ಬಂಗಾರ ಕುಸುಮ ಜಲಪಾತ - ಚಿತ್ರ: ಕಲಾನಿಧಿ ಪ್ರದೀಪ್ 
ಎಂ.ಎಸ್.ಶೋಭಿತ್, ಮೂಡ್ಕಣಿ
ಪ್ರಾಕೃತಿಕ ಸಂಪನ್ಮೂಲ, ಉದ್ಯಮ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಉತ್ತರಕನ್ನಡ ಪ್ರವಾಸೋದ್ಯಮಕ್ಕೂ ಹೆಸರಾಗಿದೆ. ತನ್ನೊಡಲಲ್ಲಿ ಹಲವಾರು ಜಲಪಾತಗಳನ್ನು ಪೋಷಿಸುತ್ತಾ ‘ಜಲಪಾತಗಳ ತವರೂರು' ಎಂಬ ಅಭಿದಾನವನ್ನು ಪಡೆದ ಹೆಗ್ಗಳಿಕೆ ಉತ್ತರಕನ್ನಡ ಜಿಲ್ಲೆಯದ್ದು. 

ಜಿಲ್ಲೆಯಲ್ಲಿ ಹಲವಾರು ಜಲಪಾತಗಳು ಈಗಾಗಲೇ ಪ್ರವಾಸಿಗರನ್ನು ಆಕರ್ಷಿಸಿವೆ. ಆದರೆ ಕೆಲವು ಜಲಪಾತಗಳು ಇಂದಿಗೂ ಕಾನನದ ಕುಸುಮವಾಗಿಯೇ ಉಳಿದಿವೆ. ಹೀಗೆ ಹೊರಜಗತ್ತಿಗೆ ಅಷ್ಟೊಂದು ತೆರೆದುಕೊಳ್ಳದ ಜಲಪಾತಗಳಲ್ಲೊಂದು ಗೇರಸೊಪ್ಪಾದ ‘ಬಂಗಾರ ಕುಸುಮ' ಜಲಪಾತ.

ಬಂಗಾರ ಕುಸುಮ ಜಲಪಾತ- ಚಿತ್ರ: ಇತಿಹಾಸ್ ಚಿತ್ರದುರ್ಗ
ಎಲ್ಲಿದೆ ಈ ಜಲಪಾತ?:
ತಾಲೂಕು ಕೇಂದ್ರ ಹೊನ್ನಾವರದಿಂದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸುಮಾರು 40 ಕಿಮೀ ದೂರ ಸಾಗುತ್ತಾ, ಮಲೆಮನೆ ಘಟ್ಟ ಏರುತ್ತಿದ್ದಂತೆ ಆಕಾಶದೆತ್ತರದ ಪಶ್ಚಿಮಘಟ್ಟದ ದಟ್ಟಕಾನನವನ್ನು ಸೀಳಿಕೊಂಡು ಹಾಲ್ನೊರೆಯಂತೆ ಧುಮಕುತ್ತಿರುವ ಈ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರು ಸ್ಥಳೀಯ ಜಲಪಾತಗಳಿಗೆ ‘ಕೆಪ್ಪಜೋಗ' ಎಂದು ಕರೆಯುವುದು ವಾಡಿಕೆ. ಹೀಗೆ 'ಕೆಪ್ಪಜೋಗ' ಎಂಬ ಈ ಜಲಪಾತವನ್ನು 'ಬಂಗಾರ ಕುಸುಮ'ವನ್ನಾಗಿಸಿದ್ದು ಚಾರಣಕ್ಕೆ ಬಂದಿದ್ದ ವಿದ್ಯಾರ್ಥಿಗಳು! ಕೆಲ ವರ್ಷಗಳ ಹಿಂದೆ ಚಾರಣಕ್ಕೆ ತೆರಳಿದ್ದ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿಗಳು, ಈ ಭಾಗದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಹೋರಾಟ ನಡೆಸಿದ್ದ ಪರಿಸರ ಹೋರಾಟಗಾರ್ತಿ ದಿ. ಡಾ.ಕುಸುಮಾ ಸೊರಬ ಅವರ ನೆನಪಿಗೆ ಮತ್ತು ಧಾರ್ಮಿಕ ಕ್ಷೇತ್ರ ಬಂಗಾರಮಕ್ಕಿ ಸಮೀಪ ಇರುವುದರಿಂದ 'ಕೆಪ್ಪಜೋಗ' ಎಂಬ ಹೆಸರನ್ನು 'ಬಂಗಾರ ಕುಸುಮ' ಎಂದು ನಾಮಕರಣ ಮಾಡಿ, ಹೆದ್ದಾರಿಯ ಪಕ್ಕದಲ್ಲಿ ನಾಮಫಲಕವನ್ನೂ ಅಳವಡಿಸಿದರು. ಇದರಿಂದಾಗಿ ಈ ಜಲಪಾತ ಇತ್ತೀಚೆಗೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತಿದೆ.

ಟ್ರಕ್ಕಿಂಗ್‌ಗೆ ಯೋಗ್ಯ ಸ್ಥಳ:

ದಟ್ಟಕಾನನದ ಮಧ್ಯೆ ಇರುವ ಈ ಜಲಪಾತ, ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಭೇಟಿ ನೀಡಿದಾಗ ಆಗುವ ಅನುಭವವೇ ಬೇರೆ. ಆದರೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿಗೆ ಪ್ರಯಾಣಿಸಲು ಸರಿಯಾದ ವ್ಯವಸ್ಥೆಯೂ ಇಲ್ಲ. ಹೀಗಾಗಿ ಈ ಜಲಪಾತ ಪ್ರವಾಸಿಗರಿಗೆ ಗಗನ ಕುಸುಮದಂತಾಗಿದೆ. ಪ್ರವಾಸೋದ್ಯಮ ಇಲಾಖೆ ಈ ಜಲಪಾತದಕುರಿತು ಗಮನ ಹರಿಸಿದ್ದೇ ಆದಲ್ಲಿ, ಜಲಪಾತ ಇನ್ನಷ್ಟು ಪ್ರಸಿದ್ಧಿ ಪಡೆಯುವಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಪ್ರವಾಸಿಗರು.

ಚಿತ್ರ: ಕಲಾನಿಧಿ ಪ್ರದೀಪ್ 

ಮುಂಜಾಗೃತೆಯೂ ಅಗತ್ಯ:

ಕಾಡಿನ ಮಧ್ಯೆ ಇರುವ ಈ ಜಲಪಾತಕ್ಕೆ ಭೇಟಿ ನೀಡುವ ಪೂರ್ವದಲ್ಲಿ ಮುಂಜಾಗೃತೆಯೂ ಅಗತ್ಯ. ಕಾಡಿನಲ್ಲಿರುವುದರಿಂದ ಸಹಜವಾಗಿ ರಕ್ತಹೀರುವ ಉಂಬಳದಂತಹ ಹುಳ ಹಪ್ಪಡೆಗಳು ಇವೆ. ಹೀಗಾಗಿ ಜಾಗೃತೆ ವಹಿಸುವುದು ಒಳಿತು. ಅಷ್ಟೇ ಅಲ್ಲದೇ, ಜಲಪಾತದ ಸುತ್ತಮುತ್ತ, ಹೆದ್ದಾರಿಯ ಅಂಚಿನಲ್ಲಿ ಅಂಗಡಿಯ ಸೌಲಭ್ಯವೂ ಇಲ್ಲದಿರುವುದರಿಂದ ಪ್ರವಾಸಿಗರು ತಾವೇ ಸ್ವತಃ ಕುಡಿಯುವ ನೀರು, ಊಟ ತಿಂಡಿಗಳನ್ನು ಒಯ್ಯುವುದು ಒಳಿತು.

ಇನ್ನೂ ಹಲವಾರು ಆಕರ್ಷಣೆಗಳು:

ಗೇರಸೊಪ್ಪಾದಲ್ಲಿ ಕೇವಲ 'ಬಂಗಾರ ಕುಸುಮ' ಜಲಪಾತ ಮಾತ್ರವಲ್ಲದೇ, ಒಮ್ಮೆ ನೋಡಲೇಬೇಕಾದ ಮತ್ತೂ ಕೆಲವು ತಾಣಗಳಿವೆ. ಜಲಪಾತದಿಂದ 9 ಕಿಮೀ ದೂರದಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಂಗಾರಮಕ್ಕಿ ಇದೆ. ಅರಣ್ಯ ಇಲಾಖೆ ನಿರ್ಮಿಸಿರುವ ಸಿಂಗಳೀಕ ಇಕೋ ಪಾರ್ಕ್, ಗೇರಸೊಪ್ಪಾ ವಿದ್ಯುತ್ ಉತ್ಪಾದನಾ ಕೇಂದ್ರ, ಕಾಳುಮೆಣಸಿನ ರಾಣಿಚೆನ್ನಭೈರಾದೇವಿ ಕಟ್ಟಿಸಿದ ಚತುರ್ಮುಖ ಜೈನ ಬಸದಿಯನ್ನೂ ವೀಕ್ಷಿಸಬಹುದು. ಮಲೆಮನೆ ಘಟ್ಟದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ವೀಕ್ಷಣಾ ಗೋಪುರದ ಮೂಲಕ ಶರಾವತಿ ಕಣಿವೆಯ ಸೊಬಗನ್ನು ಸವಿಯಬಹುದು. ವಿಶ್ವವಿಖ್ಯಾತ ಜೋಗ ಜಲಪಾತದಿಂದ ಸುಮಾರು 32 ಕಿಮೀ ದೂರದಲ್ಲಿರುವ ಈ ಜಲಪಾತ ನಿಜಕ್ಕೂ ಕಾಡೊಳಗಿನ 'ಜಲಸುಂದರಿ'! ಹಾಗಾದರೆ ಇನ್ನೇಕೆ ತಡ? ನೀವೂ ಒಮ್ಮೆ ಬಂಗಾರ ಕುಸುಮದ ಸೊಬಗನ್ನು ಸವಿಯಲು ಸಜ್ಜಾಗಿ!

ಚಿತ್ರಗಳು: ಇತಿಹಾಸ್ ಚಿತ್ರದುರ್ಗ, ಕಲಾನಿಧಿ ಪ್ರದೀಪ್

(20 ಡಿಸೆಂಬರ್, 2020 ರ ವಿಕ್ರಮ ರಾಷ್ಟ್ರೀಯ ವಾರಪತ್ರಿಕೆಯಲ್ಲಿ ಪ್ರಕಟಿತ ಲೇಖನ.)