ಮುಂಡಗೋಡ ತಾಲೂಕಿನ ಸಾಲಂಗಾವ ಪುಷ್ಪಾವತಿ, ರೊಟ್ಟಿ ಉದ್ಯಮವನ್ನು ಪ್ರಾರಂಭಿಸಿ, ಹಲವು ಮಹಿಳೆಯರಿಗೆ ಉದ್ಯೋಗವನ್ನೂ ಕಲ್ಪಿಸಿ ಮಾದರಿಯಾಗಿದ್ದಾರೆ. -ಎಂ.ಎಸ್.ಶೋಭಿತ್, ಮೂಡ್ಕಣಿ

ಆಕೆಯ ಹೆಸರು ಪುಷ್ಪಾವತಿ. ಸರ್ಕಾರಿ ನೌಕರಿ ಮಾಡಬೇಕೆಂಬ ಅದಮ್ಯ ಬಯಕೆ ಅವರಿಗಿತ್ತು. ಅದಕ್ಕಾಗಿ ಹಲವು ಪ್ರಯತ್ನಗಳನ್ನೂ ನಡೆಸಿದರು. ಕೊನೆಗೂ ಅದು ಕೈಗೂಡದಿದ್ದಾಗ ಸ್ವಂತ ಉದ್ದಿಮೆ ಆರಂಭಿಸಿ, ಯಶಸ್ವಿಯಾದರು! ಪುಷ್ಪಾವತಿಯವರ ಈ ಸಾಹಸ ಎಲ್ಲಾ ಮಹಿಳೆಯರಿಗೂ ಮಾದರಿ ಆಗುವಂಥದ್ದು. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಾಲಗಾಂದ ಪುಷ್ಪಾವತಿ ಮೋಹನ್ ಗುಲ್ಯಾನವರ ರೊಟ್ಟಿ ಉದ್ಯಮವನ್ನು ಪ್ರಾರಂಭಿಸಿ, ಹಲವು ಮಹಿಳೆಯರಿಗೆ ಉದ್ಯೋಗವನ್ನೂ ಕಲ್ಪಿಸಿ ಮಾದರಿಯಾಗಿದ್ದಾರೆ. 

ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸಿದ ಈಕೆ, ಅದು ಸಿಗದಿದ್ದಾಗ ಕಂಗಾಲಾಗದೇ, ರೊಟ್ಟಿ ತಯಾರಿಕೆಗೆ ತೊಡಗಿದರು. ಪ್ರಾರಂಭದಲ್ಲಿ ಮನೆಯಲ್ಲಿಯೇ ಚಿಕ್ಕ ಮಟ್ಟದಲ್ಲಿ ರೊಟ್ಟಿ ತಯಾರಿಸಿ, ಸಮೀಪದ ಮನೆಗಳಿಗೆ ಮಾರಾಟ ಮಾಡತೊಡಗಿದರು. ಕ್ರಮೇಣ ಮತ್ತಷ್ಟು ಬೇಡಿಕೆ ಬರತೊಡಗಿತು. ಹೆಚ್ಚಿನ ದುಡ್ಡು, ಕೆಲಸಗಾರರ ಅಗತ್ಯ ತಲೆದೋರಿತು.

ನೆರವಿಗೆ ಬಂದ ಸೆಲ್ಕೋ:

ಇದೇ ಸಮಯಕ್ಕೆ ಸಾಲಗಾಂವ ಭಾಗದಲ್ಲಿ ಸೋಲಾರ್ ಕುರಿತು ಮಾಹಿತಿ ನೀಡಲು ಸೆಲ್ಕೋ ಸಂಸ್ಥೆಯವರು ಆಗಮಿಸಿದರು. ಆ ಸಂದರ್ಭದಲ್ಲಿ ಸೋಲಾರ್ ಯಂತ್ರಗಳ ಬಗ್ಗೆ ತಿಳಿದುಕೊಂಡ ಪುಷ್ಪಾವತಿ, ಸೌರಶಕ್ತಿ ಬಳಸಿಕೊಂಡು ರೊಟ್ಟಿ ತಯಾರಿಸುವ ಸಣ್ಣಯಂತ್ರ ಅಳವಡಿಸಿದರು. ಇದಕ್ಕೆ ಸಂಸ್ಥೆಯಿಂದ ಧನಸಹಾಯವೂ ಸಿಕ್ಕಿತು. ಹಗಲು-ರಾತ್ರಿಯೆನ್ನದೇ ಕಷ್ಟಪಟ್ಟು, ರೊಟ್ಟಿ ತಯಾರಿಕೆಯನ್ನೇ ಸಣ್ಣ ಉದ್ಯಮವನ್ನಾಗಿ ಬೆಳೆಸಿದರು. ಪುಷ್ಪಾವತಿಯ ವೃತ್ತಿಪರತೆ, ಉದ್ಯಮ ಕೌಶಲ್ಯತೆ ಗಮನಿಸಿ, ಸೆಲ್ಕೋ ಹೆಚ್ಚಿನ ಪ್ರಮಾಣದ ಆರ್ಥಿಕ ಸಹಾಯ ನೀಡಿತು. ಆ ನೆರವಿನಿಂದ ಅವರ ಉತ್ಪಾದನಾ ಪ್ರಮಾಣವೂ ಹೆಚ್ಚಿತು. ಹಾಗೆಯೇ, ಬೇಡಿಕೆಯೂ ಹೆಚ್ಚಿತು.

ಶ್ರೀಸಾಯಿ ಜೋಳದ ರೊಟ್ಟಿ:

ಉದ್ಯಮವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪುಷ್ಪಾವತಿ, ಸ್ಥಳೀಯ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಸಂಘ-ಸಂಸ್ಥೆಗಳಿಂದ ಸಾಲ ಪಡೆದು, ತಮ್ಮ ಸ್ವಂತ ಸ್ಥಳದಲ್ಲಿಯೇ ಉತ್ಪಾದನಾ ಘಟಕವನ್ನೂ ಸ್ಥಾಪಿಸಿದರು. ಇದು ಕಳೆದ ಎರಡು ವರ್ಷದ ಹಿಂದೆ ಶ್ರೀಸಾಯಿ ಜೋಳದ ರೊಟ್ಟಿ ಘಟಕ ಹುಟ್ಟಿದ ಕಥೆ. ಪ್ರಸ್ತುತ ಇವರ ಘಟಕದಲ್ಲಿ 8 ಜನ ಮಹಿಳೆಯರು ಕೆಲಸ ಮಾಡುತ್ತಾರೆ. ದಿನವೊಂದಕ್ಕೆ 800 ರಿಂದ 1000 ರೊಟ್ಟಿಗಳು ಇವರ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ. ಜೊತೆಗೆ ಶಾವಿಗೆ ಯಂತ್ರವನ್ನೂ ಅಳವಡಿಸಿದ್ದು, ಶಾವಿಗೆಯನ್ನೂ ಸಿದ್ಧಪಡಿಸುತ್ತಿದ್ದಾರೆ. ಇದೇ ಘಟಕದಲ್ಲಿ ಹಿಟ್ಟಿನ ಗಿರಣಿಯನ್ನೂ ಆರಂಭಿಸಿದ್ದಾರೆ.

ಕೇವಲ ಮುಂಡಗೋಡು ತಾಲೂಕು ಮಾತ್ರವಲ್ಲದೇ, ಹಾನಗಲ್ಲ, ಶಿಗ್ಗಾಂವಿ, ಹುಬ್ಬಳ್ಳಿ, ಶಿರಸಿ, ಸಿದ್ದಾಪುರ, ಬೆಂಗಳೂರು ಮುಂತಾದ ಕಡೆಗಳಲ್ಲೂ ಇವರ ಘಟಕಗಳಲ್ಲಿ ತಯಾರಾಗುವ ರೊಟ್ಟಿ ಮತ್ತು ಶಾವಿಗೆಗೆ ಬೇಡಿಕೆ ಇದೆ. 

ಚಿಗಳ್ಳಿ ಸಹಕಾರಿ ಸಂಘದಲ್ಲಿ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತಿ ಮೋಹನ್ ಗುಲ್ಯಾನವರ ಪತ್ನಿಯ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಮುಂದಿನ ದಿನದಲ್ಲಿ ಇನ್ನೂ ದೊಡ್ಡ ಪ್ರಮಾಣದ ಉತ್ಪಾದನಾ ಘಟಕವನ್ನು ಆರಂಭಿಸಿ, ಅನೇಕ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ದಾರಿಮಾಡಿಕೊಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಪುಷ್ಪಾವತಿ ಗುಲ್ಯಾನವರ.

ಮಾಹಿತಿಗೆ- 9741401072