ಅಪ್ಪ ಯಲ್ಲಾಪುರ ಪೇಟೆ ಕಡೆಗೆ ಹೊರಟ ಎಂದರೆ, ರಾಮಕೃಷ್ಣ ಸ್ಟೋರ್‌ ಗೆ ಹೋಗಿ ಮರೆಯದೇ ಬಾಲಮಂಗಳ, ತುಂತುರು ಕತೆ ಪುಸ್ತಕಗಳನ್ನು ತರಬೇಕೆಂದು ನನ್ನದೊಂದು ಹತ್ತಾರು ಬಾರಿ ನೆನಪು ಮಾಡುವುದು ಇದ್ದೇ ಇರುತ್ತಿತ್ತು. ಪೇಟೆಯ ಕೆಲಸಗಳನ್ನೆಲ್ಲಾ ಮುಗಿಸಿ ಅಪ್ಪ ಮನೆಗೆ ಬರ್ತಾ ಇದಾನೆ ಅಂತ ಗಾಡಿಯ ಶಬ್ದ ಆದ ಕೂಡಲೇ ಹೊರಗಡೆ ಓಡೋದು. ಬ್ಯಾಗಿನಲ್ಲಿ ಈ ಪಾಕ್ಷಿಕದ ಕತೆಪುಸ್ತಕಗಳು ಬಂದಿವೆಯಾ ಅಂತ ನೋಡಬೇಕಲ್ಲ! ಅಕಸ್ಮಾತ್‌ ಬಂದಿಲ್ಲವೆಂದರೆ ಒಂಥರಾ ಬೇಸರ. ಬಂದಿದ್ದವೆಂದರೆ ಮೃಷ್ಟಾನ ಊಟವೇ ಸಿಕ್ಕಿದಂತೆ. ಹೊಸ ಬಾಲಮಂಗಳ, ತುಂತುರುಗಳನ್ನು ಕೈಯಲ್ಲಿ ಹಿಡಿದಾಗ ಅದೇನೋ ಖುಷಿ! ಹಾಗಂತ ಒಂದೇ ಗುಕ್ಕಿಗೆ ಓದಿಮುಗಿಸಿದರೆ ಆಗುತ್ತದೆಯೇ? ಮೊದಲು ಈ ಸಂಚಿಕೆಯಲ್ಲಿ ಏನೇನು ಕತೆಗಳನ್ನು ಬಂದಿವೆ ಅಂತ ಮೇಲಿಂದ ಮೇಲೆ ಪರಿಶೀಲನೆ ಮಾಡಬೇಕು. ಆಮೇಲೆ ಸಾವಧಾನವಾಗಿ ಓದಿ ಆಸ್ವಾದಿಸಲು ಪ್ರಾರಂಬಿಸುವುದು. 


ಬಾಲ್ಯದ ನೆನಪುಗಳನ್ನ ಮೆಲುಕು ಹಾಕುತ್ತಾ ಕೂತಾಗ ಮುಖ್ಯವಾಗಿ ಕಾಣಸಿಗೋದು ಈ ಬಾಲಮಂಗಳ, ತುಂತುರುಗಳೆಂಬ ಕತೆಪುಸ್ತಕಗಳು. ಬಾಲ್ಯವನ್ನು ಚಂದಗಾಣಿಸಿದ ಸಂಗಾತಿಗಳು ಅವೆಲ್ಲಾ. ಆಗ ಬಹುತೇಕ ಚಂದಮಾಮ ಮತ್ತಿತರ ಹಳೆಯ ಕತೆಪುಸ್ತಕಗಳ ಕಾಲ ಮುಗಿದಿತ್ತು. ಚಂಪಕ ಎನ್ನುವ ಮಕ್ಕಳ ಕತೆಪುಸ್ತಕವೊಂದಿದ್ದರೂ ಅದು ನಮಗೆ ತುಂತುರು, ಬಾಲಮಂಗಳಗಳು ಕೊಟ್ಟಷ್ಟು ಆಪ್ತಭಾವವನ್ನು ಕೊಡುತ್ತಿರಲಿಲ್ಲ. ನಮ್ಮ ಓದುವ ಹವ್ಯಾಸಕ್ಕೆ ಅಡಿಪಾಯ ಹಾಕಿದ್ದೇ ಇಂತಹ ಮಕ್ಕಳ ಪತ್ರಿಕೆಗಳು. ಒಂದಕ್ಷರವನ್ನೂ ಕೂಡ ಬಿಡುತ್ತಿರಲಿಲ್ಲ. ಈ ಹೊಸ ಕತೆಪುಸ್ತಕಗಳನ್ನು ಮರುದಿನ ಶಾಲೆಗೂ ತೆಗೆದುಕೊಂಡು ಹೋಗುವುದು. ಸ್ನೇಹಿತರಿಗೆ ತೋರಿಸುವುದು ಬೇಡವೇ?! ಅವರೂ ಅಲ್ಲಿ ಓದಬಹುದು. ಹಾಗಂತ ವಾಪಸ್‌ ಕೊಡಲಿಕ್ಕೆ ಮರೆಯುವ ಹಾಗಿಲ್ಲ. ಈ ಕತೆಪುಸ್ತಕಗಳೆಲ್ಲಾ ನಮ್ಮ ಆಗಿನ ಕಾಲದ ಸಂಪತ್ತುಗಳು. ನನ್ನ ಹತ್ತಿರ ಇಷ್ಟೆಲ್ಲಾ ಕತೆಪುಸ್ತಕಗಳಿವೆ ಎಂದು ಒಂದರ ಮೇಲೊಂದು ಪೇರಿಸಿ ನೋಡಿದಾಗ ಅದೇನೋ ಒಂಥರಾ ಹೆಮ್ಮೆ. ತಲೆಯ ಮೇಲೊಂದೆರಡು ಕೊಂಬೂ ಮೂಡುತ್ತಿತ್ತು.
 
ಬಾಲಮಂಗಳದಲ್ಲಿ ಬರುತ್ತಿದ್ದ ಡಿಂಗನೇ ನಮ್ಮ ಪಾಲಿನ ಸೂಪರ್‌ ಹೀರೋ. ವೈದ್ಯರ ಶಕ್ತಿಮದ್ದು ನನಗೂ ಬೇಕು ಅಂತ ಬಹಳಷ್ಟು ಬಾರಿ ಅನಿಸಿದ್ದಿದೆ. ಅವರ ಶಕ್ತಿಮದ್ದನ್ನು ತಿಂದ ತಕ್ಷಣ ಲಂಬೋದರ, ಪಕ್ರುವಿಗೆಲ್ಲಾ ಎಷ್ಟೊಂದು ಶಕ್ತಿಬಂದುಬಿಡುತ್ತದೆ. ಕೆಟ್ಟವರೆಲ್ಲರನ್ನೂ ಒಂದೇ ಕ್ಷಣದಲ್ಲಿ ಚಚ್ಚಿ ಬಿಸಾಕಿಬಿಡುತ್ತಾರಲ್ಲ. ನಮಗೆಲ್ಲಾ ಆ ಬಾಲ್ಯದ ದಿನಗಳಲ್ಲಿ ಅದೇ ಕಾರ್ಟೂನ್‌ ನೆಟ್‌ ವರ್ಕ್‌, ಅದೇ ಡಿಸ್ನಿ ಸಿನೇಮಾಗಳು. ಡಿಂಗಾ, ವೈದ್ಯರು, ಲಂಬೋದರ, ಕಾಡುಪ್ರಾಣಿಗಳು ಹೀಗೆ ಇವೊಂದಿಷ್ಟು ಪಾತ್ರಗಳೇ ಸೇರಿ ಸುಂದರವಾದ ಕಥಾಲೋಕವನ್ನು ಸೃಷ್ಟಿಸಿಬಿಡುತ್ತಿದ್ದವು. ತುಂಬಾ ವರ್ಷಗಳ ಹಿಂದೆ ಬಾಲಮಂಗಳ ಅಷ್ಟೇ ಅಲ್ಲದೇ ಬಾಲಮಂಗಳ ಚಿತ್ರಕತೆ ಎಂಬ ಇನ್ನೊಂದು ಕತೆಪುಸ್ತಕ ಕೂಡ ಬರುತ್ತಿತ್ತು. ಇಡೀ ಪುಸ್ತಕವೇ ಬಣ್ಣ ಬಣ್ಣದ ಚಿತ್ರಸಹಿತವಾದ ಕತಾಲೋಕವನ್ನು ತೋರಿಸಿಬಿಡುತ್ತಿತ್ತು. 

 ಬಾಲಮಂಗಳ ತುಂತುರುಗಳಲ್ಲಿ ನಿನಗೆ ಯಾವುದು ತುಂಬಾ ಇಷ್ಟ ಎಂದು ಕೇಳಿದರೆ, ಒಂದು ಕ್ಷಣ ಯೋಚನೆ ಮಾಡಬೇಕಾಗಬಹುದು. ಆದರೂ ಕಡೆಯ ಉತ್ತರ ತುಂತುರುವೇ. ಸಂಧ್ಯಾಮಾಮಿಯ ಒಂದು ಚಿಕ್ಕಕತೆಯೊಂದು ಪ್ರಾರಂಭದಲ್ಲಿ ಇರುತ್ತಿತ್ತು. ಚಿನ್ನಾ, ಮುದ್ದು ಅಂತ ಶುರುವಾಗುತ್ತಿದ್ದ ಆ ಕಲ್ಲುಸಕ್ಕರೆಯು ಮಕ್ಕಳಿಗೆ ಆಪ್ತ ಭಾವವನ್ನು ನೀಡುತ್ತಿತ್ತು ಮತ್ತು ಅಷ್ಟೇ ಸಿಹಿಯೂ ಆಗಿತ್ತು. ತುಂತುರುವಿನಲ್ಲಿನ ಭಾರತೀಯ, ಗ್ರೀಕ್‌ ಹೀಗೆ ಬೇರೆಬೇರೆ ಪುರಾಣಗಳು, ಚಂದದ ಕತೆಗಳು, ವಿಶೇಷ ಮಾಹಿತಿಗಳು, ಕ್ವಿಜ್‌, ಚಿತ್ರಕತೆಗಳು ಇವೆಲ್ಲಾ ನಮ್ಮನ್ನು ಯಾವುದೋ ಒಂದು ರೀತಿಯ ಮೋಹಕತೆಯಿಂದ ಕಟ್ಟಿಹಾಕಿಬಿಡುತ್ತಿತ್ತು. ಅಷ್ಟಕ್ಕೂ ಮಂಡೂರಾಯನನ್ನು ಹೇಗೆ ಮರೆಯಲಾದೀತು?! ಆತ ಪ್ರತಿ ಬಾರಿ ಏನಾದರೂ ಒಂದು ಅವಾಂತರವನ್ನು ಸೃಷ್ಟಿಸುವುದು ಅದರಿಂದ ಹೇಗೋ ಮಾಡಿ ತಪ್ಪಿಸಿಕೊಳ್ಳುವ ಚಿತ್ರಕತೆಗಳು ಮನಸ್ಸಿಗೆ ಮುದಕೊಡುವಂಥದ್ದಾಗಿದ್ದವು. ಪತ್ತೇದಾರಿ ಕಾರ್ಡೋ ಮತ್ತು ಠೇಂಗಾನ ಕಾಡಿನಲ್ಲಿ ಏನಾದರೂ ಸಂಭವಿಸಿದ್ದರೆ ಅದರ ತನಿಖೆಯನ್ನು ನಡೆಸುವ ಚಿತ್ರಕತೆ. ಇವೆಲ್ಲಾ ಒಂದಕ್ಕೊಂದು ಪೈಪೋಟಿ ಕೊಡುವ ಹಾಗಿರುತ್ತಿದ್ದವು. 

ನನ್ನ ಪಿಯುಸಿ ಮುಗಿಯುವವರೆಗೂ ಕೂಡ ಈ ಬಾಲಮಂಗಳ, ತುಂತುರು ಪತ್ರಿಕೆಗಳನ್ನು ಖರೀದಿಸಿ ಓದಿದ್ದೇನೆ. ನೋಡಿದವರಿಗೆ ಇವನೇನು ಇನ್ನೂ ಮಕ್ಕಳ ಪುಸ್ತಕಗಳನ್ನು ಓದುತ್ತಾನೆ ಎಂದೆನಿಸಬಹುದೇನೋ. ಆದರೆ ಆ ಕತೆಪುಸ್ತಕಗಳೆಲ್ಲಾ ಸಾರ್ವಕಾಲಿಕವಾಗುದು. ಇನ್ನೊಂದು ಹತ್ತಿಪ್ಪತ್ತು ವರ್ಷದ ನಂತರ ಓದಿದರೂ ಅವುಗಳ ಸವಿ ಹೆಚ್ಚಾಗಬಹುದೇ ಹೊರತು ಕಡಿಮೆಯಾಗಲಾರದು. ಕೊರೋನಾ ಕಾಲದಲ್ಲಿ ಈ ಪತ್ರಿಕೆಗಳೆಲ್ಲಾ ತನ್ನ ಪ್ರಸಾರವನ್ನೇ ನಿಲ್ಲಿಸಿಬಿಟ್ಟವು. ಮನಸ್ಸಿಗೆ ಬಹಳ ಖೇದವನ್ನುಂಟು ಮಾಡಿದ ವಿಚಾರ ಅದು. ಎಷ್ಟೇ ಆದರೂ ಈಗೊಮ್ಮೆ ಹಳೆಯ ಕತೆ ಪುಸ್ತಕವನ್ನು ಹಿಡಿದು ಕೂತಾಗ, ಅದರ ಗಂಧ ಗಾಳಿಗೆ ಬಾಲ್ಯದ ಪುಟಗಳನ್ನೇ ತಿರುಗಿ ಹಾಕಿದ ಅನುಭವ. ತುಂತುರು, ಬಾಲಮಂಗಳಗಳೆಂಬ ಬಾಲ್ಯದ ಸೊಬಗನ್ನು ಹೆಚ್ಚಿಸಿದ ಜೊತೆಗಾರರನ್ನು ಹೇಗೆ ಮರೆಯುವುದು ಹೇಳಿ.