ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬೆಟ್ಟಂಪಾಡಿಯಲ್ಲಿ `ಬೀನ್ ಟು ಬಾರ್’ ಚಾಕಲೇಟ್‌ಗಳು ತಯಾರಾಗುತ್ತವೆ. ಇಲ್ಲಿ ತಯಾರಾಗುವ ಚಾಕಲೇಟ್‌ಗಳಿಗೆ ರಾಜ್ಯ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಬೇಡಿಕೆ ಇರುವುದು ವಿಶೇಷ!

-ಎಂ.ಎಸ್.ಶೋಭಿತ್, ಮೂಡ್ಕಣಿ

ಇವರು ಸ್ವಾತಿ ಕಲ್ಲೇಗುಂಡಿ. ಒಂದಷ್ಟು ವರ್ಷ ಮಹಾನಗರಿ ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮಾಡಿದ ಅನುಭವ. ಆದರೆ ವೈಯಕ್ತಿಕ ಕಾರಣಕ್ಕಾಗಿ ಕೆಲಸಕ್ಕೆ ರಾಜಿನಾಮೆ ನೀಡಬೇಕಾದ ಅನಿವಾರ್ಯತೆ. ಇಂತಹ ಸಂದರ್ಭದಲ್ಲೇ ಕೊರೊನಾ ಲಾಕ್‌ಡೌನ್‌ನಿಂದಾಗಿ ಊರಿಗೆ ಮರಳಿದರು. ಈ ಸಮಯದಲ್ಲಿ ಊರಿನಲ್ಲಿ ಚಾಕಲೇಟ್ ಉದ್ಯಮವನ್ನು ಆರಂಭಿಸಿ ಯಶಸ್ವಿಯಾದರು! ಸ್ವಾತಿಯವರ ಈ ಸಾಹಸ ಎಲ್ಲಾ ಮಹಿಳೆಯರಿಗೂ ಮಾದರಿ ಆಗುವಂಥದ್ದು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬೆಟ್ಟಂಪಾಡಿಯ ಸ್ವಾತಿ ಕಲ್ಲೇಗುಂಡಿ `ಬೀನ್ ಟು ಬಾರ್’ ಎಂಬ ಪರಿಕಲ್ಪನೆಯಲ್ಲಿ ಸಾವಯವ ಚಾಕಲೇಟ್ ಉದ್ಯಮವನ್ನು ಪ್ರಾರಂಭಿಸಿ, ಸುತ್ತಮುತ್ತಲಿನ ಮಹಿಳೆಯರಿಗೆ ಉದ್ಯೋಗವನ್ನೂ ಕಲ್ಪಿಸಿ ಮಾದರಿಯಾಗಿದ್ದಾರೆ.

`ಅನುತ್ತಮಾ' ಘಟಕದಲ್ಲಿ ಸ್ವಾತಿ ಕಲ್ಲೇಗುಂಡಿ ಮತ್ತು ಬಾಲಸುಬ್ರಹ್ಮಣ್ಯ ದಂಪತಿ 


ಲಾಕ್‌ಡೌನ್ ಸಮಯದಲ್ಲಿ ಊರಿಗೆ ಮರಳಿದ ಇವರು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ತಮ್ಮ ತೋಟದಲ್ಲಿ ಸೂಕ್ತ ಮಾರುಕಟ್ಟೆ ದೊರೆಯದೇ ಕೊಳೆಯುತ್ತಿದ್ದ ಕೊಕೋವನ್ನು ಗಮನಿಸಿ, ಇದನ್ನು ಯಾಕೆ ಮೌಲ್ಯವರ್ಧನೆ ಮಾಡುಬಾರದು ಎಂಬ ಕುರಿತು ಯೋಚಿಸಿದರು. ಅದನ್ನು ಕಾರ್ಯರೂಪಕ್ಕೂ ತಂದರು. ಪ್ರಾರಂಭದಲ್ಲಿ ಚಾಕಲೇಟ್ ತಯಾರಿಸಿ ನೆರೆಹೊರೆಯವರಿಗೆ ನೀಡಿದರು. ಇದರಿಂದಾಗಿ ಕ್ರಮೇಣ ಬೇಡಿಕೆ ಬರತೊಡಗಿತು.

`ಅನುತ್ತಮಾ' ಚಾಕಲೇಟ್'ಗಳು (ಚಿತ್ರ: ಸ್ವಾತಿ ಕಲ್ಲೇಗುಂಡಿ)


ಮುಂದೆ ಉದ್ಯಮವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಪತಿ ಮತ್ತು ಪತ್ನಿ ಇಬ್ಬರೂ ಚಾಕಲೇಟ್ ತಯಾರಿಕೆಯ ಕುರಿತು ವೃತ್ತಿಪರ ತರಬೇತಿ ಪಡೆದರು. ಇವರು ತಯಾರಿಸುವ ಚಾಕಲೇಟ್‌ಗಳಿಗೆ ಪ್ರಯೋಗಾಲಯದಿಂದಲೂ ಉತ್ತಮ ಫಲಿತಾಂಶ ಲಭಿಸಿತು. ಬಳಿಕ `ಅನುತ್ತಮ’ ಎಂಬ ಹೆಸರಿನಲ್ಲಿ ಚಾಕಲೇಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಫ್ಯಾಕ್ಟರಿ ಪ್ರಾರಂಭ:

ಮುಂದೆ ತಮ್ಮ ಮನೆಯ ಮೇಲ್ಬಾಗದಲ್ಲಿಯೇ ವಿವಿಧ ಯಂತ್ರೋಪಕರಣಗಳನ್ನು ಅಳವಡಿಸಿ ಚಾಕಲೇಟ್ ಉತ್ಪಾದನಾ ಘಟಕವನ್ನು ಆರಂಭಿಸಿದರು. ಕೋಕೋ ಬೀಜ ಸಂಸ್ಕರಣೆ, ತಯಾರಿಕೆ, ಪ್ಯಾಕಿಂಗ್, ಲೇಬಲ್ ಅಂಟಿಸುವಿಕೆ, ರವಾನೆ... ಹೀಗೆ ವಿವಿಧ ಹಂತಗಳನ್ನು ಖುದ್ದು ಸ್ವಾತಿ ನೋಡಿಕೊಳ್ಳುತ್ತಾರೆ. `ಅನುತ್ತಮಾ’ ಚಾಕಲೇಟ್ ಘಟಕದಲ್ಲಿ ಸದ್ಯ ಐದು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಈ ಘಟಕದಲ್ಲಿ ಡಾರ್ಕ್ ಮಿಲ್ಕ್ ಚಾಕಲೇಟ್, ಡ್ರೈ ಫ್ರುಟ್ಸ್ ಚಾಕಲೇಟ್ ಸೇರಿದಂತೆ ೧೪ ಬಗೆಯ ಚಾಕಲೇಟ್‌ಗಳು ಸಿದ್ಧಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಘಟಕವನ್ನು ಇನ್ನಷ್ಟು ವಿಸ್ತರಿಸಿ, ಮತ್ತಷ್ಟು ಕಾರ್ಮಿಕರಿಗೆ ಸ್ವಾವಲಂಬಿ ಜೀವನಕ್ಕೆ ದಾರಿಮಾಡಿಕೊಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಸ್ವಾತಿ. 

ಆನ್‌ಲೈನ್ ಮಾರುಕಟ್ಟೆ:

ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಸ್ವಾತಿ ಕಲ್ಲೇಗುಂಡಿ ಅವರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ಕಷ್ಟವಾಗಲಿಲ್ಲ. ಕಂಪನಿಯ ರಿಜಿಸ್ಟ್ರೇಷನ್ ಬಳಿಕ `ಅನುತ್ತಮ’ ಎಂಬ ತಮ್ಮ ಕಂಪನಿಯ ಹೆಸರಿನಲ್ಲಿಯೇ ಆನ್‌ಲೈನ್ ಸ್ಟೋರ್ (www.anuttamaproducts.com ) ಪ್ರಾರಂಭಿಸಿದರು. ಜೊತೆಗೆ ಅಮೇಜಾನ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿಯೂ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಇಲ್ಲಿ ತಯಾರಾಗುವ ಚಾಕಲೇಟ್‌ಗಳಿಗೆ ಬೆಂಗಳೂರು, ಮೈಸೂರು ಸೇರಿದಂತೆ ಹೊರರಾಜ್ಯಗಳನ್ನೂ ಬೇಡಿಕೆ ಇದೆ.

ಚಾಕಲೇಟ್ ತಯಾರಿಕೆಯಲ್ಲಿ ನಿರತರಾಗಿರುವ ಮಹಿಳೆಯರು (ಚಿತ್ರ: ಸ್ವಾತಿ ಕಲ್ಲೇಗುಂಡಿ)

ಏನಿದು `ಬೀನ್ ಟು ಬಾರ್’ ಚಾಕಲೇಟ್: 

`ಬೀನ್ ಟು ಬಾರ್’ ಜಗತ್ತಿನಾದ್ಯಂತ ಜನಪ್ರಿಯವಾಗುತ್ತಿರುವ ಚಾಕಲೇಟ್ ತಯಾರಿಕಾ ಪರಿಕಲ್ಪನೆ. ಸಾವಯವ ಕೋಕೋ ಬೆಳೆದು ಅಥವಾ ಖರೀದಿಸಿ, ಅದರಿಂದ ಖುದ್ದಾಗಿ ತಯಾರಕರು ಚಾಕಲೇಟ್ ಬಾರ್ ತಯಾರಿಸುವುದಕ್ಕೆ `ಬೀನ್ ಟು ಬಾರ್’ ಚಾಕಲೇಟ್ ಎನ್ನುತ್ತೇವೆ.

`ಅನುತ್ತಮ’ ಚಾಕಲೇಟ್‌ಗಳು ಸಾವಯವ ಉತ್ಪನ್ನ. ಚಾಕಲೇಟ್ ತಯಾರಿಕೆಯ ಸಮಯದಲ್ಲಿ ಸಕ್ಕರೆ ಬದಲಾಗಿ ಸಾವಯವ ಬೆಲ್ಲ ಬಳಸುವುದು ವಿಶೇಷ. “ಈ ಚಾಕಲೇಟ್‌ಗಳಲ್ಲಿ ಕೊಕೋ ಅಂಶ ಜಾಸ್ತಿ ಇದ್ದು ಸಕ್ಕರೆ ಪ್ರಮಾಣ ಕಡಿಮೆ. ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೃತಕ ಪರಿಮಳಗಳನ್ನು ಬಳಸುವುದಿಲ್ಲ” ಎಂದು ಮಾಹಿತಿ ನೀಡುತ್ತಾರೆ ಸ್ವಾತಿ.

ಕೋಕೋಗೆ ಹೆಚ್ಚಿದ ಬೇಡಿಕೆ:

ಸಾವಯವ ಕೋಕೋ ಬಳಸಿ ಚಾಕಲೇಟ್ ತಯಾರಿಸುವುದರಿಂದ ಬೇಡಿಕೆ ಹೆಚ್ಚಿದಂತೆ ಸುತ್ತಮುತ್ತಲಿನ ರೈತರಿಂದಲೂ ಕೋಕೋವನ್ನು ಖರೀದಿಸುತ್ತಿದ್ದಾರೆ. ಆ ಮೂಲಕ ಸುತ್ತಮುತ್ತಲಿನ ರೈತರಿಗೂ ನೆರವಾಗಿದ್ದಾರೆ. ಇದರಿಂದಾಗಿ ರೈತರಿಗೂ ಮಾರುಕಟ್ಟೆಗಿಂತಲೂ ಅಧಿಕ ಬೆಲೆ ದೊರೆತಿದೆ. ಚಾಕಲೇಟ್‌ನ ರುಚಿಯನ್ನು ಇನ್ನಷ್ಟು ಹೆಚ್ಚಿಸುವ ಕುರಿತು ಸ್ವಾತಿಯವರು ಸಂಶೋಧನೆಯಲ್ಲಿ ತೊಡಗಿಸಿಕೊಂಡರೆ, ಪತಿ ಮೆಕ್ಯಾನಿಕಲ್ ಇಂಜಿನಿಯರ್ ಬಾಲಸುಬ್ರಹ್ಮಣ್ಯ ತಂತ್ರಜ್ಞಾನದ ಅಭಿವೃದ್ಧಿ ಕುರಿತು ಸಂಶೋಧನೆಯಲ್ಲಿ ತೊಡಗಿದ್ದಾರೆ.

“ನನ್ನ ಕೆಲಸ ಕಾರ್ಯಗಳಿಗೆ ಪತಿ ಬಾಲಸುಬ್ರಹ್ಮಣ್ಯ, ಅತ್ತೆ, ಮಾವ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಹೊಸ ಉದ್ಯಮ ಆರಂಭಿಸುವ ಪೂರ್ವದಲ್ಲಿ ವಿನೂತನ ಐಡಿಯಾ ಹುಡುಕಬೇಕು. ನಮ್ಮ ಉದ್ಯಮದ ಗುರಿ ನಿರ್ದಿಷ್ಟವಾಗಿರಬೇಕು. ಆಗ ಯಶಸ್ಸು ಸಾಧ್ಯ.” ಎನ್ನುತ್ತಾರೆ `ಅನುತ್ತಮಾ’ ಸಂಸ್ಥಾಪಕಿ ಸ್ವಾತಿ ಕಲ್ಲೇಗುಂಡಿ.

ಹೆಚ್ಚಿನ ಮಾಹಿತಿಗಾಗಿ: www.anuttamaproducts.com
ಮೊ: 6363348339, 9686656229