- ಡಿ.ಜಿ ಪವನ್ ಕಲ್ಯಾಣ್ . ದೇವಿಕುಂಟೆ
ಶ್ರೀ ಸರ್ವಜ್ಞ ಕಾಲೇಜು ವಿಜಯನಗರ, ಬೆಂಗಳೂರು
ಬಹಮನಿ ಸುಲ್ತಾನರ ದಾಳಿಯಿಂದ ವೈಭವೋಪೇತ ಹಂಪೆ ʼಹಾಳು ಹಂಪೆʼಯಾದ ಕಥೆ ಎಲ್ಲರಿಗೂ ಗೊತ್ತು. ಆದರೆ, ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಕ್ಕೆ 60 ಕಿ.ಮೀ, ಬಾಗೇಪಲ್ಲಿಗೆ 20 ಕಿ.ಮೀ ದೂರದಲ್ಲಿರುವ ಹಂಪಿಯಂಥದ್ದೇ ಇನ್ನೊಂದು ಐತಿಹಾಸಿಕ ತಾಣ ಆಡಳಿತದ ಅನಾದರದಿಂದ ಕೊರಗುತ್ತಿದೆ! ಅದು ಯಾವುದು? ಎಲ್ಲಿದೆ? ಈ ಕಥನವನ್ನೊಮ್ಮೆ ಓದಿ. ನೀವೂ ಆ ಐತಿಹಾಸಿಕ ತಾಣದಲ್ಲಿ ಸಂಚರಿಸಿ.

ಬೆಟ್ಟದ ತುದಿಯಲ್ಲಿ ನಿಂತು ಸುತ್ತಲೂ ಕಣ್ಣಾಡಿಸಿದಾಗ ಸುಂದರ ಪರಿಸರ, ಅಲ್ಲಲ್ಲಿ ಅಲ್ಪಸ್ವಲ್ಪ ನೀರು ತುಂಬಿದ ಕೆರೆಗಳು… ಪುಟ್ಟ ಪುಟ್ಟ ಹತ್ತಾರು ಗ್ರಾಮಗಳು ಕಂಡರೆ, ಬೆಟ್ಟವೆಲ್ಲ ಸುತ್ತಾಡಿದರೆ ಅದ್ಭುತವಾದ ಬುರುಜುಗಳು, ಐತಿಹಾಸಿಕ ಲಿಪಿಗಳನ್ನು ಮತ್ತು ಕೆತ್ತಿದ ಬಂಡೆಗಲ್ಲುಗಳನ್ನೂ ಕಾಣಬಹುದು. ಸುಂದರ ಪ್ರಕೃತಿಯ ಮಡಿಲಲ್ಲಿನ ಈ ಬೆಟ್ಟವನ್ನು ಗಮನಿಸಿದರೆ ಬೇಸರವೂ ಆಗುತ್ತದೆ. ಏಕೆಂದರೆ ಅಲ್ಲಲ್ಲಿ ಹಂಪಿಯಂತೆ ಹಾಳಾದ ಆಗಿನ ಕಾಲದ ಮನೆಗಳ, ಅಪರೂಪದ ನಿರ್ಮಾಣಗಳ ಕುರುಹುಗಳು ಕಾಣಿಸುತ್ತವೆ. ಐತಿಹಾಸಿಕ ನಂದಿಬೆಟ್ಟದಲ್ಲಿರುವಂತೆ ಈ ಬೆಟ್ಟದ ಮೇಲೂ ಸುತ್ತಲೂ ಕೋಟೆ ಇದೆ. ಅಲ್ಲಲ್ಲಿ ಹಾಳಾಗಿದೆ. ಈ ಕೋಟೆ ಮತ್ತೊಂದು ವಿಶೇಷತೆಯೆಂದರೆ ತಳಭಾಗವನ್ನು ಕಲ್ಲುಗಳ ಜೋಡಣೆಯಿಂದ ಮೇಲ್ಭಾಗದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ.

ಅಂದಹಾಗೆ ಇದು ಎಂಥವರಿಗೂ ಕುತೂಹಲ ಮೂಡಿಸುವ ದೇವಿಕುಂಟೆ ಬೆಟ್ಟ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರವಿದೆ. ತಾಲೂಕು‌ ಕೇಂದ್ರದಿಂದ ಸುಮಾರು 20 ಕಿ.ಮೀ ದೂರದ ಮಾರಾಗಾನಕುಂಟೆ ಗ್ರಾ.ಪಂ. ವ್ಯಾಪ್ತಿಯಲ್ಲಿನ ದೇವಿಕುಂಟೆ ಗ್ರಾಮದ ಅಕ್ಕಮ್ಮಬೆಟ್ಟ ಎಂದು ಕರೆಯಲ್ಪಡುವ ಐತಿಹಾಸಿಕ ಸ್ಥಳಕ್ಕೆ 700 ವರ್ಷಗಳ ಇತಿಹಾಸವಿದೆ. ಇಲ್ಲಿ ಹಲವು ಸ್ಮಾರಕ, ಕಟ್ಟಡ, ಶಾಸನಗಳು, ಕೆತ್ತನೆಗಳು ಹಾಗೂ ಕೋಟೆಯ ಅವಶೇಷಗಳನ್ನು ಕಾಣಬಹುದು.

ಅಕ್ಕಮ್ಮ ಬೆಟ್ಟ ಎಂದೇ ಪ್ರಸಿದ್ಧವಾಗಿರುವ ದೇವಿಕುಂಟೆ ಬೆಟ್ಟದಲ್ಲಿ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಕೋಟೆ, ಬುರುಜುಗಳಿವೆ. ಈ ಬೆಟ್ಟಕ್ಕಿದ್ದ ಪ್ರಾಚೀನ ಹೆಸರು ʼಇಟ್ಟಿಗೆರಾಯನ ದುರ್ಗ ಕೋಟೆʼ ಎಂದು. ಈ ಹೆಸರು ಬರಲು ಈ ಕೋಟೆಯನ್ನು ಇಟ್ಟಿಗೆಯಿಂದ ಕಟ್ಟಿರುವುದೇ ಕಾರಣ.

ಕಟ್ಟಿಸಿದವರು ಯಾರು?
ಇಲ್ಲಿ ಕೋಟೆಯನ್ನು ಕಟ್ಟಿಸಿದವರು ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸನಾಗಿದ್ದ ʼಲಕುಮನ್ನʼ ಎಂದು ಹೇಳಲಾಗುತ್ತಿದೆ. ಇವರ ನಂತರ ʼಕನ್ನರಿ ದೇವನುʼ ಮಲಪ್ಪಗಲ್ಲು ದ್ವಾರ ಮತ್ತು ದೋಣೆಯನ್ನು ಕಟ್ಟಿಸಿದರು. ಇಟ್ಟಿಗೆರಾಯನ ದುರ್ಗಕೋಟೆ ಆಡಳಿತ ಕೆಲ ಪ್ರದೇಶಗಳ ರಾಜರೊಂದಿಗೆ ಸಂಪರ್ಕ ಹೊಂದಿದ್ದರು. ಜಿಲ್ಲೆಯ ನಂದಿ ಕೋಟೆ, ಚಿಕ್ಕಬಳ್ಳಾಪುರ ಕೋಟೆ, ಗುಮ್ಮನಾಯಕನ ಪಾಳ್ಯ, ತುಮ್ಮಲ ಹೊಸಕೋಟೆ, ಗುಡಿಬಂಡೆ ಕೋಟೆ, ಸಾದಲಿ ಕೋಟೆ, ಶಿಡ್ಲಘಟ್ಟ ಕೋಟೆ, ಬುರುಡುಗುಂಟೆ ಕೋಟೆಳೊಂದಿಗೆ ಸಂಪರ್ಕ ಹೊಂದಿದ್ದರು.


ಈ ದುರ್ಗದ ಆಡಳಿತದ ಸಮಯ ಸುಮಾರು 1200ರಿಂದ 1800 ನೇ ವರ್ಷದವರೆಗೂ ನಡೆಸಿದ್ದಾರೆ ಎಂದು ಲಭ್ಯವಿರುವ ಶಾಸನಗಳು ತಿಳಿಸುತ್ತವೆ. ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಿಡುಮಾಮಿಡಿ ಮಠಕ್ಕೂ ಆಶ್ರಯ ಪಡೆದಿತ್ತು ಎಂದು ತಿಳಿದು ಬರುತ್ತದೆ. ಆಗಿನ ಕಾಲದ ಜನರು ದೂರದ ಊರುಗಳ ಮೇಲೆ ದಾಳಿ ನಡೆಸಿ ದರೋಡೆ ಮಾಡುತಿದ್ದರು ಎಂದು ಹಿರಿಯರು ತಿಳಿಸುತ್ತಾರೆ. ಇಲ್ಲಿನ ಪುರಾತನ ಹಳ್ಳಿಗಳ ಹೆಸರುಗಳು ಇಟ್ಟಿಗೆ ದುರ್ಗ (ಅಕ್ಕಮ್ಮ ಬೆಟ್ಟ), ಇಟ್ಟುಕೂಲವೀರಾಪುರ (ಈಗಿನ ಹೆಸರು ದೇವಿಕುಂಟೆ), ಬಂಗಾರುಪಲ್ಲಿ (ಈಗಿನ ಹೆಸರು ಹೊನ್ನಂಪಲ್ಲಿ), ಗೂನಿವಾರಪಲ್ಲಿ, ಜಲಪಾತಹಳ್ಳಿ, ಗುಣಮರದಹಳ್ಳಿ, ಒಂಕನಹಳ್ಳಿ.. ಹೀಗೆ ಹಲವು ಊರುಗಳ ಹೆಸರುಗಳೇ ಸಾಕ್ಷಿಯಾಗುತ್ತವೆ. 

ಕಾಲಾನುಕ್ರಮದಲ್ಲಿ ಹೆಸರುಗಳು ಬದಲಾಗುತ್ತಾ ಇಂದಿನ ಹೆಸರುಗಳಿಂದ ಕರೆಯಲಾಗುತ್ತಿದೆ ಎಂದು ಚಾಪಲ ಬಾವನ್ನ ಹೇಳುತ್ತಿದ್ದರು. ಬಾವನ್ನ ಅವರಿಗೆ ದೇವಿಕುಂಟೆ ಬೆಟ್ಟದ ಎರಡು ತಲೆಮಾರುಗಳ ಕಥೆ ಗೊತ್ತಿತ್ತು. ವರ್ಷದ ಹಿಂದೆಯಷ್ಟೇ ಅವರು ತೀರಿಕೊಂಡರು. ಕರ್ನಾಟಕದ ಎಪಿಗ್ರಫಿ ಪುಸ್ತಕದಲ್ಲಿ ಬಿ.ಎಲ್ ರೈಸ್‌ನ ಬಾಗೇಪಲ್ಲಿ ತಾಲೂಕಿನ ಸೀರಿಯಲ್ ನಂಬರ್ 33, 34, 42, 43 ನಾಲ್ಕು ಶಾಸನಗಳು ಈ ಇಟ್ಟಿಗೆರಾಯನ ದುರ್ಗದ ಬಗ್ಗೆ ವಿವರಿಸುತ್ತದೆ.

ದೇವಿಕುಂಟೆಯ ಪಶ್ಚಿಮಕ್ಕಿದೆ ಅಕ್ಕಮ್ಮ ಬೆಟ್ಟ:
ದೇವಿಕುಂಟೆಯ ಪಶ್ಚಿಮ ದಿಕ್ಕಿಗೆ ಎತ್ತರವಾದ ಹಾಗೂ ತ್ರಿಭುಜಾಕಾರದಲ್ಲಿ ಎದ್ದು ಕಾಣುವ ಬೆಟ್ಟ ದಕ್ಷಿಣ ದಿಕ್ಕಿಗೆ ಹೊರಟಾಗ ಮರ, ಗಿಡ, ಕಲ್ಲು, ಬಂಡೆ, ಪೊದೆ, ಬಳ್ಳಿ ಕಾಣುತ್ತದೆ. ಪೂರ್ವ ದಿಕ್ಕಿನಲ್ಲಿ ಬೆಟ್ಟಗಳನ್ನು ಆವರಿಸಿಕೊಂಡು ಹೋಗಿ ಮುಂದುವರಿದಿದೆ. ಉತ್ತರ ದಿಕ್ಕಿಗೆ, ಅಂದರೆ; ಬೆಟ್ಟದ ಕೆಳಗಿನಿಂದ ಮೇಲಿನ ಅಂದರೆ ಬೆಟ್ಟದ ತಪ್ಪಲು ತಲುಪುವ ತನಕ ಕಲ್ಲು ಬಂಡೆಯಿಂದ ಕೂಡಿದೆ. ಇದರ ಮೇಲೆ ಕೋಟೆಯನ್ನು ಭದ್ರವಾಗಿ ಕಟ್ಟಿದ್ದಾರೆ. ಈ ಭಾಗದಲ್ಲಿ ಬಂಡೆಯ ಮೇಲೆ ದೊಣೆ ಮತ್ತು ಅಕ್ಕಮ್ಮ ದೇವಸ್ಥಾನ ಇದೆ. ಇದರ ಮುಂದೆ ಗೆನ್ನೇರು ಮರಗಳಿವೆ.

ಈ ಕೋಟೆಯನ್ನು ಇಲ್ಲಿ ಕಟ್ಟಲು ಕಾರಣ ಇಲ್ಲಿನ ದೊಣೆಯಲ್ಲಿ ಸಂಗ್ರಹವಾಗುವ ನಿರಂತರ ನೀರು ಸಂಪನ್ಮೂಲ ಕಾರಣದಿಂದ ರಾಜರು ಇಲ್ಲಿ ಕೋಟೆಯನ್ನು ಕಟ್ಟಿದ್ದಾರೆ. ಇಲ್ಲಿನ ದೊಣೆಯ ನೀರು ಸರ್ವಋತುವಿನಲ್ಲಿಯೂ ಇರುತ್ತವೆ ಇದೂ ಸಹ ಮುಖ್ಯವಾದದು ಆಗಿದೆ.