ಬಹುತೇಕ ಜಗಳಗಳಿಗೆ ಮೂಲ ಕಾರಣ ಮಾತು. ತಾಳ್ಮೆಯಿಂದಿರಬೇಕಾದ ಸಂದರ್ಭದಲ್ಲಿ ಓವರ್ ರಿಯಾಕ್ಟ್ ಮಾಡುವುದರಿಂದ, ಬಾಯಿಗೆ ಬಂದಹಾಗೆ ಮಾತನಾಡುವುದರಿಂದಲೇ ಸಮಸ್ಯೆಗಳು ಉದ್ಭವಿಸುತ್ತವೆ.‌

ನಾಗರಿಕ ಸಮಾಜದಲ್ಲಿ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು (ಕೆಲವರಿಗೆ) ಕೆಲವೊಮ್ಮೆ ಅನ್ನಿಸಿಬಿಡುವುದುಂಟು. ಇಂಥ ಬೇಸರಕ್ಕೆಲ್ಲ ಕಾರಣಗಳು: ಒಂದಷ್ಟು ಒಳಜಗಳ ಮತ್ತು ಹೊಟ್ಟೆಕಿಚ್ಚುಗಳು. ಸದ್ಯ ಇದು ಎಲ್ಲಾಕಡೆಗೂ ಕಾಮನ್ನು. (ನಗರದಲ್ಲಿ ಮಾತ್ರ ಮಾನವಸಂಬಂಧಗಳು ಶಿಥಿಲವಾಗಿದೆ, ತಂತ್ರಜ್ಞಾನವೇ ಮಾನವ ಸಂಬಂಧಗಳು ಕ್ಷೀಣಿಸಲು ಕಾರಣ ಎಂಬಿತ್ಯಾದಿ ವಾದಗಳೆಲ್ಲ ಬೋಗಸ್ ಎಂಬುದು ಬಹುತೇಕ ಜನರಿಗೆ ಈಗಾಗಲೇ ಮನವರಿಕೆಯಾಗಿದೆ.) ಜಗಳಕ್ಕೆ, ಮನಸ್ತಾಪಕ್ಕೆ ಕಾರಣಗಳೇನೂ ಕಡಿಮೆ ಇರುವುದಿಲ್ಲ. "ಅಂವ ನಂಗೆ ಹಾಗೆ ಹೇಳಿದ ಮಾರಾಯ" ಎಂಬಲ್ಲಿಂದ "ಓರೆಕೋರೆಯಾಗಿರುವ ಜಮೀನನಿನ ಹಿಸೆಯಲ್ಲಿ ಅವನಿಗೇ ಎರಡು ಮೆಟ್ಟು ಜಾಸ್ತಿ ಸಿಕ್ಕಿಹೋಯಿತು"  ಎಂಬಲ್ಲಿಯವರೆಗೂ ಕಾರಣಗಳ ಸರಮಾಲೆ  ಧಾರಾಳವಾಗಿ ದೊರೆಯುತ್ತವೆ. ತಾಳ್ಮೆಯಿಂದ ಆಲೋಚನೆ ಮಾಡಿದರೆ ಕಾರಣವೇ ಅಲ್ಲ ಎನ್ನಿಸಿಬಿಡುವ ಕ್ಷುಲ್ಲಕ ವಿಷಯಗಳಿಗೂ ಭಯಂಕರ ಯುದ್ಧಗಳೇ ನಡೆದಿವೆ, ನಡೆಯುತ್ತಿವೆ.

ನಮ್ಮೂರಲ್ಲೊಂದು ಮನೆಯುಂಟು. ಆದರೆ ಮನೆಯೊಂದು, ಮೂರುಬಾಗಿಲು. ಅಸಲಿಗೆ ಅಲ್ಲಿ ನಾಲ್ಕು ಮನೆಯಿರಬೇಕಿತ್ತು. ಆದರೆ ತನ್ನದೇ ಮನೆಯವರ ಕುತಂತ್ರದಿಂದ ಜಮೀನಿನಲ್ಲಿ ಪಾಲು ಸಿಗದೇ ಎರಡನೆಯ ಮಗ ಕೋರ್ಟಿನ ಮೆಟ್ಟಿಲೇರಿ, ಹತ್ತು ವರ್ಷಗಳಾದರೂ ಪ್ರಕರಣ ಇತ್ಯರ್ಥವಾಗದೇ ಊರು ಬಿಟ್ಟು ಇನ್ನೆಲ್ಲೋ ದೇವಸ್ಥಾನ ಮಾಡಿಕೊಂಡಿದ್ದ. ಊರು ಬಿಡುವಾಗ ಅವನಿಗೆ ಸುಮಾರು ನಲವತ್ತೈದು ವರ್ಷ ವಯಸ್ಸು. ಪ್ರಾಯಕ್ಕೆ ಬಂದ ಒಬ್ಬನೇ ಮಗ. ಸಾಗರದ ಹತ್ತಿರ ಎಲ್ಲೋ ಒಂದು ದೇವಸ್ಥಾನದಲ್ಲಿ ಅರ್ಚಕನಾಗಿ ಉಳಿದುಕೊಂಡ. ಹವ್ಯಕ ಕೂಸುಗಳ ಕ್ಷಾಮ ಆ ಸಮಯದಲ್ಲಿ ತುಸು ಹೆಚ್ಚೇ ಇದ್ದದ್ದರಿಂದ, ಜಮೀನಿಲ್ಲದ ಮಗನಿಗೆ ಮದುವೆಯಾಗಲಿಲ್ಲ. ಕೊನೆಗೆ ಆತನಿಗೆ ಹುಚ್ಚುಹಿಡಿದಿದೆಯೆಂದು ಕೇಳಲ್ಪಟ್ಟೆ. ನಾಲ್ಕೈದು ವರ್ಷಗಳ ಹಿಂದೊಮ್ಮೆ ಆತ ನಮ್ಮ ಮನೆಗೆ ಬಂದಿದ್ದನಂತೆ (ಆಗ ನಾನು ಮನೆಯಲ್ಲಿರಲಿಲ್ಲ). ಈಗ ಆತನ ಹುಚ್ಚು ಹದ ತಪ್ಪಿದೆಯೆಂದು ಊರವರೆಲ್ಲ ತಮ್ಮತಮ್ಮಲ್ಲೇ ಮಾತಾಡಿಕೊಂಡು ಸಂತಾಪ ವ್ಯಕ್ತಪಡಿಸಿದರು. ಆದರೆ, ಒಂದು ಕುಟುಂಬವನ್ನೇ ಹಾಳುಮಾಡಿದ ಮಹಾತ್ಮ ಈಗ ದೊಡ್ಡ ಮನುಷ್ಯರಂತೆ ಪೋಸು ಕೊಡುತ್ತ ಊರೆಲ್ಲ ತಿರುಗಾಡಿಕೊಂಡು ಹಾಯಾಗಿದ್ದಾನೆ. ಆದರೆ ಅವನ ಮನಸ್ಸಿನಲ್ಲಿ ತನ್ನ ಕೃತ್ಯದ ಬಗ್ಗೆ ಒಂಚೂರು ಪಾಪಪ್ರಜ್ಞೆಯಾದರೂ ಇದೆಯೋ ಇಲ್ಲವೋ ಎಂಬುದನ್ನು ಪತ್ತೆಮಾಡಲು ನನಗೆ ಇಂದಿಗೂ ಸಾಧ್ಯವಾಗಿಲ್ಲ.

ಈಗ ಒಂದು ಮನೆಯಲ್ಲಿ ಮೂರೇ ಮನೆ ಇದ್ದರೂ ನಾವು ಒಬ್ಬರ ಮನೆಗೆ ಮಾತ್ರ ಹೋಗಿ ಚಾ ಕುಡಿದು ಬರುವಂತಿಲ್ಲ. ಇವರ ಮನೆಗೊಂದೇ ಹೋಗಿ ಬಂದರೆ ಪಕ್ಕದ ಮನೆಯವನಿಗೆ ಬೇಸರ! ನಾಳೆ ಅವ ಊರೆಲ್ಲಾ ಇದೇ ವಿಷಯವನ್ನು ದೊಡ್ಡದಾಗಿ ಹೇಳಿಕೊಂಡು ತಿರುಗಾಡುತ್ತಾನೆ. ಯಾವುದೋ ಕೆಲಸದ ನಿಮಿತ್ತ ನೀವು ಒಬ್ಬನ ಮನೆಗೆ ಹೋಗಬೇಕಾಗಿದ್ದರೂ, ಮೂರೂ ಮನೆಗೆ ಹೋಗಿ ಬರಬೇಕು!

ಸಣ್ಣ ಪ್ರಾಯದಲ್ಲೇ ತನ್ನ ಊರು ಬಿಟ್ಟು ಬೆಂಗಳೂರು ಸೇರಿದ ಮಹಾನುಭಾವನೊಬ್ಬ ತನ್ನ ಅಪ್ಪ ಸತ್ತಮೇಲೆ, ಇರುವ ಎರಡೇ ಎಕರೆ ಜಮೀನಿನಲ್ಲಿ ತನಗೂ ಒಂದು ಪಾಲು ಬೇಕೆಂದು ಕೇಳಿದ್ದ. ಸರಿಯಾಗಿ ಪಾಲು ಮಾಡಿದರೆ ಅರ್ಧರ್ಧ ಎಕರೆ ಬರುತ್ತದೆ, ಒಂದು ಕುಟುಂಬ ಬದುಕಲು ಇಷ್ಟು ಜಮೀನು ಏತಕ್ಕೂ ಸಾಲುವುದಿಲ್ಲ. ನಿನಗಂತೂ ಬೆಂಗಳೂರಲ್ಲಿ ಒಳ್ಳೇ ನೌಕರಿ ಉಂಟು. ವರ್ಷಕ್ಕಿಂತಿಷ್ಟು ಅಂತ ಬೇಕಾದರೂ ಕೊಡುತ್ತೇವೆ, ಜಮೀನಿನಲ್ಲಿ ಪಾಲು ಕೇಳಬೇಡ ಎಂದು ಅಣ್ಣತಮ್ಮಂದಿರೆಲ್ಲ ಪರಿಪರಿಯಾಗಿ ಬೇಡಿಕೊಂಡರೂ ಆತ ಒಪ್ಪಲಿಲ್ಲ. 'ಅಪ್ಪನ ಪ್ರಸಾದ' ಅಂತಾದರೂ ತನಗೊಂದು ಪಾಲು ಬೇಕೇಬೇಕು, ಅದು ತನ್ನ ಹಕ್ಕು ಎಂದು ಹಠ ಹಿಡಿದು ಅರ್ಧ ಎಕರೆ ಜಮೀನು ಪಡೆದಿದ್ದ ಆತ. ಈಗ ಆ ಜಮೀನು ಸಂಪೂರ್ಣ ಹಾಳುಬಿದ್ದಿದೆ. ವರ್ಷಕ್ಕೊಮ್ಮೆಯೂ ಆತ ತನ್ನ ಜಮೀನಿಗೆ ಕಾಲು ಹಾಕುವುದಿಲ್ಲ! ಆತ ತನ್ನ ಜಮೀನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯಾವುದಾದರೂ ಒಬ್ಬ ಸಹೋದರನಿಗೆ ವಹಿಸಬಹುದಿತ್ತು. ಆದರೆ ಅವನಿಗೆ ಯಾರಮೇಲೂ ವಿಶ್ವಾಸವಿಲ್ಲ!

ಕಳೆದ ವರ್ಷವಷ್ಟೇ ನಡೆದ ಒಂದು ಘಟನೆ. ಹತ್ತಿಪ್ಪತ್ತು ವರ್ಷದ ಹಿಂದೆ, ಹಿಸೆಯಾಗುವಾಗ ಅಣ್ಣ-ತಮ್ಮ ಜಗಳವಾಡಿಕೊಂಡು ಮಾತು ಬಿಟ್ಟಿದ್ದರು. ಆದರೆ ಈಗ, ತನ್ನ ಒಬ್ಬನೇ ಮಗನ ಮದುವೆಗೆ ಮುದ್ದಾಂ ಬರಬೇಕೆಂದು ಅಣ್ಣನೇ ಸ್ವತಃ ತನ್ನ ತಮ್ಮನ ಮನೆಗೆ ಹೋಗಿ ಕರೆದು ಬಂದಿದ್ದ. ಅಣ್ಣನೇ ತನ್ನ ಮನೆಗೆ ಬಂದು ಕರೆದದ್ದಕ್ಕೆ ತಮ್ಮನೂ ಆ ಮದುವೆಗೆ ಬಂದಿದ್ದೇನೋ ಖರೆ. ಆದರೆ ಮದುವೆ ಮುಗಿದ ಬಳಿಕ, ತಾನು ಬಂದಿದ್ದನ್ನು ನೋಡಿಯೂ ಮದುವೆಮನೆಯಲ್ಲಿ ಅಣ್ಣ ತನ್ನನ್ನು ಮಾತನಾಡಿಸಲಿಲ್ಲ, ತನ್ನನ್ನು ಅವಮಾನಿಸಲೆಂದೇ ಮದುವೆಗೆ ಕರೆದಿದ್ದ ಎಂದೆಲ್ಲ ಊರತುಂಬಾ ಹೇಳಿಕೊಂಡು ಈ ತಮ್ಮ ತಿರುಗಾಡತೊಡಗಿದ್ದ. ಇದೇ ಪ್ರಕರಣ ಮತ್ತೊಂದು ವಾಗ್ಯುದ್ಧಕ್ಕೆ ಕಾರಣವಾಗಿ ಮತ್ತೆ ಮಾತುಕತೆ ಮುರಿದುಕೊಳ್ಳುವ ಮೂಲಕ ಪರಿಸಮಾಪ್ತವಾಯಿತು.

ಜೋರು ಮಳೆಗಾಲದಲ್ಲಿ, ಅವನ ಗದ್ದೆಯಲ್ಲಿ ಹೆಚ್ಚಾದ ನೀರನ್ನು ತನ್ನ ಗದ್ದೆಯಮೇಲೆ ಹರಿಸಿದ ಎಂಬ ಕಾರಣಕ್ಕಾಗಿ ಜಗಳವಾಡಿದವರನ್ನು ನೋಡಿದ್ದೇನೆ. ಇನ್ನೇನು ಮುರಿದುಬೀಳಲಿರುವ ಕೊಟ್ಟಿಗೆಯನ್ನು ರಿಪೇರಿ ಮಾಡಲು ಕಟ್ಟಿಗೆ ಮಾಡುತ್ತಿದ್ದವನ ವಿರುದ್ಧ ಪಿತೂರಿ ನಡೆಸಿ ಅರಣ್ಯ ಇಲಾಖೆಗೆ ಫೋನ್ ಮಾಡಿ ಹಿಡಿಸಿದ ನೆರೆಹೊರೆಯವರನ್ನು ನೋಡಿದ್ದೇನೆ. ನಿನ್ನೆ ತನ್ನ ತೋಟದಿಂದ ಅಂವ ನಾಲ್ಕು ಅಡಿಕೆ ಹೆಕ್ಕಿದ್ದ ಎಂಬ ಕಾರಣಕ್ಕಾಗಿ ಜಗಳವಾಡಿ ಮಾತುಕತೆ ಬಿಟ್ಟುಕೊಂಡ ಸಹೋದರರನ್ನು ನೋಡಿದ್ದೇನೆ. ಆದರೆ ಇವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಮಾತ್ರ ನಾನು ಸೋತದ್ದು ಹೌದು.

ಇನ್ನು ಜಾಲತಾಣಗಳ ಬಗ್ಗೆ ಹೊಸತಾಗಿ ಹೇಳಬೇಕಾದ್ದೇನಿಲ್ಲ. ಯಾರೋ ಒಬ್ಬ ತನ್ನ ಅಭಿಪ್ರಾಯವನ್ನು ಪೋಸ್ಟ್ ಮಾಡಿದರೆ, ಅದರ ಕೆಳಗೆ, ಕಮೆಂಟ್ ವಿಭಾಗದಲ್ಲಿ ಅವಾಚ್ಯಶಬ್ದಭಂಡಾರವೇ ಸಿಗುತ್ತದೆ! ಯಾವುದಾದರೂ ಪೋಸ್ಟು ತನ್ನ ಇಷ್ಟದ/ಆಸಕ್ತಿಯ ವಿರುದ್ಧವಾಗಿದ್ದರೆ (ಸುಮ್ಮನೆ scroll  ಮಾಡಿಕೊಂಡು ಮುಂದಕ್ಕೆ ಹೋಗಬಹುದಾದರೂ) ತನ್ನ ಕಮೆಂಟಿನಲ್ಲಿ ಅಕ್ಕನನ್ನೋ ಅಮ್ಮನನ್ನೋ ಎಳೆದುತರುವ ಕಮೆಂಟ್ ವೀರರ ಸಂಖ್ಯೆಯನ್ನು ಎಣಿಸಲಸಾಧ್ಯ. (ಇದಕ್ಕೆ ಬಲಪಂಥೀಯರು, ಎಡಪಂಥೀಯರೆಂಬ ಭೇದವಿಲ್ಲ. ಎಲ್ಲ ಪಂಥಗಳಲ್ಲೂ ಇಂಥವರು ಬಹಳಷ್ಟಿರುತ್ತಾರೆ.) In fact, ಇಂತಹ ಕಮೆಂಟ್ ವೀರರು ಇನ್ನೊಂದು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುವ ವಿಕೃತ ಮನಸ್ಥಿತಿಯವರಾಗಿರುತ್ತಾರೆ ಎನ್ನಿಸುತ್ತದೆ. ಇವರನ್ನು ಬದಿಗಿಟ್ಟು, ಸಭ್ಯವಾದ ಕಮೆಂಟುಗಳನ್ನಷ್ಟೇ ಓದಿದರೂ ಕನಿಷ್ಠ ಪಕ್ಷ 'ತಾನು ಏನನ್ನು promote ಮಾಡುತ್ತಿದ್ದೇನೆಂದು' ತನ್ನನ್ನೇ ಪ್ರಶ್ನಿಸಿಕೊಳ್ಳುವ ಸಹೃದಯರು ಕಾಣಸಿಗುವುದು ತುಂಬಾ ಕಷ್ಟ.

"ಜೀವನದಲ್ಲಿ ನಿಮ್ಮ priority ಏನು?" ಎಂದು ನೀವು ಯಾರನ್ನೇ ಪ್ರಶ್ನಿಸಿ ನೋಡಿ. ಬೇರೆಬೇರೆ ರೀತಿಯ, self centric ಉತ್ತರಗಳಿಗೇನೂ ಬರಗಾಲವಿಲ್ಲ. ಆದರೆ ಮಾನವ ಸಂಬಂಧಗಳೇ ತನ್ನ ಪ್ರಥಮ ಆದ್ಯತೆ ಏನ್ನುವಂಥವರು ಸಿಗುವುದು ತೀರಾ ವಿರಳ. ಕೆಲವೊಂದು ಜಗಳಗಳಿಗೆ ಕಾರಣವಿರುತ್ತದೆ. ಆದರೆ ತಪ್ಪು ಮಾಡಿದವ ಕ್ಷಮೆ ಕೇಳಲು ಸಿದ್ಧನಿರುವುದಿಲ್ಲ. ಒಂದು ಬಾರಿ 'sorry' ಎಂದರೆ ಮುಗಿಯಬಹುದಾದ ಪ್ರಕರಣವನ್ನೇ ದೊಡ್ಡದಾಗಿಸಿ ಬಹುಕಾಲದ ಸ್ನೇಹವನ್ನೇ ಬಲಿಕೊಡುತ್ತಾರೆ!

ಇಷ್ಟಕ್ಕೂ ನಮ್ಮ ಸ್ನೇಹಿತರಿಂದ, ನೆಂಟರಿಷ್ಟರಿಂದ ನಮಗೆ ಸಿಗುವುದಾದರೂ ಏನು? ಯಾವುದೋ ನೆಪದಲ್ಲಿ ಭೇಟಿಯಾದಾಗಲೊಮ್ಮೆ ಹಿತವಾದ ಮಾತುಕತೆ. ತನ್ಮೂಲಕ ಒಂದಷ್ಟು ಸಂತೋಷ. ಇಷ್ಟೇ. ಇದಕ್ಕಿಂತ ಹೆಚ್ಚಿಗೆ ಏನನ್ನಾದರೂ ನಿರೀಕ್ಷಿಸಿದರೆ ಅದು ನಮ್ಮದೇ ತಪ್ಪು. ನಮ್ಮವರೊಂದಿಗೇ ಮನಸ್ತಾಪ ಮಾಡಿಕೊಂಡರೆ ಅಚಾನಕ್ಕಾಗಿ ಭೇಟಿಯಾದಾಗಲೂ ಪರಸ್ಪರ ಮುಖ ನೋಡಲು ಮನಸ್ಸಾಗುವುದಿಲ್ಲ. ಮಾತನಾಡಿದರೂ ಫಿಲ್ಟರ್ ಹಾಕಿಕೊಂಡೇ ಮಾತನಾಡಬೇಕು, ಮನಸಾ ಮಾತನಾಡುವಂತಿಲ್ಲ. ಎದುರಿಗಿರುವವನ ಮೇಲೆ ಒಂದು ರೀತಿಯ ಸಂಶಯ, ದ್ವೇಷ, ತಿರಸ್ಕಾರಳಿದ್ದಮೇಲೆ ನಾವು ಮಾತನಾಡಿದರೂ ಪ್ರಯೋಜನವಿಲ್ಲ ಬಿಡಿ. ಆ ಮಾತುಕತೆ ನಮಗಾಗಲೀ ಅವರಿಗಾಗಲೀ ಖಂಡಿತವಾಗಿಯೂ ಸಂತೋಷವನ್ನುಂಟುಮಾಡಲಾರದು.

ಬಹುತೇಕ ಜಗಳಗಳಿಗೆ ಮೂಲ ಕಾರಣ ಮಾತು. ತಾಳ್ಮೆಯಿಂದಿರಬೇಕಾದ ಸಂದರ್ಭದಲ್ಲಿ ಓವರ್ ರಿಯಾಕ್ಟ್ ಮಾಡುವುದರಿಂದ, ಬಾಯಿಗೆ ಬಂದಹಾಗೆ ಮಾತನಾಡುವುದರಿಂದಲೇ ಸಮಸ್ಯೆಗಳು ಉದ್ಭವಿಸುತ್ತವೆ. ಮಾತಾಡುವುದಕ್ಕಿಂತಲೂ ಮೊದಲು, ಎದುರಿಗಿರುವ ವ್ಯಕ್ತಿ ಆ ಮಾತನ್ನು ಹೇಗೆ ಸ್ವೀಕರಿಸುತ್ತಾನೆ?, ತನ್ನ ಮಾತುಗಳು ಅವನ ಮೇಲೆ ಹೆಗೆಲ್ಲ ಪರಿಣಾಮವನ್ನು ಬೀರಬಹುದು? ಎಂದು ಆಲೋಚನೆ ಮಾಡದೇ ಮಾತನಾಡುವ ಜನರ ಗುಂಪನ್ನು 'ನಾಗರಿಕರು' ಎನ್ನಲಾಗುತ್ತದೆಯೇ?  ನಮ್ಮಿಂದ ಏನಾದರೂ ತಪ್ಪಾದಾಗ ಅಥವಾ ನಮ್ಮಿಂದ ಬೇರೆಯವರಿಗೆ ನೋವಾದಾಗ ಕ್ಷಮೆ ಕೇಳುವುದರಿಂದ ನಮಗಾಗುವ ನಷ್ಟವಾದರೂ ಏನು? ಅದೆಂತ ಅವಮಾನದ ಪ್ರಶ್ನೆಯೇ? ಅಲ್ಲವಲ್ಲ! ಹಾಗಾದರೆ ಕ್ಷಮೆ ಕೇಳವುದಕ್ಕೆ ಮೊಂಡು ಹಿಡಿಯುವ, ಆ ಮೂಲಕ ಒಂದು ನಿಡುಗಾಲದ ಸ್ನೇಹವನ್ನೋ ಸಂಬಂಧವನ್ನೋ ಕಳೆದುಕೊಳ್ಳುವವರನ್ನು ಏನೆನ್ನಬಹುದು? ಅಸಲಿಗೆ ಅವರ ಮನಸ್ಥಿತಿಯಾದರೂ ಎಂಥದ್ದಿರಬಹುದು?

ಊರಲ್ಲಿರುವುದು ನಾಲ್ಕೈದೇ ಮನೆಯಾದರೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೇಕೋ ಅಸಹನೆ, ಹೊಟ್ಟೆಕಿಚ್ಚು. ಎದುರಿಗೆ ಸಿಕ್ಕಾಗ ಮೂವತ್ತೆರಡು ಹಲ್ಲುಗಳನ್ನೂ ಕಾಣಿಸುತ್ತಾರಾದರೂ ಅವಕಾಶ ಸಿಕ್ಕಾಗ ಬೆನ್ನಿಗೆ ಚೂರಿ ಹಾಕದೇ ಬಿಡಲಿಕ್ಕಿಲ್ಲ. ಪಕ್ಕದಲ್ಲೇ ಇರುವ ತನ್ನದೇ ಅಣ್ಣ/ತಮ್ಮನ ಮನೆಗಿಂತ ನಲವತ್ತೈವತ್ತು ಕಿ.ಮೀ. ದೂರದಲ್ಲಿರುವ ದೂರದ ಸಂಬಂಧಿಕರ ಮನೆಯೇ ಇವರಿಗೆ ಹತ್ತಿರ! ನಾಗರಿಕತೆಯ ಬಹುದೊಡ್ಡ ದುರಂತವೆಂದರೆ ಇದೇ ಇರಬೇಕು.


ಬರಹ: ಪ್ರಸಾದ ಭಟ್