ಕೊನೆಯ ಹದಿನೈದು ಇಪ್ಪತ್ತು ನಿಮಿಷಗಳಂತೂ ಚಪ್ಪಲಿಯಲ್ಲಿ ಬಿಚ್ಚಿಟ್ಟು ಕೈಮುಗಿದು ನೋಡುವ ಹಾಗೆ ಇದೆ. ಪಂಜುರ್ಲಿ ದೈವ ಎಲ್ಲರನ್ನೂ ಒಂದುಗೂಡಿಸಿ ರಕ್ಷೆಯ ಅಭಯವನ್ನು ನೀಡುವ ದೃಶ್ಯವಂತೂ ಮೈನವಿರೇಳಿಸುತ್ತದೆ. ಕಾಂತಾರ ಒಂದು ಅದ್ಭುತ ಅನುಭವ. ಅದನ್ನು ನೋಡಿಯೇ ಅನುಭವಿಸಬೇಕಷ್ಟೇ!
“ಕಾಂತಾರ ನೋಡಿದ್ರಾ?” ಎನ್ನುವ ಪ್ರಶ್ನೆ ಇತ್ತೀಚಿನ ಉಭಯ ಕುಶಲೋಪರಿಯ ವಾಕ್ಯಗಳ ನಡುವೆ ಸೇರಿಬಿಟ್ಟಿದೆ. ಥಿಯೇಟರಿಗೆ ಎಷ್ಟೋ ವರ್ಷಗಳಿಂದ ಕಾಲಿಡದಿದ್ದ ಹಿರಿಯರೂ 'ಕಾಂತಾರ'ದ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ವೀಕೆಂಡ್ ನಲ್ಲಿ ಮಾತ್ರವಲ್ಲ, ವಾರದ ದಿನಗಳಲ್ಲೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಬೋರ್ಡುಗಳು ಸಾಮಾನ್ಯವಾಗಿದೆ. 'ಕಾಂತಾರ' ಜನರಿಗೆ ಒಂದು ರೀತಿಯ ಮೋಡಿಯನ್ನೇ ಮಾಡಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಸಿನೆಮಾ ಇಡೀ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬೆಳೆದಿದೆ. ಸೋಷಿಯಲ್ ಮೀಡಿಯ ತುಂಬಾ ಅದರದ್ದೇ ಚರ್ಚೆ. 'ಕಂಟೆಂಟ್' ಚೆನ್ನಾಗಿದ್ದರೆ ಯಾವುದೇ ಭಾಷೆಯ ಸಿನೆಮಾವನ್ನು ಕೂಡ ಜನ ನೋಡಿ ಬೆಂಬಲಿಸುತ್ತಾರೆ ಎನ್ನುವ ಸಂಗತಿ ಸಾಬೀತಾಗಿದೆ.
ʼಒಂದೂರಲ್ಲಿ ಒಬ್ಬ ರಾಜನಿದ್ದ..ʼ ಎಂದು ಶುರುವಾಗುವ ಕಥೆಯು ಕಾಂತಾರದೊಳಗೆ ನಮ್ಮನ್ನು ನಿಧಾನವಾಗಿ ಎಳೆದುಕೊಳ್ಳುತ್ತಾ ಹೋಗುತ್ತದೆ. ದಕ್ಷಿಣ ಕನ್ನಡ ಭಾಗದ ಸಾಂಪ್ರದಾಯಿಕ ಕಂಬಳ, ದೈವಕೋಲದ ಬಹಳ ಸುಂದರವಾಗಿ ಜಗತ್ತಿಗೆ ಪರಿಚಯಿಸಿದ್ದಾರೆ. ರಿಷಭ್ ಶೆಟ್ರು ಭೂ ಸಂಘರ್ಷದ ಕತೆ ಮತ್ತು ನಮ್ಮ ಕರಾವಳಿಯ ಸಂಸ್ಕೃತಿಯನ್ನು ಹದವಾಗಿ ಹೊಸೆದು ಕಾಂತಾರವನ್ನು ಒಂದು ದೈವಿಕ ಅನುಭವವಾಗಿ ನಮ್ಮೆದುರು ಇಟ್ಟಿದ್ದಾರೆ. ದೈವದ ಮಾತು ತಪ್ಪಿದರೆ ತಕ್ಕ ಶಾಸ್ತಿ ಆಗೇ ಆಗುತ್ತದೆ ಎನ್ನುವ ಸಂದೇಶ ಇಲ್ಲಿದೆ. ಕತೆಯುವ ನವಿರಾದ ಹಾಸ್ಯ, ಪ್ರೇಮ, ಕುತೂಹಲ ಹೀಗೆ ಎಲ್ಲಾ ರೀತಿಯ ಹೂರಣಗಳನ್ನು ಒಳಗೊಂಡು ಸಾಗುತ್ತಾ ಹೋಗುತ್ತದೆ. ಕೊನೆಯಲ್ಲಿ ಗಂಭೀರವಾದ ತಿರುವನ್ನು ಪಡೆದುಕೊಳ್ಳುತ್ತದೆ.
ರಿಷಭ್ ಶೆಟ್ಟಿಯವರು ಕತೆ, ನಿರ್ದೇಶನ, ನಟನೆ ಎಲ್ಲದರಲ್ಲೂ ಮಿಂಚಿದ್ದಾರೆ. ನಟನೆ ಎಂಬ ಪದ ಬಹುಷಃ ಇಲ್ಲಿ ಸರಿಯಾದುದಲ್ಲ ಎಂದೇ ಅನಿಸುವಂಥದ್ದು. ಯಾಕೆಂದರೆ ರಿಷಭ್ ಶೆಟ್ಟಿ ಮಾತ್ರವಲ್ಲ, ಇಡೀ ಸಿನೆಮಾದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ದೀಪಕ್ ರೈ ಪಾಣಾಜೆ, ಶನಿಲ್ ಗುರು, ಸ್ವರಾಜ್ ಶೆಟ್ಟಿ, ಪ್ರಕಾಶ್ ತುಮಿನಾಡು ಹೀಗೆ ಎಲ್ಲರೂ ತಮ್ಮ ಸಹಜವಾದ ಅಭಿನಯದಿಂದಾಗಿ ಪ್ರೇಕ್ಷಕರನ್ನು ಒಂದು ನಿಜವಾದ ಹಳ್ಳಿಯ ವಾತಾವರಣಕ್ಕೆ ಕೊಂಡೊಯ್ಯುತ್ತಾರೆ. ನಟನೆಗಿಂತ ಹೆಚ್ಚಾಗಿ ಪಾತ್ರಗಳಾಗಿ ಜೀವಿಸಿದ್ದಾರೆ.
ಕಾಂತಾರದಲ್ಲಿ ರಿಷಭ್ ಶೆಟ್ಟಿ ಅವರನ್ನ ಹೀರೋ ಎಂದು ಪರಿಗಣಿಸಿದರೆ, ಚಿತ್ರದಲ್ಲಿ ಗಮನಸೆಳೆಯುವ ಸೆಕೆಂಡ್ ಹೀರೋ ಎಂದರೆ ಸಿನೆಮಾಟೋಗ್ರಾಫರ್ ಅರವಿಂದ್ ಕಶ್ಯಪ್. ಸುಂದರವಾದ ಫ್ರೇಮ್ ಗಳ ಮೂಲಕ ʼಕಾಂತಾರʼದ ಜಗತ್ತನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಆ ದಟ್ಟ ಕಾಡಿನ ನಡುವೆ ರಾತ್ರಿಯ ಸಮಯದಲ್ಲಿ ಲೈಟನ್ನು ಹಾಕಿಕೊಂಡು ಅಷ್ಟೊಂದು ಜನರನ್ನು ಕಟ್ಟಿಕೊಂಡು ಶೂಟಿಂಗ್ ಮಾಡುವುದು ಸುಲಭದ ಕೆಲಸವಲ್ಲ. ಆ ಕೆಲಸವನ್ನು ಅವರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.
ಅಜನೀಶ್ ಲೋಕನಾಥ್ ರವರ ಸಂಗೀತ ಇಡೀ ಸಿನೆಮಾ ನಮ್ಮನ್ನ ಆವರಿಸುವ ಹಾಗೆ ಮಾಡುತ್ತದೆ. ಕೊನೆಯ ಹದಿನೈದು ಇಪ್ಪತ್ತು ನಿಮಿಷಗಳಂತೂ ಚಪ್ಪಲಿಯಲ್ಲಿ ಬಿಚ್ಚಿಟ್ಟು ಕೈಮುಗಿದು ನೋಡುವ ಹಾಗೆ ಇದೆ. ಪಂಜುರ್ಲಿ ದೈವ ಎಲ್ಲರನ್ನೂ ಒಂದುಗೂಡಿಸಿ ರಕ್ಷೆಯ ಅಭಯವನ್ನು ನೀಡುವ ದೃಶ್ಯವಂತೂ ಮೈನವಿರೇಳಿಸುತ್ತದೆ. ಕಾಂತಾರ ಒಂದು ಅದ್ಭುತ ಅನುಭವ. ಅದನ್ನು ನೋಡಿಯೇ ಅನುಭವಿಸಬೇಕಷ್ಟೇ!