ಅಷ್ಟಕ್ಕೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ನಮಗ್ಯಾಕೆ ಅಷ್ಟೊಂದು ಹತ್ತಿರವಾಗುತ್ತಾರೆ? ಹೊಸ ತಲೆಮಾರಿನ ಮಕ್ಕಳು, ಯುವಕರು, ವಯಸ್ಕರಾದಿಯಾಗಿ ಎಲ್ಲರೂ ಮೆಚ್ಚುವಂತಹ ಸಾಹಿತಿ ಅವರು. ಅವರ ಬರಹಗಳಲ್ಲಿ ಅದೇನೋ ಆಕರ್ಷಣ ಶಕ್ತಿ ಇದೆ. ಅಷ್ಟು ಬೇಗ ನೀವು ಅದರಿಂದ ತಪ್ಪಿಸಿಕೊಳ್ಳಲಾರಿರಿ. ಅವರು ಬಳಸುವಂತಹ ಆ ಹಳ್ಳಿ ಸೊಗಡಿನ ಭಾಷೆ, ಅವರ ಕತೆ-ಕಾದಂಬರಿಗಳಲ್ಲಿ ಬರುವಂತಹ ಯಾವುದೇ ಮುಚ್ಚುಮರೆಯಿಲ್ಲದ ಸಂಭಾಷಣೆಗಳು, ಅವರು ಸೃಷ್ಟಿಸಿದ ಕಥಾ ಪ್ರಪಂಚ ಇವೆಲ್ಲವೂ ಒಂದು ಚಮತ್ಕಾರದಂತೆ ಕಂಡುಬಿಡುತ್ತವೆ. ಸುತ್ತಮುತ್ತಲಿನ ಪರಿಸರವನ್ನೋ, ಒಂದು ಸನ್ನಿವೇಶವನ್ನೋ ಅಥವಾ ಒಂದು ಪಾತ್ರವನ್ನೋ ಅವರು ತಮ್ಮ ಹಾಸ್ಯ ಮಿಶ್ರಿತ ಉತ್ಕೃಷ್ಟ ಕನ್ನಡದಲ್ಲಿ ವರ್ಣಿಸುವುದನ್ನು ಓದುವುದೇ ಒಂಥರಾ ಆನಂದ. ಅವರು ಕತೆಗಳನ್ನು ಹೆಣೆಯುವ ಪಶ್ಚಿಮ ಘಟ್ಟದ ಪರಿಸರವೂ ಎಷ್ಟು ಸುಂದರವಾಗಿರುತ್ತದೆ ಎಂದರೆ ನಾವೇ ಆ ಕತೆಗಳಲ್ಲಿ ಪ್ರವೇಶ ಮಾಡಿಬಿಟ್ಟಿದ್ದೇವೇನೋ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಆ ಸನ್ನಿವೇಶಗಳು ನಡೆಯುತ್ತಿದೆ ಎನ್ನುವಷ್ಟು!
ಅವರು ಬರವಣಿಗೆ ಶೈಲಿಯಲ್ಲಿಯೇ ಚಮತ್ಕಾರವನ್ನು ಸೃಷ್ಟಿಸಿದವರು. ಹಾಗಂತ ಅವರನ್ನು ಕೇವಲ ಸಾಹಿತಿ ಎಂದರೆ ತಪ್ಪಾದೀತೇನೋ. ಮೂಡಿಗೆರೆಯ ಆ ದಟ್ಟವಾದ ಕಾಡು, ಕಾಫಿ ಎಸ್ಟೇಟಿನ ನಡುವೆ ಮನೆಯನ್ನು ಮಾಡಿ, ಬದುಕನ್ನು ಆಸ್ವಾದಿಸುವುದು ಹೇಗೆ ಎಂದು ಮಾದರಿಯಾಗಿ ಬದುಕಿದವರು ಅವರು. ಮೀನು ಹಿಡಿಯುವುದು, ತಮ್ಮ ಕೋವಿಯನ್ನು ಹಿಡಿದುಕೊಂಡು ಶಿಕಾರಿಗೆ ಹೊರಟುಬಿಡೋದು, ಜನರ ಜೊತೆ ಹರಟೆ ಹೊಡೆಯೋದು. ಕ್ಯಾಮೆರಾವನ್ನು ಕೈಯಲ್ಲಿ ಹಿಡಿದುಬಿಟ್ಟರೆ ಅವರು ಆ ಮಾಯಕದ ಲೋಕವನ್ನು ಫ್ರೇಮಿನಲ್ಲಿ ಸುಂದರವಾಗಿ ಕಟ್ಟಿಕೊಡುವವರು. ಬರವಣಿಗೆಗೆ ಕೈ ಹಚ್ಚಿ ಕೂತರೆ ಅಲ್ಲಿ ಇನ್ನೊಂದು ಮೋಡಿ ಮಾಡುವ ಲೋಕ ಸೃಷ್ಟಿಯಾಗುತ್ತಿತ್ತು. ಕೆಲವೊಮ್ಮೆ ಬದುಕಿದರೆ ಅವರ ಹಾಗೆ ಸ್ವಚ್ಛಂದವಾಗಿ ಬದುಕಬೇಕಯ್ಯಾ ಎಂದೆನಿಸಿಬಿಡುತ್ತದೆ. ಕಷ್ಟವಾದ ವಿಜ್ಞಾನವನ್ನೂ ನಮಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಓದಿಸಿಕೊಂಡು ಹೋಗುವ ಹಾಗೆ ಬರೆಯುವ ಅವರ ಕೌಶಲ್ಯವನ್ನು ಮೆಚ್ಚಲೇಬೇಕು.
ಅವರ ಕತೆಗಳಲ್ಲಿ ಬರುವ ಹಾಸ್ಯ ಪ್ರಸಂಗಗಳು ನಿಮ್ಮನ್ನು ಒಂದಿಷ್ಟು ಕ್ಷಣ ನಗೆಗಡಲಲ್ಲಿ ತೇಲಿಸಿಯೇಬಿಡುತ್ತದೆ. ಹಾಗಂತ ಯಾವ ಹಾಸ್ಯವೂ ಕೂಡ ಕಥೆಯಲ್ಲಿ ಎಲ್ಲೋ ಹೊರಗಿನಿಂದ ತುರುಕಿದ ಹಾಗೆ ಅನಿಸುವುದಿಲ್ಲ. ಎಲ್ಲವೂ ಸಹಜವಾದುದೇ. ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುವ ಘಟನೆಗಳೇ. ಆದರೆ ಅವುಗಳನ್ನು ಬರೆದ ಶೈಲಿ ಎಲ್ಲರಿಗೂ ದಕ್ಕುವಂಥದ್ದಲ್ಲ. ಪದೇ ಪದೇ ಓದಿದರೂ ನಿಮಗೆ ಅವರ ಕತೆ ಕಾದಂಬರಿಗಳಲ್ಲಿ ಇನ್ನೊಂದೇನೋ ಹೊಸದನ್ನು ಕಂಡುಕೊಳ್ಳಬಹುದು. ಚಿಕ್ಕ ಚಿಕ್ಕ ವಿವರಗಳನ್ನೂ ಅವರು ಬಿಡುವುದಿಲ್ಲ. ಪರಿಸರದ ಬಗ್ಗೆ ಅವರಿಗಿರುವ ಅಪಾರವಾದ ಜ್ಞಾನ ಮತ್ತು ಕಾಳಜಿಯನ್ನು ನೀವು ಅವರ ಕೃತಿಗಳಲ್ಲಿ ಗಮನಿಸಬಹುದು. ʼನಾವು ಪೃಕೃತಿಯ ಭಾಗವಷ್ಟೇ, ನಮ್ಮಿಂದ ಪೃಕೃತಿಯಲ್ಲʼ ಎನ್ನುವ ಅವರ ಮಾತು ಸಾರ್ವಕಾಲಿಕವಾದದ್ದು. ಅವರ ಸಾಹಿತ್ಯ ಸೃಷ್ಟಿಗೂ ಮಲೆನಾಡಿನ ಆ ಮೂಡಿಗೆರೆಗೂ ಏನೋ ಅವಿನಭಾವ ಸಂಬಂಧವಿದೆ. ಅವರ ಕತೆ-ಕಾದಂಬರಿಗಳಿಗೆ ದಶಕಕಗಳೇ ಆದರೂ ಇವತ್ತೇ ಮುದ್ರಣಗೊಂಡ ಬಿಸಿಬಿಸಿ ದಿನಪತ್ರಿಕೆಗಳಷ್ಟೇ ಹೊಸದೆನಿಸಿಬಿಡುತ್ತದೆ. ಅದೇ ಅವರ ಶ್ರೇಷ್ಟ ಬರವಣಿಗೆಗೆ ಸಾಕ್ಷಿ.