`ಆಸ್ಕರಿ ಅವಾರ್ಡ್-2021’ ವಿಜೇತ ಯುವ ಛಾಯಾಗ್ರಾಹಕರಾದ ಈಶಾನ್ಯ ಶರ್ಮಾ ಮತ್ತು ಕಾರ್ತಿಕ್ ಕರ್ಗಲ್ಲು ಸಂದರ್ಶನ
ಸಂದರ್ಶನ: ಎಂ.ಎಸ್.ಶೋಭಿತ್, ಮೂಡ್ಕಣಿ
`ಸಾವಿರ ಪದಗಳಲ್ಲಿ ವರ್ಣಿಸಲಾಗದ್ದನ್ನು ಒಂದು ಚಿತ್ರ ವರ್ಣಿಸಬಹುದು’ ಎಂಬ ಮಾತಿದೆ. ಆದರೆ ಕಥೆ ಹೇಳುವ ಚಿತ್ರಗಳನ್ನು ಕ್ಲಿಕ್ಕಿಸುವುದು ಸುಲಭದ ಮಾತೇನಲ್ಲ. ಅದೊಂದು ಸಾಹಸವೇ ಸರಿ. ಕಲಾತ್ಮಕವಾಗಿ ಚಿತ್ರ ಕ್ಲಿಕ್ಕಿಸುವ ಛಾಯಾಗ್ರಾಹಕನಿಗೆ ತಾಳ್ಮೆ, ದೃಷ್ಟಿಸೂಕ್ಷ್ಮತೆ, ಕೌಶಲ್ಯವೂ ಅಗತ್ಯ. ಇಂತಹ ಅಪರೂಪದ ಸೃಜನಶೀಲ ಛಾಯಾಗ್ರಾಹಕರಿಗೆ ನೀಡಲ್ಪಡುವ ಪ್ರಮುಖ ಪ್ರಶಸ್ತಿಗಳಲ್ಲಿ `ಆಸ್ಕರಿ ಆವಾರ್ಡ್’ ಕೂಡಾ ಒಂದು. 2021ನೇ ಸಾಲಿನ `ಆಸ್ಕರಿ ಅವಾರ್ಡ್-2021’ ಗೆ ಭಾಜನರಾದ ಸಾಗರದ ಈಶಾನ್ಯ ಶರ್ಮಾ ಕೆ.ಆರ್. ಮತ್ತು ವಿಟ್ಲದ ಕಾರ್ತಿಕ್ ಎಸ್. ಕರ್ಗಲ್ಲು ಅವರೊಂದಿಗೆ ಫೋಟೋಗ್ರಫಿ ಪಯಣ, ಫೋಟೋಗ್ರಫಿಯಲ್ಲಿನ ಸವಾಲು ಮತ್ತು ಅವಕಾಶಗಳ ಕುರಿತು `ವಿಕ್ರಮ’ ನೆಡಸಿದ ಕಿರು ಸಂದರ್ಶನ ಇಲ್ಲಿದೆ.
• ಈಶಾನ್ಯ ಶರ್ಮಾ ಕೆ.ಆರ್.
ವಿಎಫ್‌ಎಕ್ಸ್ ಆ್ಯನಿಮೇಶನ್‌ನಲ್ಲಿ ಪದವಿ ಪಡೆದಿರುವ ಈಶಾನ್ಯ ಶರ್ಮಾ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೂಡ್ಲುತೋಟದವರು. ವನ್ಯಜೀವಿ ಛಾಯಾಗ್ರಹಣದ ಜೊತೆಗೆ ಮದುವೆ ಛಾಯಾಗ್ರಹಣ, ಸಿನೆಮಾ ಮೇಕಿಂಗ್, ಸಿನಿಮಾಟೋಗ್ರಫಿ, ಆ್ಯನಿಮೇಶನ್‌ಗಳಲ್ಲೂ ಇವರಿಗೆ ಬೇಡಿಕೆ ಇದೆ.
| ಫೋಟೋಗ್ರಫಿಯ ಬಗ್ಗೆ ಮೊದಲು ಆಸಕ್ತಿ ಮೂಡಿದ್ದು ಯಾವಾಗ ಮತ್ತು ಹೇಗೆ?
ನನ್ನ ತಂದೆ ನಾಟಿವೈದ್ಯರು. ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಯಲ್ಲಿನ ಸಸ್ಯ ಸಂಗ್ರಹಾಲಯಕ್ಕೆ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಬರುತ್ತಿದ್ದರು. ಆ ಸಮಯದಲ್ಲಿ ಹಾವು, ಹಕ್ಕಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದೆ. ಅಲ್ಲದೇ ಅಪ್ಪನ ಬಳಿಯಿದ್ದ ರೀಲ್ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸಿದ್ದೆ. ಇದೇ ಸಂದರ್ಭದಲ್ಲಿ ಸಂಗ್ರಹಾಲಯಕ್ಕೆ ಆಗಮಿಸಿದ್ದ ಛಾಯಾಗ್ರಾಹಕ ಸತೀಶ ಸಾಗರ ಅವರು ನನ್ನ ಆಸಕ್ತಿ ಗಮನಿಸಿ ತಮ್ಮ ಬಳಿಯಿದ್ದ ಕ್ಯಾಮೆರಾ ಒಂದನ್ನು ನನಗೆ ಉಡುಗೊರೆಯಾಗಿ ನೀಡಿದರು. ಇಲ್ಲಿಂದ ಸ್ವತಃ ನಾನೇ ಕಲಿಯುತ್ತಾ 2011 ರಲ್ಲಿ ಫೋಟೋಗ್ರಫಿಯನ್ನು ಆರಂಭಿಸಿದೆ.
| ಯಾವ ಯಾವ ವಿಧದ ಫೋಟೋಗ್ರಫಿ ನಡೆಸುತ್ತೀರಿ?
ಪ್ರಾರಂಭದಲ್ಲಿ ಪಕ್ಷಿ ಛಾಯಾಗ್ರಹಣದ ಮೂಲಕ ಫೋಟೋಗ್ರಫಿಯನ್ನು ಆರಂಭಿಸಿದೆ. ಇತ್ತೀಚೆಗೆ ಕಳೆದ ನಾಲ್ಕು ವರ್ಷಗಳಿಂದ ವನ್ಯಜೀವಿ ಛಾಯಾಗ್ರಹಣ ಮತ್ತು ಮ್ಯಾಕ್ರೋ ಛಾಯಾಗ್ರಹಣದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ.
| ವನ್ಯಜೀವಿ ಛಾಯಾಗ್ರಹಣ ಅತ್ಯಂತ ದುಬಾರಿ ಎಂಬ ಮಾತಿದೆ. ನಿಮ್ಮ ಅನಿಸಿಕೆ ಏನು?
ವನ್ಯಜೀವಿ ಛಾಯಾಗ್ರಹಣ ದುಬಾರಿ ಎನ್ನುವುದು ನಿಜ. ವನ್ಯಜೀವಿ ಛಾಯಾಗ್ರಾಹಣ ನಡೆಸುವ ಕೆಲವರು ಪ್ರಾರಂಭದಲ್ಲೇ ಕಬಿನಿ, ಆಗುಂಬೆ ಮುಂತಾದ ಕಡೆ ತೆರಳುವುದರಿಂದ ಇದು ಮತ್ತಷ್ಟು ದುಬಾರಿಯಾಗುತ್ತದೆ. ಹೀಗಾಗಿ ಪ್ರಾರಂಭದ ದಿನಗಳಲ್ಲಿ ಮನೆಯ ಸುತ್ತಮುತ್ತಲು ಛಾಯಾಗ್ರಹಣ ನಡೆಸಿ, ಅನುಭವ ಪಡೆದ ಬಳಿಕ ದೂರದೂರ ತೆರಳಿ ಛಾಯಾಗ್ರಹಣ ನಡೆಸುವುದು ಸೂಕ್ತ.
| ಮ್ಯಾಕ್ರೋ ಮತ್ತು ವನ್ಯಜೀವಿ ಛಾಯಾಗ್ರಹಣದ ಸವಾಲುಗಳೇನು?
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮೂಲಕವೂ ಛಾಯಾಗ್ರಹಣ ನಡೆಸಬಹುದಾದ ತಂತ್ರಜ್ಞಾನ ಬಂದಿರುವುದರಿಂದ ಫೋಟೋಗ್ರಫಿ ಅಷ್ಟೊಂದು ಕಷ್ಟವೇನಲ್ಲ. ಆದರೆ ವನ್ಯಜೀವಿ ಛಾಯಾಗ್ರಹಣ ಮತ್ತು ಮ್ಯಾಕ್ರೋ ಛಾಯಾಗ್ರಹಣ ನಡೆಸಲು ಬಹಳ ತಾಳ್ಮೆ ಮತ್ತು ಪರಿಶ್ರಮ ಅಗತ್ಯ. ಹೀಗಾಗಿ ವನ್ಯಜೀವಿ ಛಾಯಾಗ್ರಹಣ ನಡೆಸುವವರು ತಾಳ್ಮೆಯನ್ನು ರೂಢಿಸಿಕೊಳ್ಳುವುದು ಮುಖ್ಯ.
| ವನ್ಯಜೀವಿ ಛಾಯಾಗ್ರಹಣವನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಬಯಸುವ ಯುವಜನತೆಗೆ ನಿಮ್ಮ ಸಲಹೆ ಏನು?
ವನ್ಯಜೀವಿ ಛಾಯಾಗ್ರಹಣವನ್ನೇ ವೃತ್ತಿಯನ್ನಾಗಿ ಸ್ವೀಕರಿಸುವುದು ಕಷ್ಟ. ಆದರೆ ಮದುವೆ ಛಾಯಾಗ್ರಹಣ, ಇವೆಂಟ್ ಛಾಯಾಗ್ರಹಣ, ಸಿನೆಮಾ ಮೇಕಿಂಗ್‌ಗಳಲ್ಲಿ ಹಣಗಳಿಸಲು ಅವಕಾಶ ಇರುವುದರಿಂದ ಅದರಲ್ಲಿ ತೊಡಗಿಸಿಕೊಂಡು ವನ್ಯಜೀವಿ ಮತ್ತು ಮ್ಯಾಕ್ರೋ ಛಾಯಾಗ್ರಹಣವನ್ನು ಹವ್ಯಾಸವನ್ನಾಗಿ ಮುಂದುವರಿಸುವುದು ಸೂಕ್ತ. ಛಾಯಾಗ್ರಾಹಕನಿಗೆ ಸೃಜನಶೀಲತೆ ಇದ್ದಲ್ಲಿ ಫೋಟೋಗ್ರಫಿಯಲ್ಲಿ ಸಾಕಷ್ಟು ಅವಕಾಶಗಳಿವೆ.
| `ಅ ಸ್ಟೋರಿ ಆಪ್ ಬ್ಯಾಕ್‌ಯಾರ್ಡ್ ಕ್ರಿಯೇಚರ್ಸ್’ ಶೀರ್ಷಿಕೆ ಅಡಿಯಲ್ಲಿ ಸಲ್ಲಿಸಿದ್ದ ನಿಮ್ಮ ಚಿತ್ರಗಳಿಗೆ ಆಸ್ಕರಿ ಅವಾರ್ಡ್-2021 ಸಂದಿದೆ. ಏನನಿಸುತ್ತದೆ?
ನಾನು ಕ್ಲಿಕ್ಕಿಸಿದ ಬ್ಯಾಕ್‌ಯಾರ್ಡ್ ಕ್ರಿಯೇಚರ್ಸ್ ಚಿತ್ರಗಳಿಗೆ ಆಸ್ಕರಿ ಅವಾರ್ಡ್ ಬರಬಹುದು ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಪ್ರಶಸ್ತಿ ಬಂದಿದ್ದಕ್ಕೆ ಖುಷಿ ಇದೆ. (ನಗುತ್ತಾ) ಛಾಯಾಗ್ರಹಣದ ಸಮಯದಲ್ಲಿ ನಾವು ಅಂದುಕೊಂಡ ಹಾವು. ಹುಳ, ಪಕ್ಷಿ ಸಿಕ್ಕಿದರೆ ಅದು ನನಗೆ ಪ್ರಶಸ್ತಿಗಳಿಗಿಂತಲೂ ಹೆಚ್ಚಿನ ಖುಷಿ ನೀಡುತ್ತದೆ.
• ಕಾರ್ತಿಕ್ ಎಸ್. ಕರ್ಗಲ್ಲು
ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದ ಕಾರ್ತಿಕ್ ಕರ್ಗಲ್ಲು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರ ಪುತ್ರ. ಉಡುಪಿಯ ಶ್ರೀಕೃಷ್ಣ ಟೆಕ್ನಿಕಲ್ ಎಜ್ಯುಕೇಶನ್ ಸೆಂಟರ್‌ನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಕೋರ್ಸ್ ಪೂರೈಸಿರುವ ಇವರು ವೃತ್ತಿಪರ ಯಕ್ಷಗಾನ ಕಲಾವಿದರೂ ಹೌದು. ಕಳೆದ 6 ವರ್ಷಗಳಿಂದ ವೃತ್ತಿಪರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಫೋಟೋಗ್ರಫಿಗೆ 37 ರಾಷ್ಟ್ರೀಯ ಪ್ರಶಸ್ತಿ, 9 ಅಂತಾರಾಷ್ಟ್ರೀಯ ಪ್ರಶಸ್ತಿ, 6 ರಾಜ್ಯಪ್ರಶಸ್ತಿಗಳು ಸಂದಿವೆ.
| ಯಕ್ಷಗಾನದ ಹಿನ್ನೆಲೆಯನ್ನು ಹೊಂದಿರುವ ಕುಟುಂಬದಿಂದ ಬಂದ ನಿಮಗೆ ಫೋಟೋಗ್ರಫಿ ಕುರಿತು ಆಸಕ್ತಿ ಮೂಡಿದ್ದು ಹೇಗೆ?
ಕಲಾ ಕುಟುಂಬದ ಹಿನ್ನೆಲೆಯಿಂದ ಬಂದ ನನಗೆ ಮೊದಲಿನಿಂದಲೂ ಯಕ್ಷಗಾನ ಮತ್ತು ಫೋಟೋಗ್ರಫಿಯಲ್ಲಿ ಆಸಕ್ತಿ ಇತ್ತು. ನಂತರದ ದಿನಗಳಲ್ಲಿ ನಮ್ಮ `ಯಕ್ಷಾಂತರಂಗ' ತಂಡದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ವೃತ್ತಿಪರ ಛಾಯಾಗ್ರಾಹಕ ಪ್ರತೀಶ ಕುಮಾರ್ ಬ್ರಹ್ಮಾವರ ಅವರ ಮಾರ್ಗದರ್ಶನ ಸಿಕ್ಕಿತು. ಅವರ ಮಾರ್ಗದರ್ಶನದ ಮೂಲಕ ಫೋಟೋಗ್ರಫಿಯನ್ನು ಆರಂಭಿಸಿದೆ. ಈಗ ಫೋಟೋಗ್ರಫಿ ಮತ್ತು ಯಕ್ಷಗಾನ ಎರಡನ್ನೂ ವೃತ್ತಿಯನ್ನಾಗಿ ಸ್ವೀಕರಿಸಿದ್ದೇನೆ.
| ಯಾವ ಯಾವ ವಿಧದ ಫೋಟೋಗ್ರಫಿ ನಡೆಸುತ್ತೀರಿ?
ಮದುವೆ ಛಾಯಾಗ್ರಹಣ, ಪಕ್ಷಿ ಛಾಯಾಗ್ರಹಣ, ಟ್ರಾವೆಲಿಂಗ್ ಛಾಯಾಗ್ರಹಣ... ಹೀಗೆ ಸಾಮಾನ್ಯವಾಗಿ ಎಲ್ಲಾ ವಿಧದ ಫೋಟೋಗ್ರಫಿಯನ್ನು ನಡೆಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಟ್ರಾವೆಲಿಂಗ್ ಫೋಟೋಗ್ರಫಿಯನ್ನು ಹೆಚ್ಚು ನಡೆಸುತ್ತಿದ್ದೇನೆ.
| ಛಾಯಾಗ್ರಹಣದ ಸಂದರ್ಭದಲ್ಲಿ ಛಾಯಾಗ್ರಾಹಕ ಎದುರಿಸುವ ಪ್ರಮುಖ ಸವಾಲುಗಳೇನು?
ಛಾಯಾಗ್ರಾಹಕರಿಗೆ ಪ್ರತಿದಿನವೂ ಒಂದೊಂದು ಸವಾಲೇ ಸರಿ. ಛಾಯಾಗ್ರಾಹಕನಿಗೆ ಫೋಟೋಗ್ರಫಿ ನಡೆಸುವ ಸಂದರ್ಭದಲ್ಲಿ ಹಲವು ಸಮಸ್ಯೆ ಮತ್ತು ಸವಾಲುಗಳನ್ನು ಎದುರಾಗುತ್ತವೆ. ಆ ಸಮಸ್ಯೆಯನ್ನು ಎದುರಿಸುವ ತಾಳ್ಮೆ ಮತ್ತು ಚಾಕಚಕ್ಯತೆ ಛಾಯಾಗ್ರಾಹಕನಿಗೆ ಇರಬೇಕು. ಆಗ ಯಶಸ್ಸು ಸಾಧ್ಯ.
| ಛಾಯಾಗ್ರಹಣವನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಬಯಸುವ ಯುವಜನತೆಗೆ ನಿಮ್ಮ ಸಲಹೆ ಏನು?
ಕಲಾತ್ಮಕವಾಗಿ, ವಿನೂತನವಾಗಿ ಫೋಟೋ ಸೆರೆಹಿಡಿಯುವ ಛಾತಿ ಹಾಗೂ ಜನರೊಂದಿಗೆ ವಿಶ್ವಾಸಾರ್ಹತೆ ಗಳಿಸಿಕೊಂಡಲ್ಲಿ ಫೋಟೋಗ್ರಫಿಯಲ್ಲಿ ಅವಕಾಶಗಳು ತುಂಬಾ ಇವೆ. ಮುಖ್ಯವಾಗಿ ಛಾಯಾಗ್ರಾಹಕನಿಗೆ ಸೃಜನಶೀಲತೆ ಅಗತ್ಯ.
| ಕೇರಳದ ಪ್ರಸಿದ್ಧ ನೃತ್ಯಕಲೆ `ತೆಯ್ಯಂ’ ಸಮಯದಲ್ಲಿ ಕ್ಲಿಕ್ಕಿಸಿದ ಚಿತ್ರಗಳಿಗೆ ಆಸ್ಕರಿ ಅವಾರ್ಡ್-2021 ಸಂದಿದೆ. ನಿಮ್ಮ ಪ್ರತಿಕ್ರಿಯೆ ಏನು?
ಆಸ್ಕರಿ ಪ್ರಶಸ್ತಿ ಬರುತ್ತದೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಕೊನೆಯ ಕ್ಷಣದಲ್ಲಿ ಚಿತ್ರಗಳನ್ನು ಸಲ್ಲಿಸಿದ್ದೆ. ಪ್ರಶಸ್ತಿ ದೊರೆತಿರುವುದು ಖುಷಿಯನ್ನು ಇಮ್ಮಡಿಗೊಳಿಸಿದೆ.
• ಆಸ್ಕರಿ ಅವಾರ್ಡ್ ಕುರಿತು ಒಂದಿಷ್ಟು:
ಕಳೆದ ಹಲವು ವರ್ಷಗಳಿಂದ ಕೆಲಸದ ನಿಮಿತ್ತ ದುಬೈನಲ್ಲಿ ನೆಲೆಸಿರುವ ಕನ್ನಡಿಗ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾತ್ಮಕ ಛಾಯಾಗ್ರಾಹಕ ಮೊಹಮ್ಮದ್ ಅರ್ಫಾನ್ ಆಸೀಫ್ ತಮ್ಮ ತಾಯಿ ಶಾರೂಖ್ ಆಸ್ಕರಿ ಹಮೀದ್ ಅವರ ನೆನಪಿನಲ್ಲಿ 1997 ರಲ್ಲಿ ಸ್ಥಾಪಿಸಿದ ಪ್ರಶಸ್ತಿ `ಆಸ್ಕರಿ ಅವಾರ್ಡ್’ (www.askaryphotoawards.com) ಛಾಯಾಗ್ರಹಣವನ್ನು ಕಲಾತ್ಮಕವಾಗಿ ಪೋಷಿಸುವ ಜೊತೆಗೆ ಕರ್ನಾಟಕದ ಯುವ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವ ಉದ್ದೇಶ ಈ ಸಂಸ್ಥೆಯದ್ದು.
`ಪ್ರತಿವರ್ಷ ಕರ್ನಾಟಕದ 35 ವರ್ಷದೊಳಗಿನ ಯುವ ಛಾಯಾಗ್ರಾಹಕರಿಗೆ ಈ ಸ್ಪರ್ಧೆ ಏರ್ಪಡಿಸುತ್ತೇವೆ. ಅತ್ಯುತ್ತಮ ಪ್ರತಿಭೆಯುಳ್ಳ ಆಯ್ದ ಇಬ್ಬರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 5 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಕಳೆದ 24 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಈವರೆಗೆ 48 ಯುವ ಛಾಯಾಗ್ರಾಹಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸುವುದರ ಜೊತೆಗೆ ಪ್ರೋತ್ಸಾಹಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಖ್ಯಾತ ಛಾಯಾಗ್ರಾಹಕ ಮತ್ತು ಆಸ್ಕರಿ ಫೌಂಡೇಶನ್‌ನ ಸಂಚಾಲಕ ಎಚ್. ಸತೀಶ್.