ಹತ್ತು ತಿಂಗಳ ವನವಾಸ ಮುಗಿಸಿ, ಇನ್ನು ಮುಂದೆ ಪ್ರತಿದಿನವೂ `ಅವಳನ್ನು, ಅವಳ ಚೆಲುವನ್ನು ಕಣ್ತುಂಬಾ ನೋಡಬಹುದು' ಎಂಬ ಸಂಭ್ರಮದಿಂದ ಕಾಲೇಜಿಗೆ ನಡೆದುಬಂದ ಹುಡುಗರು ಅಂದದ ಮೊಗವ ಕಾಣದೆ ಕಂಗಾಲಾಗಿದ್ದಾರೆ. ಕೆಲವು ತುಂಟರು- ಸ್ಟೂಡೆಂಟ್ ಆಗುವ ಬದಲು ನಾವು ಸುಂದರಿಯರು ಹಾಕುವ ಮಾಸ್ಕ್ ಆಗಬಾರದಿತ್ತೇ ಎಂದು ಕನವರಿಸುತ್ತಿದ್ದಾರೆ. ಉಳಿದವರು- ಯಾರಿಗೇಳೋಣಾ ನಮ್ ಪ್ರಾಬ್ಲಮ್ಮು ಎನ್ನುತ್ತಾ ಪೇಚಾಡುತ್ತಿದ್ದಾರೆ.
-ಎಂ.ಎಸ್.ಶೋಭಿತ್, ಮೂಡ್ಕಣಿ
ತಿಂಗಳುಗಟ್ಟಲೇ ಮನೆಯಲ್ಲೇ ಇದ್ದ ವಿದ್ಯಾರ್ಥಿಗಳು ಇದೀಗ ಲವಲವಿಕೆಯಿಂದ ಮತ್ತೆ ಕಾಲೇಜುಗಳ ಕಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದ್ದಾರೆ. ಯುನಿಫಾರ್ಮ್ ಜೊತೆಗೆ ಈಗ ಮಾಸ್ಕ್ ಕೂಡ ಸೇರಿಕೊಂಡಿದೆ. ಹೀಗೆ ಕಾಲೇಜು ಪ್ರಾರಂಭಗೊಂಡ ಮೊದಲ ದಿನ ಕ್ಯಾಂಪಸ್‌ನಲ್ಲಿ ಮಾಸ್ಕ್ ಹಾಕಿ ನಿಂತಿದ್ದೆ. ಆಗಲೇ ಮಾಸ್ಕ್ ಹಾಕಿದ್ದ ಹುಡುಗಿಯೊಬ್ಬಳು ಬಳಿ ಬಂದು `ಹಾಯ್ ಬ್ರೋ, ಮಾಸ್ಕ್ ಸಖತ್ ಇದೆ’ ಎಂದಳು! `ಥ್ಯಾಂಕ್ಸ್’ ಎಂದು ಹೇಳಿದೆನಾದರೂ, ಆನಂತರ ಈಕೆ ಯಾರೆಂಬ ಪ್ರಶ್ನೆ ನನ್ನನ್ನು ಇರಿಯತೊಡಗಿತು. ಆಮೇಲೆ ಕ್ಲಾಸಿನಲ್ಲಿ ಅಟೆಂಡೆನ್ಸ್ ಹಾಕುವಾಗ ಗೊತ್ತಾಯಿತು; ಇವಳು ನಮ್ಮ ಕ್ಲಾಸಿನ ಹುಡುಗಿ ಎಂದು. ಆದರೆ ಮಾಸ್ಕ್ ಹಾಕಿಕೊಂಡಿದ್ದ ನನ್ನನ್ನು ಅವಳು ಹೇಗೆ ಸರಿಯಾಗಿ ಗುರುತಿಸಿದಳೋ ನಾನರಿಯೇ!
ಅದೆಲ್ಲಾ ಇರಲಿ. ಈಗೊಮ್ಮೆ ಈ ಮಾಸ್ಕ್ ಎಂಬ ಕೊರೊನಾ ರಕ್ಷಕ ಅಸ್ತ್ರದಿಂದ ಕಾಲೇಜು ಹುಡುಗರು ಅನುಭವಿಸುತ್ತಿರುವ ಕಷ್ಟಸುಖಗಳ ಕುರಿತು ಮಾತನಾಡೋಣ!
ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ ಎಂಬ ಸರ್ಕಾರದ ನಿಯಮ ಇದೆ. ಆದರೆ ಈ ಮಾಸ್ಕ್ ಕಾಲೇಜಿನಲ್ಲಿ ಉಂಟುಮಾಡುವ ಅವಾಂತರ ಒಂದೆರಡಲ್ಲ. ಚೆಲುವೆಯರನ್ನು ನೋಡಿ ಕಣ್ಣು ತಂಪು ಮಾಡಿಕೊಳ್ಳುವ, ಅವರ ಚೆಲುವನ್ನು ಯಾರೋ ಚಿತ್ರತಾರೆಗೆ ಹೋಲಿಸಿ ಸಂಭ್ರಮಿಸುವ ಪಡ್ಡೆಗಳಿಗೆ ಕಾಲೇಜಿನಲ್ಲಿ ಕೊರತೆಯಿಲ್ಲ. ಈ ಮನ್ಮಥರಾಯರು ಮೊದಲಿನಿಂದಲೂ- `ಚೆಲುವೆಯೇ ನಿನ್ನ ನೋಡಲೂ.....' ಎಂದು ಹಾಡಿಕೊಂಡೇ ಕಾಲೇಜಿಗೆ ಬರುತ್ತಿದ್ದವರು. ಅಂಥವರು ಈಗ ಏನು ಮಾಡಲೂ ತೋಚದೆ ಚಡಪಡಿಸುತ್ತಿದ್ದಾರೆ. ಕಾರಣ, ಚೆಲುವೆಯರ ಅಂದವನ್ನು ಮಾಸ್ಕ್ ಮರೆಮಾಡಿದೆ. ಕಾಲೇಜ್ ರೋಮಿಯೋಗಳು ಈಗ ಈ ಕಷ್ಟದ ಬಗ್ಗೆ ಹೇಳಲಾಗದೇ ಚಡಪಡಿಸುತ್ತಿದ್ದಾರೆ.
ಅವರ ಬಿಟ್ಟು ಇವರು......
ಮಾಸ್ಕ್ ಹಾಕಿಕೊಂಡು ಕ್ಲಾಸಿನಲ್ಲಿ ಮಾತನಾಡುತ್ತಾ, ಲೆಕ್ಷರರ್‌ಗಳಿಗೆ ಆಗಾಗ ತೊಂದರೆ ನೀಡುತ್ತಾ ಇಡೀ ತರಗತಿಯನ್ನು ಹಾಳು ಮಾಡುವ ಕಿಲಾಡಿಗಳಿಗೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಲೆಕ್ಚರರ್‌ಗಳೂ ಪೇಚೆಗೆ ಸಿಲುಕಿದ ಘಟನೆಗಳೂ ನಡೆದಿವೆ. ನಮ್ಮ ಕ್ಲಾಸಿನಲ್ಲೇ ಲಾಸ್ಟ್ ಬೇಂಚಿನ ವಿದ್ಯಾರ್ಥಿ ಮಾಡಿದ ತಪ್ಪಿಗಾಗಿ ಬೇರೊಬ್ಬ ವಿದ್ಯಾರ್ಥಿ ಲೆಕ್ಚರರ್ ಕೆಂಗಣ್ಣಿಗೆ ಗುರಿಯಾಗಿದ್ದ. ಈ ಅವಾಂತರಕ್ಕೆ ಕಾರಣ ಆ ಇಬ್ಬರೂ ವಿದ್ಯಾರ್ಥಿಗಳು ಧರಿಸಿದ್ದ ಒಂದೇ ಬಣ್ಣದ ಮಾಸ್ಕ್.....!
ದೂರದ ಊರುಗಳಿಂದ ಬಸ್ ಮೂಲಕ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಪಾಡು ಹೇಳತೀರದು. ಮಾಸ್ಕ್ ಹಾಕಿ ಎಂದು ಬೈಯ್ಯುವ ಕಂಡಕ್ಟರ್‌ಗಳು ( ಅವರು ಮಾಸ್ಕ್ ಹಾಕಿಕೊಳ್ಳದೇ ಇರುವುದು ಬೇರೆ ವಿಷಯ.) ಆಗಾಗ ಮಾಸ್ಕ್ ಇಲ್ಲದೇ ಸೀನುವ ಇತರ ಪ್ರಯಾಣಿಕರು, ಕಿಟಕಿಯ ಪಕ್ಕ ಕುಳಿತು ಕವಳವನ್ನು ಅಗಿಯುತ್ತಾ ಪಿಚಕಾರಿ ಹಾರಿಸುವ ಮುದುಕರು.... ಹೀಗೆ ಹಲವು ವಿಧಧ ಜನರನ್ನು ಕಾಣುವ ವಿದ್ಯಾರ್ಥಿಗಳು, ಇದನ್ನೆಲ್ಲಾ ಜಯಿಸಿ ಕ್ಯಾಂಪಸ್‌ಗೆ ಬರುವುದರೊಳಗೆ ಹೈರಾಣಾಗಿರುತ್ತಾರೆ.
ಬೆಕ್ಕಿಗೆ ಗಂಟೆ ಕಟ್ಟೋರು ಯಾರು?
ಕೆಲವರಿಗೆ ಆಗಾಗ ಮಾಸ್ಕ್ ಗಳನ್ನು ಕೆಳಗಿಳಿಸುವ ಚಟ. ಮೂಗು ಬಾಯಿಯಿಂದ ಮಾಸ್ಕನ್ನು ಜಾರಿಸಿ, ಗಂಟಲಿಗೆ ಜೋತು ಹಾಕಿಕೊಳ್ಳುವ ಮಹಾನುಭಾವರೂ ನಮ್ಮಲ್ಲಿದ್ದಾರೆ. ಇದು ಕ್ಯಾಂಪಸ್‌ನಲ್ಲಿ ನಿತ್ಯವೂ ಕಾಣಸಿಗುವ ದೃಶ್ಯ. ಅನಿವಾರ್ಯ ಸಂದರ್ಭಗಳಲ್ಲಿ ( ಏನಾದರೂ ಕುಡಿಯಲು ಅಥವಾ ತಿನ್ನಲು) ಮಾಸ್ಕ್ ತೆಗೆಯಬೇಕಾದಲ್ಲಿ ಮುಖದಿಂದ ಸಂಪೂರ್ಣವಾಗಿ ತೆಯಬೇಕೇ ಹೊರತು ಗಂಟಲಿಗೆ ಜೋತು ಹಾಕಿಕೊಳ್ಳಬಾರದು. ಹಾಗೆ ಮಾಡುವುದರಿಂದ ಗಂಟಲು ಭಾಗದಲ್ಲಿನ ಧೂಳು ಬೆವರು ಎಲ್ಲವೂ ಮಾಸ್ಕಿಗೆ ಅಂಟಿಕೊಳ್ಳುತ್ತದೆ. ಇದರಿಂದ ನಂತರ ಸರಿಯಾಗಿ ಮಾಸ್ಕ್ ಧರಿಸಿದಾಗ ಅವು ನಮ್ಮ ದೇಹದೊಳಗೆ ಸೇರುತ್ತವೆ ಎನ್ನುತ್ತಾರೆ ತಜ್ಞರು. ಆದರೆ ಕ್ಯಾಂಪಸ್‌ನಲ್ಲಿ ಇಂತವರ ಮುಖಕ್ಕೆ ಮಾಸ್ಕ್ ಕಟ್ಟುವವರು ಯಾರು?
ಯಾರಿಗೇಳೋಣಾ ನಮ್ ಪ್ರಾಬ್ಲಮ್ಮು:
ದಿನದಿಂದ ದಿನಕ್ಕೆ ವಿದ್ಯಾರ್ಥಿಗಳಲ್ಲಿ ಜೊತೆಗೆ ಪಾಲಕರಲ್ಲಿ ಆತಂಕ ಕಡಿಮೆಯಾಗುತ್ತಿದ್ದು, ಕಾಲೇಜಿನಲ್ಲಿ ಮಾಸ್ಕ್ ಮರೆಯಲ್ಲೇ `ಪ್ರೆಸೆಂಟ್ ಸರ್’, `ಎಸ್ ಮಿಸ್’ ಎಂಬ ಧ್ವನಿಗಳು ಕೇಳುತ್ತಿರುವುದು ಸದ್ಯದ ಖುಷಿಯ ಸಂಗತಿ. ಕೊರೊನಾ ಕಾಲದಿಂದೀಚೆಗೆ ಮಾಸ್ಕ್ ಗಳು ಎಲ್ಲರ ಅನಿವಾರ್ಯ ಮುಖಾಲಂಕಾರವಾಗಿದೆ. ಆದರೆ ಈ ಮಾಸ್ಕ್ ಹಲವರ ಮುಖವನ್ನೇ ಮರೆಮಾಚಿದೆ. ಕಾಲೇಜಿನ ಚೆಲುವೆಯರ ಮುದ್ದು ಮುಖದ ಅಂದವನ್ನು ಕದ್ದಿದೆ. ಪರಿಚಿತರನ್ನೂ ಅಪರಿಚಿತರಂತೆ ನಡೆದುಹೋಗುವಂತೆ ಮಾಡಿದೆ. ಸುಮಾರು ಹತ್ತು ತಿಂಗಳ ವನವಾಸ ಮುಗಿಸಿ, ಇನ್ನು ಮುಂದೆ ಪ್ರತಿದಿನವೂ `ಅವಳನ್ನು, ಅವಳ ಚೆಲುವನ್ನು ಕಣ್ತುಂಬಾ ನೋಡಬಹುದು' ಎಂಬ ಸಂಭ್ರಮದಿಂದ ಕಾಲೇಜಿಗೆ ನಡೆದುಬಂದ ಹುಡುಗರು ಅಂದದ ಮೊಗವ ಕಾಣದೆ ಕಂಗಾಲಾಗಿದ್ದಾರೆ. ಕೆಲವು ತುಂಟರು- ಸ್ಟೂಡೆಂಟ್ ಆಗುವ ಬದಲು ನಾವು ಸುಂದರಿಯರು ಹಾಕುವ ಮಾಸ್ಕ್ ಆಗಬಾರದಿತ್ತೇ ಎಂದು ಕನವರಿಸುತ್ತಿದ್ದಾರೆ. ಉಳಿದವರು- ಯಾರಿಗೇಳೋಣಾ ನಮ್ ಪ್ರಾಬ್ಲಮ್ಮು ಎನ್ನುತ್ತಾ ಪೇಚಾಡುತ್ತಿದ್ದಾರೆ. ಇದನ್ನೆಲ್ಲಾ ಕಂಡೂ ಕಾಣದಂತಿರುವ ಚೆಲುವೆಯರು ಕಾಲೇಜಿನ ತುಂಬಾ ಆರಾಮಾಗಿ ಸುತ್ತಾಡುತ್ತಿದ್ದಾರೆ; ಚಿಟ್ಟೆಗಳಂತೆ!
( 09/02/2020 ರ ಉದಯವಾಣಿ `ಜೋಶ್' ಪುರವಣಿಯಲ್ಲಿ ಪ್ರಕಟಿತ ಲೇಖನ.)