"ನಂದಮಯ ಈ ಜಗಹೃದಯ ಏತಕೆ ಭಯ ಮಾಣೋ| ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ||" ಎಂಬ ಕುವೆಂಪುರವರ ನುಡಿ ಮನಸ್ಸಿಗೆ ನಾಟುವಂಥದ್ದು. ಸೂರ್ಯೋದಯ, ಚಂದ್ರೋದಯಗಳು ದಿನಂಪ್ರತಿ ನಡೆಯುವ ಸಹಜ ಕ್ರಿಯೆಯೆನ್ನಿಸಿದರೂ ಅದರಲ್ಲಿನ ವಿಶಿಷ್ಟತೆ ಕವಿಯ ಕಣ್ಣಿಗೆ ಕಾಣುವ ರೀತಿಯೇ ಬೇರೆ. ಸೂರ್ಯೋದಯ, ಚಂದ್ರೋದಯಗಳನ್ನು ಅದೆಷ್ಟೋ ಕವಿಗಳು ವರ್ಣಿಸಿ ಬಿಟ್ಟಿದ್ದರೂ ಉಪಮಾನ, ರೂಪಕಗಳು ಇನ್ನೂ ಖಾಲಿಯಾಗಿಲ್ಲ, ಖಾಲಿಯಾಗುವ ಲಕ್ಷಣಗಳೂ ಇಲ್ಲ ಬಿಡಿ. ಉದಯಾಸ್ತಗಳು ನಿತ್ಯನೂತನವೇ ಆದರೂ ಕೆಲವೊಂದು ಕವಿಗಳ ಕಾಣ್ಕೆ, ಕ್ರಿಯಾಶೀಲತೆ ನಾವು ಹಿಂದೆಂದೂ ಕಂಡಿರದ ಸೂರ್ಯೋದಯ, ಸೂರ್ಯಾಸ್ತಗಳನ್ನು ನಡುರಾತ್ರಿಯಲ್ಲಿಯೂ ಅನುಭವಿಸುವಂತೆ ಮಾಡುತ್ತದೆ. ಅಂಥ ಅಪರೂಪದ ಕವಿಗಳ ಸಾಲಿನಲ್ಲಿ ಮಹಾಕವಿ ಕುಮಾರವ್ಯಾಸನೂ ಒಬ್ಬ. ಕುಮಾರವ್ಯಾಸನ ಒಂದೊಂದು ಪದ್ಯಗಳೂ ಕತ್ತರಿಸಿ ಹೊಳಪುಕೊಟ್ಟ ವಜ್ರದಂತೆ, ಸಂಸ್ಕರಿಸಿದ ಚಿನ್ನದಂತೆ. ಸಂದರ್ಭಕ್ಕೆ ತಳುಕುಹಾಕಿ, ವಿಶೇಷಣಗಳನ್ನು ಆರೋಪಿಸಿ ಸೂರ್ಯೋದಯ, ಸೂರ್ಯಾಸ್ತಗಳನ್ನು ವರ್ಣಿಸುವ ಕುಮಾರವ್ಯಾಸನ ಪರಿಯಂತೂ ಅನ್ಯಾದೃಶವಾದದ್ದು. ಇನ್ನು ಆ ಮಹಾಕವಿಯ ಅಮೋಘ ಶಬ್ದಮಾಯಾವಿಷ್ಟವಾದ ಒಂದೊಂದೇ ಸೂರ್ಯ-ಚಂದ್ರರನ್ನು ಕಣ್ತುಂಬಿಕೊಳ್ಳೋಣ.


ದ್ರೌಪದೀ ಸ್ವಯಂವರ ಮುಕ್ತಾಯವಾಗಿ, ಸ್ವಯಂವರದ ಬೆನ್ನಿಗೇ ಒಂದು ಸಣ್ಣ ಯುದ್ಧವೂ ಮುಗಿದು ಸಂಜೆಯಾಗಿತ್ತು. ಕತ್ತಲಾವರಿಸುವ ಆ ಸಂದರ್ಭದಲ್ಲಿ ಪಾಂಚಾಲನಗರಿಯ ಮನೆಮನೆಗಳಲ್ಲೂ ಹಚ್ಚಿದ ದೀಪಗಳು ಕತ್ತಲೆಯ ಪಾಳೆಯದಲ್ಲಿ ಸೂರ್ಯನ ಬೇಹುಗಾರರ ಸುಳಿವೋ ಎಂಬಂತಿತ್ತಂತೆ!

"ನಳಿನಮಿತ್ರನ ಬೇಹುಕಾರರ 
ಸುಳಿವೊ ತಿಮಿರದ ಪಾಳೆಯದೊಳೆನೆ 
ನಿಳಯನಿಳಯದ ಸೊಡರು ತಳಿತುದು ಕೂಡೆ ನಗರಿಯಲಿ|"

ಬೆಳಕು-ಕತ್ತಲೆಗಳ ವೈರ. ಮನೆಮನೆಗಳಲ್ಲೂ ಬೆಳಕಿಗಾಗಿ ಹಚ್ಚಿದ ಸೊಡರುಗಳೇ ಸೂರ್ಯನ ಬೇಹುಕಾರರು! ಎಂಥ ಅದ್ಭುತ ಕಲ್ಪನೆ!

ದ್ಯೂತದಲ್ಲಿ ಸೋತ ಗಂಡಂದಿರ ಜೊತೆ ಪಡಬಾರದ ಕಷ್ಟಪಡುತ್ತ ಹನ್ನೆರಡು ವರ್ಷ ವನವಾಸವನ್ನೂ ಮುಗಿಸಿ ಅಜ್ಞಾತವಾಸಕ್ಕಾಗಿ ಮತ್ಸ್ಯನಗರಿಗೆ ಕಾಲಿಟ್ಟ ಪಾಂಚಾಲೆಗೆ ಅಲ್ಲಿಯೂ ಸುಖವಿರಲಿಲ್ಲ. ಮಹಾಭಯಂಕರ ಮಲ್ಲ ಕೀಚಕ ಸೈರಂಧ್ರಿಯ ವೇಷದಲ್ಲಿದ್ದ ಪಾಂಚಾಲೆಯಮೇಲೆ ಕಣ್ಣುಹಾಕಿದ. ಏನೇ ಮಾಡಿದರೂ ಬೆನ್ನು ಬಿಡದ ಈ ಕೀಚಕನನ್ನು ನಿಗ್ರಹಿಸುವುದು ಭೀಮನಲ್ಲದೇ ಇನ್ನಾರಿಂದಲೂ ಸಾಧ್ಯವಿರಲಿಲ್ಲ. ಯಾರಿಗೂ ತಿಳಿಯದಂತೆ ಅರಮನೆಯ ಅಡುಗೆಮನೆಯಲ್ಲಿ ಮಲಗಿದ್ದ ಭೀಮನಬಳಿ ಹೋಗಿ ತನ್ನ ಕಷ್ಟವನ್ನು ತೋಡಿಕೊಂಡು ಕಣ್ಣೀರಾಗುತ್ತಾಳೆ. ಭೀಮನೇನೂ ಅಷ್ಟು ಸುಲಭಕ್ಕೆ ಒಪ್ಪಲಿಲ್ಲ. ಪಾಂಚಾಲೆ ಸಾಕಷ್ಟು ಮಂಗಳಾರತಿ ಮಾಡಿದ್ದಲ್ಲದೇ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆಯೊಡ್ಡಿದಮೇಲೆಯೇ ಭೀಮ ಕೀಚಕನನ್ನು ಕೊಲ್ಲಲು ಸಿದ್ಧವಾಗಿದ್ದು. "ಖುಲ್ಲ ಕೀಚಕನ ಉದರವನ್ನು ಬಗಿದು ಚೆಲ್ಲುವೆನು ಶಾಕಿನಿಯರಿಗೆ" ಎಂದು ಭೀಮ ಮಾತುಕೊಟ್ಟಾಗ ದ್ರೌಪದಿಗಾದ ಸಂತೋಷ ಅಷ್ಟಿಷ್ಟಲ್ಲ...

ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ|
ತರುಣಿ ಕಾಂತನ ಬೀಳುಕೊಂಡಳು 
ಮರಳಿದಳು ನಿಜಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ||

ಸೂರ್ಯೋದಯವಾಗುತ್ತಿದ್ದಂತೆ ತಾವರೆ ಅರಳಿದ್ದಲ್ಲ, ಸೂರ್ಯನು ತಾವರೆಯ ಬಾಗಿಲಿನ ಬೀಗವನ್ನು ತೆರೆದದ್ದು. ಸಾಮಾನ್ಯದ ಸೂರ್ಯೋದಯವಲ್ಲ ಅದು, ದ್ರೌಪದಿಯ ಪಾಲಿಗೆ ಹೊಸದೊಂದು ಭರವಸೆಯ ಬೆಳಗು.

ಪಾಂಡವರ ಅಜ್ಞಾತವಾಸ ಮುಗಿದ ಮರುದಿನದ ಕೆಂಬೆಳಗು ಪಾಂಡವರ ಮುಂದಿನ ಜೀವನದ ನಿರ್ಣಾಯಕ ದಿನಕ್ಕೆ ನಾಂದಿ ಹಾಡಿತ್ತು. 

ಏಳು ಕುದುರೆಯ ಖುರಪುಟದ ಕೆಂ
ಧೂಳಿಯೋ ಕುಂತೀ ಕುಮಾರಕ
ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ|
ಹೇಳಲೇನು ಮಹೀಂದ್ರ ವರದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು||

ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು|
ಕರಳಿ ನೈದಿಲ ಸಿರಿಯ ಸೂರೆಯ
ತರಿಸಿದನು ರಿಪುರಾಯರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ||

ಅಂದಿನ ಸೂರ್ಯೋದಯವನ್ನು ಇದಕ್ಕಿಂತ ಅದ್ಭುತವಾಗಿ ವರ್ಣಿಸಲು ಕುಮಾರವ್ಯಾಸನಲ್ಲದೇ ಇನ್ನಾರಿಂದ ಸಾಧ್ಯ? ಆ ಸೂರ್ಯೋದಯದ ಕೆಂಪನ್ನು ವರ್ಣಿಸಲು (ಪೂರ್ವದಿಗ್ಬಾಲಕಿಯ) 'ಬೈತಲೆಯ ಕುಂಕುಮ'ಕ್ಕಿಂತ ಮಂಗಲಕರವಾದದ್ದು ಇನ್ನೇನು ಬೇಕು? ಹೀಗೆ ಕೆಂಪು ಬಣ್ಣದೊಂದಿಗೆ ಮೇಲೆದ್ದುಬಂದ ರವಿ ಸರಸಿಜದ ಪರಿಮಳಕ್ಕೆ ದುಂಬಿಗಳ ಬರವನ್ನು ಕೊಡುತ್ತಾನೆ. ಚಂದ್ರಕಾಂತಕ್ಕೆ (ಕೌರವರಿಗೆ) ಬೆರಗು. ಜಕ್ಕವಕ್ಕಿಯ (ಪಾಂಡವರಿಗೂ) ಸೆರೆಯನ್ನು ಬಿಡಿಸುತ್ತಾನೆ. ಅಷ್ಟೇ ಅಲ್ಲ ಕೆರಳಿ (ಮೇಲೇರುತ್ತ ಬಿಳುಪಾಗುವ ಸೂರ್ಯ) ನೈದಿಲೆಯ ಸಿರಿಯನ್ನು ಸೂರೆಗೊಳ್ಳುತ್ತಾನೆ. ರಿಪುರಾಯರಾಜ್ಯವನ್ನೊರೆಸುತ್ತಾನೆ. (ಇಲ್ಲಿ ರಿಪು ಕತ್ತಲೆಯೂ ಹೌದು, ಕೌರವರೂ ಹೌದು) ಇಷ್ಟು ಮಾಡಿ, 'ಮೂಡಣಾದ್ರಿಯೊಳ್ ಇತ್ತ ಓಲಗವ'! (ಇತ್ತ ಯುಧಿಷ್ಠಿರ ಮತ್ಸ್ಯೇಂದ್ರನ ಅರಮನೆಯಲ್ಲಿ ಓಲಗ ನೀಡುತ್ತಾನೆ.) ಅಂದಿನ ಸೂರ್ಯೋದಯ ಪಾಂಡವರ ಬದುಕಿನೊಂದಿಗೆ ಬೆಸೆದಿರುವ ರೀತಿ ಇದು.

ಓಲಗ ಕೊಟ್ಟಾದಮೇಲೆ ಯುಧಿಷ್ಠಿರರಾಯ ಕೃಷ್ಣರಾಯನನ್ನು ಕರೆಯಲು ದ್ವಾರಕೆಗೆ ಭಟರನ್ನಟ್ಟುತ್ತಾನೆ. ಮತ್ಸ್ಯನಗರಿಯಲ್ಲಿ ಪಾಂಡವರ ಇರವಿನ ಸುದ್ದಿ ಕೇಳುವುದೇ ತಡ, ಅಲ್ಲಿಗೆ 'ಬಿಜಯಂಗೈದನಸುರಾರಾತಿ ಕರುಣದಲಿ'. ದೂರದಲ್ಲಿ ಗರುಡನ ಹಳವಿಗೆ ಕಾಣುತ್ತಲೇ ಯುಧಿಷ್ಠಿರ ನೆಲದಲ್ಲಿ ಬಿದ್ದು ಹೊರಳಾಡುತ್ತಾನೆ. ಹನಿಗೂಡಿದ ಕಣ್ಣಾಲಿಗಳೊಂದಿಗೆ ಪದತಲದಲ್ಲಿ ಬಿದ್ದು ಹೊರಳುತ್ತಿದ್ದ ಯುಧಿಷ್ಠಿರನ ಮುಖವನ್ನು ತನ್ನ ಬೊಗಸೆಯಲ್ಲೆತ್ತಿ, ಮೈಮುರಿಯಲು ಅವಕಾಶಕೊಡದೇ ಪ್ರೇಮದಿಂದ ಬಿಗಿದಪ್ಪುತ್ತಾನೆ ಕೃಷ್ಣ. ಉಭಯಕುಶಲೋಪರಿ ನಡೆಯುತ್ತಲೇ ಸಂಜೆಯಾಗುತ್ತದೆ. ಕೃಷ್ಣ ಇನ್ನೂ ರಾಜಬೀದಿಯಲ್ಲೇ ನಿಂತಿದ್ದಾನೆ. 

ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ|
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಬಿಜಯಂಗೈಯಬೇಕೆಂದ||

ಸೂರ್ಯಾಸ್ತವಾಗುತ್ತಿದ್ದಂತೆ ತಾವರೆಯ ಎಸಳುಗಳು ಮೇಲ್ಮುಖವಾಗಿ ಕೂಡುತ್ತದೆ. ನೈದಿಲೆಯ ನೆತ್ತಿಯ ಬೆಸುಗೆ ಬಿಡುತ್ತದೆ! ನೈದಿಲೆಯ ನೆತ್ತಿ ಬೆಸುಗೆ ಬಿಟ್ಟರೆ ಅದು ಸಾವಲ್ಲ, ರಾತ್ರಿಯ ಬದುಕು!

ಅಂತೂ ಇಂತೂ ಸಂಧಾನ ಪ್ರಯತ್ನಗಳೆಲ್ಲ ವಿಫಲವಾಗಿ ಯುದ್ಧವೇ ನಿರ್ಣವಾಗಿಹೋಯಿತು. ಇತ್ತ ಕೌರವರ ಪಾಳೆಯದಲ್ಲಿ ಕರ್ಣನಿಗೂ ಭೀಷ್ಮರಿಗೂ ವಾಗ್ಯುದ್ಧ ನಡೆದು, ಭೀಷ್ಮರ ಸೇನಾಧಿಪತ್ಯದಲ್ಲಿ ತಾನು ಯುದ್ಧ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಕರ್ಣ ಸಭೆಯಿಂದ ಹೊರನಡೆದದ್ದೂ ಆಯಿತು. ಮರುದಿ‌ನ ಬೆಳಗಾಗುತ್ತಿದ್ದಂತೆಯೇ ಭೀಷ್ಮರ ಪಟ್ಟಾಭಿಷೇಕ.

"ಮಗನೊಡನೆ ಮೂದಲಿಸಿ ಭೀಷ್ಮನು 
ಹೊಗುವ ಗಡ ಪರಸೇನೆಯನು ಕಾ
ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ|"

ತನ್ನ ಮಗನನ್ನು ಮೂದಲಿಸಿದ ಭೀಷ್ಮ ಪರಬಲದೊಡನೆ ಹೋರುವುದನ್ನು ನೋಡಲು ಉತ್ಸುಕನಾಗಿದ್ದನೆಂಬಂತೆ ರವಿ ಮೂಡಣದಲ್ಲಿ ತಲೆದೋರಿದನಂತೆ!

ಅಂತೂ ಮೊದಲ ದಿನದ ಯುದ್ಧ ಮುಕ್ತಾಯದ ಘಟ್ಟಕ್ಕೆ ಬಂದಿತ್ತು. ಉತ್ತರಕುಮಾರನೂ ಸೇರಿ ಸಹಸ್ರಾರು ಭಟರು ಧರೆಗುರುಳಿದ್ದರು. ಎರಡೂ ಸೇನೆಯ ಮುಂಗುಡಿಯಲ್ಲಿ ರಕ್ತ ಚೆಲ್ಲಾಡಿತ್ತು.

ಧೀರ ಸುಭಟರ ರಕ್ತಧಾರಾ
ಸಾರಲೋಹಿತ ಬಿಂಬವನು ಘನ
ವಾರಿಯಲಿ ತೊಳೆದಂತೆ ಪಶ್ಚಿಮಜಲಧಿಗಿನನಿಳಿದ|

"ಸುಭಟರ ರಕ್ತಧಾರೆಯಲ್ಲಿ ತೊಯ್ದ ಲೋಹವನ್ನು ಸರೋವರದಲ್ಲಿ ಅದ್ದಿ ತೊಳೆದಂತೆ" ಪಶ್ಚಿಮ ಸಮುದ್ರದಲ್ಲಿ ಸೂರ್ಯ ಇಳಿಯುತ್ತಾನೆ!! ಅಂದಿನ ರಕ್ತಪಾತವನ್ನು ಸೂರ್ಯಾಸ್ತದೊಂದಿಗೆ ಸಮೀಕರಿಸಲು ಇನ್ನೆಂಥ ಉಪಮಾನ ಬೇಕು?

ಮುರಾಂತಕನ ಕೈಯಲ್ಲಿ ಚಕ್ರವನ್ನು ಹಿಡಿಸಿಯೇ ತೀರುತ್ತೇನೆಂದು ಯುದ್ಧಾರಂಭದಲ್ಲಿ ಭೀಷ್ಮರು ಮಾಡಿದ ಪ್ರತಿಜ್ಞೆ ಅಂತೂ ಒಂಭತ್ತನೇ ದಿನದ ಯುದ್ಧದಲ್ಲಿ ಈಡೇರಿತ್ತು. ಭೀಷ್ಮರ ಶರವರ್ಷಘಾತದಿಂದ ಕಡುನೊಂಡು ಖತಿಹಿಡಿದ ಕೃಷ್ಣ ಅಂತೂ ಚಕ್ರವನ್ನು ತುಡುಕಿದ್ದ. ಒಮ್ಮೆ ಹರ ಬ್ರಹ್ಮಾದಿಗಳೇ ನಡುಗಿದರು ಎನ್ನಿ. ಆದರೆ, ವೀರಭೀಷ್ಮನ ನಿಜಭಕ್ತಿಗೆ ಮೆಚ್ಚಿ ತನ್ನ ಚಕ್ರವನ್ನು ಮುಚ್ಚಬೇಕಾಯಿತು ಕೃಷ್ಣ! ಅರ್ಜುನನಂತೂ ಕೃಷ್ಣನ ಅಭೂತಪೂರ್ವ ವೀರಾವೇಶವನ್ನು ನೋಡಿಯೇ ಬೆವರಿ ಬಸವಳಿದುಹೋಗಿದ್ದ. ಅಂತೂ ಕೃಷ್ಣ ತನ್ನ ರಥಕ್ಕೆ ಹಿಂದಿರುಗಿ.....

ನಡುಗುವರ್ಜುನದೇವನನು ತೆಗೆ
ದಡಿಗಡಿಗೆ ತೆಕ್ಕೈಸಿ ಭೀತಿಯ
ಬಿಡಿಸಿ ವಾಘೆಯ ಕೊಂಡು ತುರಗವನೆಡಬಲಕೆ ತಿರುಹಿ|
ನಡೆಸಿದನು ಕಾಳೆಗಕೆ ಬಳಿಕವ
ಗಡ ಮುರಾಂತಕ ಮರಳಿ ಚಕ್ರವ
ತುಡುಕದಿರನೆಂದಸ್ತಗಿರಿಯನು ಸೂರ್ಯ ಮರೆಗೊಂಡ||

ತಾನು ಹೀಗೆಯೇ ನಿಧಾನವಾಗಿ ಸಾಗುತ್ತಿದ್ದರೆ ಈ ಮುರಾಂತಕ ಇನ್ನೊಮ್ಮೆ ಚಕ್ರವನ್ನು ಹಿಡಿದರೂ ಹಿಡಿಯಬಹುದು ಎಂದು ಸೂರ್ಯನೇ ಮರೆಯಾದ! ಸೂರ್ಯ ಅಂದಿನ ಯುದ್ಧಕ್ಕೆ ಸಾಕ್ಷಿ ಮಾತ್ರ. ಆದರೆ ಪರೋಕ್ಷವಾಗಿ ಆತನೂ ಪಾತ್ರಧಾರಿಯೇ! ಕೃಷ್ಣನ ರೋಷಕ್ಕೆ ಸೂರ್ಯನೂ ಬೆದರಿದ್ದ. ಹಾಗಾಗಿ ಆವತ್ತು ಸೂರ್ಯ ತುಸು ಗಡಿಬಿಡಿಯಲ್ಲಿಯೇ ಆಕಾಶವನ್ನು ತೆರವುಗೊಳಿಸಿದ್ದ!

ಮರುದಿನ ಭೀಷ್ಮರ ಸೇನಾಧಿಪತ್ಯದ ಕೊನೆಯ ದಿನ. ಅಂದಿನ ಯುದ್ಧದಲ್ಲಿ ಏನಾಗುವುದೋ ಎಂಬ ಕಾತುರದಿಂದ "ಮೂಡಣಶೈಲಮಂಚದೊಳ್ ಉಪ್ಪವಡಿಸಿದನು ಅಬುಜಿನೀರಮಣ"! ಎಂಥ ಚಂದದ ಶಬ್ದಗಳಲ್ಲವೇ? ಅಂದಿನ ಸಂಜೆಯೂ ಹಾಗೆಯೇ, "ಪಡುವಣಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ". ರವಿ ಇಲ್ಲಿ ‘ಲೈಟ್ ಹೌಸ್’ ಆಗಿದ್ದಾನೆ!

ಕರ್ಣನ ಶಪಥ ನಿನ್ನೆಗೇ ಮುಕ್ತಾಯವಾಯಿತು. ಇಂದಿನಿಂದ ಕರ್ಣ ಯುದ್ಧದಲ್ಲಿ ಭಾಗವಹಿಸುತ್ತಾನೆ. ಆದರೆ ಅಂದಿನ ಬೆಳಗೂ ಸ್ವಲ್ಪ ವಿಶೇಷವೇ. ಇಷ್ಟು ದಿನ ಯುದ್ಧವನ್ನು ನೋಡುತ್ತಿದ್ದ ಸೂರ್ಯನಿಗೆ ಈಗ ತಾನೂ ಹೊಡೆದಾಡುವ ಉತ್ಸಾಹವೇನೊ! "ದಿವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ". ಚಂದ್ರನ ಹಿಂದಲೆಗೆ ರವಿ ಹಗರಿಕ್ಕುತ್ತಾನೆ! (ಆ ಚಂದ್ರ ಸತ್ತೇಹೋದನಿರಬೇಕು!)

ಅಂತೂ ಹನ್ನೆರಡನೇ ದಿನ ಬೆಳಗಾಗುವ ಸಮಯ.
ಸಸಿ ವರುಣ ದಿಗುವಧುವನಾಲಿಂ
ಗಿಸಲು ಕುಮುದಿನಿ ಖತಿಯ ಹಿಡಿದಳು
ಮಸುಳಿದವು ತಾರೆಗಳು ರಜನೀ ನಾರಿ ಹಿಂಗಿದಳು|
ಒಸೆದು ಕಮಲಿನಿ ನಗಲು ಮಿಗೆ ಹುರು
ಡಿಸುತ ಪೂರ್ವದಿಶಾನಿತಂಬಿನಿ
ನಿಶಿತಕೋಪದ ಕಿಡಿಯನುಗುಳಿದಳೆನಲು ರವಿ ಮೆರೆದ||

ಎಳೆಯ ವರುಣ (ಪೂರ್ವ)ದಿಗ್ವಧುವನ್ನು ಆಲಿಂಗಿಸುತ್ತಿದ್ದಂತೆ ಕುಮುದಿನಿಗೆ (ನೈದಿಲೆ) ಕೋಪ. ತಾರೆಗಳು ಮಂಕಾದವು. ರಜನೀನಾರಿ ಹಿಂಗಿದಳು (ತೊರೆದಳು). ಕಮಲಿನಿ ನಕ್ಕಳು. ಮತ್ತೆ, ಪೂರ್ವದಿಶಾನಿತಂಬಿನಿ ಕೋಪದಿಂದ ಕಿಡಿಯುಗುಳುತ್ತಿದ್ದಾಳೋ ಎಂಬಂತೆ ರವಿ ಮೆರೆದ. (*ನಿತಂಬಿನಿ=ನಾರಿ, ಹೆಣ್ಣು).

ಈ ಪದ್ಯದ ಆರಂಭ ಮತ್ತು ಅಂತ್ಯಗಳಲ್ಲಿ ಪುರುಷಸೂಚಕ ಶಬ್ದಗಳನ್ನೂ, ಉಳಿದಂತೆಲ್ಲ ಸ್ತ್ರೀ ಸೂಚಕ ಶಬ್ದಗಳನ್ನೂ ಬಳಸಿದ್ದು ಒಂದು ವಿಶೇಷವಾದರೆ ಮೊದಲನೆಯ ಮತ್ತು ಮೂರನೆಯ ಪಾದಗಳಲ್ಲಿ ಶಾಂತ, ಶೃಂಗಾರ ಪದಗಳನ್ನು ಬಳಸಿ (ಆಲಿಂಗನ, ನಗು) ಉಳಿದ ಸಾಲುಗಳಲ್ಲಿ ಕೋಪತಾಪದ ಶಬ್ದಗಳನ್ನು ಬಳಸಿದ್ದು ಇನ್ನೊಂದು ವಿಶೇಷ.

ದ್ರೋಣರ ಸೇನಾಧಿಪತ್ಯದಲ್ಲಿ ಧರ್ಮಜನನ್ನು ಸೆರೆಹಿಡಿವ ಸನ್ನಾಹ ಅಂದೂ ಕೈಗೂಡಲಿಲ್ಲ. ಅಲ್ಲದೇ, ಪಾಂಡವರಿಗೆ ಗೆಲುವಿಗೆ ದೊಡ್ಡ ತೊಡಕಾಗಿದ್ದ ಭಗದತ್ತ ಅಂದು ಪ್ರಾಣತೆತ್ತಿದ್ದ. ಬೆಂಕಿಯನ್ನು ಮುತ್ತುವ ಪತಂಗದಂತೆ ನರನನ್ನು ಕೆಣಕಿ ಸತ್ತವರೆಷ್ಟೊ. ಇವೆಲ್ಲ ಘಟನೆಗಳಿಗೆ ಕಳಶವಿಟ್ಟಂತೆ ಸೂರ್ಯಾಸ್ತ!

 "ಅಪರ ಜಲಧಿಯೊಳುರಿವ ವಡಬನ ದೀಪ್ತ ಶಿಖರದೊಳೆರಗುವಂತೆ ಪತಂಗಮಂಡಲವಿಳಿದುದಂಬರವ"

ಪಶ್ಚಿಮ ಸಮುದ್ರದಲ್ಲಿ ಉರಿಯುತ್ತಿರುವ ಕೆನ್ನಾಲಿಗೆಯ ತುದಿಗೆ ಪತಂಗಳು ಬಂದೆರಗುವಂತೆ ಆಕಾಶಮಂಡಲದಲ್ಲಿ ನಕ್ಷತ್ರಗಳು ಇಳಿದವಂತೆ! ಸಮುದ್ರದಲ್ಲಿ ಉರಿಯುವ ಬೆಂಕಿ! (ಬೆಂಕಿಯಂತೆ ಕಾಣುವ ಸೂರ್ಯ), ಕೆಂಧೂಳಿ ಮುಸುಕಿರುವ ಆಕಾಶವೇ ಬೆಂಕಿಯ ಕೆನ್ನಾಲಿಗೆ. ನಕ್ಷತ್ರಗಳೆಲ್ಲ ಬೆಂಕಿಗೆ ಬೀಳುವ ಪತಂಗಗಳು!

ಮರುದಿನದ ಬೆಳಗಿನಲ್ಲೂ ಸೂರ್ಯನಿಗೆ ಯುದ್ಧದ್ದೇ ಗುಂಗು. 

ಹರಿದುದೋಲಗವಿತ್ತ ಭುವನದೊ
ಳಿರುಳಡವಿಗಡಿತಕ್ಕೆ ಹರಿದವು
ಕಿರಣತೆತ್ತಿದವಭ್ರದಲಿ ತಾರಕೆಯ ತೇರುಗಳು|
ಹರಿವ ಮಂಜಿನ ನದಿಯ ಹೂಳ್ದವು
ಸರಸವಾಯಿತು ಗಗನತಳ ತಾ
ವರೆಯ ಸಖ ನಿಜರಥವ ನೂಕಿದನುದಯಪರ್ವತಕೆ|| 

ಇರುಳು ಅಡವಿಗೆ ಓಡಿಹೋಯಿತು. ಸೂರ್ಯನ ಕಿರಣಗಳು ತಾರಕೆ(ನಕ್ಷತ್ರ)ಯ ತೇರುಗಳನ್ನು ತೆತ್ತಿಸಿತು. ತಾವರೆಯ ಸಖ ತನ್ನ ರಥವನ್ನು ಉದಯಪರ್ವತಕ್ಕೆ ನೂಕಿದನಂತೆ! 

ಅಂದಿನ ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸಲು ಒಳಹೊಕ್ಕ ಅಭಿಮನ್ಯು ಮತ್ತೆ ಹೊರಬರಲಿಲ್ಲ. ಆ "ಬಾಲಕನನೀಕ್ಷಿಸಲರಿದು ತನಗೆಂಬಂತೆ ರವಿ ಜಾರಿದನು ಪಶ್ಚಿಮಕೆ". ಎಳೆಯ ಮಗುವೊಂದು ಅನ್ಯಾಯವಾಗಿ ಸತ್ತರೆ ಯಾರಿಗೆ ತಾನೇ ದುಃಖವಾಗಲಾರದು? ಸೂರ್ಯನಿಗೂ ಹಾಗೆಯೇ ಸಂಕಟವಾಯ್ತು. ಆ ಬಾಲಕನನ್ನು ನೋಡಲು ತನಗೆ ಸಾಧ್ಯವಿಲ್ಲ ಎಂದು ಪಶ್ಚಿಮಕ್ಕೆ ಜಾರಿದನಂತೆ!

ಮರುದಿನದ ಯುದ್ಧದಲ್ಲಿ ಕೃಷ್ಣ ತನ್ನ ಮಾಯೆಯಿಂದ ಸೂರ್ಯನನ್ನು ಅಡಗಿಸಿ, ಸೈಂಧವನ ತಲೆ ತೆಗೆಯುವ ಅರ್ಜುನನ ಪ್ರತಿಜ್ಞೆಯನ್ನು ಈಡೇರಿಸಿದ. ಸಂಜೆಯಲ್ಲದ ಸಂಜೆಯಲ್ಲಿ ಈ ಘಟನೆ ನಡೆದ ಪರಿಣಾಮವಾಗಿ ಅಂದಿನ ರಾತ್ರಿಯೂ ಯುದ್ಧ ಮುಂದುವರೆಯಿತು. ದ್ರೋಣರ ಈ ತಂತ್ರಕ್ಕೆ ತಕ್ಕ ಮದ್ದರೆಯಲು ಘಟೋತ್ಕಚನನ್ನು ಕರೆಸಿ ಬಲಿಕೊಟ್ಟದ್ದೂ ಆಯ್ತು. ಈಗ ಪೂರ್ವದಲ್ಲಿ ಚಂದ್ರೋದಯವಾಗುತ್ತಿದೆ, ಸ್ವಲ್ಪ ತಡವಾಗಿ.

ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು|
ಹರನ ಹಗೆಯಡ್ಡಣ ವಿಲಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ||

ಬಿಸಿಬಿಸಿ ರಕ್ತ ಚೆಲ್ಲಾಡುತ್ತಿರುವ ಆ ರಣಾಂಗಣದಲ್ಲಿ ಅದೆಂತಹ ವಿರಹ? ಎಲ್ಲಿಯ ಮನ್ಮಥ? ಎಲ್ಲಿಯ ವಿಲಾಸಿನಿಯರು? ತಾವರೆಯ ಕಗ್ಗೊಲೆಯಾದದ್ದೊಂದು ಹೌದು. ಎಷ್ಟು ಕಟುವಾದ ವ್ಯಂಗ್ಯ!

ಆ ರಾತ್ರಿಯಂತೂ ದ್ರೋಣಾಚಾರ್ಯರು ಪಾಂಡವ ಪಾಳೆಯವನ್ನು ಮನಬಂದಂತೆ ಸವರಿದ್ದರು. ಹಿಂದಿನ ದಿನ ಬೆಳಿಗ್ಗೆಯಿಂದಲೇ ಯುದ್ದಮಾಡುತ್ತ ಬಳಲಿದ್ದ ಯೋಧರಿಗೆ ಅದ್ಯಾವಾಗ ಬೆಳಗಾಗುತ್ತದೋ ಎನ್ನಿಸತೊಡಗಿತ್ತು. ಅಂತೂ ಅಂಬುಜಬಂಧು ತನ್ನ ಮನೆಯಿಂದ ಹೊರವಂಟ. ಮರುದಿನದ ಯುದ್ಧದಲ್ಲಿ ಪಾಂಡವಸೇನೆಗೆ ಕಾಲಾಗ್ನಿರುದ್ರನಂತಿದ್ದ ಉಭಯಕಟಕಾಚಾರ್ಯ ದ್ರೋಣರು ದೇಹತ್ಯಾಗಮಾಡುತ್ತಾರೆ. ಇಷ್ಟು ದಿನದ ಯುದ್ಧದಲ್ಲಿ ಪಾಂಡವ ಸೇನಾಪತಿ ಧೃಷ್ಟದ್ಯುಮ್ನ ಇದೇ ದ್ರೋಣರಿಂದ ಪೆಟ್ಟು ತಿಂದು ಅದೆಷ್ಟು ಬಾರಿ ಮೂರ್ಛೆಹೋಗಿದ್ದನೋ ಲೆಕ್ಕವಿಲ್ಲ. ಆದರೆ ಈಗ, ದ್ರೋಣರು ತ್ಯಜಿಸಿದ ದೇಹದಲ್ಲಿ ಮತ್ತೆ ಪ್ರಾಣಸಂಚಾರವಾಗದಂತೆ ಕೊಚ್ಚಿಕೊಚ್ಚಿಕೊಚ್ಚಿಕೊಚ್ಚಿ... ಇದನ್ನೆಲ್ಲ ನೋಡಲಾಗದೇ "ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ"

(*ಮುಸುಡು=ಮುಖ)

ಅಂದಿನ ಇರುಳು ಕರ್ಣನಿಗೆ ಸೇನಾಪತಿ ಪಟ್ಟವಾಯ್ತು. ಮರುದಿನದಿಂದ ಕರ್ಣನ ಸೇನಾಧಿಪತ್ಯದಲ್ಲಿ ಯುದ್ಧ.

ಮಗನು ದಳಪತಿಯಾದ ಗಡ ಕಾ
ಳೆಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ|
ಹೊಗರು ಕುವಳಯಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯೆ ವಿರಹದ 
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ||

ಜಗತ್ತಿನ ಸಕಲ ಆಗುಹೋಗುಗಳಿಗೆ ಕೇವಲ ಸಾಕ್ಷಿಮಾತ್ರನಾದ ಚೈತನ್ಯಮೂರ್ತಿ ಸೂರ್ಯನಿಗೂ ಇಂದು ಅಮಿತೋತ್ಸಾಹ. ತನ್ನ ಮಗನೇ ದಳಪತಿಯಾಗಿದ್ದಾನೆ, ಇವತ್ತಿನ ಯುದ್ಧ ಹೇಗಿರುತ್ತದೆ ನೋಡೋಣ ಎಂಬ ತವಕದಿಂದ ರವಿ ಉದಯಾಚಲಕ್ಕೆ ಬಂದ.

ಅಂದು ಯುಧಿಷ್ಠಿರನೂ ಕೌರವೇಶ್ವರನೂ ಯುದ್ಧಮಾಡುತ್ತಿರುವಂತೆಯೇ ಸಂಜೆಯಾಯಿತು.

"ರಾಯರಿಬ್ಬರ ಮನದ ತಿಮಿರದ ತಾಯಿಮನೆಯೆಂಬವೊಲು ತಾ ಪೂರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ"

ಎರಡೂ ರಾಯರ ಮನದ ಕತ್ತಲೆಯ ತಾಯಿಮನೆಯೆಂಬಂತೆ ಆವರಿಸಿದ ಕತ್ತಲೆ ನಿಮಿಷಗಳಲ್ಲಿ ಜಗತ್ತನ್ನೇ ನುಂಗಿತ್ತು! ಅಂದಿನ ಯುದ್ಧದಲ್ಲಿ ಕರ್ಣನು ಗಣನೀಯವಾದ ಸಾಹಸವನ್ನೇ ಮೆರೆದನಾದರೂ ಸಾರಥಿಯನ್ನು ಕಳೆದುಕೊಂಡ. ಅಂದು ಸಂಜೆಯ ಒಡ್ಡೋಲಗವನ್ನು ಮುಗಿಸಿದ ಕರ್ಣ, ಬಳಿಕ ಕೌರವರಾಯನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ತನಗೆ ಸಾರಥಿಯೊಂದೇ ಕೊರತೆ. ಸಮರ್ಥನಾದ ಸಾರಥಿಯೊಬ್ಬನನ್ನು ನನಗೆ ಜೋಡಿಸಿದೆಯಾದರೆ ನಾಳೆಯಿಂದ ನನ್ನ ನಿಜ ಪರಾಕ್ರಮವನ್ನು ನೀನು ನೋಡುವಿಯಂತೆ. ಆದರೆ, ನರನೊಡನೆ ಯುದ್ಧಮಾಡಲು ಅಂತಿಂಥ ಸಾರಥಿ ಸಾಕಾಗುವುದಿಲ್ಲ, ಸುಭಟನಾದ ಶಲ್ಯನನ್ನೇ ತನ್ನ ರಥಕ್ಕೆ ಸಾರಥಿಯಾಗಿಸಬೇಕು ಎಂದು ಕೌರವರಾಯನಲ್ಲಿ ಬಿನ್ನವಿಸಿಕೊಂಡ. ಅಂತೂ ಇಂತೂ ಶಲ್ಯನನ್ನೊಪ್ಪಿಸಿದ್ದಾಯ್ತು. ಮರುದಿನದಿಂದ ಕರ್ಣ-ಶಲ್ಯರ ಹೊಸ ಜೋಡಿ. "ತರಣಿ ನೂಕಿದನುದಯಶೈಲಕೆ ರತುನಮಯ ರಥವ". ಅಂದು ನಿರೀಕ್ಷೆಯಂತೆಯೇ ಭರ್ಜರಿ ಹೋರಾಟ ನಡೆದದ್ದು ಹೌದು. ಕರ್ಣನಂತೂ ಧರ್ಮಜನನ್ನು ಹುಡುಹುಡುಕಿ ಬೆಂಬತ್ತಿ ತನ್ನ ಬಾಣಗಳಿಂದ ನೋಯಿಸಿದ. ಆದರೆ ಧರ್ಮಜನ ತಲೆ ತೆಗೆಯುವ ಅವಕಾಶವಿದ್ದರೂ ತಾನು ತಾಯಿಗೆ ಕೊಟ್ಟ ಮಾತಿನಂತೆಯೇ ತಲೆಗಾಯ್ದು ಬಿಟ್ಟದ್ದಂತೂ ಹೌದು. ರಣಾಂಗಣದ ಒಂದು ಬದಿಯಲ್ಲಿ ಭೀಮ ದುಶ್ಶಾಸನನ ರಕ್ತ ಕುಡಿದದ್ದೂ ಆಯಿತು. ಪಾಂಡವರ ಪಾಳೆಯದಲ್ಲಿ ಅಭಿಮನ್ಯು ಹೇಗೋ ಹಾಗೆಯೇ ಕೌರವರ ಪಾಳೆಯದಲ್ಲಿ ಸಿಂಹದಮರಿಯಂತಿದ್ದ ಕರ್ಣನ ಮಗ ವೃಷಸೇನನೂ ಮಡಿದದ್ದಾಯ್ತು. ಆ ಬಳಿಕ ಹರಿಹರಬ್ರಹ್ಮಾದಿಗಳೂ ಬೆರಗಾಗುವಂತೆ, ದಿಗ್ಗಜಗಳೂ ಬೆದರುವಂತೆ ನಡೆದ ಕರ್ಣ-ಪಾರ್ಥರ ಘೋರ ಯುದ್ಧ ಸಂಜೆಯ ಹೊತ್ತಿಗೆ ಕರ್ಣಾವಸಾನದಲ್ಲಿ ಕೊನೆಗೊಂಡಿತು.

"ತೆತ್ತನೇ ಮಗನಸುವನಕಟ ಎನುತ್ತ ಚಿಂತಾರಾಗದಲಿ ಕಡಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ"

ಎಷ್ಟಂದರೂ ಮಗನಲ್ಲವೇ? ತನ್ನ ಕಣ್ಣೆದುರೇ ಪ್ರಾಣತೆತ್ತಾಗ ಆ ಸೂರ್ಯ ಎಷ್ಟು ನೊಂದಿರಬೇಡ? ಅಂದು ಸೂರ್ಯ ಮುಳುಗಲಿಲ್ಲ, ಅಂಬರವನ್ನು ಬಿಸುಟು ಕಡಲತ್ತ ಹೊರಟ! (ತನ್ನ ಮಗ ಸತ್ತಿದ್ದರಿಂದ ಸೂರ್ಯನಿಗೆ ಸೂತಕ. ಸೂತಕ ಪರಿಹಾರಕ್ಕಾಗಿ ಸಮುದ್ರಸ್ನಾನಕ್ಕೆ ಹೊರಟನೋ?)

ದ್ಯುಮಣಿ ಕರ್ಣದ್ಯುಮಣಿ ಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ|
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ||

ಅದು ಕೇವಲ ಕರ್ಣಾವಸಾನವಲ್ಲ, ಕೌರವನ ಭಾಗ್ಯದ ಅವಸಾನ. ಈ ಸೂರ್ಯಾಸ್ತಕ್ಕೂ ಕೌರವನ ಪರಿಸ್ಥಿತಿಗೂ ಇದಕ್ಕಿಂತ ಒಳ್ಳೆಯ ವಿವರಣೆ ಇನ್ನೆಲ್ಲೂ ಸಿಗಲಿಕ್ಕಿಲ್ಲ. ದ್ಯುಮಣಿ(ಸೂರ್ಯ) ಕರ್ಣನೆಂಬ ದ್ಯುಮಣಿಯ ಸಹಿತ ಅಸ್ತಮಿಸೆ, ಕಮಲವೂ - ಕೌರವನ ಮುಖಕಮಲವೂ ಬಾಡಿತು. ತಿಮಿರ(ತಮ)ದೊಡನೆ ಕೌರವನ ಶೋಕತಮವೂ ಹೆಚ್ಚಿತು. ಚಕ್ರವಾಕಕ್ಕೂ ಭೂಪೋತ್ತಮನ ವಿಜಯಾಂಗನೆಗೂ ವಿರಹ ಸಮನಿಸಿತು. ಎಂತಹ ಸಮೀಕರಣ ಇದು!

ಅಂದು ರಾತ್ರಿ ಶಲ್ಯನಿಗೆ ಪಟ್ಟವಾಯ್ತು. ಮರುದಿನ ಬೆಳಗಾದರೆ ಶಲ್ಯಪರ್ವ. ಇನ್ನೇನು ಅಳಿದುಳಿದ ಪುಡಿ ಸೇನೆ ಪಾಂಡವರಿಗೆ ಲೆಕ್ಕವೇ? ಆದರೂ ಸೂರ್ಯನ ಆಸಕ್ತಿ ತಗ್ಗಿರಲಿಲ್ಲ.

ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರೆಸಿದನೆನ್ನ ಬಿಂಬದಲಿ|
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ||

ನೆಗ್ಗಿದನು ಎಂಬ ಪದದ ಸರಿಯಾದ ಅರ್ಥವಾಗಬೇಕೆಂದರೆ 'ಎತ್ತಿದನು' ಎಂದು ಓದಿಕೊಳ್ಳಿ. ಗಾಂಗೇಯನಿಗೆ ಮುಕ್ತಿ ಕೊಡಿಸಿದ್ದಾಯ್ತು. ದ್ರೋಣರನ್ನು ಸ್ವರ್ಗಕ್ಕೆ ಕಳಿಸಿದ್ದಾಯ್ತು. ತನ್ನ ಮಗನನ್ನೂ ತನ್ನಲ್ಲಿ ಒಂದುಮಾಡಿಸಿದ್ದಾಯ್ತು. ಈ ಅತಿಶಯದ ರಣಕ್ಕೆ ಶಲ್ಯನನ್ನೂ ಬಲಿಕೊಡುತ್ತಿದ್ದಾನಲ್ಲ, ಈ ಕೌರವೇಶ್ವರನ ಹೆಡ್ಡತನವನ್ನಾದರೂ ನೋಡೋಣ ಎಂದು ರವಿ ಅಂಬರವನ್ನಡರಿದನಂತೆ! 

ರವಿ ಅಂದುಕೊಂಡಂತೆಯೇ ಶಲ್ಯನೃಪಾಲನೂ ದ್ರೋಣಾದಿಗಳನ್ನು ಸೇರಿಕೊಂಡ. ಯುದ್ಧಭೂಮಿಯ ಯಾವ ಮೂಲೆಯಲ್ಲೂ ಕೌರವೇಶ್ವರನ ತಲೆ ಕಾಣುತ್ತಿಲ್ಲ. ಕಾರಣ, ಆತ ದ್ವೈಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ. ಇತ್ತ ಭೀಮಾರ್ಜುನರು ರಣಾಂಗಣದಲ್ಲಿ ಅಳಿದುಳಿದ ಅರಸುಕುಮಾರರನ್ನು ತರಿಯುತ್ತಿದ್ದರೆ ಅತ್ತ ಬೇಹುಗಾರರು ಕೌರವೇಶ್ವರನನ್ನು ಹುಡುಕತೊಡಗಿದ್ದರು. ಅಂತೂ ಕೌರವೇಶ್ವರ ಸಿಕ್ಕಿಬಿದ್ದ. ನಂತರ ಭೀಮನೊಂದಿಗೆ ನಡೆದ ಭಯಂಕರ ಗದಾಯುದ್ಧದಲ್ಲಿ ಊರುಭಂಗಕ್ಕೊಳಗಾಗಿ ನೆಲಕ್ಕೆ ಬಿದ್ದ. ಆದರೆ ಅಂದಿನ ಸಂಜೆ ಮಾತ್ರ ಅಷ್ಟು ಮನೋಜ್ಞವಾಗಿರಲಿಲ್ಲ. ಅಸಲಿಗೆ ಸಂಜೆ ಯಾವಾಗ ಆಯಿತು ಎಂಬುದೂ ಗೊತ್ತಾಗುವಂತಿರಲಿಲ್ಲ. "ಬೀಸಿದುದು ಬಿರುಗಾಳಿ ಕತ್ತಲೆ ಸೂಸಿದುದು ದಿಗುವಳಯದಲಿ ಪರಿವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ" (ಇಲ್ಲಿ ಐದು ಅಥವಾ ಆರು ಎಂದು ನಿರ್ಧಿಷ್ಟವಾಗಿ ಹೇಳಿಲ್ಲ. ಆಡುಮಾತಿನಂತೆಯೇ 'ಐದಾರೇಳು' ಎಂಬ ಪದಬಳಕೆಯೇ ಅದ್ಭುತವೆನಿಸುತ್ತದೆ.) ಒಟ್ಟಿನಲ್ಲಿ, ಕೌರವೇಶ್ವರನ ಅವಸಾನದಲ್ಲಿ ನಡೆಯಬಾರದ ಉತ್ಪಾತಗಳೆಲ್ಲ ನಡೆದವು. ಕುಮಾರವ್ಯಾಸ ಭಾರತದಲ್ಲಿ ಇದೇ ಕೊನೆಯ ಸಂಜೆ. ಆದರೆ ಈ ಸಂಜೆ ಭೂತ-ಭವಿಷ್ಯ ಎರಡನ್ನೂ ಹೇಳುವಂತಿದೆ. ಭೂತದಲ್ಲಿ ನಡೆದ ಘೋರ ಯುದ್ಧ, ಹದಿನೆಂಟು ಅಕ್ಷೋಹಿಣಿ ಸೈನಿಕರ ರಕ್ತಧಾರೆಯಲ್ಲಿ ತೋಯ್ದ ಯುದ್ಧಭೂಮಿಯ ಭೀಕರತೆ ಹಾಗೂ ಅಂದು ರಾತ್ರಿ ಅಶ್ವತ್ಥಾಮನಿಂದ ನಡೆಯಲಿರುವ ಘೋರ ಕೃತ್ಯದ ಮುನ್ಸೂಚನೆಗಳೆರಡನ್ನೂ ಒಟ್ಟಿಗೇ ಸೂಚಿಸುವಂತಿದೆ.

||ಓಂ||

ಬರಹ: ಪ್ರಸಾದ ಭಟ್