-ಎಂ.ಎಸ್.ಶೋಭಿತ್, ಮೂಡ್ಕಣಿ

ಈತನಿಗೆ ಚಾಕ್‌ಆರ್ಟ್ ಅಂದರೆ ಅದೇನೋ ಖುಷಿ. ಈಗಾಗಲೇ ಚಾಕ್‌ಪೀಸ್‌ನಲ್ಲಿ ಹಲವು ಕಲಾಕೃತಿಗಳನ್ನು ಮೂಡಿಸಿರುವ ಈತ ಇತ್ತೀಚೆಗೆ ಚಾಕ್‌ಪೀಸ್ ಬಳಸಿ ಕೆತ್ತಿದ ರಾಷ್ಟ್ರಗೀತೆ ಕಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಮನ್ನಣೆ ದೊರೆತಿದೆ. ಪಠ್ಯದ ಜತೆ ಪಠ್ಯೇತರ ವಿಷಯದಲ್ಲೂ ಮುಂದೆ ಇರುವ ಈತನಿಗೆ ಚಿತ್ರಕಲೆ, ಸಂಗೀತವೂ ಸಿದ್ಧಿಸಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರಸೊಪ್ಪಾದ ಮಂಜುನಾಥ ನಾಯ್ಕ ಮತ್ತು ಚಂದ್ರಕಲಾ ದಂಪತಿಯ ಪುತ್ರ ಪ್ರದೀಪ್, ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಕಳೆದ ಎರಡು ವರ್ಷಗಳಿಂದ ಚಾಕ್‌ಆರ್ಟ್'ನಲ್ಲಿ ತೊಡಗಿಸಿಕೊಂಡಿದ್ದು, ಚಿಕ್ಕ ಅವಧಿಯಲ್ಲಿ ಯಶಸ್ಸಿನ ಮೆಟ್ಟಿಲೇರಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಪ್ರದೀಪ್, ಹಾಗೆ ನೋಡಿದರೆ ಚಾಕ್‌ಆರ್ಟ್'ನ್ನು ಶಾಸ್ತ್ರೀಯವಾಗಿ ಕಲಿತವರೇನಲ್ಲ. ಆದರೆ ಈ ಬಗ್ಗೆ ಆಸಕ್ತಿ ಹೇಗೆ ಮೂಡಿತು ಎಂದು ಕೇಳಿದರೆ, ಅವರು ಹೇಳುವುದಿಷ್ಟು: “ಚಾಕ್‌ಆರ್ಟ್ ಅನ್ನು ಮೊದಲು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆ. ಆಗಲೇ ನನಗೆ ಈ ಕುರಿತು ಆಸಕ್ತಿ ಮೂಡಿತ್ತು. ಹಾಗೇ ಎರಡು ವರ್ಷದ ಹಿಂದೆ ಚಾಕ್‌ಪೀಸ್ ಮೇಲೆ ಇಂಗ್ಲಿಷ್ ಅಕ್ಷರಗಳನ್ನು ಕೆತ್ತಲು ಪ್ರಾರಂಭಿಸಿದೆ. ಹೀಗೆ ನನ್ನ ಚಾಕ್‌ಆರ್ಟ್ ಪಯಣ ಪ್ರಾರಂಭಗೊಂಡಿತು. ಚಾಕ್‌ಆರ್ಟ್ ಕುರಿತು ನನಗೆ ಯಾವುದೇ ಮಾರ್ಗದರ್ಶಕರು ಇಲ್ಲ. ನನ್ನ ಸ್ವಂತ ಆಲೋಚನೆ, ಶೃದ್ಧೆ, ಸಾಧಿಸಬೇಕೆಂಬ ಛಲವೇ ಸಾಧನೆಗೆ ಕಾರಣ”.

ಚಾಕ್‌ಪೀಸ್‌ನಲ್ಲಿ ರಾಷ್ಟ್ರಗೀತೆ:

ಪ್ರದೀಪ್, ೧೮ ಚಾಕ್‌ಪೀಸ್ ಬಳಸಿ ಕೇವಲ ೧೮ ತಾಸಿನಲ್ಲಿ ರಾಷ್ಟ್ರಗೀತೆಯ ಸಾಲುಗಳನ್ನು ಕೆತ್ತುವ ಮೂಲಕ ದಾಖಲೆ ಮಾಡಿರುವುದು ವಿಶೇಷ. ಭಗತ್ ಸಿಂಗ್, ಗಾಂಧೀಜಿ, ಬುದ್ಧ, ಐಫೆಲ್ ಟವರ್... ಹೀಗೆ ವಿವಿಧ ಕಲಾಕೃತಿಗಳನ್ನು ರಚಿಸಿ ಮೆಚ್ಚುಗೆ ಪಡೆದಿದ್ದ ಈತ, ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಈ ದಾಖಲೆ ಮಾಡಿದ್ದಾರೆ. 

“ಬೇರೆಬೇರೆ ಕಲಾಕೃತಿ ಕೆತ್ತಿ ಅನುಭವ ಪಡೆದಿದ್ದ ನನಗೆ, ಕೊರೊನಾ ಎರಡನೇ ಅಲೆಯ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ಏನಾದರೂ ಸಾಧಿಸಬೇಕೆಂಬ ಆಸೆ ಚಿಗುರೊಡೆದಿತ್ತು. ಅಲ್ಲದೇ ಆ ಸಮಯದಲ್ಲಿ ಒಂದಿಷ್ಟು ದಿನ ಆನ್‌ಲೈನ್ ಕ್ಲಾಸ್ ಕೂಡಾ ಸ್ಥಗಿತಗೊಂಡಿತ್ತು. ಇದೇ ಸರಿಯಾದ ಸಮಯ ಎಂದು ೧೭ ಚಾಕ್‌ಪೀಸ್ ಬಳಸಿ ರಾಷ್ಟ್ರಗೀತೆಯ ಸಾಲುಗಳು ಮತ್ತು ಇನ್ನೊಂದು ಚಾಕ್‌ಪೀಸ್‌ನಲ್ಲಿ ರವೀಂದ್ರನಾಥ ಠ್ಯಾಗೋರ್ ಅವರ ಹೆಸರನ್ನು ಕೆತ್ತಿ, ಅದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್'ಗೆ ಕಳುಹಿಸಿದ್ದೆ. ಅಲ್ಲಿ ಕಲಾಕೃತಿಯನ್ನು ಪರಿಶೀಲಿಸಿ ನನ್ನ ಹೆಸರು ದಾಖಲಿಸಿಕೊಂಡರು” ಎಂದು ಮಾಹಿತಿ ನೀಡುತ್ತಾರೆ ಪ್ರದೀಪ್ ನಾಯ್ಕ.

ಸಂಗೀತ, ಚಿತ್ರಕಲೆಯಲ್ಲೂ ಮುಂದು:

ಚಾಕ್‌ಆರ್ಟ್'ನಲ್ಲಿ ಸಾಧನೆಗೈದಿರುವ ಪ್ರದೀಪ್‌ಗೆ ಸಂಗೀತ, ಚಿತ್ರಕಲೆ, ತಬಲಾ ವಾದನವೂ ಸಿದ್ಧಿಸಿದೆ. ಬಾಲ್ಯದಿಂದಲೂ ಸಂಗೀತದ ಕುರಿತು ಒಲವನ್ನು ಹೊಂದಿದ್ದು, ಡಾ.ಅಶೋಕ ಹುಗ್ಗಣ್ಣವರ್ ಮತ್ತು ಪಂ. ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅವರಲ್ಲಿ ಸಂಗೀತ ಮತ್ತು ತಬಲಾ ಅಭ್ಯಾಸ ನಡೆಸಿದ್ದು, ಸದ್ಯ ಶ್ರೀಲತಾ ಗುರುರಾಜ್ ಅವರಲ್ಲಿ ಸಂಗೀತಾಭ್ಯಾಸ ಹಾಗೂ ಗುರುರಾಜ್ ಆಡುಕಳ ಅವರಲ್ಲಿ ತಬಲಾ ಅಭ್ಯಾಸ ನಡೆಸುತ್ತಿದ್ದಾನೆ.

ಪದವಿ ದಿನಗಳಲ್ಲಿ ವಿಶ್ವವಿದ್ಯಾಲಯದ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾನೆ. ಸ್ನೇಹಿತರಿಂದ `ಕಲಾನಿಧಿ ಪ್ರದೀಪ’ ಎಂಬ ಅಭಿದಾನಕ್ಕೂ ಪಾತ್ರನಾಗಿದ್ದು, ಈತನ ಸಾಧನೆಗೆ ಹೊನ್ನಾವರ ಪ್ರೆಸ್‌ಕ್ಲಬ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸನ್ಮಾನಸಿ ಗೌರವಿಸಿದೆ. ಓದಿನ ಜೊತೆಗೆ ಮುಂದೆ, ಸಂಗೀತ, ಚಿತ್ರಕಲೆ, ಚಾಕ್‌ಆರ್ಟ್'ನಲ್ಲಿ ಮತ್ತಷ್ಟು ಸಾಧನೆ ಮಾಡುವ ಮಹಾತ್ವಾಕಾಂಕ್ಷೆ ಈತನದ್ದು.

( ಸೆಪ್ಟೆಂಬರ್ 10, 2021 ರ ಉದಯವಾಣಿ ಯುವಿ ಫ್ಯೂಷನ್‌ನಲ್ಲಿ ಪ್ರಕಟಿತ.)