-ಎಂ.ಎಸ್.ಶೋಭಿತ್, ಮೂಡ್ಕಣಿ
ಓದಿದ್ದು ಬಿ.ಕಾಂ. ಆದರೆ, ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಆರಿಸಿಕೊಂಡಿದ್ದು ಕೃಷಿಯನ್ನು. ಅರ್ಧ ಎಕರೆ ತೋಟದಲ್ಲಿ ಆಗುತ್ತಿರುವ ಕೃಷಿಯನ್ನು ನಂಬಿ ಕೊಂಡರೆ ಜೀವನ ನಿರ್ವಹಣೆ ಕಷ್ಟವೆಂದು ಅರಿವಾದಾಗ, ಜೇನು ಕೃಷಿಯನ್ನು ಆರಂಭಿಸಿ ಯಶಸ್ವಿಯಾದ ಯುವಕನೊಬ್ಬನ ಯಶೋಗಾಥೆ ಇದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಕ್ಲಮನೆ ಗ್ರಾಮದ ಸಂತೋಷ ಹೆಗಡೆ, ತೋಟಗಾರಿಕಾ ಬೆಳೆಯ ಜೊತೆಗೆ ಜೇನುಸಾಕಣೆ ಪ್ರಾರಂಭಿಸಿ ಯಶಸ್ವಿಯಾಗುವ ಮೂಲಕ ಯುವ ಕೃಷಿಕರಿಗೆ ಮಾದರಿ ಆಗಿದ್ದಾರೆ.
ಜೇನು ಕೃಷಿಯಲ್ಲಿ ಪರಿಣಿತಿ ಹೊಂದಿರುವ ಶಿರಸಿಯ ಓಣಿಕೇರಿಯ ಗುರುಮೂರ್ತಿ ಹೆಗಡೆ ಅವರಿಂದ ಮಾಹಿತಿ ಪಡೆದು, ಅವರಿಂದಲೇ ಒಂದು ಪೆಟ್ಟಿಗೆಯನ್ನು ತಂದು ಹವ್ಯಾಸಕ್ಕಾಗಿ ಜೇನು ಸಾಕಣೆ ಆರಂಭಿಸಿದ ಸಂತೋಷ ಹೆಗಡೆ, ಬಳಿಕ ಹಂತ-ಹಂತವಾಗಿ ಪೆಟ್ಟಿಗೆಯನ್ನು ಹೆಚ್ಚಿಸುತ್ತಾ ಇದೀಗ ಸುಮಾರು 40 ಪೆಟ್ಟಿಗೆಯಲ್ಲಿ ಜೇನು ಸಾಕಣೆ ನಡೆಸುತ್ತಿದ್ದಾರೆ. ವಾರಕ್ಕೊಮ್ಮೆ ಪ್ರತಿಯೊಂದು ಪೆಟ್ಟಿಗೆಯಿಂದ ಸರಾಸರಿ ಒಂದರಿಂದ ಒಂದೂವರೆ ಕೆ. ಜಿ ತುಪ್ಪ ದೊರಕುತ್ತಿದೆ.
ಖರ್ಚು, ನಿರ್ವಹಣೆ ಸುಲಭ: ಜೇನು ಸಾಕಣೆಗೆ ಒಮ್ಮೆ ಖರ್ಚು ಮಾಡಿದರೆ ಸಾಕಾಗುತ್ತದೆ. ನಂತರ ಸಣ್ಣಪುಟ್ಟ ಖರ್ಚನ್ನು ಹೊರತುಪಡಿಸಿದರೆ ಹೆಚ್ಚಿನ ಹಣ ವ್ಯಯಿಸುವ ಪ್ರಮೇಯ ಇರುವುದಿಲ್ಲ. ಚಿಗಳಿ ಇರುವೆಯಂತಹ ಕೆಲವು ಸಣ್ಣ ಸಣ್ಣ ಹುಳುಗಳ ಹಾವಳಿ ಬಿಟ್ಟರೆ ಬೇರೆ ಸಮಸ್ಯೆಗಳು ಎದುರಾಗುವುದು ಕಡಿಮೆ. ಜೇನುತುಪ್ಪದ ಜೊತೆಗೆ ಪೆಟ್ಟಿಗೆ, ಜೇನು ಮೇಣವನ್ನೂಮಾರಾಟ ಮಾಡುತ್ತೇನೆ. ಹಿಂದಿನ ವರ್ಷದಲ್ಲಿಸುಮಾರು 50 ಸಾವಿರ ಆದಾಯ ಬಂದಿದೆ. ಪ್ರಸಕ್ತ ವರ್ಷದಲ್ಲಿ 1-1.5 ಲಕ್ಷ ರೂ.ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ಸಂತೋಷ ಹೆಗಡೆ.
ಕುರಿ ಸಾಕಣೆ: ಜೇನಿನ ಜೊತೆಗೆ ಎರಡು ಎಮ್ಮೆ, ನಾಲ್ಕು ಕುರಿಯನ್ನೂ ಸಾಕುತ್ತಿದ್ದಾರೆ. ವಾರಕ್ಕೆ 4-5 ಬುಟ್ಟಿ ಕುರಿಗೊಬ್ಬರ ಕುರಿ ಸಾಕಣೆಯಿಂದ ಲಭ್ಯವಾಗುತ್ತಿದ್ದು,ಇದನ್ನ ತೋಟಗಾರಿಕಾ ಬೆಳೆಗಳಿಗೆ ಬಳಸುತ್ತಿದ್ದಾರೆ. ಹವ್ಯಾಸಕ್ಕಾಗಿ ಆರಂಭಿಸಿದ ಕುರಿ ಸಾಕಣೆಯನ್ನು ಇದರ ಉಪಯುಕ್ತತೆಯಿಂದಾಗಿ ಮುಂದೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಆಲೋಚನೆ ಕೂಡಾ ಇವರಿಗಿದೆ.
ಎರಡು ಎಕರೆ ವಿಸ್ತಾರವಾದ ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದು, ಮೂರೇ ವರ್ಷಕ್ಕೆ ಫಲ ಕೊಡಲು ಆರಂಭಿಸಿದೆ. ಜೊತೆಗೆ ತೋಟದಲ್ಲಿ ಅಲ್ಲಲ್ಲಿ ಬಾಳೆ, ಉಪ್ಪಗೆ ಕಾಯಿ, ಗೇರು, ಸೀತಾಫಲ… ಹೀಗೆ ವಿವಿಧ ಹಣ್ಣುಗಳ ಗಿಡಗಳನ್ನು ಬೆಳೆಸಿದ್ದಾರೆ. ವಿಶೇಷವೆಂದರೆ ಯಾವುದೇ ಸಾಲ, ಸಬ್ಸಿಡಿಸೌಲಭ್ಯಗಳನ್ನು ಪಡೆಯದೇಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ ಸಂತೋಷ ಹೆಗಡೆ.
ಹೊರ ರಾಜ್ಯಗಳಿಂದಲೂ ಬೇಡಿಕೆ: ಇಲ್ಲಿನ ಜೇನುತುಪ್ಪಕ್ಕೆ ರಾಜ್ಯ ಮಾತ್ರವಲ್ಲದೆಬೇರೆ ರಾಜ್ಯಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಕೇರಳ, ಗುಜರಾತ್, ಆಂಧ್ರಪ್ರದೇಶ,ತಮಿಳುನಾಡು, ಬೆಂಗಳೂರು ಮುಂತಾದ ಕಡೆ ಬೇಡಿಕೆಗೆ ಅನುಗುಣವಾಗಿ ರಫ್ತು ಮಾಡುತ್ತಿದ್ದಾರೆ. ಕೆಲವು ಗ್ರಾಹಕರು ಇವರಲ್ಲಿಯೇ ಆಗಮಿಸಿ ಜೇನುತುಪ್ಪ ಖರೀದಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ಸಂತೋಷ ಹೆಗಡೆ ಅವರನ್ನು (9731778127) ಸಂಪರ್ಕಿಸಬಹುದು.
ಹೊಸದಾಗಿ ಜೇನು ಸಾಕಣೆ ಮಾಡಲು ಬಯಸುವವರು ಪ್ರಾರಂಭದಲ್ಲಿ 1-2 ಪೆಟ್ಟಿಗೆಯಿಂದ ಆರಂಭಿಸುವುದು ಸೂಕ್ತ. ಬಳಿಕ ಹಂತಹಂತವಾಗಿ ಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬಹುದು. ಯಾವುದೇಕೃಷಿ ಇರಲಿ, ಆಸಕ್ತಿ, ಖುಷಿ ಹಾಗೂ ಪರಿಶ್ರಮ ಮುಖ್ಯ. ಆಗ ಯಶಸ್ಸು ಸಾಧಿಸಬಹುದು.
●ಸಂತೋಷ ಹೆಗಡೆ, ಯುವ ಜೇನುಕೃಷಿಕ