-ರಾಜು ಸಿ.
ಸುಮಾರು 87 ವರ್ಷಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಹೊಸತೇನಿಸೋ ಹಾಗೆ ಸಂಗೀತಕ್ಕೆ ಸಂಬಂಧಿಸಿದ ಪುಸ್ತಕ 'ಸಂಧ್ಯಾರಾಗ'. ಇಂದಿಗೂ ಜೀವಂತವಾಗಿರುವುದು ಸಂಧ್ಯಾರಾಗದ ಹಿರಿಮೆ. ಕಾಲ ಬದಲಾಗಬಹುದು ಆದರೆ ಭಾವ ಬದಲಾದೀತೆ? ಪುಸ್ತಕ ಓದು ಓದುತ್ತಾ ಸಂಗೀತವನ್ನೇ ಕೇಳಿದಷ್ಟು ಇಂಪಾಗಿತ್ತು ಈ ಪುಸ್ತಕದ ಭಾಷಾಲಹರಿ. ಕನ್ನಡ ಪ್ರೇಮವೇ ಇಲ್ಲದೆ ಇರೋ ಬೀಚಿಗೆ ಮೊಟ್ಟ ಮೊದಲಾಗಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿ, ಓದಿದ ಮೊದಲ ಪುಸ್ತಕವಿದು. ಹಾಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕರೆದುಕೊಂಡು ಬಂದು ಉತ್ತಮ ಕನ್ನಡ ಸಾಹಿತ್ಯರನ್ನಾಗಿ ಮಾಡಿದ ಪುಸ್ತಕವು ಹೌದು. ತದನಂತರ ಬೀಚಿಯವರು ಕೊನೆವರೆಗೂ ಅನಕೃ ಅವರನ್ನು ಕನ್ನಡ ಗುರುಗಳನ್ನಾಗಿ ಸ್ವೀಕರಿಸಿದರು ಎಂಬ ಹೆಗ್ಗಳಿಕಯೂ ಸಂಧ್ಯಾರಾಗ ಪುಸ್ತಕಕ್ಕಿದೆ.
ಕಥೆಯಲ್ಲಿನ ಒಂದು ಸುಂದರವಾದ ರಾಯರ ಕುಟುಂಬ. ಪ್ರೀತಿ, ವಿಶ್ವಾಸ, ಘನತೆ, ಗೌರವ, ಗಾಂಭೀರ್ಯ ಹಾಗೂ ಔದಾರ್ಯದಿಂದ ಕೂಡಿದ ಕುಟುಂಬವೂ ಹೌದು. ಹಾಗೆ ಅದರಲ್ಲಿನ ಪ್ರತಿಯೊಂದು ಪಾತ್ರವು ಒಂದೊಂದು ಗುಣಗಳ ಪ್ರತಿನಿಧಿಗಳಾಗಿರುವುದು ಕಾದಂಬರಿಯ ವಿಶೇಷ ವಸ್ತು. ಹಿರಿಯರೆಂಬರಿವರು, ಮೀನಾಕ್ಷಮ್ಮ ಹಾಗೂ ರಾಯರು ಲಕ್ಷ್ಮೀನಾರಾಯಣರಂತೆ ಇದ್ದರು. ಇನ್ನು ಮೀನಾಕ್ಷಮ್ಮನವರು ಊರಿನವರ ಹೃದಯ ಕಮಲದಲ್ಲಿ ನೆಲೆಸಿರುವ ಲಕ್ಷ್ಮೀಯಂತೆ, ಹಾಗೂ ರಾಯರು ಊರಿನವರಿಗೆ ದೇವರಿದ್ದಂತೆ. ಕಾಲಚಕ್ರ ಉರುಳಿಹೋದಂತೆ ಬದಲಾಗುವ ಕವಲುದಾರಿಗಳು, ಬೆಳೆಸಿಕೊಂಡ ಆದರ್ಶಗಳು, ಪ್ರೀತಿ ವಿಶ್ವಾಸದ ವಾಂಛಲ್ಯ, ಯಾರ ಜೀವನದಲ್ಲಿ ಸಂಗೀತವೆಂಬ ಅಲೆ ಎಬ್ಬಿಸಿ, ಯಾರ ಜೀವನದಲ್ಲಿ ರಾಗ, ತಾಳ, ಮೇಳ, ಶೃತಿ ತಪ್ಪಿಹೋಗುವುದೆಂದು ಸಂಪೂರ್ಣ ಈ ಪುಸ್ತಕ ಓದಿಯೇ ಅನುಭವಿಸಿ.
ಕಥೆಯ ಕೇಂದ್ರಬಿಂದು 'ಸಂಗೀತ', ಸಂಗೀತ ಸರಿಗಮಪದನಿಸಗಳ ಹೋರಾಟ, ಸುಖವಾದ ಶಾರೀರದ ಸಂಮ್ಮೋಹನಾಸ್ತ್ರ. ಸಂಗೀತ ಒಂದು ಸಾಧನೆ. ನಿಜವಾದ ಸಂಗೀತದವೆಂದರೇನು ಎನ್ನುವುದು ಈ ಪುಸ್ತಕ ಓದಿದ ಮೇಲೆ ತಿಳಿಯುತ್ತದೆ. ಸುಖವಾದ ಶಾರೀರವಿಲ್ಲದಿದ್ದರೆ ರಾಗಭಾವಗಳು ಹೊರಡುವುದಿಲ್ಲವೇ? ಇನ್ನು ಕಥೆಯ ಮುಖ್ಯ ಪಾತ್ರಧಾರಿ ಲಕ್ಷ್ಮಣರಾಯರು. ಗುಣಮಟ್ಟದ ಜೀವನಕ್ಕೂ ಸಂಪತ್ತಿನ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲದೆ ಹುಟ್ಟುವ ಲಕ್ಷ್ಮಣರಾಯರು ಯಾವುದೇ ತರಹದ ಉದ್ವೇಗ ಇಲ್ಲದೇ, ನಿರ್ಭಾವುಕನಾಗಿ ಮಾತನಾಡುವುದು ಇವರ ಅಭ್ಯಾಸ. ನನ್ನ ಕಲ್ಪನೆಯಲ್ಲಿ - ಪ್ರೀತಿಲೀ ಭಾವ ಬದಲಾಗೋದು, ಮುಖದಲ್ಲಿನ ಬಣ್ಣ ಬದಲಾಗೋದು, ಧ್ವನಿಯಲ್ಲಿ ಆರ್ದ್ರತೆ, ಕಣ್ಣುಗಳಲ್ಲಿ ನಕ್ಷತ್ರ, ಹೃದಯಾಳದಿಂದ ಸಂಗೀತ ಹೊರೋಡೋದು ಅದೇನದು ಭಾವ? ಸಂಪೂರ್ಣ ಹೃದಯದ ಸಂಗೀತಕ್ಕೆ ಸಂಬಂಧಪಟ್ಟಂತ ಭಾವ, ಮೆದುಳಿನ ಅಂಕೆ ಇಲ್ಲ, ವಿದ್ಯೆಯ ಶಿಸ್ತು ಇಲ್ಲ, ಭಾಷೆಯಲ್ಲಿ ಪದ ವ್ಯಾಕರಣಗಳ ಹಂಗಿಲ್ಲ. ಅವರ ಕರುಳು ಖಾಲಿ ಆದಾಗ ಸಂಗೀತದ ಹಸಿವು. ಪೆದ್ದ ಕಳೆ ಮುಗ್ಧ ಭಾವ. ಇದರ ಜೊತೆಗೆ ತ್ಯಾಗ ವಿರಕ್ತಿ ನೆಲಸಿಬಿಟ್ಟಿದ್ದವು. ಅವತಾರ ಪುರುಷ ಮುಳುಬಾಗಿಲು ಚೆನ್ನಪ್ಪನವರಿಂದ ಸಂಗೀತದ ಕೂಗು ಕೇಳಿಬಿಟ್ಟಾಗ ಸಂಗೀತ ಅವರನ್ನು ಹೇಗೆ ಕುಣಿಸುತ್ತದೆ, ಹೇಗೆ ತಾಳಬದ್ಧವಾಗಿಸಿ ಬಿಡುತ್ತದೆಂದು ಕಥೆಯ ಅಚ್ಚರಿ. ಒಬ್ಬ ಸಂಗೀತ ಕಲಾವಿದನ ಜೀವನವು ತನ್ನ ಸುತ್ತಲಿನ ಪಾತ್ರಗಳೊಂದಿಗೆ ರಾಗ ತಾಳವಾಗಿ ಬೆಸೆದುಕೊಂಡಿರುವ ಭಾವಲಹರಿ. ತನ್ನ ಕುಟುಂಬವು ಧನ ಸಂಪತ್ತುಗಳಿಂದ ಮೀರಿದ್ದರು ಲಕ್ಷ್ಮಣರಾಯರಿಗೆ ವೈರಾಗ್ಯವೇಕೆ ಬಂದಿತು? ಸಂಗೀತ ಗಂಧಗಾಳಿಯಿಲ್ಲದ ಈ ಶಾರೀರಕ್ಕೆ ಸಂಗೀತವೇ ಅವರ ಉಸಿರಾಗಿದ್ದು ಹೇಗೆ? ಈ ಸಂಧ್ಯಾರಾಗದಲ್ಲಿ ಲಕ್ಷ್ಮಣರಾಯರೆಂಬ ಅದ್ಬುತ ಗಾನಗಾರುಡಿಗರು ಸಂಗೀತವನ್ನು ಹಾಡಿ ಹಾಡಿ ಅವರ ಜೀವನದಲ್ಲೇ ಮುಳುಗಿ ಹೋದದ್ದು ಹೇಗೆ? ಕೊನೆಯ ಪೂರ್ವಿ ಕಲ್ಯಾಣಿಯಲ್ಲಿ ತಾಳ ತಪ್ಪಿ ಹೋಗುವುದುಂಟೇ?
"ಜನತೆಯ ಆಸೆ ಮುಗಿಯುವಲ್ಲಿ ಕಲಾವಿದನ ಆಸೆ ಆರಂಭವಾಗುತ್ತದೆ. ಜನತೆಗೆ ಯಾವುದು ಹಿತವಾಗುತ್ತದೆಯೋ ಅದು ಕಲಾವಿದನಿಗೆ ಅಹಿತವಾಗುತ್ತದೆ. ಜನತೆಗೆಲ್ಲಿ ತೃಪ್ತಿ ತೋರುವುದೋ ಕಲಾವಿದನಿಗಲ್ಲಿ ಅತೃಪ್ತಿ ಮೊಳೆಯುತ್ತದೆ".
ನಾನು ಓದಿದ ಅನಕೃರವರ ಮೊದಲ ಪುಸ್ತಕವಿದು. ಅತೀ ಬೇಗ ಓದಿಸಿಕೊಂಡು ದೀರ್ಘಕಾಲ ಕಾಡುವ ಪುಸ್ತಕವಿದು. ಅನಕೃರವರು ಬರೆದ ಸಂಧ್ಯಾರಾಗದಲ್ಲಿ ಭಾಷೆಯಲ್ಲಿನ ಸರಳತೆ, ಪಾತ್ರಗಳ ಪೋಷಣೆ ಮತ್ತು ಗೌರವ, ನಯ ನಾಜೂಕಿನಿಂದ ಕೂಡಿದ ಭಾಷಾಲಹರಿ ಮತ್ತು ಸಂಗೀತ ಎಲ್ಲವನ್ನೂ ಓದುವಾಗ ಮನಸ್ಸಿಗೆ ಮುದನೀಡುತ್ತದೆ. ನಾನು ಈ ಕಾದಂಬರಿಯನ್ನು ಓದಿ ಮುಗಿಸಿದಾಗ ಪುಸ್ತಕವನ್ನು ತನ್ನೆದೆಗೆ ಅಪ್ಪಿಕೊಂಡು ಒಂದುಕ್ಷಣ ಮೌನವಾದೆ. ಕನ್ನಡ ಸಾಹಿತ್ಯದ ಒಂದು ಅತ್ಯುತ್ತಮ ಕಾದಂಬರಿಯಾದ ಸಂಧ್ಯಾರಾಗವು ಇಂದು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಕೊನೆಯಲ್ಲಿ ಬಂದಂತಹ "ಪೂರ್ವಿ ಕಲ್ಯಾಣಿ" ರಾಗವು ನನ್ನ ಅಚ್ಚುಮೆಚ್ಚಿನ ರಾಗವಾಗಿದೆ. ಒಮ್ಮೆ ಈ ರಾಗ ಆಲಿಸಿನೋಡಿ.