ತೇಜೋತುಂಗಭದ್ರಾ. ಪುಸ್ತಕವನ್ನು ತರಿಸಿಟ್ಟಿದ್ದರೂ ಓದದೇ ಅದೆಷ್ಟೋ ದಿನಗಳು ಕಳೆದು ಹೋಗಿತ್ತು. ಕಾಲೇಜಿನ ಲೈಬ್ರರಿಯಲ್ಲಿ ಒಂದು ಅಧ್ಯಾಯವನ್ನು ಓದಿ ಇಟ್ಟಿದ್ದು. ವಸುದೇಂದ್ರರ ಬರಹದ ಶೈಲಿ ನನಗೆ ತುಂಬಾ ಇಷ್ಟ. ಅವರು ಬರೆದ ಕತೆಗಳಿಗಿಂತಲೂ ಸುಲಲಿತ ಪ್ರಬಂಧಗಳು ನನಗೆ ಬಹಳ ಹತ್ತಿರವಾದವು. ಯಾವುದೇ ಪುಸ್ತಕ ತುಂಬಾ ಚೆನ್ನಾಗಿದೆ ಅನಿಸಿದರೆ ನಾನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಲು ಹೋಗುವುದಿಲ್ಲ. ಅಲ್ಲಿನ ದೃಶ್ಯಗಳನ್ನು ಕಲ್ಪಿಸಿಕೊಂಡು ಆಸ್ವಾದಿಸಬೇಕು‌. ಕಲ್ಪನೆಯ ಆ ಲೋಕದಲ್ಲಿ ಒಂದಿಷ್ಟು ಸಂಚರಿಸಬೇಕು. ಒಂದೇ ಬಾರಿ ಓದಿ ಮುಗಿಸಿಬಿಟ್ಟರೆ ಇಷ್ಟೇನಾ ಅನಿಸಿಬಿಡುವುದಿದೆ. ಹಾಗಾಗಿ ನಾನು ಕತೆ - ಕಾದಂಬರಿಗಳನ್ನು ಓದುವುದು ಸ್ವಲ್ಪ ನಿಧಾನವಾಗಿಯೇ. ಸೆಮ್ ಎಕ್ಸಾಮ್ ಗೆ ಅಂತ ಸ್ಟಡಿ ಹಾಲಿಡೇ ಕೊಟ್ಟಿದ್ರಲ್ವ, ಮತ್ತೆ ತೇಜೋತುಂಗಭದ್ರಾವನ್ನು ಓದಲು ಶುರು ಮಾಡಿ ಮುಗಿಸಿದ್ದು. ಓದಿದ ನಂತರ ಒಂದು ರೀತಿಯ ಸಮಾಧಾನ.


ತೇಜೋ ಮತ್ತು ತುಂಗಭದ್ರೆಯ ನದಿಯ ದಂಡೆಯಲ್ಲಿ ಪ್ರಾರಂಭವಾದ ಪ್ರೇಮಕಥನಗಳು ಮಧ್ಯದ ರಾಜಕೀಯ, ಮತಗಳು, ವ್ಯವಹಾರದ ಸಂಘರ್ಷದ ಅಬ್ಬರದ ನಡುವೆ ನಿಲುಕಿ ಕೊನೆಗೂ ಸುಖಾಂತ್ಯದತ್ತ ಸಾಗುತ್ತದೆ. ಒಂದಿಷ್ಟು ಹಣ ಗಳಿಸಬಹುದು ಎನ್ನುವ ಆಸೆಯಿಂದ 24,000 ಸಾವಿರ ಮೈಲುಗಳ ಸಮುದ್ರ ದಾರಿಯಷ್ಟು ದೂರ ಇರುವ ಲಿಸ್ಬನ್ ನಿಂದ ಭಾರತಕ್ಕೆ ಪ್ರಯಾಣ ನಡೆಸುವ ಗೇಬ್ರಿಯಲ್ ಇಲ್ಲಿ ಬಂದು ಏನೇನೆಲ್ಲ ಅನುಭವಿಸುತ್ತಾನೆ ಎನ್ನುವ ಕತೆ ಮನಕಲುಕುತ್ತದೆ.

ಕಾಳುಮೆಣಸು ಎಂಬ ಒಂದು ಚಿಕ್ಕ ಸಾಂಬಾರ ಪದಾರ್ಥವು ಒಂದು ದೇಶದ ಆರ್ಥಿಕತೆಯನ್ನೇ ಹೇಗೆ ಬದಲಾಯಿಸುತ್ತದೆ. ಅದನ್ನು ಅರಸಿ ಜೀವವನ್ನೂ ಲೆಕ್ಕಿಸದೇ ಇಷ್ಟು ಮೈಲಿ ದೂರ ಇರುವ ಭಾರತಕ್ಕೆ ಬರಲು ಪ್ರೇರೇಪಣೆ ನೀಡುತ್ತದೆ. ಭಾರತವು ಇಡೀ ಜಗತ್ತನ್ನು ತನ್ನೆಡೆಗೆ ಆಕರ್ಷಿಸುವಷ್ಟು ಶ್ರೀಮಂತಿಕೆಯನ್ನು ಆ ಕಾಲಮಾನದಲ್ಲಿ ಹೊಂದಿತ್ತು. ಮತಾಂತರ, ರಾಜಕೀಯ ಆಸೆಗಳನ್ನೇ ಹೊಂದಿರುವ ಪೋರ್ಚುಗೀಸರಲ್ಲಿ ಗೇಬ್ರಿಯಲ್ ಒಬ್ಬ ಮನುಷ್ಯತ್ವವನ್ನು ಹೊಂದಿರುವ ವ್ಯಕ್ತಿಯಾಗಿ ನಿಲ್ಲುತ್ತಾನೆ.

ಪೋರ್ಚುಗೀಸ್ ನಲ್ಲಿ ಒಂದು ಮುಷ್ಟಿಯಷ್ಟು ಕಾಳುಮೆಣಸಿಗೂ ಇರುವ ಬಂಗಾರದ ಮೌಲ್ಯ ಹಾಗೂ ಅಷ್ಟೇ ವೈರುಧ್ಯ ಎನಿಸುವಂತೆ ವಿಜಯ ನಗರ ಸಾಮ್ರಾಜ್ಯದ ತೆಂಬಕಪುರದ ರಥೋತ್ಸವದಲ್ಲಿ ಅದೇ ಕಾಳುಮೆಣಸನ್ನು ಹಿಡಿಹಿಡಿಯಾಗಿ ದೇವರಿಗೆ ಚೆಲ್ಲುತ್ತಿದ್ದರು.

ನಮ್ಮ ಸಮಾಜಲ್ಲಿರುವ ಲೆಂಕ, ಸತಿ ಹೋಗುವುದು ಇತ್ಯಾದಿ ಮೂಡನಂಬಿಕೆಗಳು ಕೃಷ್ಣದೇವರಾಯನ ಕಾಲದಲ್ಲಿಯೂ ಇತ್ತು ಎನ್ನುವ ವಿಷಯ ಬೇಸರವನ್ನು ಮೂಡಿಸುವಂಥದ್ದು.