ಕೊರೋನಾ ಎಂಬ ರಕ್ಕಸ ವೈರಸ್ ಜಗತ್ತಿನಾದ್ಯಂತ ತನ್ನ ಕಬಂಧಬಾಹುವನ್ನು ಚಾಚಿ ಎಲ್ಲರನ್ನೂ ಗೃಹಬಂಧನದಲ್ಲಿರಿಸಿದೆ. ಸರ್ಕಾರವೂ ಲಾಕ್‌ಡೌನ್ ಎಂಬ ಕಟ್ಟುನಿಟ್ಟಿನ ಕ್ರಮವನ್ನೂ ಜಾರಿಗೊಳಿಸಿದೆ. ಎಪ್ರಿಲ್-ಮೇ ತಿಂಗಳೆಂದರೆ ಎಲ್ಲೆಡೆ ಸಾಹಿತ್ಯಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುತ್ತವೆ. ಹಾಗಂತ ಲಾಕ್‌ಡೌನ್ ಕಾಲದಲ್ಲಿ ಸಾಹಿತ್ಯಿಕ ಚಟುವಟಿಕೆಗಳೇನು ನಿಂತಿಲ್ಲ. 

ಸೋಷಿಯಲ್ ಮೀಡಿಯಾಗಳ ಮೂಲಕ ತಾವಿದ್ದ ಸ್ಥಳದಿಂದಲೇ ಸಾಹಿತ್ಯಾಸಕ್ತ ಪ್ರೇಮಿಗಳು ಒಂದೆಡೆ ಸೇರುತ್ತಿದ್ದಾರೆ. `ಬುಕ್ ಬ್ರಹ್ಮ, `ಗಲಾಟೆ ಗಂಧರ್ವರು ರಂತಹ ಫೇಸ್‌ಬುಕ್ ಪೇಜ್‌ಗಳು, `ವಿವಿಡ್ಲಿಪಿ ಯಂತಹ ಮೊಬೈಲ್ ತಂತ್ರಾಂಶಗಷ್ಟೇ ಅಲ್ಲದೇ ಹಲವಾರು ಸಾಹಿತ್ಯಿಕ ಸಂಘಟನೆಗಳು ಆನ್‌ಲೈನ್ ಕಥಾವಾಚನ, ಕವಿಗೋಷ್ಠಿ, ಪ್ರಬಂಧ, ಸಣ್ಣಕಥೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹೀಗೆ ಕೊರೋನಾ ಕಾಲದಲ್ಲಿ ಹೊಸತನದೊಂದಿಗೆ ಜನತೆಯನ್ನು ತಲುಪಬೇಕೆಂಬ ಉದ್ದೇಶದಿಂದ `60 ಪುಸ್ತಕಗಳ ಪರಿಚಯ ಎಂಬ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಪುಸ್ತಕಗಳನ್ನು ಪರಿಚಯಿಸುವ ವಿಶಿಷ್ಟ ಅಭಿಯಾನವನ್ನು ಆರಂಭಿಸಿ ಗಮನ ಸೆಳೆದಿದ್ದ ಬೆಂಗಳೂರಿನ ಶಿಕ್ಷಕ ಮತ್ತು ಬರಹಗಾರ ಕಲ್ಗುಂಡಿ ನವೀನ್ ಇದೀಗ `ಪುಸ್ತಕ ಸಂಭ್ರಮ ಎಂಬ ಹೆಸರಿನೊಂದಿಗೆ ಸರಣಿ ಮುಂದುವರಿಸಿದ್ದಾರೆ. 


ಅಭಿಯಾನದ ಪರಿಕಲ್ಪನೆಯೇ ಆಕಸ್ಮಿಕ:
ವೃತ್ತಿಯಲ್ಲಿ ಶಿಕ್ಷಕರಾಗಿರುವ ನವೀನ್ ಅವರು ಮೊದಲು ಕಾರ್ಯರ್ನಿಹಿಸುತ್ತಿದ್ದ ವಿದ್ಯಾಸಂಸ್ಥೆಗೆ ಅನಿವಾರ್ಯವಾಗಿ ರಾಜಿನಾಮೆ ನೀಡಬೇಕಾಗಿ ಬಂತು. ಆದರೆ ವಿದ್ಯಾರ್ಥಿಗಳು ಮತ್ತು ಇವರ ನಡುವಿನ ಸಂಬಂಧ ವಾಟ್ಸ್ಆ್ಯಪ್‌ನಲ್ಲಿ ಮುಂದುವರಿಯಿತು. ರಾಜೀನಾಮೆ ನೀಡಿದರೂ ವಾಟ್ಸ್ಆ್ಯಪ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಹೇಳುವುದನ್ನು ಮುಂದುವರಿಸಿದರು. ಹೀಗೆ ಪಾಠ ಆರಂಭಿಸಿದ್ದ ಇವರು ಮೊದಲ ಹಂತದ ಲಾಕ್‌ಡೌನ್ ಪ್ರಾರಂಭಗೊಂಡ ಬಳಿಕ `21 ದಿನ, 21 ಪುಸ್ತಕ ಎಂಬ ಪುಸ್ತಕ ಪರಿಚಯ ಕಾರ್ಯವನ್ನು ಕೇವಲ 20 ಜನರನ್ನು ಸೇರಿಸಿ ಪ್ರಾರಂಭಿಸಿದರು. ಲಾಕ್‌ಡೌನ್ ವಿಸ್ತರಣೆಯಾಗುತ್ತಾ ಹೋದಂತೆ ಇವರ ಕಾರ್ಯವೂ ವಿಸ್ತರಣೆಯಾಗಿ `60 ಪುಸ್ತಕಗಳ ಪರಿಚಯ ಎಂಬ ಗುಂಪಿನ ಮೂಲಕ ಪುಸ್ತಕಗಳ ಕುರಿತಾದ ಜ್ಞಾನವನ್ನು ಪಸರಿಸುತ್ತಿದ್ದ ಇವರು 60 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಪುಸ್ತಕಗಳ ಪರಿಚಯ ಹೇಗೆ?
ಪ್ರತಿದಿನ ಒಂದು ನಿಗದಿತ ಪುಸ್ತಕದ ಕುರಿತು ವಿಮರ್ಶೆ ಮಾಡುವ ನವೀನ್, ಪುಸ್ತಕದ ಕುರಿತಾಗಿ 8 ನಿಮಿಷದಿಂದ ಹಿಡಿದು ಒಂದು ಗಂಟೆಯ ತನಕ ಪುಸ್ತಕದ ಕುರಿತಾಗಿ ಮಾತನಾಡಿ, ಅದನ್ನು ರೆಕಾರ್ಡ್ ಮಾಡಿ ವಾಟ್ಸ್ಆಪ್ ಗ್ರೂಪ್‌ನಲ್ಲಿ ಶೇರ್ ಮಾಡುತ್ತಾರೆ. ಅಲ್ಲದೇ ಆಸಕ್ತರಿಗೆ ಖರೀದಿಗೆ ಅನುಕೂಲವಾಗಲೆಂದು ಪುಸ್ತಕದ ಮುಖಪುಟ, ಲೇಖಕರು, ಬೆಲೆ, ಪ್ರಕಾಶಕರು ಹೀಗೆ ಪುಸ್ತಕದ ಕುರಿತಾದ ಕಿರು ಮಾಹಿತಿಯನ್ನೂ ಜೊತೆಗೆ ಲಗತ್ತಿಸುತ್ತಿದ್ದಾರೆ. 


ವಿಜ್ಞಾನದಿಂದ ಸಾಹಿತ್ಯದವರೆಗೆ...:
ವಿಜ್ಞಾನ ಶಿಕ್ಷಕರಾಗಿರುವ ನವೀನ್, ಪ್ರಾರಂಭದಲ್ಲಿ ಸಹಜವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಮಿತ್ರರಿಗೆ ಅನುಕೂಲವಾಗಲೆಂದು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮಾತ್ರ ಪರಿಚಯಿಸುತ್ತಿದ್ದರು. ದಿನಕಳೆದಂತೆ ಪುಸ್ತಕ ಪರಿಚಯದ ಕುರಿತು ಒಬ್ಬರಿಂದೊಬ್ಬರಿಗೆ ಮಾಹಿತಿ ವಿನಿಮಯವೂ ಆಯಿತು. ಪರಿಣಾಮ ವಿವಿಧ ಕ್ಷೇತ್ರದ ಸಾಹಿತ್ಯಾಸಕ್ತರು ಗ್ರೂಪ್ ಸೇರಿಕೊಂಡರು. ಹೀಗಾಗಿ ನವೀನ್ ಅವರು ಸಾಹಿತ್ಯ, ಸಂಗೀತ, ಕ್ರೀಡೆ, ವಿಮರ್ಶೆ, ಪ್ರಬಂಧ ಹೀಗೆ ಎಲ್ಲಾ ವಿಭಾಗದ ಪುಸ್ತಕ ಪರಿಚಯವನ್ನೂ ವಿಸ್ತರಿಸಿಕೊಂಡರು. 

ಧೀಮಂತ, ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ, ಲೋಕರಾಜ ಸಯಾಜಿರಾವ ಗಾಯಕವಾಡ, ಬಾಬಾ ಸಾಹೇಬ ಅಂಬೇಡ್ಕರ ಅವರ ಸುಪ್ರಸಿದ್ಧ ಭಾಷಣಗಳು, ಮಕ್ಕಳ ವಿಜ್ಞಾನ, ಪ್ರಾಚೀನ ಭಾರತವೆಂಬ ಅದ್ಭುತ, ವಿಜ್ಞಾನ ತಂತ್ರಜ್ಞಾನ ಸಂಪುಟ, ನೆಲದ ನುಡಿಯ ನಂಟು ಹೀಗೆ ಈವರೆಗೆ 60 ಪುಸ್ತಕಗಳು ಯಶಸ್ವಿಯಾಗಿ ಪರಿಚಯಗೊಂಡಿದೆ. `ಇಲ್ಲಿ ಹಳೆಯ ಪುಸ್ತಕಗಳನ್ನೂ ನಾನು ಪರಿಚಯ ಮಾಡಿದ್ದೇನೆ. ಇಂದಿನ ದಿನಗಳಲ್ಲಿ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದಾಗ ಹೊಸ ಪುಸ್ತಕಗಳು ಸುಲಭವಾಗಿ ಕಣ್ಣಿಗೆ ರಾಚುತ್ತದೆ. ಆದರೆ ಹಳೆಯ ಪುಸ್ತಕಗಳು ಸುಲಭವಾಗಿ ಕಾಣಸಿಗುವುದಿಲ್ಲ. ಹಾಗಾಗಿ ಹಳೆಯ ಪುಸ್ತಕ ಪರಿಚಯಿಸಲು ಇದೂ ಒಂದು ಕಾರಣ ಎಂಬುದು ನವೀನರ ಅಂಬೋಣ. 

ಅಂಧರಿಗೂ ಸಹಾಯಕ:
"ಆಡಿಯೋ ರೆಕಾರ್ಡ್ ಮಾಡಿ ಪುಸ್ತಕಗಳನ್ನು ಪರಿಚಯಿಸುವುದರಿಂದ ಇದು ಅಂಧರಿಗೂ ಅನುಕೂಲವಾಗಿದೆ. ಶ್ರೀನಿವಾಸ ಎನ್ನುವವರು ಅಂಧರ ಕೆಲವು ವಾಟ್ಸ್ಆಪ್ ಗ್ರೂಪ್‌ಗೆ ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಅವರಿಂದಲೂ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಇದು ಕೂಡ ನಾನು ಪುಸ್ತಕ ಪರಿಚಯ ಮಾಡಲು ಮತ್ತಷ್ಟು ಹುರುಪು ನೀಡಿದೆ" ಎನ್ನುತ್ತಾರೆ.

`ಹಿಂದಿನವರಲ್ಲಿ ಓದಲು ಸಮಯ ಮತ್ತು ಆಸಕ್ತಿ ಎರಡೂ ಕಾಣುತ್ತಿತ್ತು. ಆದರೆ ಇಂದಿನ ಪೀಳಿಗೆಗೆ ಓದಲು ಆಸಕ್ತಿ ಮತ್ತ ಸಮಯ ಯಾವುದೂ ಇಲ್ಲ. ಹೀಗಾಗಿ ಪುಸ್ತಕದ ಕುರಿತು ದೀರ್ಘವಾಗಿ ಪರಿಚಯ ಮಾಡುತ್ತಿದ್ದೇನೆ. ಇದೀಗ `60 ಪುಸ್ತಕಗಳ ಪರಿಚಯ ಉದ್ದೇಶ ಪೂರ್ಣಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ `ಪುಸ್ತಕ ಸಂಭ್ರಮ ನಿರಂತರವಾಗಿರಲಿದೆ. ಇನ್ನೂ ಹೆಚ್ಚಿನ ಪುಸ್ತಕಗಳನ್ನು ಪರಿಚಯಿಸುವ ಆಕಾಂಕ್ಷೆ ಇದೆ ಎನ್ನುತ್ತಾರೆ ನವೀನ್.

-ಎಂ.ಎಸ್.ಶೋಭಿತ್ ಮೂಡ್ಕಣಿ