. ಮೈಕ್ರೊಫೋನ್ ಎತ್ತಿಕೊಂಡರೆ ಭಾಷಣಕಾರನೂ, ವಿಸ್ಕಿ ಎತ್ತಿಕೊಂಡರೆ ಲಿಕ್ಕರ್ ಉದ್ಯಮಿಯೂ, ನೋಟು ಎತ್ತಿಕೊಂಡರೆ ಸ್ವಿಸ್ ಬ್ಯಾಂಕ್ ನಲ್ಲಿ ದುಡ್ಡಿಡುವಷ್ಟು ಶ್ರೀಮಂತನೂ ಆಗುತ್ತಾನೆಂಬುದು ಅವರ ಗ್ರಹಿಕೆ. ಅಂಬೆಗಾಲಿಡುತ್ತ ಧಾವಿಸಿದ ಮಗು, ಅಷ್ಟನ್ನೂ ಎತ್ತಿಕೊಂಡು ಕೇಕೆಹಾಕಿತು. ಇದನ್ನು ಕಂಡ ಅಪ್ಪ, 'ಬಡ್ಡೀಮಗ, ರಾಜಕಾರಣಿ ಆಗ್ತಾನೆ ಕಣೇ' ಎಂದು ಉದ್ಗರಿಸಿದ! 

                          *********

• ಪುಡಾರಿಗಳಿದ್ದ ಕಾರು ಅಪಘಾತಕ್ಕೀಡಾಗಿ ಹೊಲದಲ್ಲಿ ಬಿದ್ದಿತು. ಸುದ್ದಿ ತಿಳಿದು ಬಂದ ರೈತ, ಹೊಂಡ ತೋಡಿ, ಅಪಘಾತಕ್ಕೊಳಗಾದವರನ್ನೆಲ್ಲ ತುಂಬಿ ಮಣ್ಣು ಮುಚ್ಚಿದ. ನಂತರ ಘಟನಾಸ್ಥಳಕ್ಕೆ ಬಂದ ಪೋಲೀಸ್ ವರಿಷ್ಠರು ವಿಚಾರಿಸಲಾಗಿ, ರೈತ ನಡೆದಿದ್ದೆಲ್ಲವನ್ನೂ ತಿಳಿಸಿದ. ಅದಕ್ಕೆ ವರಿಷ್ಠರು, 'ಅವರ ಪೈಪೋಟಿ ಎಲ್ಲರೂ ಸತ್ತಿದ್ದರೇ?' ಎಂದು ಕೇಳಿದ್ದಕ್ಕೆ ರೈತ, ' ನಾವಿನ್ನೂ ಸತ್ತಿಲ್ಲ ಅಂತ ಕೆಲವರೇನೋ ಹೇಳ್ತಾ ಇದ್ರು; ಆದ್ರೆ ಗೊತ್ತಲ್ಲ, ಈ ಪುಡಾರಿಗಳ ಮಾತು ನಂಬಕ್ಕಾಗಲ್ಲ, ಅದಕ್ಕೇ ಎಲ್ಲರನ್ನೂ ಮಣ್ಣು ಮಾಡಿದೆ' ಎಂದುಬಿಟ್ಟ! 

• ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರ್ಯಾಲಿಗಳಿಗೆ ಜನ ಬರುವ ಬಗ್ಗೆ ಇತ್ತೀಚೆಗೆ ಟ್ವೀಟ್ ಒಂದು ವೈರಲ್ ಆಗಿತ್ತು. 'ರಾಹುಲ್ ಗಾಂಧಿ ರ್ಯಾಲಿಗಳಲ್ಲಿ ಪಾಲ್ಗೊಳ್ಳುವವರ ಪೈಕಿ ಶೇ.95 ಜನರು ಕುತೂಹಲದಿಂದ ಆಗಮಿಸುತ್ತಾರೆ. ಏಕೆಂದರೆ, ನಿಜಕ್ಕೂ ರಾಹುಲ್ ಇಷ್ಟೊಂದು ವಿನೋದದ ಭಾಷಣ ಮಾಡುತ್ತಾರೋ ಅಥವಾ ಅವರ ವೀಡಿಯೋಗಳನ್ನು ಎಡಿಟ್ ಮಾಡಲಾಗುತ್ತದೆಯೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು' ಸಾವಿರಾರು ಜನರು ಇದನ್ನು ರೀಟ್ವೀಟ್ ಮಾಡಿದ್ದಾರೆ.

(ಸಂಗ್ರಹ)- ಎಂ.ಎಸ್.ಶೋಭಿತ್ ಮೂಡ್ಕಣಿ



(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)