ʼದು ಆಳಿದವರ ಕಥೆಯಲ್ಲ, ಅಳೆದವರ ಕಥೆʼ ಎಂಬ ಟ್ಯಾಗ್‌ಲೈನ್‌ ಹೊಂದಿರುವ ʼಪ್ರಮೇಯʼ ಕಾದಂಬರಿ ಬೆಂಗಳೂರಿನಲ್ಲಿ ಜನವರಿ 22 ರಂದು ಲೋಕಾರ್ಪಣೆಗೊಳ್ಳುತ್ತಿದೆ. ಶರಾವತಿ ವಿದ್ಯುದಾಗರ ಆರಂಭವಾದ ಮತ್ತು ಸುತ್ತಮುತ್ತಲು ಬದುಕಿದ ಜನರ ಕಥನ 'ಪುನರ್ವಸು' ಕಾದಂಬರಿ ಮತ್ತು ಕರಿಮೆಣಸಿನ ರಾಣಿಯ ಅಕಳಂಕ ಚರಿತೆ 'ಚೆನ್ನಭೈರಾದೇವಿ' ಕಾದಂಬರಿ ಬಳಿಕ ಡಾ. ಗಜಾನನ ಶರ್ಮರು ಬರೆದ ಮೂರನೆಯ ಕಾದಂಬರಿ ಇದಾಗಿದ್ದು, ಬ್ರಿಟಿಷರು ನಡೆಸಿದ ಟ್ರಿಗ್ನಾಮೆಟಿಕ್ ಸರ್ವೆಯೆಂಬ ವೈಜ್ಞಾನಿಕ ಸಾಹಸವನ್ನು ಆಧರಿಸಿ ಬರೆದ ಈ ಕಾದಂಬರಿಯ ಆಯ್ದ ಭಾಗ ಇಲ್ಲಿದೆ. 


ಡಾ.ಗಜಾನನ ಶರ್ಮ 

1790ರಲ್ಲಿ ಲಂಡನ್ ನಗರದ ಗ್ರೀನ್ವಿಚ್ಚಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಜಾರ್ಜ್ ಎವರೆಸ್ಟ್  ಬಕಿಂಗ್ ಹ್ಯಾಮ್ ಶೈರಿನ ರಾಯಲ್ ಮಿಲಿಟರಿ ಕಾಲೇಜಿನಲ್ಲಿ ಶಿಕ್ಷಣ ಪಡೆದು,  ಹದಿನಾರನೆಯ ವಯಸ್ಸಿನಲ್ಲೇ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿ ನೇಮಕಗೊಂಡು ಜಾವಾ ದ್ವೀಪದ ಸರ್ವೆಗೆ ನಿಯೋಜಿಸಲ್ಪಟ್ಟಿದ್ದ. 1816ರಲ್ಲಿ ಜಾವಾದಿಂದ ಹಿಂದಿರುಗಿ ಬಂದು ಮುಂದಿನ ಎರಡು ವರ್ಷಗಳ ಕಾಲ ಕಲ್ಕತ್ತೆಯಿಂದ ವಾರಣಾಸಿಯವರೆಗಿನ ಸೀಮಾಫೋರ್ ಸರ್ವೆಗೆ (ಬೆಳಕಿನ ಕಿರಣ ಹರಿಸಿ ಮಾಡುವ ಸರ್ವೆ) ನಿಯೋಜನೆಗೊಂಡಿದ್ದ. ಒಮ್ಮೆ ಕಲ್ಕತ್ತೆಯ ಪ್ರಧಾನ ಕಛೇರಿಗೆ ಭೇಟಿ ನೀಡಿದ್ದ ಅಂದಿನ ಟ್ರಿಗ್ನಾಮೆಟ್ರಿಕ್ ಸರ್ವೆ ಅಧೀಕ್ಷಕ ಕರ್ನಲ್ ಲ್ಯಾಂಬ್ಟನ್, ಸರ್ವೆಯರ್ ಜನರಲ್ ಜೊತೆಗೂಡಿ ಸೀಮಾಫೋರ್ ಸರ್ವೆಯ ಪರಿವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಎವರೆಸ್ಟನ ಚುರುಕುತನವನ್ನು ಕಂಡು ಆಕರ್ಷಿತನಾಗಿ ಆತನನ್ನು ತನಗೆ ಚೀಫ್ ಅಸಿಸ್ಟಂಟ್ ಆಗಿ ನೇಮಕ ಮಾಡಲು ಸರ್ವೆಯರ್ ಜನರಲ್ಲರನ್ನು ಕೋರಿಕೊಂಡಿದ್ದ. ಆತನ ಕೋರಿಕೆಯ ಮೇರೆಗೆ, ಹೊಳೆಯುತ್ತಿದ್ದ ಕೆಂಪುಮುಖ, ದಟ್ಟ ಕಪ್ಪು ಗುಂಗರು ಕೂದಲು, ಮಿನುಗುತ್ತಿದ್ದ ಕಣ್ಣುಗಳ ಜಾರ್ಜ್ ಎವರೆಸ್ಟ್ ಟ್ರಿಗ್ನಾಮೆಟ್ರಿಕ್ ಸರ್ವೆ ತಂಡಕ್ಕೆ ಚೀಫ್ ಅಸಿಸ್ಟಂಟ್ ಆಗಿ 1818ರ ಡಿಸೆಂಬರ್ 26ರಂದು ನೇಮಿಸಲ್ಪಟ್ಟಿದ್ದ. ಮುಂದೆ ಲ್ಯಾಂಬ್ಟನ್ನನ ಮರಣಾನಂತರ 1823ರ ನಂತರ ಟ್ರಿಗ್ನಾಮೆಟ್ರಿಕ್ ಸರ್ವೆ ತಂಡದ ಅಧೀಕ್ಷಕನಾದ. 1830ರಿಂದ 1843ರವರೆಗೆ ಸರ್ವೆಯರ್ ಜನರಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ.

ಜಾರ್ಜ್ ಎವರೆಸ್ಟ್ ಕರ್ತವ್ಯದಲ್ಲಿ ಪ್ರಾಮಾಣಿಕನಾಗಿ ಬದ್ದತೆ ಮೆರೆದರೂ ಸಿಬ್ಬಂದಿಗಳ ಜೊತೆ ಒರಟುತನ ತೋರುತ್ತಿದ್ದ. ಆತನಿಗೆ ಭಾರತೀಯ ನೌಕರರ ಮೇಲೆ ಅಸಡ್ಡೆಯಿತ್ತು. ಟ್ರಿಗ್ನಾಮೆಟ್ರಿಕ್ ಸರ್ವೆಯ ಮುಖ್ಯ ಮಾಪನವಾಗಿದ್ದ 78° ಮೆರೆಡಿಯನ್ ಅಳತೆಯನ್ನು ಮಸ್ಸೂರಿಯ ತನಕ ತಲುಪಿಸುವಲ್ಲಿ ಬಹು ಮಹತ್ವದ ಪಾತ್ರ ವಹಿಸಿದ್ದ ಆತ ಸ್ವಭಾವತಃ ಅಹಂಕಾರಿ ಮತ್ತು ಗರ್ವಿಷ್ಠನಾಗಿದ್ದ. ಎಲ್ಲೆಡೆ ತನ್ನ ಮಾತೇ ನಡೆಯಬೇಕೆಂಬ ಸರ್ವಾಧಿಕಾರೀ ಧೋರಣೆ ಆತನದಾಗಿತ್ತು. ಹಾಗಾಗಿ ಆತ ಕಂಪನಿಯ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ ಸರ್ವೆಯ ಮುಖ್ಯ ಕಛೇರಿಯನ್ನು ಅಂದಿನ ಬ್ರಿಟಿಷ್ ಭಾರತದ ರಾಜಧಾನಿಯಾಗಿದ್ದ ಕಲ್ಕತ್ತದಿಂದ ಮಸ್ಸೂರಿಗೆ ವರ್ಗಾಯಿಸುವ ತೀರ್ಮಾನ ತೆಗೆದುಕೊಂಡಿದ್ದ. ಅಂತಿಮವಾಗಿ ಅದು ಡೆಹ್ರಾಡೂನಿನಲ್ಲಿ ನೆಲೆಗೊಳ್ಳುವಂತಾದರೂ ಅದಕ್ಕೆ ಎವರೆಸ್ಟನ ಒರಟುತನ ಮತ್ತು ಏಕಪಕ್ಷೀಯ ನಿರ್ಧಾರಗಳು ಬಹು ಮುಖ್ಯ ಕಾರಣವಾಗಿದ್ದವು. ಅವನು ತನ್ನ ಅಧೀನ ಸಿಬ್ಬಂದಿಯ ಕುರಿತು ಸದಾ ಅಸಹನೆ ತೋರುತ್ತಿದ್ದ. ಅವರ ಬದ್ದತೆ ಮತ್ತು ಪ್ರಾಮಾಣಿಕತೆಗಳನ್ನು ಸಂಶಯಿಸುತ್ತಿದ್ದ.


ಡಾ. ಗಜಾನನ ಶರ್ಮ

ಆತ ಮಸ್ಸೂರಿಯ ಬಳಿಯ ಹಾಥಿಪಾಂವ್ ಎಂಬಲ್ಲಿ ಪಾರ್ಕ್ ಎಸ್ಟೇಟ್ ಎಂಬ ಆರುನೂರು ಎಕರೆಗಳ ಎಸ್ಟೇಟನ್ನು ಕೊಂಡು ಅದರಲ್ಲಿ ಪಾರ್ಕ್ ಬಂಗಲೆ ಎಂಬ ನಿವಾಸವನ್ನು ನಿರ್ಮಿಸಿಕೊಂಡಿದ್ದ. ಈಗಲೂ ಅದನ್ನು ಸಂರಕ್ಷಿಸಿಡಲಾಗಿದೆ. ಅವನ ತನ್ನ ವೃತ್ತಿ ಜೀವನದುದ್ದಕ್ಕೂ ಐದಕ್ಕೂ ಹೆಚ್ಚು ಬಾರಿ ತೀವ್ರ ಕಾಯಿಲೆಗೆ ತುತ್ತಾಗಿದ್ದ. ಒಂದೆರಡು ಬಾರಿ ತೀವ್ರ ಪಾರ್ಶ್ವವಾಯು ಪೀಡಿತನಾಗಿದ್ದ. 'ಯಲ್ಲಾಪುರಂ' ಮಲೇರಿಯವಂತೂ ಅವನನ್ನು ಬಿಟ್ಟೂಬಿಡದಂತೆ ಕಾಡಿಸಿತ್ತು. ಆದರೆ ಆತನ ಕರ್ತವ್ಯ ಬದ್ದತೆ ಎಷ್ಟು ಗಟ್ಟಿಯಾಗಿತ್ತೆಂದರೆ ವೈದ್ಯರ ಸಲಹೆಯೂ ಅವನನ್ನು ಕರ್ತವ್ಯದಿಂದ ವಿಮುಖನಾಗಿಸಲು ಶಕ್ತವಾಗಿರಲಿಲ್ಲ. ದ ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ ಎವರೆಸ್ಟನಂತಹ ಸರ್ವೆಯರ್ ಜನರಲ್ ಇರದಿದ್ದರೆ ಮುಂದುವರೆಯುವ ಸಾಧ್ಯತೆ ಅತ್ಯಂತ ಕ್ಷೀಣವಾಗಿತ್ತು.

ಹಲವು ಸಲ ಕಾಣಿಸಿದ ಮಾರಣಾಂತಿಕ ರೋಗದ ನಡುವೆಯೇ ಗ್ರೇಟ್ ಆರ್ಕನ್ನು ತುದಿ ಮುಟ್ಟಿಸಿ ಸಾರ್ಥಕತೆ ಮೆರೆದ ಜಾರ್ಜ್ ಎವರೆಸ್ಟ್ 1842ರ ನವೆಂಬರ್ ತಿಂಗಳಲ್ಲಿ ಟ್ರಿಗ್ನಾಮೆಟ್ರಿಕ್ ಸರ್ವೆಯ ತನ್ನ ಎರಡೂವರೆ ದಶಕಗಳ ಕಾಲದ  ವರ್ಣಮಯ ವೃತ್ತಿಜೀವನಕ್ಕೆ ಅಂತ್ಯಹಾಡಲು, ಕಂಪನಿ ಆಡಳಿತದೆದುರು ನಿವೃತ್ತಿಗೆ ಕೋರಿಕೆಯನ್ನು ಸಲ್ಲಿಸಿದ್ದ. ಕಂಪನಿ 1843ರ ಡಿಸೆಂಬರ್ ತಿಂಗಳಲ್ಲಿ ಆತನ ನಿವೃತ್ತಿಗೆ ಮಂಜೂರಾತಿ ನೀಡಿತ್ತು.  ಆ ಸಂದರ್ಭದಲ್ಲಿ ತನಗೆ ಬ್ರಿಟಿಷ್ ಸರ್ಕಾರ ಕೊಡಮಾಡಿದ ನೈಟ್ ಹುಡ್ ಪದವಿಯನ್ನು ಆತ ಒಪ್ಪಿಕೊಳ್ಳಲಿಲ್ಲ. ಒಬ್ಬ ಕ್ರಿಯೇಟಿವ್ ಜೀನಿಯಸ್ ಎನ್ನಿಸಿಕೊಂಡಿದ್ದ ಆತ ನಿವೃತ್ತನಾಗುತ್ತಿದ್ದಂತೆ ತವರು ದೇಶಕ್ಕೆ ತೆರಳಲು ಹಡಗು ಹತ್ತಿದ್ದ. ಜಾರ್ಜ್ ಎವರೆಸ್ಟ್ ತನ್ನ ಆಡಳಿತದ ಅವಧಿಯಲ್ಲಿ ಲ್ಯಾಂಬ್ಟನ್ ಅನುಸರಿಸಿದ್ದ ಸರ್ವೆ ಮಾದರಿಯನ್ನು  ಆಮೂಲಾಗ್ರವಾಗಿ ಉನ್ನತೀಕರಿಸಿದ್ದ ಮತ್ತು  ಹತ್ತು ಹಲವು ಹೊಸತನವನ್ನು ಅನುಷ್ಠಾನಕ್ಕೆ ತಂದಿದ್ದ. ರಾಮ್ಸೆ ಸರ್ವೆ ಚೈನಿನ ಬದಲಿಗೆ ಕೋಲ್ಬೆ ಕಂಪನ್ಸೇಟಿಂಗ್ ಬಾರ್,  ಸುಧಾರಿತ ಹಿಲಿಯೋಟ್ರೋಪ್, ಹೊಸ ನೀಲಿ ದೀಪ ಮತ್ತು ದೃಷ್ಟಿಪಥ ಸೌಲಭ್ಯಕ್ಕಾಗಿ ಗೋಪುರಗಳನ್ನು ವಿನ್ಯಾಸಗೊಳಿಸಿದ್ದ. ತಾನು ನಿವೃತ್ತನಾಗುವ ಕಾಲದಲ್ಲಿ ಆಂಡ್ರಿವ್ ಸ್ಕಾಟ್ ವಾನನ್ನು ತನ್ನ ಜಾಗಕ್ಕೆ ನೇಮಿಸಲು ಕಂಪನಿ ಆಡಳಿತಕ್ಕೆ  ಪತ್ರಿಸಿ ಹಡಗು ಹತ್ತಿದ್ದ. ವಾಸ್ತವವಾಗಿ ಎವರೆಸ್ಟ್ ತವರಿಗೆ ಮರಳಿದ ನಂತರವಷ್ಟೇ ಎವರೆಸ್ಟ್ ಪರ್ವತ ಜಗತ್ತಿನ ಕಣ್ಣಿಗೆ ಬಿದ್ದದ್ದು...

ಎವರೆಸ್ಟ್ ಪರ್ವತ ಪ್ರಸವ:

ಆಂಡ್ರಿವ್ ವಾ ಮತ್ತು ರೆನ್ನಿ  ಎಂಬಿಬ್ಬರು ಸೈನ್ಯಾಧಿಕಾರಿಗಳು ಡಾರ್ಜಲಿಂಗ್ ಸಮೀಪದ ಸೋನಾಕೋಡಾದಿಂದ ಡೆಹ್ರಾಡೂನ್ʼವರೆಗಿನ ಲಾಂಜಿಟ್ಯೂಡನಲ್ ಸರ್ವೆ ನಡೆಸುತ್ತಿದ್ದ ಕಾಲದಲ್ಲಿ ಎವರೆಸ್ಟ್ ಶಿಖರದ ಅನ್ವೇಷಣೆ ನಡೆದದ್ದೊಂದು ರೋಚಕ ಸಂಗತಿ. ಈ ಸರ್ವೆಗೆ ಅನಿವಾರ್ಯವಾಗಿದ್ದ ಸೋನಾಕೋಡಾ ಬೇಸ್ಲೈನ್ ಮಾಪನ ಮುಗಿಸಿ, ಅದಕ್ಕೆ ಬಳಸಿದ್ದ ಗ್ರೇಟ್ ಥಿಯೋಡಲೈಟ್ ಮೂಲಕ ಮುಂದಿನ ಸೀರೀಸ್ ಮಾಪನವನ್ನು ಮುಂದುವರೆಸಿದ್ದಾಗ, ನಡುನಡುವೆ  ಟ್ರಿಗ್ನಾಮೆಟ್ರಿಕ್ ಬಿಂದುಗಳಿಂದ ಗೋಚರಿಸುತ್ತಿದ್ದ ಹಿಮಾಲಯ ಶ್ರೇಣಿಯ  ಶಿಖರಗಳತ್ತ ನೋಡುವುದು ಅವರ  ಹವ್ಯಾಸವಾಗಿತ್ತು. ಧೃಷ್ಟಿಪಥಗಳ ತೆರವಿಗಾಗಿ ಗೋಪುರಗಳ ನಿರ್ಮಾಣ ಅಥವಾ ಮರಗಳನ್ನು ಕಡಿಯುವುದು  ತಡವಾದಾಗ, ಥಿಯೋಡಲೈಟನ್ನು ಉತ್ತರಕ್ಕೆ ತಿರುಗಿಸಿ  ಪರ್ವತಗಳನ್ನು ನೋಡಿ, ಎತ್ತರವನ್ನು ಅಳೆಯುವ  ಪರಿಪಾಠ ಆರಂಭವಾಗಿತ್ತು. ಹೀಗೊಮ್ಮೆ ನೋಡುತ್ತಿದ್ದಾಗ ಡಾರ್ಜಲಿಂಗಿನ ರಂಗಿತ್ ಕಣಿವೆಯಿಂದ ಸುಮಾರು ನಲವತ್ತು ಮೈಲುಗಳ ದೂರದ ಪರ್ವತ ಶ್ರೇಣಿಯಲ್ಲಿ  ಕಾಂಚನಜುಂಗಾದ  ಪಶ್ಚಿಮಭಾಗದಲ್ಲಿ ಒಂದು ಪರ್ವತ ಗ್ರೇಟ್ ಥಿಯೋಡಲೈಟಿನ ಮೂಲಕ ಆಂಡ್ರಿವ್ ವಾ ನ ಕಣ್ಣಿಗೆ ಬಿದ್ದಿತ್ತು. 

ಜಾರ್ಜ್ ಎವರೆಸ್ಟ್‌

"ಕಾಂಚನಜುಂಗಾದ ಪಶ್ಚಿಮ ಭಾಗದ ಶಿಖರವೊಂದು ಕಡಿಮೆಯೆಂದರೂ ಸಮುದ್ರಮಟ್ಟದಿಂದ 28,176 ಅಡಿಗಳಷ್ಟು ಎತ್ತರವಿದೆ ಮತ್ತು ಅದು ಇದುವರೆಗೂ  ಅತ್ಯಂತ ಎತ್ತರವೆಂದು ಭಾವಿಸಿದ ಕಾಂಚನಜುಂಗಾವನ್ನೂ ಮೀರಿದಂತಿದೆ" ಎಂದು ವಾ ತನ್ನ ದಿನಚರಿಯಲ್ಲಿ ದಾಖಲಿಸಿದ್ದ. ಇದನ್ನು ಕೇವಲ ವಾ ಮಾತ್ರವಲ್ಲದೆ ವಿಲಿಯಮ್ ರೊಸೆಂಡ್ರೋಡ್ ಜೂನಿಯರ್ ಮತ್ತು ಆತನ ಸಹಚರರು ಡಾರ್ಜಲಿಂಗಿನ ಟೈಗರ್ ಹಿಲ್, ಸೆಂಚಾಲ್, ತೊಂಗ್ಲು ಮುಂತಾದ ವಿವ್ ಪಾಯಿಂಟುಗಳಿಂದಲೂ ನೋಡಿದ್ದರು. ಇದು ಬಹುದೂರದಲ್ಲಿದ್ದ ಪ್ರಯುಕ್ತ ಅದರ ನೇರ ಎತ್ತರವನ್ನು  ಅಳೆಯಲು ಅವರಿಗೆ ಸಾಧ್ಯವಾಗಿರಲಿಲ್ಲ. ವಾ ಈ ಅಳತೆಯನ್ನು ನಡೆಸಿದ್ದು 1847ರ ನವೆಂಬರ್ ತಿಂಗಳಲ್ಲಿ.  ಆತ ಈ ನಿಗೂಢ ಪರ್ವತದ ಕುರಿತು ಅಧಿಕೃತವಾಗಿ ಪ್ರಸ್ತಾಪಿಸಲು ಮುಂದಿನ ಒಂದೆರಡು ವರ್ಷ ಕಾಯಲು ನಿರ್ಧರಿಸಿದ್ದ. ಅದಕ್ಕೊಂದು ಕಾರಣವಿತ್ತು.  ನೇಪಾಳ ಮತ್ತು ಟಿಬೆಟ್ಟುಗಳ ಗಡಿಯಲ್ಲಿ ಇದ್ದಂತಿದ್ದ ಆ ಪರ್ವತವನ್ನು ಹತ್ತಿರದಿಂದ ವೀಕ್ಷಿಸುವುದು ಅಸಾಧ್ಯವಾಗಿತ್ತು. ನೇಪಾಳ ಮತ್ತು ಟಿಬೆಟ್ಟುಗಳು ಟ್ರಿಗ್ನಾಮೆಟ್ರಿಕ್ ಸರ್ವೆತಂಡದ ಪ್ರವೇಶವನ್ನು ಪ್ರತಿಬಂಧಿಸಿದ್ದವು. ಹಾಗಾಗಿ ದೂರದ ಭಾರತದಿಂದ ಅದು ಗೋಚರಿಸುವುದು ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಮುಂಜಾವಿನ ಸಮಯದಲ್ಲಿ ಮತ್ತು  ಮೋಡ ಮಂಜುಗಳ ಅಡಚಣೆಯಿಲ್ಲದ ಸಮಯದಲ್ಲಿ ಮಾತ್ರವಾಗಿತ್ತು. 

ವಾ,  1848- 49ರ ಅವಧಿಯಲ್ಲಿ ಈ ನಿಗೂಢ ಪರ್ವತವನ್ನು ಅಳೆಯುವ ಕೆಲಸವನ್ನು ಜಾನ್ ಪೇಟನ್ ಎಂಬ ಪ್ರಮುಖ 'ಕಂಪ್ಯೂಟರ್'ನ ಸುಪರ್ದಿಗೆ ಒಪ್ಪಿಸಿದ್ದ. ಪೇಟನ್ 1848-49ರ ಅವಧಿಯಲ್ಲಿ ತನ್ನ ಕರ್ತವ್ಯ ನಿರ್ವಹಿಸಲಾಗದೆ ನಿರಾಶನಾದ. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಕೆಲವೇ ನಿಮಿಷಗಳ ಮಟ್ಟಿಗೆ ದರ್ಶನ ನೀಡುತ್ತಿದ್ದ ನಿಗೂಢ ಶಿಖರದ ಮಾಪನಕ್ಕೆಂದು ನಿರ್ಮಿಸಿಕೊಂಡಿದ್ದ ಗೋಪುರವನ್ನು ಉಪಕರಣಗಳ ಸಮೇತ ಹತ್ತುವಷ್ಟರಲ್ಲಿ ಅದು ಮಂಜಿನ ಮುಸುಕಿನೊಳಗೆ ಅಡಗಿಬಿಡುತ್ತಿತ್ತು. ಹಾಗೆಂದು ಆ ಗೋಪುರ ಅಥವಾ ಅಟ್ಟಣಿಗೆಗಳನ್ನು ಮೊದಲೇ ಸಿದ್ದಪಡಿಸಿಟ್ಟುಕೊಳ್ಳಲು ಅಲ್ಲಿನ ಹವಾಮಾನ ಆಸ್ಪದಕೊಡುತ್ತಿರಲಿಲ್ಲ. ಅದರ ಮುಂದಿನ ವರ್ಷ ಪೇಟನ್ನನ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದ ಜೇಮ್ಸ್ ನಿಕೋಲ್ಸನ್ ನಾರ್ತ್ ಈಸ್ಟ್ ಲಾಂಜಿಟ್ಯೂಡಿನಲ್ ಪಥದಲ್ಲೇ ಮತ್ತಷ್ಟು ಮುಂದೆ ಸಾಗಿ ಅದನ್ನು ಕಂಡು, ಸಾಕಷ್ಟು ಏಕಾಗ್ರತೆಯಿಂದ ಸಮತಲ ಮತ್ತು ಲಂಬಕೋನಗಳಿಂದ ಅದರ ಹತ್ತೆಂಟು ಅಳತೆಯನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅದರಲ್ಲಿ ಆರು ಮಾಪನಗಳು ಅಂತಿಮ ಲೆಕ್ಕಾಚಾರಕ್ಕೆ ಅಗತ್ಯ ದತ್ತಾಂಶಗಳಾಗಿ ಒದಗಿದ್ದವು. 1850ರ ಆರಂಭದಲ್ಲೇ ನಿಕೋಲ್ಸನ್ ಈ ಅಳತೆಯ ವಿವರಗಳನ್ನು ಸಲ್ಲಿಸಿದ್ದರೂ ಆಂಡ್ರಿವ್ ವಾ ಅದರ ಕುರಿತು ಮುಂದಿನ ತೀರ್ಮಾನ ಕೈಗೊಳ್ಳುವಲ್ಲಿ ಆತುರ ತೋರಲಿಲ್ಲ.  ಈ ನಿಗೂಢ ಶಿಖರಕ್ಕೆ ಪೀಕ್  XV ಎಂದು ನಾಮಕರಣ ಮಾಡಲಾಗಿತ್ತು. ವಾ ಈಗ ಈ ವಿವರಗಳನ್ನು ಕಲ್ಕತ್ತೆಯಲ್ಲಿದ್ದ  ಪ್ರತಿಭಾನ್ವಿತ ಕಂಪ್ಯೂಟರ್, ಇಲ್ಲೀಗ ನಮ್ಮ ಜೊತೆಗಿರುವ ರಾಧಾನಾಥ ಸಿಕ್ಧರರಿಗೆ ಕಳುಹಿಸಿ, ಅದರ ಕರಾರುವಾಕ್ ಎತ್ತರವನ್ನು ಲೆಕ್ಕ ಹಾಕಲು ಸೂಚಿಸಿದ್ದರು.  ನಿಮ್ಮ ಈ ಸಿಕ್ಧರ್ ಸಾಹೇಬರು ಆಗ ಬಳಕೆಯಲ್ಲಿದ್ದ ಪಾರಂಪರಿಕ  ಸೂತ್ರಗಳಲ್ಲದೇ ತನ್ನದೇ  ಗಣಿತಸೂತ್ರಗಳನ್ನು  ಬಳಸಿ ಅದರ ಎತ್ತರ 29,000 ಅಡಿಗಳೆಂಬ ಅದ್ಭುತ ಮಾಹಿತಿಯನ್ನು ಹೊರಗೆಡವಿದ್ದರು. ಕರ್ನಲ್ ವಾ,  ಈ ಮಾಹಿತಿಯನ್ನು ತಕ್ಷಣ  ಪ್ರಕಟಿಸಿರಲಿಲ್ಲ. ಅದಕ್ಕೊಂದು ವೈಜ್ಞಾನಿಕ  ಕಾರಣವಿತ್ತು. ಕರಾಚಿಯಿಂದ ಅಲೆಗಳ ಅಧ್ಯಯನದ ಮೂಲಕ ಈ ಪರ್ವತದ ನೆಲಮಟ್ಟ, ಸಮುದ್ರ ಮಟ್ಟದಿಂದ ಎಷ್ಟು ಎತ್ತರವಿದೆಯೆಂಬ 'ಡಾಟಮ್ ಜೀರೋ' ಮಾಹಿತಿ ಬರಬೇಕಿತ್ತು.  ಬೆಳಕಿನ ಕಿರಣಗಳ ವಕ್ರೀಭವನದ ಕಾರಣದಿಂದ ಸಂಭವಿಸುವ, ಹಾಗೂ ಪರ್ವತದ ಆಕರ್ಷಣೆ ಮತ್ತು ಆಯಸ್ಕಾಂತೀಯ ಪರಿಣಾಮಗಳ ಕಾರಣದಿಂದ ಸಂಭವಿಸುವ ದೋಷಗಳನ್ನು ನಿವಾರಿಸಲು ಅಗತ್ಯ ಅಪವರ್ತನಗಳನ್ನು ಬಳಸಿ ಲೆಕ್ಕಾಚಾರಗಳನ್ನು ಪರಿಷ್ಕರಿಸಬೇಕಿತ್ತು. (ವಾಸ್ತವದಲ್ಲಿ  ಸಿಕ್ಧರ್ ಈ ದೋಷನಿವಾರಣೆಯ ಅಪವರ್ತನಗಳನ್ನು ಬಳಸಿಯೇ ಅಂತಿಮ ಫಲಿತಾಂಶ ನೀಡಿದ್ದು)  ಈ  ಲೆಕ್ಕಾಚಾರಗಳನ್ನು ಮುಗಿಸಿದ ಕರ್ನಲ್ ವಾ, 1856ರ ಮಾರ್ಚ್ ತಿಂಗಳಲ್ಲಿ  ಕಲ್ಕತ್ತದ  ಡೆಪ್ಯೂಟಿ ಸರ್ವೆಯರ್ ಜನರಲ್ ತುಯ್ಲಿಯರನಿಗೆ, "ಪ್ರಾಯಶಃ  ಪ್ರಪಂಚದ ಅತ್ಯಂತ ಎತ್ತರವಾದ ಪರ್ವತವೊಂದನ್ನು  ನಾವು ಗುರುತಿಸಿದ್ದೇವೆ ಮತ್ತು ಅದಕ್ಕೆ ಯಾವುದೇ ಸ್ಥಳೀಯ ಹೆಸರಿಲ್ಲ. ಹಾಗಾಗಿ ಅದರ ಹೆಸರು ವಿಶ್ವದಲ್ಲಿ ಮನೆಮಾತಾಗಲು ನಮ್ಮೆಲ್ಲರ  ಗೌರವಾದರಗಳಿಗೆ ಪಾತ್ರನಾಗಿರುವ ಜಾರ್ಜ್ ಎವರೆಸ್ಟನ ಹೆಸರಿನಲ್ಲಿ ಅದನ್ನು ಮೌಂಟ್ ಎವರೆಸ್ಟ್ ಎಂದು ಹೆಸರಿಸಲು ಬಯಸುತ್ತೇನೆ.  ಆ  ಪರ್ವತದ  ನಿರ್ದೇಶನಾಂಕಗಳು ಹೀಗಿವೆ,

                                               ಅಕ್ಷಾಂಶ: 27°59'16.7"N

                                               ರೇಖಾಂಶ: 86°58'5.9" E

                                    ಸಮುದ್ರ ಮಟ್ಟದಿಂದ ಎತ್ತರ: 29,002 ಅಡಿ' 

ಎಂದು ಬರೆದು ಪತ್ರವನ್ನು ಏಷಿಯಾಟಿಕ್ ಸೊಸೈಟಿಗೆ ರವಾನಿಸಲು ಸೂಚಿಸಿದ್ದ.  ಆಂಡ್ರಿವ್ ಸ್ಕಾಟ್ ವಾ ಸೂಚನೆಗೆ ಅನುಸಾರವಾಗಿ ತೂಯ್ಲಿಯರ್ ಪತ್ರವನ್ನು ಕಲ್ಕತ್ತಾದ ಏಷಿಯಾಟಿಕ್ ಸೊಸೈಟಿಗೆ ರವಾನಿಸಿದ್ದ. ಅದು ಅಲ್ಲಿಂದ ಮುಂದೆ ಲಂಡನ್ನಿನ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ  ಮತ್ತು ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯ ಅನುಮೋದನೆಗೆ ಕಳುಹಿಸಿ ಅದು ಮಂಜೂರಾಗಿದ್ದು.

ಈಗಲೂ ಆ ಪರ್ವತಕ್ಕೆ ಸ್ಥಳೀಯ ಹೆಸರನ್ನಿಡಬೇಕಿತ್ತು, ಎವರೆಸ್ಟ್ ಅದಕ್ಕೆ ಸೂಕ್ತ ಹೆಸರಲ್ಲ ಎಂಬ ವಾದವಿದ್ದರೂ ಟ್ರಿಗ್ನಾಮೆಟ್ರಿಕ್ ಸರ್ವೆಂತಹ ಮಹತ್ವದ ಕಾರ್ಯವನ್ನು ಮುಂದುವರೆಸುವ ಮೂಲಕ ಭಾರತೀಯ ಸಮಾಜಕ್ಕೆ ಒಳಿತು ಮಾಡಿದ ಮಹನೀಯನನ್ನು ಸ್ಮರಿಸಿಕೊಳ್ಳುವುದು ಸರಿ ಎಂಬ ಕಾರಣದಿಂದ ಅದು ಸಮರ್ಥನೀಯ ಎಂಬುವವರೂ ಇದ್ದಾರೆ.