-ಗಣೇಶ ಭಟ್, ಯಲ್ಲಾಪುರ

ಯುಗಾದಿ, ನವರಾತ್ರಿ, ಗಣೇಶ ಚತುರ್ಥಿ ಮೊದಲಾದ ಹಬ್ಬಗಳ ಜೊತೆ ತಾನೇನು ನಿಮಗಿಂತ ಕಡಿಮೆಯಿಲ್ಲ ಎಂಬಂತೆ ಇತ್ತೀಚೆಗೆ ಸದ್ದು ಮಾಡುತ್ತಿರುವ ಹಬ್ಬ 'ಆಲೆಮನೆ' ಹಬ್ಬ. ಮಲೆನಾಡಿನ (ಅದರಲ್ಲೂ ಉತ್ತರಕನ್ನಡದ ಯಲ್ಲಾಪುರದ) ಕೃಷಿಕರು ಮುಂದಾಗಿ ನಡೆಸುವ ಹಬ್ಬ ಇದು. ಈ ಹಬ್ಬದ ಮುಖ್ಯ ಕೇಂದ್ರವೇ 'ಆಲೆಮನೆ'. 'ಆಲೆಮನೆ' ಎಂದರೆ ಕಬ್ಬನ್ನು ಗಾಣಕ್ಕೆ ನೀಡಿ ಕಬ್ಬಿನ ರಸ ತೆಗೆದು ಬೆಲ್ಲ ಮಾಡುವ ಜಾಗ. 'ಆಲೆಮನೆ' ಹಬ್ಬದಲ್ಲಿ ಬೆಲ್ಲ ಮಾಡುವ ಪ್ರಕ್ರಿಯೆಯು ಇರುವುದಿಲ್ಲ. ಆದರೆ  ಕಬ್ಬಿನ ರಸ ಅಥವಾ ಕಬ್ಬಿನ ಹಾಲು ಯಥೇಚ್ಛವಾಗಿ ಕುಡಿಯಲು ಮತ್ತು ಖರೀದಿಸಲು ದೊರೆಯುತ್ತದೆ. ಅದಲ್ಲದೇ ಇದರೊಡನೆ ಮಲೆನಾಡಿನ ತಂಪು ರಾತ್ರಿಗೆ ಹೊಂದಿಕೆಯಾಗುವ ಬಿಸಿ ಬಿಸಿ ಮಿರ್ಚಿ ಬಜ್ಜಿ, ಬೋಂಡ ಮೊದಲಾದವುಗಳೂ ಕೂಡ ದೊರೆಯುತ್ತವೆ. ಇದಕ್ಕೆ ಮೆರಗು ತರಲು ಯಕ್ಷಗಾನ ತಾಳಮದ್ದಳೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮವೂ ಕೂಡ ಇರುತ್ತದೆ.

ಈಗ ಯಲ್ಲಾಪುರಕ್ಕೆ 'ಆಲೆಮನೆ' ಹಬ್ಬದ ಕಾಲ ಬಂದಿದೆ. ಇದು‌ ಆರಂಭವಾಗಿದ್ದು ಮಾಗೋಡಿನಿಂದ ಎಂದು ನಾ ತಿಳಿದಿದ್ದು. ಮಾಗೋಡು ಆಲೆಮನೆ ಹಬ್ಬವನ್ನು ಅದೆಷ್ಟು ಸುಸಜ್ಜಿತವಾಗಿ, ಯಶಸ್ವಿಯಾಗಿ ನಿರ್ವಹಿಸಿದ್ದು ನನ್ನಂತಹ ಸುಶಿಕ್ಷಿತನನ್ನು ಆಶ್ಚರ್ಯಗೊಳಿಸಿತ್ತು. ಹಳ್ಳಿಗಳು ಜಾತಿವ್ಯವಸ್ಥೆ, ಅನಕ್ಷರತೆ, ಅಸ್ಪೃಶ್ಯತೆ ಮೊದಲಾದ ಸಮಸ್ಯೆಗಳ ಆಗರ ತಾಣವಾಗಿರುತ್ತವೆ ಎಂದೇ ನಾನು ಶಾಲೆಯ ಮೆಟ್ಟಿಲು ಹತ್ತಿದಾಗಿನಿಂದ ಹಳ್ಳಿಗಳ ಬಗ್ಗೆ ಕೇಳಿದ್ದು. ಹಿಂದುಗಳು ಸೇರುವುದೇ ನಾಲ್ಕು ಹೆಣಕ್ಕೆ ಹೆಗಲು ಕೊಡಲು ಮಾತ್ರ ಎಂಬಂತಹ ಮಾತುಗಳನ್ನು ಆರ್.ಎಸ್.ಎಸ್ ನಂತಹ ಸಂಘಟನೆಗಳ ಒಡನಾಟದಲ್ಲಿ ಕೇಳಿದ್ದೇನೆ. ಆದರೆ ಇದಕ್ಕೆಲ್ಲ ವ್ಯತಿರಿಕ್ತವಾಗಿ ಯಾವ ಅಕ್ಷರಸ್ಥರಿಗೂ ಕಡಿಮೆಯಾಗಿರಂತೆ ಹಬ್ಬವನ್ನು ಹಲವಾರು ದಿನಗಳ ತನಕ ಯಶಸ್ವಿಯಾಗಿ ಸುಸಂಘಟಿತವಾಗಿ ನಡೆಸಿದ್ದು ನನಗೆ ಆಶ್ಚರ್ಯವನ್ನು ತಂದಿತ್ತು. ಇದನ್ನು ಅವರು ಯಾವ ಶಿಕ್ಷಣ ಸಂಸ್ಥೆಗಳಿಂದ ಕಲಿತರು?

ಎಲ್ಲೋ ಮರೆಯಾಗಿ , ನಶಿಸಿಯೇ ಹೊರಟಿದ್ದ 'ಆಲೆಮನೆ' ಎಂಬ ಜಾಗ ಮತ್ತೆ ಜೀವ ಪಡೆದಿದ್ದು ಈ ಹಬ್ಬದಿಂದಲೆ ಇರಬಹುದು. ಇದೊಂದು ಅತೀ ಅದ್ಭುತ ಕಲ್ಪನೆ‌ಯೆ ಸರಿ. ಕೃಷಿಕರೇ ತುಂಬಿರುವ ಯಲ್ಲಾಪುರದಲ್ಲಿ ಇದೊಂದು ಅವರ ಸಂಘಟನೆಯ ಮುಖ. ಈ ಹಬ್ಬದಲ್ಲಿ ಎಲ್ಲರಿಗೂ ಆನಂದವೇ ಆನಂದ. ಅದೊಂದು ಖುಷಿ. ಈ ಹಬ್ಬ ನಮ್ಮೂರಿಗೆ ಸುತ್ತಮುತ್ತಲ ಊರಿಗೆ ತರುವ ಖುಷಿಯೇ ಬೇರೆ. ಕಳೆದು ಹೋಗುವುದು ಇಂದಿಗೂ ಮುಂದಿಗೂ ಅವಶ್ಯಕವಿದ್ದರೆ, ಅದನ್ನು ಹಳ್ಳಿಗಳು ಉಳಿಸಿಕೊಳ್ಳುತ್ತವೆ. ಅವುಗಳ ತರ್ಕವೇ ವಿಚಿತ್ರವೆನಿಸುತ್ತದೆ. ಈ ಹಳ್ಳಿಗಳ ಸ್ವಭಾವ ಆಧುನಿಕ ಶೈಕ್ಷಣಿಕ ಲೋಕ ವಿವರಿಸುವಂತೆಯಂತೂ ಇಲ್ಲ ಎಂಬುದು ನನಗೆ ಈ ಹಬ್ಬದಿಂದ ಸುಸ್ಪಷ್ಟ.

ಈ ವರ್ಷ ನಾಲ್ಕೈದು ಕಡೆ ಆಲೆಮನೆ ಹಬ್ಬದಲ್ಲಿ ಹಾಲು ಕುಡಿದವರು ಹೇಳಿದ್ದು ಬಹಳ ಸಿಹಿಯಾದ ಕಬ್ಬಿನಹಾಲು ಇದ್ದಿದ್ದು‌ ಮಾತ್ರ ಕರಡೊಳ್ಳಿಯ ಗೋಶಾಲೆಯಲ್ಲಿ ಎನ್ನುವುದು. ನನಗೂ ಸಹ ಹಾಗೆ ಅನ್ನಿಸಿದ್ದು ಸತ್ಯ. ನೀವು ಬೆರೆಲ್ಲಾದರು ಕುಡಿದ್ದಿದ್ದರೆ, ಅದಕ್ಕಿಂತ ಸಿಹಿ‌ ಇದ್ದರೆ ತಿಳಿಸಿ.

ಈ ಹಬ್ಬವು  ಪ್ರತಿಯೊಂದು ಊರುಗಳಲ್ಲೂ ಆರಂಭವಾಯಿತು ಎನ್ನುವುದು ಅತ್ಯಂತ ಖುಷಿಯ ವಿಚಾರ. ನಮ್ಮ ಊರು ಎಲ್ಲ ಸಮಸ್ಯೆಗಳಿಂದ ಮುಕ್ತವಾಗಿರುವ ಶ್ರೇಷ್ಠವಾದುದು ಎಂಬ ಗಾಳಿಯಲ್ಲಿ ಹಾರುವ ಅತಿಶಯೋಕ್ತಿಯನ್ನು ಹೇಳಲು ನಾನು ಹೊರಟಿಲ್ಲ. ಯಾಕೆಂದರೆ ಈ ಅಲೆಮನೆ ಹಬ್ಬದಲ್ಲೂ ಎಲ್ಲೆಡೆ ಇರುವಂತಹ ರಾಜಕೀಯವು ಪ್ರವೇಶಿಸುತ್ತದೆ. ಆದರೆ ಈ ರಾಜಕೀಯವೇನು ಈ ಹಬ್ಬದ ಅಸ್ತಿತ್ವವನ್ನು ಮರೆಯಾಗಿಸುತ್ತದೆ ಎಂಬಂತೆ ನನಗೆ ತೋರದು. ಈ ರೀತಿಯ ಯಾವುದೇ ರಾಜಕೀಯಗಳಿಂದಲೂ ಬದಲಾಗದ ಸ್ವಭಾವ ಈ ಹಳ್ಳಿಗಳಿಗೆ ಇದ್ದಂತೆ ಇದೆ. ಅದು ದೂರ್ವಾಸ ಮುನಿಯ ಕ್ರೋಧ ಸ್ವಭಾವದಂತೆ, ತ್ರಿಲೋಕ ಸಂಚಾರ ಮಾಡಿ ಲೋಕವಾರ್ತೆಯ ಸಾರುವ ನಾರದ ಮುನಿಯ ಸ್ವಭಾವದಂತೆ ಇದು.

ಸಂಘಟನೆ ,ಉತ್ಸಾಹ , ಹೊಸ ಯುವಕರ ಜೋಡಣೆ , ಸಂಗೀತ ಕಾರ್ಯಕ್ರಮ , ನಾಟಕ , ಯಕ್ಷಗಾನ ಇದೆಲ್ಲದಕ್ಕು ಇದೊಂದು ಹಬ್ಬ ಹೆಚ್ಚಿನ ಆಯಾಮ ನೀಡಿ ತಾಲೂಕಿನವರೆ ಹೆಮ್ಮೆಪಡುತ್ತಿರುವುದು ನಿಜ ಅಲ್ಲವೆ ? ಆದರೆ ಕೊನೆಯದಾಗಿ ಇದೆಲ್ಲದರಲ್ಲಿ ಒಂದು ನೋವಾಗಿದ್ದೆಂದರೆ ಪ್ಲಾಸ್ಟಿಕ್ ಬಾಟಲಿಗಳು! ಇದಕ್ಕೆನಾದರು ಪರ್ಯಾಯ ಇರಲು ಸಾಧ್ಯವೆ ಇದ್ದಿದ್ದರೆ ಪ್ರಜ್ಞಾವಂತ ಜನರು ಅಳವಡಿಸಿಯೇ ಬಿಡಿತ್ತಿದ್ದರು. 'ಅಲೆಮನೆ' ಹಬ್ಬದ ಕಬ್ಬಿನ ಮತ್ತು ಸಾಂಸ್ಕೃತಿಕ 'ರಸಸ್ವಾದ'ದ ಮುಂದೆ ದೇವತೆಗಳೇ ಬಂದು ಅಮೃತವನ್ನು ನನ್ನ ಮುಂದಿಟ್ಟರೂ ನಾನು ಅಮೃತವನ್ನೂ ನಿರಾಕರಿಸುತ್ತಿದ್ದೆನೆಂದರೆ ಅದು ಅತಿಶಯೋಕ್ತಿಯಲ್ಲ.

(ಲೇಖಕರು ಕಾನೂನು ವಿದ್ಯಾರ್ಥಿ ಮತ್ತು ಹವ್ಯಾಸಿ ಬರಹಗಾರ)

(ಚಿತ್ರ: ಗೋಪಿ ಜಾಲಿ)