ಭಾರತದ ಆರ್ಥಿಕ ಪ್ರಗತಿಗೆ ಹೊಸದೊಂದು ವೇಗ ಕಲ್ಪಿಸುವ ʼಬಜೆಟ್ ಮಂಡನೆ' ಅಥವಾ 'ಆಯವ್ಯಯ ಮಂಡನೆ' ಪ್ರತೀ ವರ್ಷವೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈಗ 2023-24 ನೇ ಸಾಲಿನ ಆಯವ್ಯಯ ಮಂಡನೆಗೆ ಕೇಂದ್ರ ಸರಕಾರ ತಯಾರಿ ನಡೆಸಿದೆ ಮತ್ತು ಫೆಬ್ರವರಿ ಒಂದರಂದು ವಿತ್ತ ಸಚಿವರು ಆಯವ್ಯಯ ಮಂಡಿಸಲಿದ್ದಾರೆ. ಕೋವಿಡ್ ಮಹಾಮಾರಿಯಿಂದ ತತ್ತರಿಸಿರುವ ಜನಸಾಮಾನ್ಯ ಈಗ ಕಷ್ಟದಿಂದ ಹೊರಬರಲು ಪ್ರಯತ್ನಪಡುತ್ತಿದ್ದು ಅವರ ದೊಡ್ಡದಾದ ನಿರೀಕ್ಷೆಗಳನ್ನು ಈಡೇರಿಸುವ ಸವಾಲು ಕೂಡ ಈಗ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತರಾಮನ್ ಅವರ ಮೇಲಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದೇಶದ ಆರ್ಥಿಕತೆ ಇದೀಗ ಚೇತರಿಸಿಕೊಳ್ಳುತ್ತಲಿದೆ. ಹಣದುಬ್ಬರ, ಉದ್ಯಮಿಗಳ ಕೋರಿಕೆ ಮತ್ತು ಜನ ಸಾಮಾನ್ಯರ ಬೇಡಿಕೆಗಳ ನಡುವೆ ಈ ಬಾರಿಯ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಐದನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ ಮತ್ತು ಮೋದಿ ಸರಕಾರಕ್ಕಿದು ಹನ್ನೊಂದನೇ ಬಜೆಟ್. 2025 ರಲ್ಲಿ ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕ ದೇಶವನ್ನಾಗಿ ಮಾಡುವ ಗುರಿ ಹೊಂದಿರುವ ಮೋದಿ ಸರಕಾರಕ್ಕೆ ಮತ್ತು ಪ್ರಮುಖವಾಗಿ ದೇಶಕ್ಕೆ ಅತ್ಯಂತ ಮಹತ್ವದ ಬಜೆಟ್ ಇದಾಗಲಿದೆ. ಬೇಡಿಕೆ ಮತ್ತು ಪೂರೈಕೆಯ ಸಮತೋಲನ ಕಾಪಾಡಿಕೊಳ್ಳಲು ಬಳಕೆಯ ಸಾಮಾರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕಾದ ಮಹತ್ವದ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ. ಹಾಗಾದರೆ ಈ ಬಜೆಟ್‌ನ ನಿರೀಕ್ಷೆಗಳೇನು? ಯಾವ್ಯಾವ ಕ್ಷೇತ್ರಗಳು ಏನೇನು ವಿನಾಯಿತಿಗಳನ್ನು ನಿರೀಕ್ಷಿಸುತ್ತಿವೆ? ನೋಡೋಣ ಬನ್ನಿ.
ಹಣದ ಹರಿವನ್ನು ಹೆಚ್ಚಿಸಿಕೊಳ್ಳುವ ಕಡೆ ಸರಕಾರ ಗಮನ ಹರಿಸಬೇಕಾದರೆ ವಿದೇಶಿ ನೇರ ಬಂಡವಾಳ ಹೂಡಿಕೆ, ಅಸೆಟ್ ಮೊನಟೈಸೇಷನ್ ಮತ್ತು ಬಂಡವಾಳ ಹಿಂತೆಗೆದುಕೊಳ್ಳುವಿಕೆಯಂತಹ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಕಡೆಗೆ ಸರಕಾರ ಗಮನ ಹರಿಸುವುದರಿಂದ ಮುಂದಿನ ಬಜೆಟ್ ವರ್ಷದ ವಿತ್ತೀಯ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು. ದೇಶದ ಜನರಿಗೆ ಉದ್ಯೋಗ ಒದಗಿಸುವುದು ಸರಕಾರದ ಮೊದಲ ಆದ್ಯತೆ ಆಗಬೇಕಿದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಹೆಚ್ಚು ಉದ್ಯೋಗ ಒದಗಿಸುತ್ತಿರುವ ವ್ಯವಸ್ಥೆಗಳಲ್ಲಿ ಪ್ರಮುಖವಾಗಿದ್ದು ಇವುಗಳು ಸರಕಾರದ ಆದ್ಯತೆಯಲ್ಲಿ ಮೊದಲಿರಬೇಕು. ಉದ್ಯಮಗಳು ಬಯಸುತ್ತಿರುವ ಕೆಲವೊಂದು ವಿನಾಯತಿಗಳನ್ನು ಸರಕಾರ ಕೊಡುವುದರಿಂದ ದೇಶದಲ್ಲಿ ಹೆಚ್ಚು ಉದ್ಯೊಗಗಳು ಸೃಷ್ಟಿಯಾಗುತ್ತವೆ.
ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹ:
ಭಾರತದಲ್ಲಿ ಕೃಷಿ ಕ್ಷೇತ್ರವನ್ನು ಕಡೆಗಣಿಸಿ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ರೈತರ ಆದಾಯ ದ್ವಿಗುಣ ಮಾಡುವತ್ತ ಗಮನ ಹರಿಸಿರುವ ಕೇಂದ್ರ ಸರಕಾರ ಈ ವಲಯದಲ್ಲಿನ ಉತ್ಪಾದನೆ ಮತ್ತು ಪೂರೈಕೆಯ ಸರಪಳಿಯನ್ನು ಸರಳವಾಗಿಸಲು ಮತ್ತು ಕೃಷಿಯಲ್ಲಿ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಲು ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕೃಷಿ ಯಂತ್ರೋಪಕರಣಗಳ ಸಬ್ಸಿಡಿಯಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕಿದೆ. ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗುವಂತೆ ಮಾಡಿ 'ಸಬ್ಸಿಡಿ' ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ಇದರ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಯಂತ್ರೋಪಕರಣಗಳು, ನೀರಾವರಿ ಮತ್ತು ಇನ್ನಿತರ ವ್ಯವಸ್ಥೆಗಳು ದೊರಕುವಂತೆ ಮಾಡಬೇಕು. ಬೆಳೆ ವಿಮೆಯ ವ್ಯಾಪ್ತಿಗಳನ್ನು ಹೆಚ್ಚಿಸುವ ಕಡೆ ಸರಕಾರ ಗಮನ ಹರಿಸಬೇಕು. ಬೆಳೆ ವಿಮೆ ರೈತನಿಗೊಂದು ಭರವಸೆಯನ್ನು ನೀಡುವುದರ ಜೊತೆಗೆ ಆತನ ಕಷ್ಟ ಕಾಲಕ್ಕೆ ಜೊತೆಯಾಗುವ ಯೋಜನೆಯಾಗಿದೆ. ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಗೆ ರೈತನ ಜೊತೆ ಸರಕಾರ ನಿಲ್ಲಬೇಕಿದೆ ಇದಕ್ಕೆ ಬೇಕಾದಷ್ಟು ಹಾದಿಗಳಿದ್ದು ಸರಕಾರ ಈ ಕಡೆ ಗಮನ ಹರಿಸಬೇಕಿದೆ. ಬೆಳೆದ ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳುವುದು ರೈತನಿಗಿರುವ ದೊಡ್ಡ ಸಮಸ್ಯೆ ಅಂದರೆ ಸರಕಾರ ರೈತ ಉತ್ಪಾದಕ ಸಂಸ್ಥೆಗಳು ಮತ್ತು ಕೆಲವು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಉಗ್ರಾಣ ಮತ್ತು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಿಸಿ, ರೈತರ ಗುಂಪುಗಳೇ ಅದನ್ನು ನಿರ್ವಹಿಸುವ ವ್ಯವಸ್ಥೆಗಳನ್ನು ನಿರ್ಮಿಸಲು ಪ್ರಯತ್ನ ಪಡಬೇಕಿದೆ. ಕೃಷಿ ಕ್ಷೇತ್ರದ ಮತ್ತು ರೈತರ ಬೆಳವಣಿಗೆಯಲ್ಲಿ ರೈತೋತ್ಪಾದಕ ಕಂಪನಿಗಳು ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದು ಇವುಗಳ ರಚನೆ ಮತ್ತು ಕಾರ್ಯಗಳ ಬಗ್ಗೆ ರೈತರಿಗೆ ಮಾಹಿತಿಗಳನ್ನು ನೀಡಿ ಹೆಚ್ಚು ಹೆಚ್ಚು ರೈತೋತ್ಪಾದಕ ಕಂಪನಿಗಳ ರಚನೆಯಾಗಬೇಕಿದೆ. ರೈತೋತ್ಪಾದಕ ಕಂಪನಿಗಳು ಭಾರತದ ಭವಿಷ್ಯವಾಗಿದ್ದು ಇವುಗಳ ಯಶಸ್ಸಡಗಿರುವುದು ರೈತನಲ್ಲಿ ಹುಟ್ಟುವ ಭರವಸೆಯಿಂದ ಮಾತ್ರ.
ಕೃಷಿ ಕಾನೂನುಗಳನ್ನು ವಾಪಸ್ ಪಡೆದಿರುವ ಸರಕಾರ ಆ ಕಾನೂನಿನಲ್ಲಿದ್ದ ಉತ್ತಮ ಅಂಶಗಳನ್ನು ಜಾರಿಗೆ ತರಲು ಪ್ರಯತ್ನಿಸಬೇಕು ಅದರಲ್ಲೂ ಬಹುಮುಖ್ಯವಾಗಿ ರೈತರ ಬೆಳೆಗಳ ಮಾರಾಟ ಮತ್ತು ಮಾರ್ಕೆಟಿಂಗ್ ವಿಚಾರದಲ್ಲಿ ಬದಲಾವಣೆ ತುಂಬ ಅವಶ್ಯವಾಗಿದ್ದು, ರೈತರನ್ನು ಅದೇ ಹಳೆಯ 'ದಲ್ಲಾಳಿ'ಗಳ ಅಡಿಯಾಳುಗಳನ್ನಾಗಿಸಬಾರದು. ಕೋವಿಡ್ ನಂತರ ಸಾವಯವ ಕೃಷಿ ಮುನ್ನೆಲೆಗೆ ಬಂದಿದ್ದು ಇದರ ಅಳವಡಿಕೆಯ ಬಗ್ಗೆ ಸರಕಾರ ಶೀಘ್ರವಾಗಿ ತಲೆಕೆಡಿಸಿಕೊಳ್ಳಬೇಕಿದೆ. ರೈತರಿಗೆ ಕಡಿಮೆ ಬೆಲೆಯಲ್ಲಿ ಯೂರಿಯ ಸಿಗುತ್ತಿದ್ದು ಇವು ರೈತನ ಜಮೀನಿನ ಮಣ್ಣಿನ ಮೆಲೆ ಬೀರುತ್ತಿರುವ ಪರಿಣಾಮದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಯಬೇಕಿದೆ. ಕೋವಿಡ್ ಕಾಲದಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡ ಯಾವುದಾದರೂ ಕ್ಷೇತ್ರವಿದ್ದರೆ ಅದು ಕೃಷಿ ಕ್ಷೇತ್ರ ಮಾತ್ರ. ಶೇ ೩.೪% ಪ್ರಗತಿ ಸಾಧಿಸಿರುವ ಕೃಷಿ ಕ್ಷೇತ್ರ ಜಿಡಿಪಿಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೃಷಿ ಕಾನೂನನ್ನು ಹಿಂಪಡೆದಿರುವ ಸರಕಾರ ಪರ್ಯಾಯ ಏನು ಎಂಬುದರ ಬಗ್ಗೆ ಗಟ್ಟಿ ನಿಲುವು ಪ್ರಕಟಿಸುವ ಅವಶ್ಯಕತೆ ಈಗಿದೆ.
ತೆರಿಗೆ ವಿನಾಯಿತಿಯತ್ತ ಚಿತ್ತ:
ದೇಶದ ಎಲ್ಲ ಉದ್ಯಮಗಳು ಈ ಬಜೆಟ್‌ನಲ್ಲಿ ನಿರೀಕ್ಷಿಸುತ್ತಿರುವ ಪ್ರಮುಖ ವಿಷಯವೆಂದರೆ ಅದು ತೆರಿಗೆ ವಿನಾಯಿತಿ. ಆದರೆ ಇದನ್ನು ಸರಕಾರ ಎಷ್ಟರ ಮಟ್ಟಿಗೆ ಈಡೇರಿಸುತ್ತದೆ ಎಂಬುದು ಈಗ ದೊಡ್ಡ ಪ್ರಶ್ನೆ. ಸ್ಲ್ಯಾಬ್ ರೇಟ್ ಅನ್ನು ಹೆಚ್ಚಿಸಲು ಸರ್ಕಾರ ತಯಾರಿಲ್ಲವೆಂದರೆ ಕನಿಷ್ಟ ಪಕ್ಷ ತೆರಿಗೆ ವಿನಾಯಿತಿಯಲ್ಲಿನ ಮೊತ್ತವನ್ನು ಹೆಚ್ಚಿಸುವ ಕಡೆಯಾದರೂ ಗಮನ ಹರಿಸಬೇಕಿದೆ. ನಮ್ಮ ದೇಶದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವ ಯಾವುದಾದರೂ ವರ್ಗವಿದ್ದರೆ ಅದು ನಮ್ಮ ದೇಶದ ಉದ್ಯೋಗಿಗಳ ಸಮುದಾಯ. ಈ ಬಾರಿಯಾದರೂ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ತೆರಿಗೆಯಲ್ಲಿ ಒಂದಿಷ್ಟು ವಿನಾಯತಿಯನ್ನು ನೀಡುತ್ತದೆಯೇ? ಕಾಡು ನೋಡಬೇಕಿದೆ. ಹೋಟೆಲ್, ವಿಮಾನಯಾನ, ರಿಯಲ್ ಎಸ್ಟೇಟ್ ಮತ್ತು ಔಷಧ ಕ್ಷೇತ್ರಗಳು ಜಿಎಸ್‌ಟಿ ವಿನಾಯಿತಿಯನ್ನು ನಿರೀಕ್ಷಿಸುತ್ತಿವೆ.
ಆರೊಗ್ಯ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಸರಕಾರ ಹೆಚ್ಚು ಹಣವನ್ನು ತೊಡಗಿಸುವ ನಿರೀಕ್ಷೆಯನ್ನು ಮಾಡಲಾಗುತ್ತಿದೆ. ಆರೊಗ್ಯ ವಿಮೆಯನ್ನು 5% ಜಿಎಸ್‌ಟಿ ಸ್ಲಾಬ್ ಅಡಿಯಲ್ಲಿ ತರಬೇಕೆಂದು ಕೂಡ ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಜಿಎಸ್‌ಟಿಯನ್ನು ಇಳಿಸುವ ಸಂಭವ ತೀರ ಕಡಿಮೆಯಾಗಿದ್ದು, ಸರಕಾರದ ನಿರ್ಧಾರಕ್ಕೆ ಕಾದು ನೋಡಬೇಕಿದೆ. ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು ಮತ್ತು ವಾಹನಗಳ ಬಿಡಿಭಾಗಗಳ ಮೇಲಿನ ಜಿಎಸ್‌ಟಿ ದರ ಕಡಿಮೆ ಮಾಡುವ ನಿರೀಕ್ಷೆಯಿದೆ. ಖಾಸಗಿ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಈ ಬಜೆಟ್‌ನಲ್ಲಿ ನಿರೀಕ್ಷಿಸುತ್ತಿರುವುದು 'ಸ್ಲಾಬ್ ರೇಟ್' ನಲ್ಲಿನ ಮಹತ್ವದ ಬದಲಾವಣೆಯನ್ನು ಮತ್ತು ಸೆಕ್ಶನ್ 80ಸಿ ಯಲ್ಲಿನ ಡಿಡಕ್ಷನ್ ಮೊತ್ತದ ಏರಿಕೆಯನ್ನು. ಬೇಸಿಕ್ ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್ ಅನ್ನು ಸರಕಾರ ಹೆಚ್ಚಿಸುತ್ತದೆಯೇ? ಕಾದು ನೋಡಬೇಕಿದೆ. ಸೆಕ್ಷನ್ 80ಸಿಯಲ್ಲಿ ತೆರಿಗೆದಾರ ಈಗ ಅತಿ ಹೆಚ್ಚೆಂದರೆ ಒಂದೂವರೆ ಲಕ್ಷ ಹಣವನ್ನು ಡಿಡಕ್ಷನ್ ಅಥವಾ ಹೂಡಿಕೆ ಎಂದು ತೋರಿಸಬಹುದಿತ್ತು.
ಈ ಮೊತ್ತದಲ್ಲಿ ಹೆಚ್ಚಳವನ್ನು ಉದ್ಯೋಗಿಗಳು ನಿರೀಕ್ಷಿಸುತ್ತಿದ್ದಾರೆ ಮತ್ತು ಕೋವಿಡ್ ಕಾಲದಲ್ಲಿ ತಮ್ಮ ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹಣ ಪಾವತಿಸಿದವರ ಸಂಖ್ಯೆ ಹೆಚ್ಚಿದ್ದು ಈ ಹಣವನ್ನು ಆದಾಯ ತೆರಿಗೆಯಡಿಯಲ್ಲಿ 'ಕ್ಲೇಮ್' ಮಾಡಲು ಅವಕಾಶ ಮಾಡಿಕೊಡುವ ನಿರ್ಧಾರವನ್ನು ಸರಕಾರದಿಂದ ನಿರೀಕ್ಷಿಸಲಾಗುತ್ತಿದೆ. ಗೃಹ ಸಾಲದ ಮೆಲಿನ ಬಡ್ಡಿ ಮತ್ತು ಮೂಲ ಹಣದ ಮರುಪಾವತಿಯನ್ನು ಆದಾಯ ತೆರಿಗೆಯಲ್ಲಿ ಎರಡು ಲಕ್ಷದಷ್ಟು ತೊರಿಸಿ ಕ್ಲೆಮ್ ಮಾಡಬಹುದಿತ್ತು ಇದನ್ನು ಹೆಚ್ಚು ಮಾಡಬೇಕೆಂಬ ಕೂಗು ಈಗ ಹೆಚ್ಚಿದೆ ಆದರೆ ಸರಕಾರ ಆದಾಯ ತೆರಿಗೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಪ್ರಯತ್ನಿಸುತ್ತದೆಯೇ ಎಂಬುದೇ ಈಗ ದೊಡ್ಡ ಪ್ರಶ್ನೆ. ಸ್ಟಾಕ್ ಮಾರ್ಕೇಟ್ ನ ಜನ 'ಸೆಕ್ಯುರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್' ಕಡಿಮೆ ಮಾಡಲು ಅಥವಾ ರದ್ದು ಮಾಡಲು ಕೇಳಿಕೊಂಡಿದ್ದಾರೆ. ಷೇರು ಮಾರುಕಟ್ಟೆಯ ಮೇಲೆ ಸರಕಾರ ಕರುಣೆ ತೋರುತ್ತದೆಯೇ? ಕಾದು ನೋಡಬೇಕಷ್ಟೆ.
ಕ್ಯಾಪಿಟಲ್ ಎಕ್ಸ್‌ಪೆಂಡೀಚರ್ ಹೆಚ್ಚಳಕ್ಕೆ ಒತ್ತು:
ಸರಕಾರ ಜನರ ನಡುವೆ ಹಣ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಗೊಲ್ದ್ ಬಾಂಡ್‌ಗಳ ಲಾಕ್-ಇನ್ ಸಮಯವನ್ನು ಕಡಿಮೆಗೊಳಿಸಿ ಜನರ ಕೈಯಲ್ಲಿ ಹಣ ಒಡಾಡುವಂತೆ ಮಾಡಬಹುದು. ಹಣ ಚಲಾವಣೆಯಲ್ಲಿರುವಂತೆ ಮಾಡುವ ಯೊಜನೆಗಳಿಗೆ ಸರಕಾರ ಒತ್ತು ಕೊಡಬೇಕಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು (ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ) ಶೇ 35.4ರಷ್ಟು ಹೆಚ್ಚಿಸಲಾಗಿತ್ತು. ದೇಶದ ರಾಷ್ಟ್ರೀಯ ಆಸ್ತಿ ಹೆಚ್ಚಿಸುವ ಉದ್ದೇಶಕ್ಕೆ ಈ ನಿಧಿ ಬಳಕೆಯಾಗಲಿದೆ. ಒಟ್ಟು ಜಿಡಿಪಿಯ ಶೇ 2.9ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿತ್ತು. 2022-2023ರ ಆರ್ಥಿಕ ವರ್ಷದಲ್ಲಿ ಭಾರತ ಸರ್ಕಾರವು ₹ 10.9 ಲಕ್ಷ ಕೋಟಿ ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಬಳಸಲು ನಿರ್ಧರಿಸಲಾಗಿತ್ತು. ಇದು 2022-23 ರ ಒಟ್ಟೂ ಜಿಡಿಪಿಯ ಶೇ.4.1 ರಷ್ಟು ಮೊತ್ತವಾಗಿತ್ತು. ಈ ಬಾರಿ ಕೂಡ ಸರ್ಕಾರ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಹೆಚ್ಚಳದ ಕಡೆಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಡೆಗೆ ಹೆಚ್ಚಿನ ಹಣವನ್ನು ಮೀಸಲಿಡಲಿದ್ದು ಇದು ದೊಡ್ಡ ಪ್ರಮಾಣದ ಉದ್ಯೋಗಾವಕಾಶವನ್ನು ನೀಡಬಹುದಾಗಿದೆ.
ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡಾ 17ರಷ್ಟು ಜನ ಭಾರತದಲ್ಲಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ 65 ಶೇಕಡಾ ಜನರ ವಯಸ್ಸು 35 ವರ್ಷಕ್ಕಿಂತ ಕಮ್ಮಿ ಇದ್ದು ಭಾರತದ ಆರ್ಥಿಕ ಸಾಕ್ಷರತೆ ಪ್ರಮಾಣ ಕೇವಲ 24 ಶೇಕಡಾ. ಅಂದರೆ ನಮ್ಮ ಯುವಕರಿಗೆ ಹಣಕಾಸು ಜ್ಞಾನ ನೀಡುವ ಕೆಲಸ ಮೊದಲು ಆಗಬೇಕಿದೆ. 'ಪರ್ಸನಲ್ ಪೈನಾನ್ಸ್' ಅನ್ನು ಒಂದು ಪ್ರಮುಖ ವಿಷಯವಾಗಿ ನಮ್ಮ ಶಾಲೆ ಕಾಲೆಜುಗಳಲ್ಲಿ ಅಳವಡಿಸಿಕೊಳ್ಳಬೇಕಿದೆ. ಹಣಕಾಸಿನ ಬಗ್ಗೆ ಚಿಕ್ಕಂದಿನಿಂದಲೇ ಕಲಿಯುವುದು ಈಗ ತುಂಬ ಅವಶ್ಯಕವಾಗಿದೆ. ಭಾರತದಲ್ಲಿ ಎಲ್ಲರಿಗೂ ಒಪ್ಪುವ ಬಜೆಟ್ ಕೊಡುವುದು ಸುಲಭವಂತೂ ಅಲ್ಲ ಆದರೆ ಇದು ಅಸಾಧ್ಯವೂ ಅಲ್ಲ; ಸರಕಾರ ಧಿಟ್ಟ ನಿರ್ಧಾರ ತೆಗೆದುಕೊಳ್ಳಲು ಭಯಪಡಬಾರದು.
ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಜನರು ಕಳೆದ ಬಜೆಟ್‌ನಿಂದ ಸಂತುಷ್ಟರಂತೂ ಆಗಿರಲಿಲ್ಲ. ಹಾಗಾಗಿ ಈ ಬಾರಿಯ ಬಜೆಟ್ ಅನ್ನು ಕೂಡ ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಕಾಯುತ್ತಿರುವವರ ನಿರೀಕ್ಷೆ ಈಡೇರುತ್ತದೆಯೇ? ನೋಡೋಣ. ಉಚಿತವಾಗಿ ಸವಲತ್ತುಗಳನ್ನು ನೀಡುವ ಆಸೆಯನ್ನು ಜನರಲ್ಲಿ ಬಿತ್ತಿ ಅಧಿಕಾರ ಹಿಡಿಯಲು ಕನಸು ಕಾಣುತ್ತಿರುವ ರಾಜಕೀಯ ಪಕ್ಷಗಳು ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತ ಹೆಜ್ಜೆಯನ್ನಿಡಬೇಕಿದೆ. ಜನ ಸಾಮಾನ್ಯರು ಕೂಡ ನಿರೀಕ್ಷೆಗಳನ್ನು ಬಿಟ್ಟಿ ಸವಲತ್ತುಗಳಿಗೆ ಸೀಮಿತಗೊಳಿಸದೇ ಹೊಸ ರೀತಿಯ ಚಿಂತನೆ ನಡೆಸುವ ಸಾಮಾಜಿಕ ಬದ್ಧತೆಯನ್ನೂ ತೋರಿಸಬೇಕಿದೆ.
ಪ್ರಸನ್ನ ಕಂಬದಮನೆ:
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪ್ರಸನ್ನ ಕಂಬದಮನೆ ಉತ್ತರಕನ್ನಡದ ಶಿರಸಿಯವರು. ಆರ್ಥಿಕ, ವಾಣಿಜ್ಯ ಇತ್ಯಾದಿ ವಿಷಯಗಳ ಕುರಿತು ಇವರು ಬರೆದ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
ಉತ್ತಮವಾದ ವಿಶ್ಲೇಷಣೆ. ಆರಾಯ ತೆರಿಗೆ ಪರಿಷ್ಕರಣೆ ಅಥವಾ ರಿಲೀಫ್ ಕೊಡುವುದು ಅನುಮಾನ. ಈಗಾಗಲೇ ಹೊಸ ತೆರಿಗೆ ಪದ್ದತಿಯನ್ನು ಜಾರಿಗೆ ತಂದಿರುವುದರಿಂದ, ಹೆಚ್ಚಿನ ಜನರು ಆ ಪದ್ದತಿಯನ್ನೇ ಆಯ್ದುಕೊಳ್ಳಲಿ ಎಂಬುದು ಸರ್ಕಾರದ ಆಶಯವಿರಬಹುದು. ಇನ್ನು ಮುಂದೆ ನಿಧಾನವಾಗಿ ಹಳೆಯ ತೆರಿಗೆ ಪದ್ದತಿ ಮರೆಯಾಗಬಹುದು. ಆದ್ದರಿಂದ 80C ಇತ್ಯಾದಿಗಳಲ್ಲಿನ ಡಿಡಕ್ಷನ್ ಹೆಚ್ಚು ಮಾಡುವುದು ಅನುಮಾನ.
ಪ್ರತ್ಯುತ್ತರಅಳಿಸಿಈ ಸರ್ಕಾರ ಮುಂದಾಲೋಚನೆಯುಳ್ಳ ಬಜೆಟ್ ಮಂಡನೆ ಮಾಡಿದರೂ, ಸಂಬಳದಲ್ಲಿ ಜೀವನ ಸಾಗಿಸುವ ಉದ್ಯೋಗಿಗಳ ವರ್ಗಕ್ಕೆ ನೇರವಾದ ಅನುಕೂಲ ಮಾಡಿಕೊಡುವ ಬಗ್ಗೆ ಮತ್ತು ತೆರಿಗೆ ವಿನಾಯತಿಯ ವಿಷಯದಲ್ಲಿ ಮಾತ್ರ ಯಾವತ್ತೂ ಕಠಿಣವಾಗಿದೆ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಏನಾದರೂ ಸಣ್ಣಪುಟ್ಟ ತಿದ್ದುಪಡಿಗಳನ್ನಾದರೂ ಮಾಡಬಹುದಾ ಎಂಬ ದೂರದ ನಿರೀಕ್ಷೆಯಿದೆ.