ಕ್ಯಾಮೆರಾ ಕಣ್ಣಲ್ಲಿ ಬೇಂದ್ರೆ-ಆಜಾದ್ ಜೀವನ ಮರುಸೃಷ್ಟಿಸಿದ ವಿಶಿಷ್ಟ ಛಾಯಾಗ್ರಾಹಕ


ಚೌಕಾಬಾರ ಆಡುತ್ತಿರುವ ಬೇಂದ್ರೆ ದಂಪತಿ.

-ಎಂ.ಎಸ್.ಶೋಭಿತ್, ಮೂಡ್ಕಣಿ

ಫೋಟೋಶೂಟ್ ಇತ್ತೀಚಿನ ಯುವಜನತೆಯನ್ನು ಅತಿಯಾಗಿ ಆಕರ್ಷಸಿರುವ ವಿಚಾರ. ಆದರೆ, ಕ್ಯಾಮೆರಾದಲ್ಲಿ ಕಲಾತ್ಮಕ ಚಿತ್ರಗಳನ್ನು ಸೆರೆಹಿಡಿಯುವುದು ಸುಲಭದ ಮಾತೇನಲ್ಲ. ಕಲಾತ್ಮಕ ಚಿತ್ರಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕನಿಗೆ ದೃಷ್ಟಿ ಸೂಕ್ಷ್ಮತೆ, ಕೌಶಲ್ಯ ಕೂಡ ಬೇಕು. ಅಂತಹ ಅಪರೂಪದ ಛಾಯಾಗ್ರಾಹಕ ಧಾರವಾಡದ ಹರ್ಷದ್ ಉದಯ ಕಾಮತ್ ಇತ್ತೀಚೆಗೆ ನಡೆಸಿದ ಎರಡು ವಿಭಿನ್ನ ಫೋಟೋಶೂಟ್‌ನ ಕಪ್ಪು-ಬಿಳುಪಿನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಪಾರ ಜನಪ್ರಿಯತೆ ಗಳಿಸುವ ಜೊತೆಗೆ ಹೊಸ ಟ್ರೆಂಡ್ ಕೂಡ ಸೃಷ್ಟಿಸಿದೆ.  

ಒಲವಿನ ಕಾವ್ಯದ ಪರಿಕಲ್ಪನೆಯಲ್ಲಿ ಬೇಂದ್ರೆ ಜೀವನ ಮರುಸೃಷ್ಟಿ:

ಧಾರವಾಡದ ಸಾಧನಕೇರಿಯ ಚೇತನಾ ದೇಸಾಯಿ ಮತ್ತು ಬೆಳಗಾವಿಯ ನಿಖಿಲ್ ಮಗ್ಗಾವಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೂ ಮುನ್ನ ವರಕವಿ ದ.ರಾ.ಬೇಂದ್ರೆ ಅವರ ಒಲವಿನ ಕಾವ್ಯದ ಭಾವವನ್ನು ತಮ್ಮ ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮರುಸೃಷ್ಟಿಸಿದ್ದು, ಅಪಾರ ಜನಮನ್ನಣೆ ಗಳಿಸಿದೆ. ಚೇತನಾ ಅವರ ಮನೆಯಲ್ಲಿಯೇ ಈ ಫೋಟೋಶೂಟ್ ನಡೆಸಲಾಗಿದೆ. ವಧು ಚೇತನಾ ದೇಸಾಯಿ ಮನೆ ಸಾಧನಕೇರಿಯ ಬೇಂದ್ರೆ ನಿವಾಸದ ಪಕ್ಕದಲ್ಲೇ ಇದ್ದು ಬೇಂದ್ರೆ ಕುಟುಂಬಕ್ಕೆ ಆಪ್ತರೂ ಕೂಡಾ. ಈ ಹಿನ್ನೆಲೆಯಲ್ಲಿ ಬೇಂದ್ರೆಯವರ ಬದುಕನ್ನು ಮರುಸೃಷ್ಟಿಸುವ ಉದ್ದೇಶದಿಂದ ಈ ಥೀಮ್ ಮಾಡಿದ್ದಾರೆ. ಈ ಫೋಟೋಶೂಟ್‌ಗೆ ಚೇತನಾ ಅವರ ಅಜ್ಜಿ ತನ್ನ ಹಳೆಯ ಸೀರೆ ಮತ್ತು ಪುರಾತನ ಆಭರಣಗಳನ್ನು ನೀಡಿದ್ದು, ಬೇಂದ್ರೆಯವರ ಕುಟುಂಬಸ್ಥರು ನಿಖಿಲ್ ಅವರಿಗೆ ಬೇಂದ್ರೆಯವರು ತಮ್ಮ ಜೀವಿತಾವಧಿಯಲ್ಲಿ ಬಳಸುತ್ತಿದ್ದ ಸಾಂಪ್ರದಾಯಿಕ ಟೋಪಿ, ಕೊಡೆ, ಗ್ರಾಮಾಫೋನ್ ಮತ್ತು ರೇಡಿಯೋಗಳನ್ನು ಒದಗಿಸಿದ್ದು, ಇವುಗಳನ್ನು ಫೋಟೋಶೂಟ್‌ನಲ್ಲಿ ಬಳಸಿರುವುದು ವಿಶೇಷ.

ಪತ್ನಿಯ ಕೂದಲು ಬಾಚುತ್ತಿರುವ ಬೇಂದ್ರೆ.

ವರಕವಿ ದ.ರಾ.ಬೇಂದ್ರೆ ಮತ್ತು ಪತ್ನಿ ಲಕ್ಷ್ಮೀಬಾಯಿ  ತುಳಸಿ ಪೂಜೆ ಮಾಡುತ್ತಿರುವುದು, ಹೆಂಡತಿಗೆ ಹೂವನ್ನು ಮುಡಿಸುತ್ತಿರುವುದು, ಹೆಂಡತಿಯ ಕೂದಲನ್ನು ಬಾಚುತ್ತಿರುವುದು, ದಂಪತಿಗಳು ಗ್ರಾಮಾಫೋನ್‌ನಲ್ಲಿ ಹಾಡುಗಳನ್ನು ಕೇಳುತ್ತಿರುವುದು ಮತ್ತು ಚೌಕಾಬಾರಾ ಆಡುತ್ತಿರುವುದು ಹೀಗೆ ವಿವಿಧ ಮಾದರಿಯ ಫೋಟೋ ಗಮನಸೆಳೆಯುತ್ತಿದೆ.


“ಬಹಳ ಹಿಂದಿನಿಂದಲೂ ಬೇಂದ್ರೆಯವರ ಕುಟುಂಬದೊಂದಿಗೆ ಒಡನಾಟ ಹೊಂದಿದ್ದೇವೆ. ಈಗ ನಮ್ಮ ಮದುವೆ ಸಮಯದಲ್ಲಿ ಅವರ ಒಲವಿನ ಕಾವ್ಯವನ್ನು ಆಧಾರವಾಗಿಟ್ಟುಕೊಂಡು ಫೋಟೋಶೂಟ್ ಮಾಡಿಸಿ ಅವರ ಬದುಕನ್ನು ಮರುಸೃಷ್ಟಿಸಿರುವುದು ಖುಷಿ ತಂದಿದೆ. ನಮ್ಮ ಫೋಟೋಶೂಟ್ ಇಷ್ಟೊಂದು ಜನಪ್ರಿಯತೆ ಗಳಿಸಹುದೆಂಬ ನಿರೀಕ್ಷೆ ಇರಲಿಲ್ಲ” ಎಂದು ಖುಷಿ ಹಂಚಿಕೊಂಡರು ಚೇತನಾ ದೇಸಾಯಿ.

ಫೋಟೋಶೂಟ್‌ನಲ್ಲಿ ಆಜಾದ್ ನೆನಪು:

ಮೀಸೆ ತಿರುವುತ್ತಿರುವ ಚಂದ್ರಶೇಖರ ಆಜಾದ್.
ಸ್ವಾತಂತ್ರ್ಯ ಅಂದ ತಕ್ಷಣ ನೆನಪಿಗೆ ಬರುವುದೇ ನಾಡಿನ ಹೆಮ್ಮೆಯ ದೇಶಭಕ್ತ, ವೀರಸೇನಾನಿ ಚಂದ್ರಶೇಖರ ಆಜಾದ್ ಅವರ ಹೆಸರು. ಅವರ ಜೀವನವನ್ನಾಧರಿಸಿ ಫೋಟೋಶೂಟ್ ನಡೆಸಿದ್ದು, ಹರ್ಷದ್ ಅವರ ಮೋಡಿಗೆ ಜನರು ಫಿದಾ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಈ ಫೋಟೋಶೂಟ್ ನಡೆಸಿದ್ದಾರೆ. ಈ ಫೋಟೋಶೂಟ್‌ನಲ್ಲಿ ಧಾರವಾಡದ ಉದ್ಯಮಿ ಶಶಿ ಹಿರೇಮಠ ಅವರು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ರೀತಿಯ ವಸ್ತ್ರಾಲಂಕಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದ್ರಶೇಖರ್ ಆಜಾದ್ ಅವರು ಅಧ್ಯಯನ ಮಾಡುತ್ತಿರುವುದು, ಮೀಸೆ ತಿರುವುತ್ತಿರುವುದು, ಅವರ ಮೇಲೆ ದಾಳಿ ನಡೆಸಿದ್ದು, ಕೊನೆಯಲ್ಲಿ ತಾವೇ ಶೂಟ್ ಮಾಡಿಕೊಂಡಿದ್ದು ಹೀಗೆ ವಿವಿಧ ಮಾದರಿಯಲ್ಲಿ ಕ್ರಿಯೇಟಿವ್ ಆಗಿ ಹರ್ಷದ್ ಅವರು ಫೋಟೋಗಳನ್ನು ಸೆರೆಹಿಡಿದಿದ್ದಾರೆ.

ಅಧ್ಯಯನ ನಡೆಸುತ್ತಿರುವ ಚಂದ್ರಶೇಖರ ಆಜಾದ್.
“ಆಜಾದ್ ಅವರ ಫೋಟೋಶೂಟ್ ವೈರಲ್ ಆಗಿದೆ ಎನ್ನುವುದಕ್ಕಿಂತ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ಈ ಪ್ರಯತ್ನದ ಭಾಗವಾಗಿರುವುದು ನನಗೆ ಹೆಚ್ಚು ಖುಷಿ ತಂದಿದೆ” ಎಂದು ಹೇಳುತ್ತಾರೆ ಶಶಿ ಹಿರೇಮಠ.

“ಈ ಫೋಟೋಶೂಟ್ ಮಾಡುವ ಮುಂಚೆ `ಅಜೇಯ’ ಮುಂತಾದ ಹಲವು ಕೃತಿಗಳನ್ನು ಓದಿ ಆಜಾದ್ ಅವರ ನಡೆ, ನುಡಿ, ಉಡುಗೆ-ತೊಡುಗೆಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಈ ಫೋಟೋಶೂಟ್ ಮಾಡಿದ್ದೇವೆ. ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಈ ಫೋಟೋಶೂಟ್ ಮಾಡಿದ್ದು, ಕೇವಲ ಅರ್ಧದಿನದಲ್ಲಿ ಈ ಫೋಟೋಶೂಟ್ ನಡೆಸಿದ್ದು, ಯುವ ಪೀಳಿಗೆಗೆ ಆಜಾದ್ ಅವರನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದು ಖುಷಿ ತಂದಿದೆ” ಎನ್ನುತ್ತಾರೆ ಹರ್ಷದ್ ಉದಯ ಕಾಮತ್.

ಹರ್ಷದ್ ಉದಯ ಕಾಮತ್ ಅವರ ಕುರಿತು....:

ಹರ್ಷದ್ ಉದಯ ಕಾಮತ್
ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾದ ಹರ್ಷದ್ ಉದಯ ಕಾಮತ್ ಸದ್ಯ ಧಾರವಾಡದಲ್ಲಿ ನೆಲೆಸಿದ್ದಾರೆ. ಕಾಲೇಜು ದಿನಗಳಲ್ಲೇ ಕಲೆ, ಫೋಟೋಗ್ರಫಿ ಕುರಿತು ಅಪಾರ ಆಸಕ್ತಿ. ಎಂಬಿಎ ಪದವಿ ಪಡೆದು ಕೆಲವು ವರ್ಷ ವಿವಿಧ ಕಂಪನಿಯಲ್ಲಿ ಕಾರ್ಯನಿರ್ವಹಿಸಿ ಕ್ಯಾಮೆರಾದ ಸೆಳೆತದಿಂದ ಕಂಪನಿಯನ್ನು ತೊರೆದು `ಯುವ ಆರ್ಟ್’ ಸಂಸ್ಥೆಯನ್ನು ಪ್ರಾರಂಭಿಸಿ ಕಳೆದ ಐದು ವರ್ಷಗಳಿಂದ ವೃತ್ತಿಪರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರ ಬಳಿ ಫೋಟೋಗ್ರಫಿ ಕುರಿತು ಮಾರ್ಗದರ್ಶನ ಪಡೆದಿರುವ ಇವರು ಸದ್ಯ ಪ್ರಿವೆಡ್ಡಿಂಗ್, ವೆಡ್ಡಿಂಗ್ ಹಾಗೂ ನೇಚರ್ ಫೋಟೋಗ್ರಫಿಯಲ್ಲಿ ಬೇಡಿಕೆಯಲ್ಲಿರುವ ಕಲಾವಿದ. ವೆಡ್ಡಿಂಗ್ ಫೋಟೋಶೂಟ್‌ಗಾಗಿ ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯ ಮೂಲಕ ಕವಿಗಳು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಫೋಟೋಶೂಟ್ ಮೂಲಕ ಪರಿಚಯಿಸಬೇಕೆಂಬ ಉದ್ದೇಶವನ್ನೂ ಹೊಂದಿದ್ದಾರೆ. ಇದೆರಡೂ ಫೋಟೋಶೂಟ್‌ಗಳು ಇಷ್ಟೊಂದು ವೈರಲ್ ಆಗುತ್ತದೆ ಎಂಬ ಯಾವ ನಿರೀಕ್ಷೆಯೂ ನಮಗೆ ಇರಲಿಲ್ಲ. ಈ ಫೋಟೋಶೂಟ್ ಹೆಮ್ಮೆ ಮೂಡಿಸಿದೆ ಎನ್ನುತ್ತಾರೆ ಫೋಟೋಶೂಟ್‌ನ ಹಿಂದಿನ ಮಾಸ್ಟರ್ ಮೈಂಡ್ ಛಾಯಾಗ್ರಾಹಕ ಹರ್ಷದ್ ಉದಯ ಕಾಮತ್.

ಚಿತ್ರಗಳು: ಹರ್ಷದ್ ಉದಯ ಕಾಮತ್

(2021 ರ ಜೂನ್ 13ರ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ ಲೇಖನ.)