ಕೆ. ಪಿ. ಪರ‍್ಣಚಂದ್ರ ತೇಜಸ್ವಿಯವರು ಬರೆದ ಮೂಡಿಗೆರೆಯ ಪುಸ್ತಕ ಪ್ರಕಾಶನದವರು ಪ್ರಕಾಶಿಸಿದಂತಹ ʼಜುಗಾರಿ ಕ್ರಾಸ್ʼ ಎಂಬ ಕಾದಂಬರಿಯು ೧೯೯೪ ರಲ್ಲಿ ಬಿಡುಗಡೆಯಾಗಿದ್ದು,, ಇಲ್ಲಿಯವರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿದೆ. ಕಾದಂಬರಿಯು ಒಟ್ಟೂ ೩೦ ಅಧ್ಯಾಯಗಳನ್ನು ಒಳಗೊಂಡಿದ್ದು, ಒಂದೊಂದೇ ಅಧ್ಯಾಯದಲ್ಲಿ ನಿಧಾನವಾಗಿ ಜುಗಾರಿ ಕ್ರಾಸ್, ದೇವರಪುರ, ಆ ಮಲೆನಾಡಿನ ಕಾಡುಗಳಲ್ಲಿ ನಡೆಯುವ ಕಾಳ ದಂಧೆಗಳ ಕರಾಳ ಲೋಕವನ್ನು ಓದುಗರ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ. ಇಲ್ಲಿ ಬರುವಂತಹ ಪಾತ್ರಗಳೂ ಒಂದಕ್ಕಿಂತ ಇನ್ನೊಂದು ವಿಚಿತ್ರವಾದುದು, ವಿಸ್ಮಯಕಾರಿಯಾದುದು.
ಈ ಕತೆಯು ಮಂಗಳೂರು - ಬೆಂಗಳೂರು ಹೆದ್ದಾರಿಯ ನಡುವೆ ಇರುವ ಜುಗಾರಿ ಕ್ರಾಸ್ ಮತ್ತು ದೇವಪುರದ ಸುತ್ತ ಕೇವಲ ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ನಡೆಯುವಂಥದ್ದು. ಆದರೆ ಅಲ್ಲಿ ಬರುವ ಮುಗ್ಧ ಮತ್ತು ಕರಾಳ ಪಾತ್ರಗಳು, ಸನ್ನಿವೇಶಗಳೆಲ್ಲಾ ಸೇರಿ ಒಂದು ಯುಗದಲ್ಲಿ ನಡೆದ ಕತೆ ಎಂದೆನಿಸಿಬಿಡುತ್ತದೆ. ಪುಸ್ತಕದ ಮುನ್ನುಡಿಯಲ್ಲಿ ತೇಜಸ್ವಿಯವರೇ ಹೇಳಿದಂತೆ ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್. ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಸಾಮಾಜಿಕ ಕಾದಂಬರಿ. ಕುವೆಂಪುರವರ ಕಾನೂರು ಹೆಗ್ಗಡತಿ, ಕಾರಂತರ ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ ಈ ಕಾದಂಬರಿಯೇ ಉದಾಹರಣೆ. ನಮ್ಮ ಕಾಡುಗಳಲ್ಲಿನ ಅತ್ಯಮೂಲ್ಯ ನೈರ‍್ಗಿಕ ಸಂಪತ್ತುಗಳು ಕಳ್ಳ ಖದೀಮರ ಪಾಲಾಗುತ್ತಿರುವುದಕ್ಕೆ ಲೇಖಕರು ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಈ ಕತೆ ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಡೆದರೂ ಕೂಡ ಒಂದು ಯುಗದಲ್ಲಿ ಕಳೆದುಹೋದಂತಹ ಭಾವನೆಯನ್ನು ಕೊಡುತ್ತದೆ. ಪಾತ್ರಗಳಿಗೆ ಇರುವ ಜೀವನವನ್ನು ಎದುರಿಸುವ ಗಂಭೀರವಾದ ಎದೆಗಾರಿಕೆಯನ್ನೂ ತೋರಿಸಿಕೊಡುತ್ತದೆ. ಮೇಲುನೋಟಕ್ಕೆ ನೋಡಿದಾಗ ಇಲ್ಲಿ ಬರುವ ಪಾತ್ರಗಳು ಒಂದಕ್ಕೊಂದು ಸಂಬಂಧವೇ ಇಲ್ಲದ್ದು ಎಂದೆನಿಸಿದರೂ ಅವುಗಳು ಈ ಜುಗಾರಿ ಕ್ರಾಸ್ ಸುತ್ತಮುತ್ತಲಿನ ಮಾಯಕದ ಲೋಕದಲ್ಲಿ ಒಂದಕ್ಕೊಂದು ಬೆಸೆದುಕೊಂಡಂತೆಯೇ ಇರುತ್ತವೆ. ಇಲ್ಲಿ ನಡೆಯುವ ಕಾಳಸಂತೆ, ಅಕ್ರಮಗಳು ಕೇವಲ ಇಲ್ಲಿ ಮಾತ್ರ ನಡೆಯದೇ ಜಗತ್ತಿನ ಬಹಳಷ್ಟು ಕಡೆ ನಡೆಯುವ ಅನ್ಯಾಯಗಳನ್ನು, ಸಾಮಾನ್ಯ ಜನರಿಗೆ ಗೊತ್ತೇ ಇಲ್ಲದ ಇನ್ನೊಂದು ಪ್ರಪಂಚವೂ ನಮ್ಮ ಸುತ್ತಲು ಇದೆ ಎಂಬುದನ್ನು ಅರಿವು ಮೂಡಿಸುತ್ತದೆ. ಆ ಭೂಗತ ಲೋಕವು ಎಂತಹದ್ದು? ಅಲ್ಲಿ ಹೋದವರ ಕತೆ ಏನಾಗುತ್ತದೆ? ಅದಕ್ಕೆ ಸಂಬಂಧ ಇಲ್ಲದವರೂ ಗೊತ್ತಿದ್ದು ಹಣದ ಆಸೆಗೋ ಅಥವಾ ಗೊತ್ತಿಲ್ಲದೆಯೋ ಹೇಗೆ ಅಲ್ಲಿ ಹೋಗಿ ಸಿಕ್ಕಿಹಾಕಿಕೊಂಡು ಹೊರಬರಲಾರದ ಜೇಡನ ಬಲೆಗೆ ಬಿದ್ದಂತೆ ಅವರ ಜೀವನ ನರಕವಾಗುತ್ತದೆ ಎಂಬುದನ್ನು ಕತೆಗಾರರು ಇಲ್ಲಿ ವಿವರಿಸಿದ್ದಾರೆ.
ಜುಗಾರಿ ಕ್ರಾಸ್! ಹೆಸರೇ ಒಂಥರಾ ವಿಚಿತ್ರ. ಅದು ಆ ಹೆಸರಿನ ಹಿಂದಿನ ರಹಸ್ಯವೇನು ಎಂಬುದು ನಮ್ಮನ್ನು ಕಾಡದೇ ಬಿಡುವುದಿಲ್ಲ. ಅದೊಂಥರ ನರ‍್ಜನ ಪ್ರದೇಶ. ದಟ್ಟವಾದ ಪಶ್ಚಿಮ ಘಟ್ಟಗಳ ಕಾಡಿನ ನಡುವೆ ನಾಲ್ಕು ದಾರಿಗಳು ಕೂಡುವ ಜಾಗ ಅದು. ಆದರೆ ಅಲ್ಲಿ ವಾಹನ ಓಡಾಟ ಅಷ್ಟೊಂದು ಇರುವುದೂ ಇಲ್ಲ, ಜನರ ಸಂಚಾರವೂ ಕಡಿಮೆಯೇ. ಆದರೂ ಆ ಜುಗಾರಿ ಕ್ರಾಸ್ ನಲ್ಲಿ ಗಿರಾಕಿಗಳು ಬರಬಹುದೆಂದು ಕಾಯುತ್ತಾ ಬಾಡಿಗೆ ಟ್ಯಾಕ್ಸಿಗಳು ನಿಂತಿರುತ್ತವೆ. ಅಲ್ಲಿರುವ ಫಾರೆಸ್ಟ್ ಚೆಕ್ ಪೋಸ್ಟ್ ಬಳಿಯ ಚಾ ಹೋಟೆಲ್ಲೂ ಜನರಿರದೇ ನೊಣ ಹೊಡೆಯುತ್ತಾ ಬಿದ್ದಿರುತ್ತದೆ. ಒಬ್ಬ ಫಾರೆಸ್ಟರ್ ಮತ್ತು ಗರ‍್ಡ್ ಮಾತ್ರ ಅಲ್ಲಿರುವುದು. ಆ ಜಾಗವೇ ನೋಡಿದವರಿಗೆ ಒಂಥರಾ ಅನುಮಾನವನ್ನು, ಬಹಳಷ್ಟು ಪ್ರಶ್ನೆಗಳನ್ನು ಹುಟ್ಟಿಸುವಂಥದ್ದು. ಅಲ್ಲಿನ ಫಾರೆಸ್ಟರ್ ಇಕ್ಬಾಲ್ ಸಾಬ ಮತ್ತು ಗರ‍್ಡ ಗುರಪ್ಪನ ಸೇರಿ ಅಲ್ಲಿ ಬರುವ ವಾಹನಗಳನ್ನು ತಡೆಹಾಕಿ ಹೇಗೆ ಅವರಿಂದ ಲಂಚವನ್ನು ಪೀಕುತ್ತಾರೆ? ಅದು ನಿಂತಿದ್ದು ಹೇಗೆ ಎಂಬಲ್ಲಿಂದ ಈ ಜುಗಾರ್ ಕ್ರಾಸ್ ಎಂಬ ರೋಚಕ ಕಥನ ಆರಂಭವಾಗುತ್ತದೆ.
ಜುಗಾರಿ ಕ್ರಾಸ್ ನಲ್ಲಿ ಹೋಗಿ ಬಂದು ಮಾಡುವ ಗಾಡಿಗಳನ್ನು ತಡೆದು ದೋಚುತ್ತಿದ್ದ ಫಾರೆಸ್ಟರ್ ಇಕ್ಬಾಲನ ಲಂಚಾವತಾರ ಹೇಗೆ ಕೊನೆಗೊಂಡಿತು ಎನ್ನುವಲ್ಲಿಂದ ಶುರುವಾಗುವ ಕತೆ ವಿವಿಧ ಮಜಲುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಜುಗಾರಿ ಕ್ರಾಸ್ ಮತ್ತು ದೇವಪುರದ ಆ ವಿಚಿತ್ರ ಕೊಂಪೆಯ ಮಾಯಕದ ಲೋಕವನ್ನು ಇವೆಲ್ಲಾ ಪಾತ್ರಗಳು ಹೇಳುತ್ತಾ ಹೋಗುತ್ತದೆ. ಪುಸ್ತಕವನ್ನು ಓದಿ ಕೆಳಗಿಟ್ಟ ಮೇಲೂ ಕೆಲವು ಪಾತ್ರಗಳು ನಿಮ್ಮ ಮನದಲ್ಲೇ ಉಳಿದುಬಿಡುತ್ತದೆ. ಪರ‍್ಣಚಂದ್ರ ತೇಜಸ್ವಿಯವರ ಕತೆ ಕಾದಂಬರಿಗಳಲ್ಲಿನ ಪಾತ್ರ ಪ್ರಪಂಚಗಳ ಮೋಡಿಯೇ ಅಂಥದ್ದು. ಸುಲಭವಾಗಿ ಅವುಗಳನ್ನು ನಿಮ್ಮ ತಲೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಈ ಕಾದಂಬರಿಯು ನಮ್ಮಲ್ಲಿ ಅಚ್ಚರಿಗಳನ್ನು ಹುಟ್ಟಿಸುತ್ತಾ ಒಂದೇ ಉರಿಸಿಗೆ ಎಲ್ಲವನ್ನೂ ಓದಿಸಿಕೊಂಡು ಹೋಗುತ್ತದೆ. ಕೊನೆ ಕೊನೆಯಲ್ಲಂತೂ ಇನ್ನಷ್ಟು ರೋಚಕದ ತಿರುವುಗಳು ನಮ್ಮನ್ನು ಪತ್ತೇದಾರಿ ಥ್ರಿಲ್ಲರ್ ಸಿನೆಮಾಗಳನ್ನು ನೋಡುವಾಗ ತುದಿಗಾಲಲ್ಲಿ ನೋಡುತ್ತೇವಲ್ಲ ಹಾಗೆ ಓದಿಬಿಡುತ್ತೇವೆ. ಕತೆ ಕೊನೆಯಲ್ಲಿ ಸಮಾಧಾನಕರವಾಗಿ ಮುಗಿದಾಗ ಅಬ್ಬಾ!! ಎಂದು ನಿಟ್ಟುಸಿರನ್ನೂ ಬಿಡುತ್ತೇವೆ. ಅಷ್ಟು ಆಳವಾಗಿ ಕತೆ ನಿಮ್ಮನ್ನು ಕರೆದೊಯ್ಯುತ್ತದೆ.
ಪುಸ್ತಕಗಳಾಗಿರಬಹುದು ಅಥವಾ ಸಿನೆಮಾಗಳೇ ಆಗಿರಬಹುದು, ಅವುಗಳು ಆಯಾ ಕಾಲಮಾನಗಳಲ್ಲಿ ಜನಜೀವನವು ಹೇಗಿತ್ತು, ಅವರ ಉಡುಗೆ ತೊಡುಗೆಗಳು, ಅವರು ಯೋಚನೆ ಮಾಡುವ ರೀತಿ, ಸುತ್ತಮುತ್ತಲಿನ ಪರಿಸರ ಹೇಗಿತ್ತು ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ದಾಖಲೆಗಳನ್ನು ಒದಗಿಸುತ್ತವೆ. ಕುವೆಂಪು, ಶಿವರಾಮ ಕಾರಂತರು ಅಥವಾ ಪರ‍್ಣಚಂದ್ರ ತೇಜಸ್ವಿಯವರ ಕತೆ ಕಾದಂಬರಿಗಳನ್ನೋ ಅಥವಾ ಇತರ ಪುಸ್ತಕಗಳನ್ನೋ ಓದಿದಾಗ ಆಗಿನ ಪಶ್ಚಿಮ ಘಟ್ಟಗಳ ಸುದರ‍್ಘವಾದ ಪರಿಚಯ ನಮಗೆ ಸಿಕ್ಕಿಬಿಡುತ್ತದೆ. ಅಂದಿಗೂ ಇಂದಿಗೂ ಎಷ್ಟು ವ್ಯತ್ಯಾಸಗಳಾಗಿವೆ? ನೆಲಕ್ಕೆ ಸರ‍್ಯನ ಬೆಳಕು ಒಂದಿನಿತೂ ತಾಗದಷ್ಟಿದ್ದ ಘೋರ ಅರಣ್ಯಗಳು ಇಂದು ಎಷ್ಟು ಉಳಿದುಕೊಂಡಿವೆ? ಎನ್ನುವಂತಹ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ. ಸಾಹಿತ್ಯದ ಪುಸ್ತಕಗಳು ಬರೀ ಮನೋರಂಜನೆಯ ಸರಕಾಗದೇ ಇತಿಹಾಸದ ಭಾಗಗಳನ್ನು ಮುಂದಿನ ತಲೆಮಾರಿಗೆ ದಾಟಿಸುವಂತಹ ಸೇತುವೆಯೂ ಆಗಿದೆ.
ಜುಗಾರಿ ಕ್ರಾಸ್ ಕಾದಂಬರಿಯು ಕೇವಲ ಮನೋರಂಜನೆಯ ಸರಕಾಗದೇ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಸಾಮಾಜಿಕ ಸಮಸ್ಯೆಗಳು, ನಾಶವಾಗುತ್ತಿರುವ ಪಶ್ಚಿಮ ಘಟ್ಟದ ಕಾಡುಗಳ ಬಗ್ಗೆ ಕಳವಳವೂ ಇಲ್ಲಿ ವ್ಯಕ್ತವಾಗುತ್ತದೆ. ಸಾಹಿತ್ಯದ ದೃಷ್ಟಿಯಿಂದ ಮಾತ್ರವಲ್ಲದೇ ಸಾಮಾಜಿಕ ದೃಷ್ಟಿಯಲ್ಲೂ ಇದೊಂದು ಬಹುಮುಖ್ಯವಾದ ಕಾದಂಬರಿಯಾಗಿ ಉಳಿಯಲು ಇದೇ ಕಾರಣ. ಸಹ್ಯಾದ್ರಿ ಕಾಡುಗಳು ತೆರೆದಿಟ್ಟ ಖಜಾನೆಗಳಂತಾಗಿಬಿಟ್ಟಿದೆ. ಈ ಕಾಡುಗಳ ಒಂದೊಂದೇ ಮರ ಎರಡು ಮೂರು ಲಕ್ಷ ಬೆಲೆಬಾಳುತ್ತವೆ. ಕಲ್ಲುಕಳ್ಳರಿಗೆ, ಮರಗಳ್ಳರಿಗೆ, ಗಂಧ ಚಕ್ಕೆ ಕಳ್ಳ ಸಾಗಣೆ ಮಾಡುವ ಖದೀಮರಿಗೆ ಕಣ್ಣು ಹರಿಸಿದಲ್ಲೆಲ್ಲಾ ಹಣದ ರಾಶಿ ಬಿದ್ದಿರುವಂತೆ ಕಾಣುತ್ತದೆ. ಇದರಿಂದ ಉತ್ತತ್ತಿಯಾದ ಕಾಳಧನ ದೇಶದ ರಾಜಕೀಯದ ಮೇಲೆ ಬೀರುವ ಪರಿಣಾಮವನ್ನೂ ಭಯಾನಕವಾದುದು. ಇದೇ ಕಾದಂಬರಿಯಲ್ಲಿ ಬರುವ ಒಂದು ಮಾತಿನಂತೆ ನಾವು ಒಂದು ವಿಷಯವನ್ನೋ, ಸಾಹಿತ್ಯವನ್ನೋ ಬಹಳಷ್ಟು ದೃಷ್ಟಿಯಲ್ಲಿ ರ‍್ಥಮಾಡಿಕೊಳ್ಳಬಹುದು. ಈ ಕೃತಿಯನ್ನೂ ಕೂಡ ನಾವು ಮೊದಲ ಬಾರಿ ಓದಿದಾಗ ಒಂದು ರೀತಿಯಲ್ಲಿ ರ‍್ಥವಾಗಬಹುದು. ಇನ್ನೊಂದು ಬಾರಿ ಓದಿದಾಗ ಅದು ಬೇರೆಯದೇ ರ‍್ಥ ಕೊಡಲೂಬಹುದು.
ಜುಗಾರ್ ಕ್ರಾಸ್ ನ ಕತೆಯ ನಡುವೆ ಮಲೆನಾಡಿನ ಕಾಡಿನಲ್ಲಿರುವ ಒಂದು ಜಾತಿಯ ಮೈಮರೆಸುವ ಬಳ್ಳಿಯ ಉಲ್ಲೇಖ ಬರುತ್ತದೆ. ಅದು ಅಕಸ್ಮಾತ್ ಯಾರಿಗಾದರೂ ತಾಗಿದರೆ, ತಾಗಿದವನಿಗೆ ಬಂದ ದಾರಿ ಸಂಪರ‍್ಣ ಮರೆತೇ ಹೋಗುತ್ತದೆ. ಎಷ್ಟೋ ಬಾರಿ ಕಳೆದು ಹೋದ ದನಕರುಗಳು ಹೀಮದಿರುಗಿ ಬಂದರೂ ಹುಡುಕಿ ಹೋದವರು ಮಾತ್ರ ಹಿಂದಿರಿಗುವುದಿಲ್ಲ. ಹೀಗೆ ಇದರ ಬಗ್ಗೆ ತೇಜಸ್ವಿಯವರು ಈ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಮಲೆನಾಡಿನ ನಡುವೆ ಹುಟ್ಟಿ ಬೆಳೆದವರಿಗೆ ಇದು ಬಹುತೇಕ ಗೊತ್ತಿರುವಂತಹ ಸಂಗತಿ. ಆದರೆ ಮುಂದಿನ ಪೀಳಿಗೆಗೆ ಇದು ಗೊತ್ತಿರುವುದೋ ಏನೋ. ಇದರಲ್ಲಿ ಸತ್ಯ ಎಷ್ಟಿದೆಯೋ ಗೊತ್ತಿಲ್ಲ. ಆದರೆ ಅದರ ಬಗ್ಗೆ ಜನರಿಗೆ ವಿಚಿತ್ರ ಕುತೂಹಲ ಇರುವುದಂತೂ ಸತ್ಯ.
ಸಹ್ಯಾದ್ರಿ ಕಾಡುಗಳಲ್ಲಿ ನಡೆಯುವ ಇಂದಿಗೂ ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿಗಳು ಅಲ್ಲಿಯೇ ಜನರ ನಡುವೆ ಇತಿಹಾಸದಲ್ಲಿ ದಾಖಲಾಗದೇ ಹುದುಗಿಹೋಗಿಬಿಡುತ್ತದೆ. ತೇಜಸ್ವಿಯವರು ಇನ್ನೊಂದು ಅವರ ಔಷಧೀಯ ಸಸ್ಯದ ಕುರಿತಾದ ಕತೆಯಲ್ಲಿ ಇದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾರೆ.
ಈಗೀಗ ಪ್ರಸಿದ್ಧವಾಗುತ್ತಿರುವ ಓಟಿಟಿ ವೇದಿಕೆಗಳು ಒದಗಿಸುತ್ತಿರುವ ಸಿನೆಮಾಗಳು, ಸಿರಿಸ್ ಗಳಿಂದಾಗಿ ಪುಸ್ತಕಗಳ ಕಡೆಗಿನ ಆಸಕ್ತಿ ತುಸು ಕಡಿಮೆಯಾಗುತ್ತಿದೆಯೇ ಎನ್ನುವ ಭಾವನೆಯೂ ಬರುತ್ತಿದೆ. ಅವುಗಳೂ ಸಾಹಿತ್ಯದ ಒಂದು ಮುಂದುವರೆದ ಭಾಗವೇ. ಆದರೂ ಕೆಲವು ಕತೆ-ಕಾದಂಬರಿಗಳು ನಮ್ಮ ಕಲ್ಪನೆಗಳಿಗೆ ಪುಷ್ಟಿಯನ್ನು ಕೊಡುವ ಹಾಗಿರುತ್ತದೆ. ಯಾಕೆ ಪುಸ್ತಕಗಳನ್ನು ಓದಬೇಕು ಎನ್ನುವುದಕ್ಕೆ ಕಾರಣ ಇಷ್ಟೇ. ಒಂದು ಭಾಷೆಯ ಪುಸ್ತಕಗಳನ್ನು ಓದುವುದರಿಂದ ಆ ಭಾಷೆಯ ಉಳಿವಿಗೂ ಸಹಕಾರಿಯಾಗುತ್ತದೆ, ನಮ್ಮ ಊಹಾಶಕ್ತಿಯನ್ನೂ ಹೆಚ್ಚು ಮಾಡುತ್ತದೆ.
ತಮ್ಮ ಕತೆಗಳ ಮೂಲಕ ನಿಮ್ಮನ್ನು ಯಾವುದೋ ಒಂದು ಬೇರೆ ಲೋಕಕ್ಕೆ ಕರೆದೊಯ್ಯುವ ಸಾರ‍್ಥ್ಯವನ್ನು ಒಂದು ಸಾಹಿತ್ಯ ಹೊಂದಿದೆ. ಬಹುಷಃ ಪುಸ್ತಕಗಳಿಗೆ ಇರುವ ತಾಕತ್ತು ಅದು. ಕನ್ನಡ ಸಾಹಿತ್ಯವು ಮಹಾಸಾಗರವಿದ್ದಂತೆ. ಆ ಮಹಾಸಾಗರದಲ್ಲಿ ನಾವು ಒಂದು ಮೊಗಸೆಯಷ್ಟು ನೀರನ್ನು ಹಿಡಿಯುವ ಪ್ರಯತ್ನ ಮಾಡಿದ್ದೇವಷ್ಟೇ. ಇದರಿಂದಾಗಿ ಇನ್ನೊಂದಿಷ್ಟು ಜನರಿಗಾದರೂ ಸ್ಪರ‍್ತಿ ದೊರೆತು ಕನ್ನಡದ ಪುಸ್ತಕಗಳನ್ನು ಓದುವ ಇನ್ನೊಬ್ಬರಿಗೆ ಓದಿಸುವ ಕೆಲಸ ಮಾಡಿದರೆ ನಮ್ಮ ಬಾಷೆಯ ಅಭಿವೃದ್ಧಿಗೆ ಅದು ನೆರವಾದೀತು.
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಜುಗಾರ್ ಕ್ರಾಸ್ ನಂತಹ ಬಹಳಷ್ಟು ಕೃತಿಗಳಿವೆ. ಕನ್ನಡ ಭಾಷೆಯು ಪ್ರಪಂಚದ ಪುರಾತನ ಭಾಷೆಗಳಲ್ಲಿ ಒಂದು. ಪುರಾತನ ಮಾತ್ರವಲ್ಲದೇ ವ್ಯಾಕರಣದ ದೃಷ್ಟಿಯಲ್ಲೂ, ಭಾಷೆಯಲ್ಲಿನ ವೈಜ್ಞಾನಿಕತೆಯ ದೃಷ್ಟಿಯಲ್ಲೂ ಶ್ರೇಷ್ಟತೆಯನ್ನು ಹೊಂದಿದೆ. ಸಾಹಿತ್ಯವು ಕೇವಲ ಭಾಷಾ ವಿದ್ಯರ‍್ಥಿಗಳಿಗೆ ಮಾತ್ರವಲ್ಲದೇ ಇತರರಿಗೂ ಅಷ್ಟೇ ಮಹತ್ವದ್ದು. ನಮ್ಮ ಪರಂಪರೆಯನ್ನು, ಇತಿಹಾಸವನ್ನು, ಕಲೆ ಸಂಸ್ಕೃತಿಯನ್ನು ಅರಿಯಬೇಕಾದರೆ ಸಾಹಿತ್ಯಗಳನ್ನು ಓದುವುದು ಬಹುಮುಖ್ಯವಾಗುತ್ತದೆ. ಜ್ಞಾನ ಪರಂಪರೆಯನ್ನು ನಮ್ಮ ಮುಂದಿನ ಪೀಳಿಗೆ ದಾಟಿಸುವುದೂ ಕೂಡ ಅಷ್ಟೇ ಮುಖ್ಯ . ಭಾಷೆಯ ಉಳಿವು ಮಾತ್ರವಲ್ಲದೇ ಅದರ ಬೆಳವಣಿಗೆಯೂ ಆಗಬೇಕೆಂಬುದು ನಮ್ಮ ಆಶಯವಾಗಿದೆ.