ಈಕೆ ಇನ್ನೂ ಹದಿನೇಳರ ಪೋರಿ‌. ವಿಶೇಷ ಎಂದರೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕೂಡ ಈಕೆಯನ್ನು ತಮ್ಮ ಶಿಕ್ಷಕಿಯೆಂದು ಪರಿಗಣಿಸಿ, ಗೌರವಿಸುತ್ತಾರೆ! ಅಷ್ಟೇ ಅಲ್ಲ ಈಕೆಯ ಶಿಷ್ಯರಾಗಿ ಯೋಗ ಕಲಿಯಲು ಶಿರಸಿ, ಹೊಸನಗರ, ನಾಗರಕೋಡಿಗೆ.... ಹೀಗೆ ದೂರ ದೂರದ ಊರುಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ‌.

ಯೋಗದಲ್ಲಿ ಇಷ್ಟು ಚಿಕ್ಕ ವಯಸ್ಸಿಗೇ ಅಸಾಧಾರಣ ಸಾಧನೆ ಮಾಡಿದ ಸಂಧ್ಯಾ ಎಂ.ಎಸ್. ಯೋಗ ಸಾಧಕಿ. ಈಗಾಗಲೇ 'ಯೋಗ ಗುರು' ಎಂಬ ಅಭಿದಾನಕ್ಕೂ ಪಾತ್ರಳಾಗಿದ್ದಾಳೆ. ತನಗಿಂತಲೂ ಹಿರಿಯ ಮತ್ತು ಕಿರಿಯ ಆಸಕ್ತರಿಗೆ ಯೋಗಾಸನ ಕಲಿಸುತ್ತಿದ್ದಾಳೆ. ಬಡತನದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವ ಉದ್ದೇಶದಿಂದ ಸಾಗರದಲ್ಲಿ 'ಶ್ರೀ ಗುರುಕುಲಂ ಯೋಗ ಕೇಂದ್ರ' ಆರಂಭಿಸಿದ್ದಾಳೆ. ಆ ಮೂಲಕ ಅತ್ಯಂತ ಕಿರಿಯ 'ಯೋಗ ಗುರು' ಎಂಬ ಹೆಗ್ಗಳಿಕೆಯೂ ಈಕೆಯ ಬೆನ್ನಿಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳಿಗೂ ಭಾಜನಳಾಗಿದ್ದಾಳೆ. ಇನ್ನೂ ವಿಶೇಷವೆಂದರೆ ಈಕೆಯ ಬಳಿ ಯೋಗ ಕಲಿತ ಶಿಷ್ಯರು ಕೂಡ ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸುತ್ತಿದ್ದಾರೆ‌. ಗುರುವಿಗೆ ತಕ್ಕ ಶಿಷ್ಯರಾಗಿ ಮಿಂಚುತ್ತಿರುವುದು ಸಂಧ್ಯಾಗೆ ಹೆಮ್ಮೆಯ ಸಂಗತಿಯೂ ಹೌದು. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನುಗೋಡು ಮೂಲದ ಕೃಷಿಕ, ನ್ಯಾಯವಾದಿ ಶ್ರೀಧರ ಮೂರ್ತಿ ಮತ್ತು ಸುಧಾ ದಂಪತಿಗಳ ಕಿರಿಯ ಪುತ್ರಿ ಸಂಧ್ಯಾ ಪುಟ್ಟ ವಯಸ್ಸಿನಲ್ಲೇ ಯಶಸ್ಸಿನ ಮೆಟ್ಟಿಲೇರಿ ಇದೀಗ ಅತಿ ಎತ್ತರಕ್ಕೆ ಏರಿದ್ದಾಳೆ. 

ಬಡತನದಲ್ಲಿ ಬೆಳಗಿದ ಪ್ರತಿಭೆ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸಂಧ್ಯಾ,  ಬಡತನದ ಕುಟುಂಬದಿಂದ ಬಂದವರು. ಜೀವನದಲ್ಲಿ ಎದುರಾದ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ನಿರಂತರ ಸಾಧನೆಯ ಮೂಲಕ ಸಾಧಿಸುವ ಛಲವಿದ್ದರೆ ಬಡತನವೂ ಲೆಕ್ಕಕ್ಕಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾಳೆ. ಬಡತನದ ಬವಣೆಯ ಕುರಿತು ಅರಿತಿರುವ ಸಂಧ್ಯಾಳ ತಂದೆ ಶ್ರೀಧರ ಮೂರ್ತಿ ಅವರಿಗೆ ಪ್ರತಿವರ್ಷ ದೀಪಾವಳಿ, ಚೌತಿ ಸಮಯದಲ್ಲಿ ವಿವಿಧ ಶಾಲೆಗಳಲ್ಲಿ ಓದುತ್ತಿರುವ, ಬಡ ವಿದ್ಯಾರ್ಥಿಗಳನ್ನು ಕರೆಯಿಸಿ ಅವರಿಗೆ ಸಿಹಿ ಊಟ ಹಂಚಿ ಸಂಭ್ರಮಿಸುವುದು ಹವ್ಯಾಸ. 

'ನಾನು 5 ನೇ ತರಗತಿಯಲ್ಲಿರುವಾಗ ಸಾಗರದ ವನಶ್ರೀ ಯೋಗ ಕೇಂದ್ರದ ವಿದ್ಯಾರ್ಥಿಗಳು ನಮ್ಮ ಮನೆಗೆ ಬಂದಿದ್ದರು. ಆ ವಿದ್ಯಾರ್ಥಿಗಳು ನಮ್ಮ ಮನೆಯಲ್ಲಿ ಹಲವಾರು ಕಷ್ಟದ ಆಸನಗಳನ್ನು ಪ್ರದರ್ಶಿಸಿದ್ದರು. ಅಂದೇ ನಾನೂ ಕೂಡ ಯೋಗ ಕ್ಷೇತ್ರದಲ್ಲಿ ಯಾಕೆ ಸಾಧಿಸಬಾರದು ಎಂದು ನನ್ನೊಳಗೇ ಪ್ರಶ್ನೆ ಹಾಕಿಕೊಂಡೆ. ಬಳಿಕ ಅಪ್ಪನೊಂದಿಗೆ ಈ ವಿಚಾರ ಪ್ರಸ್ತಾಪಿಸಿದೆ. ಅಪ್ಪ ಕೂಡ ಖಂಡಿತ ಕಲಿ ಎಂದು ಪ್ರೋತ್ಸಾಹಿಸಿದರು' ಎಂದು ಯೋಗದ ಆಕರ್ಷಣೆ ಕುರಿತು ಬಿಚ್ಚಿಡುತ್ತಾಳೆ ಸಂಧ್ಯಾ.

ತಂದೆಯೇ ಯೋಗ ಗುರು!
ಸಂಧ್ಯಾ, ಆರಂಭದಲ್ಲಿ ಸಾಗರದ ವನಶ್ರೀ ಯೋಗ ಕೇಂದ್ರದ ಯೋಗ ಗುರು ಎಚ್.ಪಿ. ಮಂಜಪ್ಪ ಅವರಿಂದ ಯೋಗ ಕಲಿತಳು. ಬಳಿಕ ಯಶವಂತ ಜಿ‌.ಕೆ., ಶಿರಸಿಯ ನಯನಾ ಭಟ್ಟ ಅವರ ಬಳಿಯೂ ಯೋಗಾಭ್ಯಾಸ ನಡೆಸಿದ್ದಾಳೆ. ಮಗಳ ಸಾಧನೆಯ ಹಿಂದೆ  ಶ್ರೀಧರ ಮೂರ್ತಿಯವರ ಪರಿಶ್ರಮವೂ ಇದೆ. ಮಗಳಿಗೆ ಆತ್ಮಸ್ಥೈರ್ಯ ತುಂಬುತ್ತಾ ತಾವೇ ಸ್ವತಃ ಗುರುವಾಗಿ ಕ್ಲಿಷ್ಟಕರ ಆಸನಗಳನ್ನು ಕಲಿಸಿದ್ದಾರೆ. ಮುಕ್ತ ಹಸ್ತ ವೃಶ್ಚಿಕ, ಮುಕ್ತ ಹಸ್ತ ಪದ್ಮ ವೃಶ್ಚಿಕ, ತ್ರಿಪುರಾಸನ, ತ್ರಿವಿಕ್ರಮಾಸನ, ನಟರಾಜ ಆಸನ, ಗಂಡಭೇರುಂಡ, ಶಕುನಿ... ಹೀಗೆ 80 ರಿಂದ 100 ಬಗೆಯ ಕ್ಲಿಷ್ಟಕರ ಆಸನಗಳು ಸಂಧ್ಯಾಳಿಗೆ ಕರತಲಾಮಲಕವಾಗಿವೆ. 


ಇಂದು ಭಾರತದ ಪ್ರಮುಖ 10 ಯೋಗಪಟುಗಳ ಸಾಲಿನಲ್ಲಿ ಒಬ್ಬಳಾಗಿ ಗುರುತಿಸಿಕೊಂಡಿರುವ ಸಂಧ್ಯಾ ಒಮ್ಮೆಲೇ ಸಾಧನೆಯ ಗುರಿ ತಲುಪಿದವರಲ್ಲ‌. ಹಲವಾರು ಸ್ಪರ್ಧೆಗಳಲ್ಲಿ ಸೋಲುಂಡು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದ್ದಾಳೆ. ಪ್ರಾರಂಭದಲ್ಲಿ ತಾಲೂಕು ಮಟ್ಟ, ವಿಭಾಗ ಮಟ್ಟದಲ್ಲಿ ಸೋಲುಂಡಿದ್ದರು. ಆದರೂ ಎದೆಗುಂದದೆ, ನಿರಂತರ ಸಾಧನೆಯಿಂದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಂಗಾರ ಮತ್ತು ಕಂಚಿನ ಪದಕ ಪಡೆದ ಹೆಗ್ಗಳಿಕೆ ಇವಳದ್ದು.

ತನ್ನ 17 ನೇ ವಯಸ್ಸಿಗೆ ದೇಶದ ವಿವಿಧೆಡೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಈವರೆಗೆ 100ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾಳೆ. ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿ‌ಎಫ್‌ಐ) ನಡೆಸುವ ಯೋಗ ಸ್ಪರ್ಧೆಯಲ್ಲಿ ಸಂಧ್ಯಾ ಈವರೆಗೆ 13 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ವರದಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ, ಚಿಕ್ಕಮಗಳೂರಿನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಪ್ರಥಮ, ಮೈಸೂರು ದಸರಾದಲ್ಲಿ ಹಿಮಾಲಯ ಫೌಂಡೇಶನ್ ಮತ್ತು ಜಿಎಸ್‌ಎಸ್‌ ಫೌಂಡೇಶನ್ ನಡೆಸಿದ ರಾಜ್ಯಮಟ್ಟದ ಕಿರು ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ, ಮೈಸೂರಿನಲ್ಲಿ ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್ ನಡೆಸಿದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ, ಹಾಸನದಲ್ಲಿ ನಡೆದ ಯೋಗಸನ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್.... ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ತನ್ನದಾಗಿಸಿಕೊಂಡಿದ್ದಾಳೆ.


ಸಾಧನೆಗೆ ಸಂದ ಪ್ರಶಸ್ತಿ:
ಸಂಧ್ಯಾಳ ಸಾಧನೆಗೆ ಕನ್ನಡ ರಾಜ್ಯೋತ್ಸವ ಸನ್ಮಾನ, ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಮಂಡಳಿ, ವನಶ್ರೀ ವಸತಿ ವಿದ್ಯಾಲಯ ಹೀಗೆ ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿ ಗೌರವಿಸಿದೆ. ಕಿರಿಯ ವಯಸ್ಸಿನಲ್ಲಿ 115 ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನಳಾಗಿರುವ ಈಕೆ, ಕಳೆದ ನಾಲ್ಕು ವರ್ಷಗಳಿಂದ ಭಾರತದ ಟಾಪ್ ಯೋಗ ಪಟುವಾಗಿ ಹೊರಹೊಮ್ಮಿದ್ದಾಳೆ‌. 

ಸಂಧ್ಯಾಳಿಗೆ ಸಂದ ಬಿರುದು:
 • ಯೋಗದ ಧ್ರುವತಾರೆ
• ಯೋಗ ಸಿಂಧೂರಿ
• ಯೋಗ ಕುವರಿ
• ಯೋಗ ರತ್ನ
• ನಂದಿಶ್ರೀ
• ಮಿಸ್ ನೆಲಮಂಗಲ
• ಯೋಗ ಮಯೂರಿ
• ಹವ್ಯಕ ಪಲ್ಲವ 

ಕೈ ತಪ್ಪಿದ ಅವಕಾಶ:
ಆರ್ಥಿಕ ತೊಂದರೆಯಿಂದಾಗಿ ಪಾಂಡಿಚೇರಿ, ಚೆನ್ನೈ, ಅಮೇರಿಕಾ ಮುಂತಾದ ಕಡೆ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಭಾರತದ ನಂ.1 ಯೋಗ ಪಟುವಾಗಬೇಕೆಂಬ ಕನಸು ಇದೆ ಎನ್ನುತ್ತಾಳೆ ಸಂಧ್ಯಾ. ಸಾಗರದ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದು ಅವಕಾಶ ಸಿಕ್ಕಿದರೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾಳೆ.

ಯೋಗಪಟು ಸಂಧ್ಯಾ ಎಂ.ಎಸ್‌. ಸಂಪರ್ಕ: 9591805087

(ಈ ಲೇಖನವು ಏಪ್ರಿಲ್ 23, 2020 ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)