-ಎಂ.ಎಸ್.ಶೋಭಿತ್, ಮೂಡ್ಕಣಿ
ಏಪ್ರಿಲ್ ೧೮, ೨೦೨೦. ದೇಶದಾದ್ಯಂತ ಎಲ್ಲೆಡೆ ಲಾಕ್‌ಡೌನ್. ಈ ಸಮಯದಲ್ಲಿ ನಮಗೆ ಕ್ಲಾಸ್‌ಗಳೂ ನಡೆಯುತ್ತಿರಲಿಲ್ಲ. ಹೀಗಾಗಿ ಬೇಸರ ಕಳೆಯುವ ಜೊತೆಗೆ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ನಮ್ಮ ತೋಟದಲ್ಲಿನ ಬಾಳೆಗೊನೆಯೊಂದನ್ನು ತಂದು ಚಿಪ್ಸ್ ತಯಾರಿಸಿ ತಯಾರಿಕಾ ವಿಧಾನವನ್ನು ಚಿತ್ರೀಕರಿಸಿ, ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದು ಅಪ್ಲೋಡ್ ಮಾಡಿದೆವು. ಮೊದಲ ವೀಡಿಯೋ ಮಾಡುವಾಗ ಹೀಗೆಲ್ಲಾ ಆಗುತ್ತದೆ, ಚಾನೆಲ್ ಈ ಮಟ್ಟಿಗೆ ಜನರನ್ನು ತಲುಪಬಹುದೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಮೊದಮೊದಲು ಯೂಟ್ಯೂಬ್‌ನಲ್ಲಿ ಮಾತ್ರ ವೀಡಿಯೋ ಅಪ್ಲೋಡ್ ಮಾಡುತ್ತಿದ್ದೆವು. ಬಳಿಕ ಸ್ನೇಹಿತರ ಸಲಹೆ ಮೇರೆಗೆ ಫೇಸ್‌ಬುಕ್‌ನಲ್ಲಿಯೂ ಒಂದು ಪೇಜ್ ಪ್ರಾರಂಭಿಸಿದೆವು. ಇದು ಮತ್ತಷ್ಟು ಜನರನ್ನು ತಲುಪಲು ನೆರವಾಯಿತು” – ಇದು ಕನ್ನಡದ ಜನಪ್ರಿಯ ಯೂಟ್ಯೂಬರ್‌ಗಳಲ್ಲಿ ಒಬ್ಬರಾದ ‘ಭಟ್ ಆ್ಯಂಡ್ ಭಟ್’ ಚಾನೆಲ್‌ನ ಸುದರ್ಶನ ಭಟ್ ಬೆದ್ರಾಡಿ ಅವರ ಹೆಮ್ಮೆಯ ನುಡಿಗಳು.
ಗಡಿನಾಡು ಕಾಸರಗೋಡಿನ ಸೀತಾಂಗೋಳಿಯ ಅವಳಿ ಸಹೋದರರಾದ ಸುದರ್ಶನ ಭಟ್ ಬೆದ್ರಾಡಿ ಮತ್ತು ಮನೋಹರ ಭಟ್ ಬೆದ್ರಾಡಿ ಎಲ್‌ಎಲ್‌ಬಿ ಪದವೀಧರರು. ಪಿಯುಸಿ ದಿನಗಳಲ್ಲೇ ಬಿಡುವಿನ ಸಮಯದಲ್ಲಿ ಅಡುಗೆ ತಯಾರಿಕೆ (ಕೇಟರಿಂಗ್) ಯಲ್ಲಿ ತೊಡಗಿಸಿಕೊಂಡಿದ್ದ ಸಹೋದರರು ಆರಂಭಿಸಿದ ‘ಭಟ್ ಆ್ಯಂಡ್ ಭಟ್’ ಚಾನೆಲ್ ತನ್ನ ವಿಶಿಷ್ಟತೆಯ ಮೂಲಕ ಕಡಿಮೆ ಅವಧಿಯಲ್ಲಿ ಅಧಿಕ ಜನಮನ್ನಣೆ ಪಡೆದಿದೆ.
ಸಾಂಪ್ರದಾಯಿಕ ಶೈಲಿಯಲ್ಲಿ ಅಡುಗೆ:
"ಸಾಮಾನ್ಯವಾಗಿ ಎಲ್ಲರೂ ಸುಲಭವಾಗಿ ತಯಾರಿಸುವ ಅಡುಗೆ ಮತ್ತು ಖಾದ್ಯಗಳನ್ನು ತಯಾರಿಸುತ್ತಾರೆ. ಆದರೆ ಹಿಂದಿನ ಕಾಲದ ಸಾಂಪ್ರದಾಯಿಕ ತಿಂಡಿತಿನಿಸುಗಳು, ಅಡುಗೆಗಳನ್ನು ತಯಾರಿಸುವವರು ಕಡಿಮೆ. ಹಾಗಾಗಿ ಸ್ಥಳೀಯ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಕಾಸರಗೋಡು ಮತ್ತು ದಕ್ಷಿಣಕನ್ನಡ ಭಾಗದ ಖಾದ್ಯಗಳನ್ನು ಹೆಚ್ಚು ತಯಾರಿಸುತ್ತೇವೆ" ಎನ್ನುವ ಸುದರ್ಶನ್, ಈಗಲೂ ಅಡುಗೆ ತಯಾರಿಕೆ ವೇಳೆಯಲ್ಲಿ ಬೀಸುವ ಕಲ್ಲು, ತಾಮ್ರದ ಪಾತ್ರೆಗಳು ಹೀಗೆ ಸಾಂಪ್ರದಾಯಿಕ ಪರಿಕರಗಳನ್ನೇ ಬಳಸುವುದು ವಿಶೇಷ.
ಕುಟುಂಬದ ಪಾಲ್ಗೊಳ್ಳುವಿಕೆ:
"ತೆರೆಯ ಮುಂದೆ ನಾನು ಕಾಣಿಸಿಕೊಳ್ಳುತ್ತೇನೆ. ಆದರೆ ನಾನು ತೆರೆಯ ಮುಂದೆ ಕಾಣಿಸಿಕೊಳ್ಳಲು ನನ್ನ ಹಿಂದೆ ತುಂಬಾ ಮಂದಿ ಶ್ರಮಪಡುತ್ತಿದ್ದಾರೆ. ವೀಡಿಯೋ ಚಿತ್ರೀಕರಣಕ್ಕೂ ಮೊದಲು ಸಂಬಂಧಿಗಳು, ಸ್ನೇಹಿತರ ಮೂಲಕ ರೆಸಿಪಿಗಳನ್ನು ಪಡೆದು ಆನಂತರ ಚಿತ್ರೀಕರಣಕ್ಕೆ ಮುಂದಾಗುತ್ತೇವೆ. ಕೆಲವೊಮ್ಮೆ ಮೊದಲೇ ಒಂದೆರಡು ಬಾರಿ ರೆಸಿಪಿ ಸಿದ್ಧಪಡಿಸಿ ಆ ಬಳಿಕ ವೀಡಿಯೋ ಮಾಡಿದ್ದೂ ಇದೆ. ವೀಡಿಯೋ ರೆಕಾರ್ಡಿಂಗ್, ಎಡಿಟಿಂಗ್, ಅಪ್ಲೋಡ್ ಇದೆಲ್ಲವನ್ನೂ ತಮ್ಮ ಮನೋಹರ ನೋಡಿಕೊಳ್ಳುತ್ತಾನೆ. ಬೇರೆ ಬೇರೆ ಭಾಷಿಕರೂ ನಮ್ಮ ಚಾನೆಲ್‌ನ ವೀಕ್ಷಿಸುವುದರಿಂದ ಅವರಿಗೂ ಉಪಯೋಗವಾಗಬೇಕೆಂಬ ನಿಟ್ಟಿನಲ್ಲಿ ವೀಡಿಯೋದಲ್ಲಿ ಇಂಗ್ಲಿಷ್ ಸಬ್‌ಟೈಟಲ್ ಹಾಕುತ್ತಿದ್ದು, ಇದನ್ನು ಅಕ್ಕ ಪ್ರಸನ್ನಾ ಭಟ್ ನೋಡಿಕೊಳ್ಳುತ್ತಾಳೆ. ಅಪ್ಪ-ಅಮ್ಮ, ಅಕ್ಕ, ಅಕ್ಕನ ಮನೆಯವರು, ಮಾವಂದಿರು ಹೀಗೆ ಒಂದು ವೀಡಿಯೋ ತಯಾರಿಕೆಯಲ್ಲಿ ಕುಟುಂಬದ ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ಸಹಕಾರ ಇದೆ. ಇವರೆಲ್ಲರ ಸಹಕಾರ ಇಲ್ಲದಿದ್ದರೆ ಇದು ಸಾಧ್ಯವಿರಲಿಲ್ಲ" ಎಂದು ಮಾಹಿತಿ ನೀಡುತ್ತಾರೆ ಇವರು.
ಕೃಷಿಕಾರ್ಯಗಳ ಪರಿಚಯ:
ಅಂದಹಾಗೆ ಈ ಸಹೋದರರು, ʼಭಟ್ ಎನ್ ಭಟ್ʼ ಚಾನೆಲ್ ಅನ್ನು ಕೇವಲ ಅಡುಗೆ ತಯಾರಿಕಾ ವೀಡಿಯೋಗಳಿಗಾಗಿ ಮಾತ್ರ ಸೀಮಿತಗೊಳಿಸದೇ, ದಕ್ಷಿಣಕನ್ನಡದ ಜನಜೀವನ ಮತ್ತು ಕೃಷಿಕಾರ್ಯಗಳನ್ನೂ ಪರಿಚಯಿಸುತ್ತಿದ್ದಾರೆ. ಗದ್ದೆ ನಾಟಿ, ಭತ್ತದ ಕಟಾವು, ಅಡಿಕೆ ಕೊಯ್ಲು, ಜೇನು ಕೃಷಿ... ಹೀಗೆ ಹಳ್ಳಿ ಸೊಗಡನ್ನೂ ಜನರಿಗೆ ಪರಿಚಯಿಸುತ್ತಿದ್ದಾರೆ. ಕೃಷಿಕಾರ್ಯಗಳ ಕುರಿತು ವೀಡಿಯೋ ಸಿದ್ಧಪಡಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಆಧುನಿಕತೆಯಿಂದ ನೇಪಥ್ಯಕ್ಕೆ ಸರಿಯುತ್ತಿರುವ ಹಳ್ಳಿಸೊಗಡನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶ ನಮ್ಮದು ಎನ್ನುತ್ತಾರೆ ಸುದರ್ಶನ್.
ʼಭಟ್ ಎನ್ ಭಟ್ʼ ಚಾನೆಲ್ ಜನಪ್ರಿಯತೆಗೆ ಕಾರಣವೇನು?
"ಹಾಯ್ ಫ್ರೆಂಡ್ಸ್, ನಾನು ಸುದರ್ಶನ್ ಭಟ್ ಬೆದ್ರಾಡಿ, ವೆಲ್ಕಮ್ ಟು ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್"ಎನ್ನುತ್ತಲೇ ಕಡಿಮೆ ಅವಧಿಯಲ್ಲಿ ಜನರ ಮನಸ್ಸನ್ನು ಗೆದ್ದ ಈ ಚಾನೆಲ್‌ನ ಜನಪ್ರಿಯತೆಗೆ ನಾವು ತರಕಾರಿ ತೊಳೆಯುವುದು, ಕೊರೆಯುವುದು ಸೇರಿದಂತೆ ಅಡುಗೆಯ ಹಿಂದಿನ ಪ್ರತಿಯೊಂದು ಪ್ರಯತ್ನವನ್ನೂ ವೀಕ್ಷಕರಿಗೆ ತೋರಿಸುವುದು, ನೈಸರ್ಗಿಕ ಪದಾರ್ಥ ಬಳಸಿ ಸ್ಥಳೀಯ ಖಾದ್ಯಗಳ ತಯಾರಿಸುವುದು, ಅಡುಗೆ ಮಾಡುವ ಸಂದರ್ಭದಲ್ಲಿ ಕಾಸರಗೋಡು ಕನ್ನಡದಲ್ಲಿ ವಿವರಿಸುವ ಶೈಲಿ, ಅಡುಗೆ ಮನೆಯನ್ನು ಮಾಡರ್ನ್ ಆಗಿ ಸೆಟ್ ಮಾಡದೇ ವೀಡಿಯೋ ಮಾಡುವುದು, ನ್ಯಾಚುರಲ್ ಆಗಿ ವೀಡಿಯೋ ಚಿತ್ರೀಕರಿಸುವ ಜೊತೆಗೆ ಯಾವುದೇ ಸಿದ್ಧ ಬ್ಯಾಗ್ರೌಂಡ್ ಮ್ಯೂಸಿಕ್ ಬಳಸದಿರುವುದು ಕಾರಣವಿರಬಹುದು ಎನ್ನುತ್ತಾರೆ ಸುದರ್ಶನ್ ಮತ್ತು ಮನೋಹರ.
ಯೂಟ್ಯೂಬ್‌ನಿಂದ ʼಸಿಲ್ವರ್ ಪ್ಲೇ ಬಟನ್ʼ:
ಸದ್ಯ ಸುಮಾರು ೮ ಲಕ್ಷಕ್ಕೂ ಅಧಿಕ ಚಂದಾದಾರರನ್ನು ʼಭಟ್ ಎನ್ ಭಟ್ʼ ಯೂಟ್ಯೂಬ್ ಚಾನೆಲ್ ಹೊಂದಿದ್ದು, ೨೯೦ ಕ್ಕೂ ಅಧಿಕ ವೀಡಿಯೋಗಳನ್ನು ಸಹೋದರರು ಅಪ್ಲೋಡ್ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲೂ ಸುಮಾರು ೪ ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ೧ ಲಕ್ಷ ಚಂದಾದಾರರನ್ನು ಹೊಂದಿದ ಸಂದರ್ಭದಲ್ಲಿ ಯೂಟ್ಯೂಬ್ ʼಸಿಲ್ವರ್ ಪ್ಲೇ ಬಟನ್ʼ ನೀಡಿ ಗೌರವಿಸಿದೆ. ಅಲ್ಲದೇ ಯೂಟ್ಯೂಬ್ ಹಾಗೂ ಫೇಸ್‌ಬುಕ್ ಸಹೋದರರ ಪರಿಶ್ರಮಕ್ಕೆ ತಕ್ಕಂತೆ ಆರ್ಥಿಕ ಸಹಾಯವನ್ನೂ ನೀಡುತ್ತಿದೆ.
“ನಮ್ಮ ರಾಜ್ಯದ ಬೆಂಗಳೂರು, ಮಡಿಕೇರಿ, ಉತ್ತರಕರ್ನಾಟಕದ ಜಿಲ್ಲೆಗಳು, ನೆರೆಯ ತಮಿಳುನಾಡು, ಮುಂಬೈ ಅಲ್ಲದೇ ಅಮೇರಿಕಾ, ಆಸ್ಟ್ರೇಲಿಯಾ… ಹೀಗೆ ಪ್ರಪಂಚದ ನಾನಾ ಭಾಗಗಳಿಂದ ಜನರು ನಮ್ಮ ಚಾನೆಲ್‌ನ್ನು ವೀಕ್ಷಿಸುತ್ತಿದ್ದಾರೆ. ಅಲ್ಲದೇ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಾರೆ. ಇದು ನಮಗೆ ಮತ್ತಷ್ಟು ವೀಡಿಯೋ ತಯಾರಿಸಲು ಸ್ಪೂರ್ತಿ” ಎಂಬುದು ಸುದರ್ಶನ್ ಅವರ ಅಂಬೋಣ.
ಹವ್ಯಾಸವನ್ನಾಗಿ ಆಯ್ದುಕೊಳ್ಳಿ:
“ನಿಮ್ಮಲ್ಲಿ ಕ್ರಿಯೇಟಿವಿಟಿ ಇದ್ದಲ್ಲಿ, ಅದನ್ನು ಪ್ರದರ್ಶಿಸಲು ಯೂಟ್ಯೂಬ್ ಚಾನೆಲ್ ಮಾಡಬಹುದು. ಆದರೆ ಇದನ್ನು ಕೇವಲ ಹವ್ಯಾಸಕ್ಕಾಗಿ ಬಿಡುವಿನ ಸಮಯದಲ್ಲಷ್ಟೇ ಮಾಡುವುದು ಒಳ್ಳೆಯದು. ಇದನ್ನೇ ಫುಲ್‌ಟೈಮ್ ವೃತ್ತಿಯನ್ನಾಗಿಸಿಕೊಳ್ಳಬೇಡಿ” ಎನ್ನುತ್ತಾರೆ ಬೆದ್ರಾಡಿ ಸಹೋದರರು.
ಲಾಕ್‌ಡೌನ್ ಸಮಯವನ್ನು ತಮ್ಮ ಪ್ರತಿಭೆಯ ಅನಾವರಣಕ್ಕೆ ಬಳಸಿಕೊಂಡ ಬೆದ್ರಾಡಿ ಸಹೋದರರು ʼಮನಸ್ಸಿದ್ದರೆ ಮಾರ್ಗʼ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ.
ʼಭಟ್ ಎನ್ ಭಟ್ʼ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಲು: Bhat n Bhat ಚಾನೆಲ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ಕಿಸಿ