ಕರ್ನಾಟಕದ ಹಳ್ಳಿಯೊಂದರಲ್ಲಿ ಶುರುವಾದ ಹ್ಯಾಂಗ್ಯೋ ಎನ್ನುವ ಬ್ರಾಂಡ್ ಇಂದು ದೇಶದ ಪ್ರಮುಖ ಐಸ್ ಕ್ರೀಮ್ ಉದ್ದಿಮೆಯಾಗಿ ಬೆಳೆದು ನಿಂತ ಪರಿ ಸ್ಪೂರ್ತಿದಾಯಕವಾದುದು.  

ಐಸ್ ಕ್ರೀಮ್ ಎಂದಾಗ ನಮಗೆ ನೆನಪಾಗುವ ಕೆಲವೇ ಕೆಲವು ಬ್ರಾಂಡ್ ಗಳಲ್ಲಿ ಹ್ಯಾಂಗ್ಯೋ ಕೂಡ ಒಂದು. ಹ್ಯಾಂಗ್ಯೋ ಐಸ್ ಕ್ರೀಮ್ ಅದರ ಉತ್ಕೃಷ್ಟವಾದ ಗುಣಮಟ್ಟಕ್ಕೆ ಹೆಸರಾದದ್ದು. ಕರ್ನಾಟದಲ್ಲಿ ಮಾತ್ರವಲ್ಲದೇ ದೇಶದಲ್ಲಿಯೇ ಒಂದು ಹೆಸರಾಂತ ಐಸ್ ಕ್ರೀಮ್ ಬ್ರಾಂಡ್ ಆಗಿ ಬೆಳೆದಿದೆ. 

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೂಲದ ಪ್ರದೀಪ್ ಪೈ, ಜಗದೀಶ್ ಪೈ ಮತ್ತು ದಿನೇಶ್ ಪೈ ಯವರು ಸೇರಿ ಕರಾವಳಿ ಭಾಗದಲ್ಲಿನ ಹಾಲಿನ ಬೇಡಿಕೆ ಇದ್ದರೂ ಸರಿಯಾದ ಪೂರೈಕೆ ಇಲ್ಲದಿರುವುದನ್ನು ಕಂಡು ಯಲ್ಲಾಪುರ ತಾಲೂಕಿನ ಕಿರುವತ್ತಿ ಎಂಬ ಕುಗ್ರಾಮದಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಶ್ರೀಕೃಷ್ಣ ಮಿಲ್ಕ್ ಎಂಬ ಸಂಸ್ಥೆಯ ಹೆಸರಿನಲ್ಲಿ ಡೈರಿ ಉದ್ಯಮವನ್ನು ಶುರುಮಾಡಿದರು.

ನಂತರ ಜಮಖಂಡಿ, ಬ್ರಹ್ಮಾವರ ಹೀಗೆ ಹಲವು ಕಡೆಗಳಲ್ಲಿ ಡೈರಿಗಳನ್ನು ಸ್ಥಾಪಿಸುತ್ತಾ ಹೋದರು. ಆರಂಭದಲ್ಲಿ ಅಲ್ಪಸಮಯ ಬಾಳಿಕೆ ಬರುವಂತಹ ಕ್ಷೀರೋತ್ಪನ್ನಗಳ ಮೇಲೆ ಮಾತ್ರ ಗಮನ ಕೊಟ್ಟಿದ್ದರು. ಮಾರುಕಟ್ಟೆ ವಿಸ್ತರಿಸುತ್ತಾ ಹೋದಂತೆ ನಮ್ಮಲ್ಲಿಯೇ ಏಕೆ ಉತ್ತಮ ಗುಣಮಟ್ಟದ ಐಸ್ ಕ್ರೀಮ್ ಗಳನ್ನು ಉತ್ಪಾದಿಸಬಾರದು ಎಂಬ ಆಲೋಚನೆ ಹಲವು ಪ್ರಯೋಗಗಳ ನಂತರ ೨೦೦೩ ರಲ್ಲಿ ಹ್ಯಾಂಗ್ಯೋ ಎಂಬ ಸಂಸ್ಥೆಯ ಸ್ಥಾಪನೆಯ ಜೊತೆಗೆ ಕಾರ್ಯರೂಪಕ್ಕೆ ಬಂದಿತು.

ಏನಿದು ಹ್ಯಾಂಗ್ಯೋ? 


ಬಹುಷಃ ನಮಗೆಲ್ಲಾ ಇದನ್ನು ಕೇಳಿದಾಗ ಚೀನಾದ್ದೋ, ಜಪಾನಿನದ್ದೋ ಹೆಸರು ಎಂದೆನಿಸಬಹುದು, ಆದರೆ ಇದು ಅಪ್ಪಟ ಕೊಂಕಣಿಯ ಶಬ್ಧ. ಕೊಂಕಣಿ ಮಾತನಾಡುವವರ ಮನೆಯಲ್ಲಿ ದಿನನಿತ್ಯ ಬಳಸಲ್ಪಡುವ ಪದ ಇದು. ಹ್ಯಾಂಗ್ಯೋ ಎಂದರೆ ಇಲ್ಲಿ ಬಾ ಎಂದರ್ಥ.

ಅವರ ಪ್ರಾರಂಭದ ಉದ್ದೇಶ ಇದ್ದದ್ದು ಹಳ್ಳಿಯ ಭಾಗದಲ್ಲಿ ಪ್ಲಾಂಟ್ ಗಳನ್ನು ಸ್ಥಾಪಿಸಿ ಅಲ್ಲಿನ ಸ್ಥಳೀಯ ಜನರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು ಎಂಬುದು. ಅದನ್ನು ಈಗಲೂ ಮುನ್ನಡೆಸಿಕೊಂಡು ಬಂದಿದ್ದಾರೆ.

 "ಕೇವಲ ಒಂದು ಸಂಸ್ಥೆಯ ಸ್ಥಾಪಕರು  ಮಾತ್ರವಲ್ಲದೇ ಅವರ ಸುತ್ತಲಿನ ಎಲ್ಲಾ ಭಾಗೀದಾರರೂ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಆಶಯ"
 ಪ್ರದೀಪ್‌ ಪೈ, ಹ್ಯಾಂಗ್ಯೋ ಸಂಸ್ಥಾಪಕರು

‘ಐಸ್ ಕ್ರೀಮ್ ಉದ್ಯಮವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಉತ್ಪಾದನಾ ಯುನಿಟ್ ಗಳಲ್ಲಿ ಅಥವಾ ರೆಫ್ರಿಜಿರೇಟರ್ ಗಳಲ್ಲಿ ಇಟ್ಟಾಗ ಸ್ವಲ್ಪವೇ ಹೆಚ್ಚು ಕಡಿಮೆ ಆದರೂ ಕೊನೆಗೆ ಬಳಕೆದಾರರನ್ನು ತಲುಪುವಾಗ ಉತ್ಪನ್ನ ಹಾಳಾಗಿಬಿಡುತ್ತದೆ. ಸಂಸ್ಥೆಯಲ್ಲಿರುವ ಪರಿಣಿತ ಸಿಬ್ಬಂದಿಗಳಿಂದಾಗಿ ಯಾವುದೇ ತೊಂದರೆ ಬರದಂತೆ ಉತ್ಪನ್ನಗಳು ಗ್ರಾಹಕರನ್ನು ತಲುಪುತ್ತಿವೆ’ ಎನ್ನುತ್ತಾರೆ ಹ್ಯಾಂಗ್ಯೋದ ಸಂಸ್ಥಾಪಕರಲ್ಲಿ ಒಬ್ಬರಾದ ಪ್ರದೀಪ್ ಪೈ ಯವರು.

ದಕ್ಷಿಣ ಕನ್ನಡದ ಹೇರೂರಿನಲ್ಲಿ ಆರ್ & ಡಿ (ರಿಸರ್ಚ್ ಮತ್ತು ಡೆವಲಪ್ಮೆಂಟ್) ಯುನಿಟ್ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ ಹೊಸ ಹೊಸ ರೀತಿಯ ಐಸ್ ಕ್ರೀಮ್ ಗಳನ್ನು ಪ್ರಯೋಗ ಮಾಡಿ ನೋಡಲಾಗುತ್ತದೆ. ನಂತರ ಕಂಪೆನಿಯವರು ಪ್ರತಿ ವರ್ಷವೂ ಹೊಸ ಹೊಸ ಫ್ಲೇವರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

ಹ್ಯಾಂಗ್ಯೋ ೨೫೦ ಫ್ರಾಂಚೈಸಿಗಳು, ೭೦ ಕ್ಕ ಹೆಚ್ಚು ಶಾಪ್ ಗಳು ಮತ್ತು ೧೪೦೦೦ ರೀಟೇಲರ್ ಗಳ ಉತ್ತಮ ಬಾಂಧವ್ಯವನ್ನ ಬೆಸೆದಿದೆ. ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಗೋವಾ, ಕೇರಳ, ಆಂದ್ರ, ತೆಲಂಗಾಣ, ತಮಿಳುನಾಡಿನಲ್ಲಿ ಈಗಾಗಲೇ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಉಳಿದ ಕಡೆಗಳಲ್ಲಿ ಹಂತ ಹಂತವಾಗಿ ವಿಸ್ತರಣಾ ಕಾರ್ಯ ನಡೆಯುತ್ತಿದೆ. ಹ್ಯಾಂಗ್ಯೋ ಸುಮಾರು ನೂರೈವತ್ತು ಕೋಟಿ ರೂಪಾಯಿಗಳ ವಹಿವಾಟನ್ನು ಮಾಡುತ್ತಿದೆ.

ಸಧ್ಯಕ್ಕೆ ಮೂರು ಐಸ್ ಕ್ರೀಮ್ ಪ್ಲಾಂಟ್ ಗಳಲ್ಲ್ಲಿ ೭೦೦ ಕ್ಕೂ ಅಧಿಕ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಶ್ರೀ ಕೃಷ್ಣ ಮಿಲ್ಕ್ ನ್ನೂ ಸೇರಿಸಿದರೆ ಸಾವಿರಕ್ಕೂ ಹೆಚ್ಚು ಮಂದಿ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಕಳೆದ ಹತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ ಶಿಪ್ ನ್ನು ನೀಡುತ್ತಿದ್ದಾರೆ. ಬಹಳಷ್ಟು ಯುವಕರಿಗೆ ಕೌಶಲ್ಯಗಳನ್ನು ಹೆಚ್ಚಿಸುವ ಟ್ರೇನಿಂಗ್ ಗಳನ್ನು ನೀಡುತ್ತಾ ಬಂದಿದ್ದಾರೆ.

ಹ್ಯಾಂಗ್ಯೋದ ಕತೆ ಮುಂದಿನ ಯುವೋದ್ಯಮಿಗಳಿಗೆ ಸ್ಪೂರ್ತಿಯನ್ನು ನೀಡುವಂಥದ್ದು. ಇಂತಹ ಸಂಸ್ಥೆಗಳು ಹೆಚ್ಚಿದರೆ ಸ್ಥಳೀಯ ಜನರಿಗೆ ಉದ್ಯೋಗಾವಕಾಶವೂ ದೊರೆಯುತ್ತದೆ. ಗ್ರಾಮೀಣಾಭಿವೃದ್ಧಿಗೂ ಸಹಾಯಕವಾಗುತ್ತದೆ.