-ಅನುರಾಗ್ ಆರ್. ಗೌಡ
ಬೇಸಿಗೆ ಬಂತೆಂದರೆ ಸಾಕು. ತನ್ನ ಹಸಿರು ಪರ್ಣಗಳನ್ನೆಲ್ಲಾ ಉದುರಿಸಿ, ಬೂದು-ಕಂದು ಬಣ್ಣದ ಕಾಂಡವುಳ್ಳ, ಅಷ್ಟೇನೂ ಗಟ್ಟಿ ಮುಟ್ಟಾಗಿಲ್ಲದ ಮರವೊಂದು ಹೊಳೆಯುವ ಪೀತ ವರ್ಣದ ಹೂಗಳನ್ನು ತಳೆದು ನಿಲ್ಲುತ್ತದೆ. ಮಕರಂದ ಹೀರಲು ಬರುವ ಜೇನುನೊಣ ಮುಂತಾದ ಕೀಟಗಳ ಮೂಲಕ ಏರ್ಪಟ್ಟ ಪರಾಗಸ್ಪರ್ಶದ ಫಲವೆಂಬಂತೆ ಅಂಗೈ ಅಗಲದ ಕಂದು ಬಣ್ಣದ ಕಾಯಿಗಳನ್ನು ಅರಳಿಸಿ ನಿಲ್ಲುತ್ತದೆ. ಕಾಲ ಕಳೆದಂತೆ ಆಂಗೈ ಅಗಲದ ಕಾಯಿಗಳು ಒಡೆದು ಹೂವಿಗಿಂತ ಹಗುರ, ರೇಷ್ಮೆಗಿಂತ ನಯವಾದ ಹತ್ತಿಯ ತುಣುಕುಗಳು ಬೀಜದೊಂದಿಗೆ ಹಾರಲು ಶುರುಮಾಡುತ್ತವೆ.
ಓ ಇದ್ಯಾವ ಹಳದಿ ಸುಂದರಿಯೆಂದು ಚಿಂತಿಸುತ್ತಿದ್ದೀರಾ? ಆ ಮರವೇ ಕೋಕ್ಲೋಸ್ಪೆರ್ಮಮ್ ರಿಲಿಜಿಯೋಸಮ್ (Cochlospermum religiosum). ಇದೇನಿದು ಇಷ್ಟು ಸುಂದರ ಪುಷ್ಪಗಳನ್ನು ತಳೆಯುವ ಮರದ ಹೆಸರು ಇಷ್ಟು ವಿಚಿತ್ರವಾಗಿದೆಯಲ್ಲಾ ಎಂದು ತಿಳಿಯಬೇಡಿ. ಮೇಲೆ ಹೇಳಿರುವುದು ಆ ಸಸ್ಯದ ವೈಜ್ಞಾನಿಕ ಹೆಸರು. ಆ ಮರದ ಸ್ಥಳೀಯ ಹೆಸರೇನೆಂದರೆ ಕನ್ನಡದಲ್ಲಿ ಹಳದಿ ಬೂರುಗ, ಸಂಸ್ಕೃತದಲ್ಲಿ ಪೀತ ಶಾಲ್ಮಲಿ, ಹಾಗೂ ಇಂಗ್ಲಿಷ್‌ನಲ್ಲಿ ಗೋಲ್ಡನ್ ಸಿಲ್ಕ್ ಕಾಟನ್ ಟ್ರೀ, ಬಟರ್ ಕಪ್ ಟ್ರೀ ಎಂದು ಕರೆಯುವ ಈ ವೃಕ್ಷಗಳು ಬಿಕ್ಸೇಸಿ ( Bixaceae) ಕುಟುಂಬಕ್ಕೆ ಸೇರಿವೆ.
ಭಾರತವು ಸೇರಿದಂತೆ, ಬರ್ಮಾ, ಥೈಲ್ಯಾಂಡ್ ಮುಂತಾದ ಆಗ್ನೇಯ ಏಷ್ಯಾ ದೇಶಗಳ ಎಲೆ ಉದುರುವ ಕಾಡುಗಳಲ್ಲಿ ಕಂಡು ಬರುವ ಈ ವೃಕ್ಷವು ಸುಮಾರು 7.5 ಮೀ. ನಷ್ಟು ಎತ್ತರ ಬೆಳೆಯುತ್ತವೆ. ಫೆಬ್ರವರಿಯಿಂದ ಏಪ್ರಿಲ್ ತಿಂಗಳವರೆಗೂ ಹೂಗಳನ್ನು ತಳೆಯುತ್ತವೆ. ಐದು ವಿಭಾಗವುಳ್ಳ ಈ ಮರದ ಕಾಯಿಗಳು ತಳೆಯುವ ಹತ್ತಿಯಿಂದ ತಲೆದಿಂಬುಗಳನ್ನು ತಯಾರಿಸುತ್ತಾರೆ. ಬೌದ್ಧ ಧರ್ಮೀಯರಿಗೆ ಈ ವೃಕ್ಷದ ಹೂಗಳು ತುಂಬಾ ಪವಿತ್ರವಾಗಿರುವುದರಿಂದ ಈ ವೃಕ್ಷಗಳನ್ನು ಬೌದ್ಧ ಆಲಯಗಳ ಬಳಿ ಸಾಮಾನ್ಯವಾಗಿ ಕಾಣಬಹುದು. ಮತ್ತು ಈ ಸಸ್ಯದ ವೈಜ್ಞಾನಿಕ ನಾಮಧೇಯದಲ್ಲಿ ಇರುವ ರಿಲಿಜಿಯೋಸಮ್ ಎಂಬ ಪದವು ಇವು ಪವಿತ್ರ ವೃಕ್ಷಗಳೆಂಬ ಕಾರಣಕ್ಕೆ ಬಂದಿರುತ್ತವೆ.
(ಲೇಖಕರು ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ)