-ಸೌಮ್ಯಾ ಬೀನಾ
ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿಸಿಕೊಂಡು, ಕೇವಲ ಮರಗಳ ಬೇರುಗಳಿಂದ ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯದಾದರೂ ಸಧೃಡವಾಗಿ ಚಾಲ್ತಿಯಲ್ಲಿರುವ, ಮೇಘಾಲಯದ ಲಿವಿಂಗ್ ರೂಟ್ ಬ್ರಿಡ್ಜ್ ನೋಡುವಾಗ, ಯಾವ ಕ್ಷಣಕ್ಕಾದರೂ ಮೈಮೇಲೆ ಬಂಡೆಕಲ್ಲುಗಳು ಉರುಳಬಹುದಾದ, ಕಡಿದಾದ ಹಾದಿಗಳ ಮಧ್ಯೆ ಪ್ರಯಾಣ ಬೆಳೆಸಿ, ಹಿಮಾಲಯ ಶಿಖರದ ಮಧ್ಯೆ ಇರುವ ದೇವಭೂಮಿ ಬದರಿಯ ತಲುಪಿದಾಗ, ಹಿಮಾಲಯದ ಶೃಂಗಗಳಿಂದ ಬೀಸುವ ಶೀತಗಾಳಿ, ಜಿಟಿಜಿಟಿ ಮಳೆ, ಕೊರೆವ ಚಳಿಯ ಮಧ್ಯೆ, ಪ್ರತಿ ಉಸಿರಿನ ಪ್ರಾಮುಖ್ಯತೆ ಅರಿವಾಗುವಂತಹ ಚಾರಣ ಮಾಡಿದಾಗ, ರಾಜಸ್ಥಾನದ ಯಾವುದೋ ಒಂದು ಗಲ್ಲಿಯಲ್ಲಿ, ಹಿರಿಯ ಜೀವವೊಂದು ಕಾಮೈಚಾ ವಾದ್ಯವನ್ನು ಇಂಪಾಗಿ ನುಡಿಸುತ್ತಿದ್ದರೆ, ಅದ ಕೇಳಿ ಉರಿ-ಬಿಸಿಲು ಸೆಕೆ-ಸುಸ್ತು ಯಾವುದೂ ತೋಚದಂತೆ ಮೈಮರೆತು ಹೋದಾಗ, ಭಾಷೆ ಬಾರದ ಊರು ಬಾಲಿಯಲ್ಲಿ ಆಗ ತಾನೇ ಕಲಿತ ಪದಗಳ ಬಳಸಿ, ಜನರೊಂದಿಗೆ ಮಾತನಾಡುತ್ತಾ, ಬಾಡಿಗೆ ಸ್ಕೂಟರ್ ತೆಗೆದುಕೊಂಡು ಊರೆಲ್ಲ ಸುತ್ತಿದಾಗ, ಭಾರತದ ತುತ್ತತುದಿಯಲ್ಲಿ ಕನ್ಯಾಕುಮಾರಿಯ ಅಂಚಿನಲ್ಲಿನ ಸಮುದ್ರ ತೀರದೆಡೆ ನಡೆದು, ಸಕಲ ಜೀವಿಗಳಲ್ಲಿಯೂ ಜೀವ ತುಂಬುವ ಭಾಸ್ಕರನಿಗೆ ಸೂರ್ಯನಮಸ್ಕಾರದೊಂದಿಗೆ ಕೃತಜ್ಞತೆ ಹೇಳುವಾಗ, ನೇಪಾಳದ ಪಶುಪತಿನಾಥ ದೇವಾಲಯದ ಪಕ್ಕದಲ್ಲಿರುವ ಅಂತ್ಯಕ್ರಿಯೆ ಘಾಟ್‌ನಲ್ಲಿ ಸಂಜೆ ಕುಳಿತು ಮೃತರ ಕೊನೆಯ ಪಯಣ, ಕುಟುಂಬದವರಿಂದ ಅಂತಿಮ ವಿದಾಯ ನೋಡುವಾಗ, ಲೋಣಾವಲಾದಲ್ಲಿ ರಸ್ತೆ ಬದಿಯ ಪಾವ್‌ಬಾಜಿಯ ಸವಿಯಲ್ಲಿ ಮುಳುಗಿ ಹೋದಾಗ, ತಿರುಪತಿಯ ಲಡ್ಡುವಿಗೆ ಕ್ಯೂ ನಿಂತು ಪಡೆದು ತಿಂದಾಗ, ಗೋಕರ್ಣದ ದೇವಸ್ಥಾನದಲ್ಲಿ ಕಳೆದು ಹೋಗಿ, ಒಂದು ಗಂಟೆಯ ನಂತರ, ದೇವಸ್ಥಾನದ ಗರ್ಭಗುಡಿಯಲ್ಲಿ ಗಂಧ ತೇಯುತ್ತಾ ಕುಳಿತ ಪೋರಿಯಾಗಿದ್ದೆ ಎಂದು ಮಗಳಿಗೆ ನನ್ನ ಬಾಲ್ಯದ ಕಥೆ ಹೇಳುವಾಗ, ಬೆಳಗಿನ ಜಾವ ನಾಲ್ಕು ಘಂಟೆಗೆ ಎದ್ದು, ತೀಸ್ತಾ ನದಿಯ ಹತ್ತಿರದ ನಿವಾಸಿಗಳಾಗಿ, ನೆರೆ ಬರುವಾಗ, ಊರಿಗೆ ಊರೇ ಎತ್ತಾವಳಿಯಾಗಿ, ಆಗ ತಾನೇ ಹುಟ್ಟಿದ ಹಸಿಗೂಸನ್ನು ಎತ್ತಿಕೊಂಡು ಗುಳೆ ಹೋಗಬೇಕಾಗುವ ಪರಿಸ್ಥಿತಿಯ ಕಥೆಗಳನ್ನು ಸಿಕ್ಕಿಂನ ಡ್ರೈವರ್ ಇಂದ ಕೇಳುವಾಗ, ಧರ್ಮಸ್ಥಳಕ್ಕೆ ಹೋಗುವ ಬಸ್ಸಿನಲ್ಲಿ ಕುಳಿತು, ತರಕಾರಿ ಮಾರುವ ಅಪ್ಪನೊಬ್ಬ, ತನ್ನ ಮಗುವಿನ ಹಣೆಗೆ ಮುತ್ತಿಕ್ಕಿ ತಕ್ಕಡಿಯ ಪಕ್ಕದ ಗೋಣಿಚೀಲದ ಮೇಲೆ ಮಲಗಿಸಿಕೊಂಡು ಬಿಸಿಲು ಮುಖಕ್ಕೆ ಹೊಡೆಯದಂತೆ ತಾನು ಅಡ್ಡಲಾಗಿ ಕುಳಿತುಕೊಳ್ಳುವ ಮಮಕಾರ ಕಾಣುವಾಗ, ಕಾಳಹಸ್ತಿಯ ಮೂಲೆಯ ಪುಟ್ಟ ಮನೆಯೊಂದರಲ್ಲಿ, ಹೆಂಗಸರೆಲ್ಲ ಸೇರಿ ಹಾಡಿಕೊಂಡು, ಸುಪ್ರಸಿದ್ಧ ಕಲಂಕಾರಿ ಚಿತ್ತಾರಗಳನ್ನು, ಬಿದಿರಿನ ಕುಂಚದಿಂದ ಬಣ್ಣಗಳ ಸೀರೆಗೆ ಇಳಿಸುವ ಕಲಾತ್ಮಕತೆಯನ್ನು ಕಣ್ತುಂಬಿಕೊಂಡಾಗ, ಪ್ರವಾಸೋದ್ಯಮವೇ ಹೊಟ್ಟೆಪಾಡಾದ ಡಾರ್ಜೀಲಿಂಗ್ನಲ್ಲಿ, ಒತ್ತಿಕೊಂಡು ಪಟ್ಟಣವನ್ನು ಕಟ್ಟಿಕೊಂಡು, ನಿಸರ್ಗವನ್ನು ಬಗೆದು ಕಸದ ಬುಟ್ಟಿಯನ್ನಾಗಿ ಮಾಡಿಕೊಂಡ ಬಗೆಗೆ ವ್ಯಥೆ ಪಟ್ಟುಕೊಂಡಾಗ, ಜಬರ್ದಸ್ತ್ ಬಟ್ಟೆ ಎಂಬ ಮಾರಾಟಗಾರನ ಬಣ್ಣದ ಮಾತಿಗೆ ಮರುಳಾಗಿ, ಚೆಂದದ ಬಟ್ಟೆ ತಂದು, ಮರುದಿನವೇ ಅದು ನೆನೆಸಿದ ನೀರಿನ ಬಕೇಟಿನಲ್ಲಿ ಬಣ್ಣವನ್ನೆಲ್ಲ ಬಿಟ್ಟು ಕೊಟ್ಟ ಬೆಲೆಗೆ ಮೋಸ ಹೋಗಿ ಮುಖ ಪೆಚ್ಚಾದಾಗ.. 

ನನಗೆ ಅನಿಸುವುದು, ಈ ಪ್ರವಾಸ ಎಂಬುದು ನಾವು ಪಠ್ಯ ಪುಸ್ತಕದಲ್ಲಿ ಓದದ, ಟಿವಿಯಲ್ಲಿ ಕಾಣದ, ದಿನನಿತ್ಯಕ್ಕೆ ಕಾಣಸಿಗದ ಅದೆಷ್ಟು ಬಗೆಯ ಜೀವನದ ಅನುಭೂತಿಗಳನ್ನು, ಕೌಶಲ್ಯಗಳನ್ನು, ಅನುಭವದ ಮೂಲಕ ತೋರಿಸಿಕೊಡುತ್ತದೆ ಎಂದು! 

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯಾದಂತೆ ಜನರ ಪ್ರವಾಸದ ಹುರುಪು ಹೆಚ್ಚಿದೆ. ಈಗಂತೂ ಅನೇಕಸ್ಥಳಗಳಿಗೆ ನೂರಾರು ಬಗೆಯ ಪ್ಯಾಕೇಜು ಟೂರ್‌ಗಳ ವ್ಯವಸ್ಥೆ ಲಭ್ಯವಿದೆ. ಸ್ನೇಹಿತರೊಡನೆ, ಕುಟುಂಬದವರೊಡನೆ ಸುತ್ತಾಟ ಮಾಡಲೆಂದು ಯಾವುದೊ ಒಂದೆರಡು ಆಕರ್ಷಕ ಸ್ಥಳಗಳಿಗೆ ವೆಬ್‌ಸೈಟ್ ಮೂಲಕ ಪ್ಯಾಕೇಜು ಬುಕಿಂಗ್ ಮಾಡುವುದು, ಟ್ರಿಪ್ ಏಜೆನ್ಸಿಯವರು ಗೊತ್ತು ಮಾಡಿರುವ ಅವೇ ನಾಲ್ಕೈದು ಪ್ರಸಿದ್ಧ ಸ್ಥಳಗಳಿಗೆ ಹೋಗಿ, ಒಂದಷ್ಟು ಸೆಲ್ಫಿ ತೆಗೆದು, ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದರೆ ನಮ್ಮ ಟ್ರಿಪ್ ಸಕ್ಸೆಸ್ ಆಯಿತು ಎಂಬುದು ಇತ್ತೀಚಿಗೆ ಜನರ ಭಾವನೆಯಾಗಿ ಹೋಗಿದೆ. ಆದರೆ ಪ್ರವಾಸ ಎಂಬುದು ಕೇವಲ ಒಂದು ಟ್ರೆಂಡ್ ಆಗದೇ ಕೇವಲ ತೋರ್ಪಡಿಕೆಯಾಗದೆ, ಪ್ರತಿ ಗಳಿಗೆಯನ್ನು ನಾವು ನಮ್ಮೊಂದಿಗಿರುವ ಜನರೊಡನೆ ಹೊಂದಿಕೊಂಡು, ಹೋದ ಜಾಗದಲ್ಲಿನ ವೈವಿದ್ಯತೆ, ಜನಸಾಮಾನ್ಯರ ಯೋಚನಾ ಲಹರಿಯನ್ನು ಅರಿಯುವಂತಹ ಪಯಣವಾಗಬೇಕು. ಹೌದು, ಪ್ರವಾಸ ಪಯಣವಾಗಿರಬೇಕು!


ಪ್ರವಾಸ ಏಕೆ ಬೇಕು?
ಜೀವನದ ದಿನನಿತ್ಯದ ಜಂಜಾಟ, ಕೆಲಸ, ವಿದ್ಯಾಭ್ಯಾಸ, ಹೀಗೆ ಬಿಡುವಿಲ್ಲದ ಬದುಕು, ಒಂದೇ ಬಗೆಯ ದಿನಚರಿಯಿಂದ ಬೇಸತ್ತು ಮನಸ್ಸು ಒತ್ತಡಗೊಂಡಾಗ, ವಿರಾಮವೊಂದನ್ನು, ಬದಲಾವಣೆಯನ್ನು ಬಯಸುವುದು ಸಹಜ. ಇಂತಹ ಬದಲಾವಣೆಗಳಲ್ಲಿ ಮನಸ್ಸಿಗೆ ಮುದ ನೀಡುವಂತಹ ಪ್ರವಾಸ ಕೈಗೊಂಡು ನಿಸರ್ಗದೊಂದಿಗೆ ಬೆರೆಯುತ್ತಾ, ಕುಟುಂಬ, ಸ್ನೇಹಿತರು ಮತ್ತು ಆಪ್ತರೊಡನೆ ಸಮಯ ಕಳೆಯುವುದು ಕೂಡ ಹಲವರ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಒಬ್ಬೊಬ್ಬರ ಆಸೆ ಒಂದೊಂದು ರೀತಿಯದ್ದಾಗಿರುತ್ತದೆ. ಸಂಸ್ಕೃತಿ, ಸಾಹಿತ್ಯ, ಮನೋರಂಜನೆ, ಐತಿಹಾಸಿಕ ಸ್ಥಳಗಳ ಕುರಿತಾದ ಆಕರ್ಷಣೆ, ಪ್ರಕೃತಿ ವೀಕ್ಷಣೆ, ಚಾರಣ, ವಾಹನ ಸವಾರಿ, ಸಮುದ್ರ ತೀರದ ಮೋಹ ಹೀಗೆ ಹತ್ತು ಹಲವು ಬಗೆಯಲ್ಲಿ ನಮ್ಮ ಆಸಕ್ತಿಗೆ ತಕ್ಕಂತೆ ಹೊಸ ಅನುಭವಗಳ ಪಡೆಯಲೆಂದು ನಾವು ಚಿಕ್ಕ ಪುಟ್ಟ ಪ್ರವಾಸಗಳನ್ನು ಮಾಡುತ್ತಿರುತ್ತೇವೆ. ಆದರೆ ಪ್ರವಾಸದ ಮೂಲಕ ನಾವು ಬೇರೆಯವರಿಂದ, ಬೇರೆಯವರು ನಮ್ಮಿಂದ ಪಡೆಯುವುದೂ ಕೂಡ ಸಾಕಷ್ಟಿರುತ್ತದೆ. 'ಕೋಶ ಓದಿ ನೋಡು; ದೇಶ ಸುತ್ತಿ ನೋಡು" ಎನ್ನುವ ಮಾತಿನಂತೆ, ಪ್ರವಾಸಗಳು, ಅನುಭವಗಳು ನಮಗೆ ಪ್ರತಿ ಗಳಿಗೆಯೂ ಹೊಸತೊಂದು ಜೀವನ ಮೌಲ್ಯವನ್ನು, ಪಾಠವನ್ನು, ಜೀವಿಸುವ ಸಂಭ್ರಮವನ್ನು ನೀಡುತ್ತದೆ.

ಕೆಲವರಿಗೆ ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಪ್ರವಾಸ ಮಾಡುವ ಅನಿವಾರ್ಯತೆಯಿದ್ದರೆ, ಕೆಲವರಿಗೆ ಪ್ರವಾಸ ಒಂದು ಹವ್ಯಾಸವಾಗಿರುತ್ತದೆ. ಬೆಟ್ಟ ಗುಡ್ಡ ಹತ್ತುವ ಸಾಹಸ ಕೆಲವರ ಆಸಕ್ತಿಯಾದರೆ, ಮನಸ್ಸು ತೋಚಿದೆಡೆಗೆ ಗಾಡಿ ಓಡಿಸಿಕೊಂಡು ಊರೂರು ಸುತ್ತುವ ಹುಚ್ಚು ಇನ್ನೊಬ್ಬರದು. ಇನ್ನು ಮಕ್ಕಳಿಗಾಗಿ ಪ್ರಾಣಿ-ಪಕ್ಷಿಗಳನ್ನು, ನೆಲ-ಜಲ, ಆಕರ್ಷಣೀಯ ಆಟಗಳ ಕುರಿತಾದ ಸ್ಥಳಗಳಿಗೆ ಭೇಟಿ ನೀಡಿ ಅವರನ್ನು ಸಂತೋಷ ಪಡಿಸುವ ಉದ್ದೇಶಕ್ಕೆ ಕೆಲವರು ಫ್ಯಾಮಿಲಿ ಟ್ರಿಪ್ ಮಾಡಿದರೆ, ಬ್ಯುಸಿಯಾದ ಜೀವನದಲ್ಲಿ ಎಷ್ಟೋ ಸಮಯ ಭೇಟಿಯಾಗದೇ ಇದ್ದ ಗೆಳೆಯರೆಲ್ಲ ಒಂದೆಡೆ ಸೇರಿ ತಮ್ಮೆಲ್ಲ ಕಥೆಗಳನ್ನು ಹೇಳುತ್ತಾ ಪಟ್ಟಾಂಗ ಹೊಡೆಯಲೆಂದೇ ಪ್ರವಾಸ ಕೈಗೊಳ್ಳುವವರು ಒಂದಷ್ಟು ಜನ. 

ಒಂದು ದಿನದ ಮಟ್ಟಿಗೆ ಮನೆಯಿಂದ ಹೊರಗೋಗಿ ಹತ್ತಿರದ ಹೊಸ ಸ್ಥಳಕ್ಕೆ ಭೇಟಿ ನೀಡಿ ಸಂತಸ ಪಡಲು ಇಷ್ಟಪಡುವ ಜನ ಒಂದು ಕಡೆಯಾದರೆ, ತಿಂಗಳುಗಟ್ಟಲೆ ದೇಶಾಂತರ ಹೋಗಿ ಅಲ್ಲಿನ ಭೌಗೋಳಿಕ, ಪ್ರಾದೇಶಿಕ, ಸಾಂಸ್ಕೃತಿಕ, ವ್ಯಾವಹಾರಿಕ, ಐತಿಹಾಸಿಕ, ವೈಜ್ಞಾನಿಕ, ವಿಷಯಗಳ ಕುರಿತಾದ ಅಧ್ಯಯನ ನಡೆಸಿ,ನೂತನ ಅನುಭವಗಳಿಂದ ಕಲಿಯುವ ಉನ್ಮಾದಕ ಜನರು ಇನ್ನೊಂದೆಡೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಪ್ರವಾಸವೆಂಬುದು ನಾವು ನಮ್ಮ ಹಾಯ್ನೆಲೆ ಯಿಂದ ಹೊರ ಬಂದು, ಪ್ರತಿ ಕ್ಷಣವೂ ದೊರೆಯುವ ಅವಕಾಶಗಳು ಅಥವಾ ಸವಾಲುಗಳನ್ನು ಸ್ವೀಕರಿಸಿ, ಆ ಸಂದರ್ಭಕ್ಕೆ ನಮ್ಮನ್ನು ನಾವೇ ಒಗ್ಗಿಸಿಕೊಂಡು ಸಂತೋಷ ಪಡುವ ಒಂದು ಜೀವನ ಕಲೆ. ಪ್ರವಾಸ ಮಾಡುವುದೆಂದರೆ ನಮ್ಮಂತಸ್ತಿನ ಹಿರಿಮೆಯ ತೋರ್ಪಡಿಕೆಯಲ್ಲ - ಅದೊಂದು ಅವಿರತ ಕಲಿಕೆಯ ಅನಾವರಣ! 

ಯಶಸ್ವಿ ಪ್ರವಾಸದ ತಯಾರಿ ಮತ್ತು ಪ್ರವಾಸಿಗರ ಕರ್ತವ್ಯಗಳು:
ಯಾವುದೇ ಆಕರ್ಷಣೀಯ ಸ್ಥಳವೂ, ಜನರು ಭೇಟಿ ನೀಡಲು ಯೋಗ್ಯವಾಗಿದ್ದು, ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶದಿಂದ ಕೂಡಿದ್ದು, ಆ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವಂತಿದ್ದರೆ ಅದು 'ಪ್ರವಾಸೀ ಸ್ಥಳ'ವೆನಿಸಿಕೊಳ್ಳುತ್ತದೆ. ಪ್ರವಾಸಿಗರಾಗಿ, ನಾವು ಇರುವ ಪರಿಸರದಿಂದ ಪರಸ್ಥಳಕ್ಕೆ ಭೇಟಿ ನೀಡುವಾಗ ಮಾಡುವ ಯೋಜನೆ ಮತ್ತು ನಡೆಸುವ ತಯಾರಿ ಕೇವಲ ಲೌಕಿಕ ವಸ್ತುಗಳ ಕೊಂಡೊಯ್ಯುವುದರ ಕುರಿತಾಗಿ ಮಾತ್ರವೇ ಆಗಿರಬಾರದು. ಪ್ರವಾಸವೆಂದರೆ ಒಂದಷ್ಟು ಸಮಯೋಜಿತ, ಪೂರ್ವಾಪರ ವಿಷಯಗಳ ಅರಿವು ಕೂಡ ಅಗತ್ಯ. ಇದರ ಜೊತೆಗೆ ಪ್ರವಾಸದ ಉದ್ದೇಶ ನಮ್ಮ ವೈಯುಕ್ತಿಕ ಕಾರಣಗಳಿಂದ ಯೋಜನೆಗೊಂಡಿದ್ದರೂ, ಅದು ಕೇವಲ ನಮ್ಮ ಹಿತವೊಂದಕ್ಕೆ ಮಾತ್ರ ಸೀಮಿತವಾಗಿರಬಾರದು. ನಾವು ಭೇಟಿ ನೀಡುತ್ತಿರುವ ಸ್ಥಳಕ್ಕೆ ಅಥವಾ ಪ್ರವಾಸದುದ್ದಕ್ಕೂ ನಮ್ಮಿಂದ ಇತರರಿಗೆ ಮತ್ತು ಪ್ರವಾಸೀ ತಾಣದ ಸುತ್ತಲಿನ ಪರಿಸರಕ್ಕೆ ಹಾನಿಯುಂಟಾಗದಂತೆ ಕಾಳಜಿ ವಹಿಸುವ ಜವಾಬ್ಧಾರಿ ಕೂಡ ನಮ್ಮದಾಗಿರುತ್ತದೆ.

1. ಪ್ರವಾಸಿ ಸ್ಥಳದ ಕುರಿತು ಕನಿಷ್ಠ ಮಾಹಿತಿ ಸಂಗ್ರಹ
ಪ್ರವಾಸ ಹೋಗಲು ಸಾರಿಗೆ ವ್ಯವಸ್ಥೆಯಿಂದ ಹಿಡಿದು, ವಸತಿ ಊಟ ಓಡಾಟ ಪ್ರತಿಯೊಂದೂ ಸ್ವತಃ ಆಯೋಜಿಸುವುದು ಕಷ್ಟ ಅಥವಾ ಅನುಭವ ಸಾಲದು ಎಂದೆನಿಸಿದಾಗ, ನಾವು ಸಾಮಾನ್ಯವಾಗಿ ಪ್ರವಾಸ ವ್ಯಾಪಾರೋದ್ಯಮ ನಡೆಸುವ ಟೂರ್ಸ್ ಅಂಡ್ ಟ್ರಾವೆಲ್ಸ್ನವರ ಪ್ಯಾಕೇಜ್ ಟ್ರಿಪ್‌ಗಳ ಮೊರೆ ಹೋಗುವುದು ಸಹಜ. ಒಂದಷ್ಟು ದುಡ್ಡು ಕಟ್ಟಿಬಿಟ್ಟರೆ ನಮ್ಮನ್ನು ಆರಂಭದ ಸ್ಥಳದಿಂದ ಹೊರಟು, ವೀಕ್ಷಿಸಬೇಕಾದ ಸ್ಥಳಗಳಿಗೆಲ್ಲ ಸುತ್ತಾಟ ಮುಗಿಸಿ ವಾಪಾಸು ಕರೆತರುವಲ್ಲಿಯವರೆಗೆ ಪ್ರತಿಯೊಂದೂ ಅವರದ್ದೇ ಪ್ರಯಾಣದ ಪ್ಲಾನ್ ಮತ್ತು ಚಟುವಟಿಕೆಯ ಜವಾಬ್ದಾರಿ, ಚಿಂತೆ ಮಾಡುವ ಅಗತ್ಯವಿಲ್ಲ ಎಂದು ನಾವು ಯೋಚಿಸುತ್ತೇವೆ. ಆದರೆ ಖಾಸಗಿಯಾಗಿ ಅಥವಾ ಸ್ವತಃ ವಾಹನ ಚಲಾಯಿಸಿ ಪ್ರಯಾಣಿಸದಿದ್ದರೂ, ಪ್ರವಾಸ ಸ್ಥಳದ ಕುರಿತಾಗಿ ಕನಿಷ್ಠ ಪ್ರಮಾಣದ ಮಾಹಿತಿಯಾದರೂ ನಾವು ಸಂಗ್ರಹಿಸಬೇಕು. ಪ್ರವಾಸಿ ತಾಣದ ಕುರಿತಾಗಿ ಯಾವುದಾದರೂ ಪುಸ್ತಕ, ಟಿ.ವಿ ಡಾಕ್ಯುಮೆಂಟರಿ, ಇಂಟರ್ನೆಟ್ ಆಧಾರಿತ ವಿಷಯಗಳು, ಬ್ಲಾಗರ್ಸ್ಗಳ ಪ್ರವಾಸಾನುಭವ ಇತ್ಯಾದಿ ಬಲ್ಲ ಮೂಲಗಳಿಂದ ಸಾಧ್ಯವಾದಷ್ಟರ ಮಟ್ಟಿಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಪ್ರವಾಸ ಸ್ಥಳದ ಭಾಷೆ ನಮ್ಮ ಭಾಷೆಗಿಂತ ಭಿನ್ನವಾಗಿದ್ದರೆ, ಪ್ರಮುಖವಾದ ಶಬ್ದಗಳನ್ನು ತಿಳಿದುಕೊಂಡರೆ, ಹೋದ ಕಡೆಗೆ ಇತರರೊಡನೆ ಸಂಭಾಷಣೆ ನಡೆಸುವ ಅಗತ್ಯತೆ ಸುಲಭವೆನಿಸುತ್ತದೆ. 

2. ಸ್ಥಳೀಯ ಸಂಪ್ರದಾಯಗಳ ಕುರಿತಾಗಿ ಗೌರವ
ಹೊಸ ಜಾಗವೊಂದಕ್ಕೆ ಹೋದಾಗ ಅಲ್ಲಿನ ಆಚಾರ ವಿಚಾರ ಸಂಪ್ರದಾಯಗಳು ನಮಗೆ ತಿಳಿಯದ ವಿಷಯವಾಗಿದ್ದರೆ, ಕೇಳಿ, ನೋಡಿ, ಗಮನಿಸಿ ಅಲ್ಲಿನ ರೀತಿ ರಿವಾಜುಗಳಿಗೆ ನಮ್ಮ ಪ್ರವಾಸವನ್ನು ಚಟುವಟಿಕೆಯನ್ನು ಹೊಂದಿಸಿಕೊಳ್ಳಬೇಕು. ಪ್ರವಾಸೋದ್ಯಮವೇ ಮುಖ್ಯ ಬಂಡವಾಳವಾಗಿರುವಂತಹ ಊರುಗಳಲ್ಲಿ, ಪ್ರವಾಸಿಗರನ್ನು ಆಕರ್ಷಿಸಲೆಂದು ಅಲ್ಲಿನ ಮುಖ್ಯ ಐತಿಹಾಸಿಕ ವಿಷಯಗಳ ಕುರಿತಾದ ವಸ್ತು ಸಂಗ್ರಹಾಲಯಗಳು, ಕಲಾವಿದರಿಂದ ಸಂಗೀತ, ನೃತ್ಯ, ಕಲೆಗಳ ಪ್ರದರ್ಶನ, ಕರಕುಶಲ ವಸ್ತುಗಳ ಮಾರಾಟ ಹೀಗೆ ಸಾಕಷ್ಟು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇಂತಹ ಸ್ಥಳಗಳಲ್ಲಿ, ಪ್ರದರ್ಶನಕ್ಕಿಟ್ಟ ವಸ್ತುಗಳನ್ನು ಯಾವುದೇ ಕಾರಣಕ್ಕೂ ಭಗ್ನಗೊಳಿಸದೇ, ಮಹಿಳೆಯರ ಬಗ್ಗೆ ಅಶ್ಲೀಲ ಮಾತುಗಳನ್ನಾಡದೇ ಕಲೆಯನ್ನು ಅರಿಯುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮನೋಭಾವನೆಯಿಂದ ನೋಡಿ ಆನಂದಿಸುವುದು, ಸಂತಸ ತಂದುಕೊಟ್ಟ ಪ್ರದರ್ಶನಕಾರರಿಗೆ ಒಂದು ಪ್ರಶಂಸೆ ನೀಡುವುದು ಇತ್ಯಾದಿ ನಮ್ಮನ್ನು ನಾವೇ ಉತ್ತಮ ಪ್ರಜೆಯನ್ನಾಗಿಸಿಕೊಳ್ಳಲು ಸಹಾಯ ಮಾಡುತ್ತದೆ.

3. ಪ್ರವಾಸದ ಪರಿಸರ ನಮ್ಮ ಜವಾಬ್ಧಾರಿ ಕೂಡ!
ಒಂದು ಬೆಳ್ಳಂಬೆಳಗ್ಗೆ ಯಾರಾದರೂ ಇದ್ದಕ್ಕಿದ್ದಂತೆ ನಮ್ಮ ಮನೆಗಳಿಗೆ ಬಂದು ಒಂದಷ್ಟು ಹಾರಾಡಿ ಕುಣಿದಾಡಿಕೊಂಡು, ಕೂತು ಉಂಡು ಕಂಡ ಕಂಡಲ್ಲಿ ಕಸ ಬಿಸಾಡಿ ತಿಳಿಸದೇ ಹೊರಟೇ ಹೋದರೆ ಹೇಗನ್ನಿಸಬಹುದು? ಕೋಪ, ಅಸಹಾಯಕತೆ, ದುಃಖ ಎಲ್ಲವೂ ಒಮ್ಮೆಲೇ ಉಂಟಾಗಬಹುದಲ್ಲವೇ? ಅಂದ ಮೇಲೆ ನಾವು ಪ್ರವಾಸಕ್ಕೆಂದು ಹೊರಗಿನ ಸ್ಥಳಗಳಿಗೆ ಓಡಾಡಿ ಪರಿಸರವನ್ನು ಅಂದಗೆಡಿಸಿ ಬರುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ? ಪ್ರವಾಸೀ ಸ್ಥಳವೆಂದರೆ ಜನರು ಹೆಚ್ಚಿನ ಪ್ರಮಾಣದಲ್ಲಿ ಓಡಾಡುವಂತಹ ಸ್ಥಳ. ಕೆಲವು ಕಡೆ ಸ್ವಚ್ಛತೆಯೆಡೆಗೆ ನಿಗಾ ವಹಿಸಿ ಸರ್ಕಾರದಿಂದ ಕ್ರಮಗಳನ್ನು, ಉಸ್ತುವಾರಿಗೆ ಜನರ ನೇಮಕಗೊಂಡಿರುತ್ತಾರೆ. ಆದರೆ ಸರ್ಕಾರದ ವ್ಯವಸ್ಥೆಯೊಂದೇ ಸಾಕೆ? ಆಕರ್ಷಣೀಯ ಸ್ಥಳಗಳು ಎಂದ ಕ್ಷಣವೇ 10-20 ಸಣ್ಣ ಪುಟ್ಟ ಬೀದಿ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳು ತಲೆ ಎತ್ತುವುದು ಸಹಜ. 

ಪ್ರತಿಯೊಂದು ವ್ಯವಸ್ಥೆಯೂ ಯಶಸ್ವಿಯಾಗಲು ಜನರ ಸಹಕಾರ ಅತೀ ಮುಖ್ಯ. ಅನೇಕ ಕಡೆ ಕಸದ ಬುಟ್ಟಿ ಇದ್ದರೂ ಜನರು ಕಂಡಕಂಡಲ್ಲೆ ಕಸ ಹಾಕುವುದನ್ನು ನಾವು ನೋಡುತ್ತೇವೆ. ಇನ್ನು ಕೆಲವೆಡೆ ಕಾಡು-ಮೇಡು ,ನೀರಿರುವಂತಹ ನೈಸರ್ಗಿಕ ಸ್ಥಳದಲ್ಲಂತೂ ಕೇಳುವುದೇ ಬೇಡ, ಬೇಕೆಂದರಲ್ಲಿ ಕಸ ಎಸೆಯುವ, ಮದ್ಯಪಾನ ಮಾಡಿ ಬಾಟಲಿಗಳನ್ನು ಎಸೆಯುವಂತಹ ನೀಚ ಕೃತ್ಯ ಮಾಡುವ ಮನಸ್ಸಿಗರಿರುತ್ತಾರೆ. ಪ್ರವಾಸಿಗನಾಗಿ ನಮಗೆ ನಮ್ಮ ಧ್ಯೇಯವಿರಬೇಕು. 'ಇದೆಲ್ಲವೂ ನಮ್ಮ ಭೂಮಿ, ನಮ್ಮ ಸಂಸ್ಕೃತಿ, ನಮ್ಮ ಮಣ್ಣು, ನಮ್ಮ ಜಲ" ಎಂಬ ಆಳವಾದ ಮನೋಭಾವನೆ ನಮ್ಮಲ್ಲಿ ಬೇರೂರಿದರೆ ಮಾತ್ರ, ಮಾಲಿನ್ಯಕ್ಕೆ ನಮ್ಮಇಂದಾಗುವ ಕೊಡುಗೆಯನ್ನು ತಕ್ಕಮಟ್ಟಿಗೆ ತಪ್ಪಿಸಬಹುದು ಮತ್ತು ನಮ್ಮ ಮಕ್ಕಳಲ್ಲೂ ಈ ಭಾವನೆಯನ್ನು ಪೋಷಿಸಬಹುದು.
 
4. ಹೋಂಸ್ಟೇ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆ
ಯಾವುದೇ ಪ್ರಸಿದ್ಧ ಪ್ರವಾಸೀ ತಾಣಗಳಿಗೆ ನಾವು ಭೇಟಿ ನೀಡಿದರೂ ವಸತಿಗಾಗಿ ಪ್ರಸಿದ್ಧವಾಗಿರುವ ಹೋಟೆಲ್ ಅನ್ನು ಹುಡುಕುವ ಪರಿಪಾಠವಿರುತ್ತದೆ. ಆದರೆ ಪ್ರವಾಸದ ಯೋಜನೆ ನಿಮ್ಮದೇ ಹತೋಟಿಯಲ್ಲಿದ್ದರೆ ಒಮ್ಮೊಮ್ಮೆ ಹೋಂಸ್ಟೇ ಗಳನ್ನು ತಂಗಲು ಪ್ರಯತ್ನಿಸಿ. ಏಕೆಂದರೆ ಯಾವುದೇ ಸ್ಥಳದ ಕುರಿತಾಗಿ ಪ್ರವಾಸದ ಪಟ್ಟಿ, ಭೂಪಟದಲ್ಲಿ ಇರುವುದಕ್ಕಿಂತಲೂ, ಅಲ್ಲಿನ ಸ್ಥಳೀಯರಿಗೆ ಹೆಚ್ಚಿನ ಸ್ಥಳಗಳ ಮಾಹಿತಿ, ಆಗುಹೋಗುಗಳ ಅರಿವಿರುತ್ತದೆ. ಇದರ ಜೊತೆಗೆ ಹೋಂಸ್ಟೇ ಗಳೆಂದರೆ ಮನೆ ಅಥವಾ ಮನೆಯ ಒಂದು ಭಾಗವನ್ನು ಪ್ರವಾಸಿಗರಿಗೆ ಊಟ ಮತ್ತು ವಸತಿಗಾಗಿ ನೀಡಿ ಅದರಿಂದ ಆದಾಯ ಪಡೆಯುವ ಮಾರ್ಗ. ಹಾಗಾಗಿ ಹೋಂಸ್ಟೇ ನಡೆಸುವವರು ಪ್ರವಾಸಿಗರನನ್ನು ಆಕರ್ಷಿಸಲೆಂದೇ ಅಲ್ಲಿನ ಸಾಂಪ್ರದಾಯಿಕ ಅಡುಗೆ ಪದಾರ್ಥಗಳನ್ನು ತಯಾರಿಸುತ್ತಾರೆ. ಇದರ ಜೊತೆಗೆ, ಸಮಯದ ಅಭಾವ ಅಥವಾ ಇನ್ಯಾವುದೇ ಬದ್ಧತೆಯಿರದ ಪಕ್ಷದಲ್ಲಿ ಆದಷ್ಟು ಬಸ್ಸು, ಟಾಂಗಾ ಹೀಗೆ ಸ್ಥಳೀಯ ಸಾರ್ವಜನಿಕ ಸಾರಿಗೆ ಮಾಧ್ಯಮವನ್ನೇ ಬಳಸಿ ನೋಡಿ. 


ಪ್ರವಾಸ ಎಂಬುದು ಕೇವಲ ನಮ್ಮ ಕಥೆಯಲ್ಲ. ಪ್ರವಾಸದ ಸಮಯದ ಆಗುಹೋಗುಗಳು, ಹಾದಿಯುದ್ದಕ್ಕೂ ಸಿಗುವ ಜನರ ಕಥೆಗಳು, ಸನ್ನಿವೇಶಗಳು ಒಂದೊಂದು ಕಥೆಯನ್ನು ಅದರ ಜೊತೆಗೆ ಅನೇಕಾನೇಕ ಅನುಭವದ ಪಾಠಗಳನ್ನು ಕಲಿಸಿ ಹೋಗುತ್ತದೆ. ಪ್ರವಾಸದಿಂದ ಒಳ್ಳೊಳ್ಳೆಯ ನೆನಪುಗಳ ಬುತ್ತಿ ನಮ್ಮದಾಗುತ್ತದೆ. ಹಾಗಾಗಿ ಒಂದು ಉತ್ತಮ ಪ್ರವಾಸದ ನಿಲುವು ಮತ್ತು ಗೆಲುವು ಕೇವಲ ಪ್ರವಾಸೋದ್ಯಮ ಇಲಾಖೆ, ಸರ್ಕಾರ ಅಥವಾ ಇನ್ಯಾವುದೋ ಸಂಘ ಸಮೂಹದವರ ಜವಾಬ್ಧಾರಿ ಮಾತ್ರವಲ್ಲ. ಪ್ರವಾಸಿಗರಾಗಿ ನಮ್ಮಿಂದಲೂ ಕೂಡ ಅಷ್ಟೇ ಪ್ರಮಾಣದ ಹೆಮ್ಮೆ, ಪ್ರೀತಿ, ಕಾಳಜಿಯ ಅವಶ್ಯಕ. ಪ್ರವಾಸಿಗರ ಕರ್ತವ್ಯಕ್ಕೆ ಬದ್ಧರಾಗಿ ನಮ್ಮ ಪ್ರವಾಸವನ್ನು ಸುಖಿಸೋಣ.

ಸೌಮ್ಯಾ ಬೀನಾ ಇವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್.‌ ಬರವಣಿಗೆ, ಪ್ರವಾಸ, ಫೋಟೋಗ್ರಫಿ, ಆರ್ಟ್‌ ಖುಷಿ ಕೊಡುವ ಹವ್ಯಾಸಗಳು.