ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯ ಕುಂಚದಲ್ಲಿ ಅರಳುತ್ತಿದೆ ಬಗೆ ಬಗೆಯ ಚಿತ್ರಗಳು! 
ಆಕೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ. ಎಲ್ಲಾ ಸರಿಯಾಗಿದ್ದರೆ ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಬೇಕಿತ್ತು. ಆದರೆ ಕರೋನಾ ಮಹಾಮಾರಿ ಪ್ರತಿಯೊಬ್ಬರ ದಿನಚರಿಯನ್ನೂ ಬದಲಾಯಿಸಿದೆ. ಶಿಕ್ಷಣದ ಮೇಲೂ ಪರಿಣಾಮ ಬೀರಿದ್ದು, 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯ ಕುರಿತು ಇನ್ನೂ ಅನೇಕ ಗೊಂದಲವಿದೆ. ಆದರೆ ಈ ವಿದ್ಯಾರ್ಥಿನಿ ಓದಿನ ಜೊತೆ ಜೊತೆಗೆ ಚಿತ್ರ ಬಿಡಿಸುವ ಹವ್ಯಾಸವನ್ನು ರೂಢಿಸಿಕೊಂಡು ಇದೀಗ ಲಾಕ್‌ಡೌನ್ ಅವಧಿಯಲ್ಲಿ 50ಕ್ಕೂ ಅಧಿಕ ಚಿತ್ರಗಳನ್ನು ರಚಿಸಿ ಗಮನ ಸೆಳೆದಿದ್ದಾಳೆ.


ಹೌದು. ಈಕೆಯೇ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೊಮ್ನಳ್ಳಿಯ ಖ್ಯಾತ ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿ ಮತ್ತು ಹವ್ಯಾಸಿ ಬರಹಗಾರ್ತಿ ಅರ್ಚನಾ ಬೊಮ್ನಳ್ಳಿ ದಂಪತಿಯ ಮಗಳು ಚಿತ್ರಾ ಬೊಮ್ನಳ್ಳಿ. ಭೈರುಂಬೆಯ ಶಾರದಾಂಬಾ ಆಂಗ್ಲಮಾಧ್ಯಮ ಹೈಸ್ಕೂಲಿನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಇವಳು ಜಲವರ್ಣ, ಕಲರ್ ಪೆನ್ಸಿಲ್ ಚಿತ್ರ, ಮಿಶ್ರ ಮಾಧ್ಯಮ ಹೀಗೆ ಕಲೆಯ ವಿವಿಧ ಪ್ರಕಾರಗಳಲ್ಲಿ ಚಿತ್ರಗಳನ್ನು ಮೂಡಿಸಿದ್ದಾಳೆ.


ತಂದೆ ಕೂಡ ವ್ಯಂಗ್ಯಚಿತ್ರಕಾರರಾಗಿರುವುದರಿಂದ ಸಹಜವಾಗಿ ಮಗಳು ಕೂಡ ಕಲೆಯತ್ತ ಆಕರ್ಷಿತಳಾಗಿದ್ದಾಳೆ. 'ಪರೀಕ್ಷೆಯ ಸಂದರ್ಭದಲ್ಲಿ ಸಹಜವಾಗಿ ಮಕ್ಕಳೂ ಡಿಪ್ರೆಶನ್‌ಗಳಿಗೆ ಒಳಗಾಗುತ್ತಾರೆ. ಆದರೆ ಮಗಳು ಚಿತ್ರಾ ಬಿಡುವಿದ್ದಾಗ ಚಿತ್ರ ಬರೆವ ಹವ್ಯಾಸ ಬೆಳೆಸಿಕೊಂಡು ಓದು ಹಾಗೂ ಹವ್ಯಾಸ ಎರಡನ್ನೂ ಸಮನಾಗಿ ಮುನ್ನಡೆಸಿಕೊಂಡು ಏಕಾಗ್ರತೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಇದಕ್ಕೆ ಹೆಮ್ಮೆ ಇದೆ' ಎನ್ನುತ್ತಾರೆ ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿ.


'ಪ್ರತಿನಿತ್ಯ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಭೈರುಂಬೆಯ ಶಾರದಾಂಬಾ ಹೈಸ್ಕೂಲ್‌‌ನಿಂದ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ಚಿತ್ರ ಬಿಡಿಸಲು ತೊಡಗಿದ್ದೇನೆ‌ ಎನ್ನುವ ಚಿತ್ರಾ, ಕೇವಲ ಕಲೆಯನ್ನು ನಂಬಿ ಭವಿಷ್ಯ ಹುಡುಕುವಂತಹ ವಾತಾವರಣ ಇನ್ನೂ ಕಾಣುತ್ತಿಲ್ಲ. ಹಾಗಾಗಿ ಕಲೆಯನ್ನು ಕೇವಲ ಹವ್ಯಾಸವನ್ನಾಗಿ ಉಳಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಗಮನಕೊಡುತ್ತೇನೆ ಎಂಬುದು ಚಿತ್ರಾಳ ಅಂಬೋಣ. 


ಜೊತೆಗೆ ಚಿತ್ರ ಕಲಿಕೆಯಿಂದ ಹತ್ತನೆ ತರಗತಿಯ ವಿಜ್ಞಾನ ವಿಷಯಗಳಲ್ಲಿ ಬರುವ ವಿಜ್ಞಾನ ಮಾದರಿಯ ಚಿತ್ರಗಳನ್ನು ಸುಲಭವಾಗಿ ಬಿಡಿಸಲು ಸಹಕಾರಿಯಾಗಿದೆ ಎನ್ನುತ್ತಾಳೆ‌. 


ಇತ್ತೀಚಿನ ದಿನಗಳಲ್ಲಿ ಬಿಡುವಿನ ಸಮಯದಲ್ಲಿ ಮೊಬೈಲ್, ವೀಡಿಯೋ ಗೇಮ್‌ಗಳ ದಾಸರಾಗಿ ದಿನದ 24 ಗಂಟೆಯೂ ಅದರಲ್ಲೇ ಮಗ್ನರಾಗಿರುವ ವಿದ್ಯಾರ್ಥಿಗಳ  ಮಧ್ಯೆ ಓದಿನ ಜೊತೆ ಉತ್ತಮ ಹವ್ಯಾಸ ರೂಢಿಸಿಕೊಂಡಿರುವ ಚಿತ್ರಾ ನಿಜಕ್ಕೂ ಮಾದರಿಯಾಗಿ ನಿಲ್ಲುತ್ತಾಳೆ‌.