-ನವೀನಕೃಷ್ಣ ಎಸ್.
ಮ್ಮೊಮ್ಮೆ ಮನಸ್ಸು ತಳಮಳಗೊಂಡಾಗ ಒಬ್ಬಂಟಿಯಾಗಿರಲು ಬಯಸುತ್ತೇವೆ. ಆ ನೋವು ನಮ್ಮ ಹತ್ತಿರದವರಿಂದ ಆದರಂತೂ ಕೇಳುವುದೇ ಬೇಡ, ಎದುರಿಗೆ ಕಾಣಿಸುವುದೆಲ್ಲದರ ಮೇಲೂ ನಮ್ಮ ನಖಶಿಖಾಂತ ಸಿಟ್ಟನ್ನು ಹೊರಹಾಕಿಬಿಡುತ್ತೇವೆ. ಮಾನಸಿಕ ತೊಳಲಾಟಗಳಲ್ಲಿ ಮುಳುಗಿದ ಮನಸ್ಸನ್ನು ಹತೋಟಿಯಲ್ಲಿರಿಸಲು ದೀರ್ಘ ಸಮಯವೇ ಬೇಕಾಗುತ್ತದೆ. ಏಕಾಂಗಿಯಾಗಿದ್ದು ಮನಸ್ಸನ್ನು ಸ್ಥಿಮಿತದಲ್ಲಿರಿಸಿಕೊಳ್ಳೋಣವೆಂದರೆ ಸರಿಯಾದ ಜಾಗವೂ ಬೇಕಲ್ಲವೇ? ಅದಕ್ಕಾಗಿ ಚಿಂತಿಸಬೇಕಾದ ಅಗತ್ಯವಿಲ್ಲ. ನಿಸರ್ಗಧಾಮದಲ್ಲಿ ಇಂತಹ ಬೇಸರವನ್ನು ಕಳೆಯಲು ಸಾಕಷ್ಟು ಜಾಗಗಳಿವೆ. ಕೇವಲ ಅನ್ಯ ಉಪಯೋಗಗಳಿಗಾಗಿಯಲ್ಲದೇ ನಮ್ಮ ಚಿತ್ತಕ್ಷೋಭೆಯನ್ನೂ ಪರಿಹರಿಸಲು ಸೃಷ್ಟಿಕರ್ತ, ಪ್ರಕೃತಿಯೆಂಬ ವಿಸ್ಮಯದ ಆಗರವನ್ನು ಸೃಷ್ಟಿಸಿದನೇ? ಇದು ಬಹುಬೇಗ ಅರ್ಥವಾಗುವಂತಹದ್ದಲ್ಲ. ಪರಿಸರದ ಒಡಲಾಳದಲ್ಲಿ ಕಳೆದುಹೋದಾಗ ಮೌನವಾಗಿದ್ದುಕೊಂಡೇ ಕೌತುಕಗಳನ್ನು ವೀಕ್ಷಿಸಬೇಕು. ಮೌನವಾಗಿದ್ದರಷ್ಟೇ ನಮಗೆ ನಿಸರ್ಗದ ಭಾಷೆ ಅರ್ಥವಾಗಲು ಸಾಧ್ಯ. 'ಮೌನವೊಂದು ಜಗತ್ತಿನ ಅತಿದೊಡ್ಡ ಭಾಷೆ' ಎಂಬ ಪರಮಸತ್ಯ ನಮಗರಿವಾಗುವುದು ಇಲ್ಲಿಯೇ. ಪ್ರಕೃತಿ ಏನೇನೆಲ್ಲಾ ಕಲಿಸುತ್ತದೆ? ಇನ್ನು ನಮ್ಮ ಮಾನಸಿಕ ವಿಪ್ಲವವನ್ನು ದೂರಮಾಡುವುದಕ್ಕೆ ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಇಂತಹ ಒಂದು ಸಾಧ್ಯತೆಯನ್ನು ತೋರಿಸಿಕೊಡುವ ಅತ್ಯಂತ ಹೃದ್ಯ ಸ್ಥಳವೇ 'ಅಂಬಾತೀರ್ಥ'. 

'ಅಂಬಾತೀರ್ಥ' ಈ ಹೆಸರೇ ವಿಶಿಷ್ಠವಾಗಿದೆಯಲ್ಲವೇ? ಅಂದಹಾಗೆ ಅಂಬಾತೀರ್ಥ ಇರುವುದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ಕಳಸ ಪೇಟೆ ದಾಟಿ ಹೊರನಾಡು ರಸ್ತೆಯಲ್ಲಿ ಸ್ವಲ್ಪವೇ ಸ್ವಲ್ಪ ಸಾಗಿದಾಗ ರಸ್ತೆಯಿಂದ ಎಡಬದಿಗೆ ಕಾಣ ಸಿಗುವ Prince of Kalasa ಹೋಮ್ ಸ್ಟೇಯ ಬಲಬದಿಯ ಕಚ್ಚಾರಸ್ತೆಯಲ್ಲಿ 1.5 ಕಿಮೀ ಸಾಗಿದರೆ ಅಂಬಾತೀರ್ಥದ ಮಡಿಲಲ್ಲಿರುತ್ತೇವೆ. ಕಳಸ ಮುಖ್ಯಪೇಟೆಯಿಂದ ಅಂಬಾತೀರ್ಥಕ್ಕಿರುವ ದೂರ 2.7 ಕಿ.ಮೀ. ಆದರೆ ಹೋಮ್ ಸ್ಟೇ ನಿಂದ ಇರುವ ದಾರಿ ಮಾತ್ರ ಅಲ್ಲಲ್ಲಿ ಹದಗೆಟ್ಟಿದೆ. ಹಲವು ದೊಡ್ಡ ಗಾತ್ರದ ಗುಂಡಿಗಳಿದ್ದು ಕಾರಿನಲ್ಲೇನಾದರೂ ಪಯಣಿಸುವುದಿದ್ದರೆ ಬಹಳ ಜಾಗರೂಕರಾಗಿರಬೇಕು. ನಾವು ಒಂದು ಕಡೆ ಸಿಗುವ ಏರು ಹಾದಿಯ ಆರಂಭದಲ್ಲಿಯೇ ಕಾರನ್ನು ನಿಲುಗಡೆ ಮಾಡಿ ಸರಿಸುಮಾರು 600 ಮೀಟರುಗಳಷ್ಟು ನಡೆದು ಅಂಬಾತೀರ್ಥವನ್ನು ತಲುಪಿದ್ದೆವು. ಬಹುಶಃ ಬೈಕ್'ಗಳು ಅಂಬಾತೀರ್ಥದ ಸನಿಹದವರೆಗೂ ಹೋಗಬಹುದು. ಈ ಸಲ ಮುಸಲಧಾರೆಯ ಆರ್ಭಟ ಜೋರಿದ್ದ ಕಾರಣದಿಂದಲೋ ಏನೋ ಅಂಬಾತೀರ್ಥದ ಸಮೀಪದುದ್ದಕ್ಕೂ ರಸ್ತೆ ದುಸ್ಥಿತಿಯಲ್ಲಿದೆ. ಅಂಬಾತೀರ್ಥದ ಸನಿಹ ಇಳಿಜಾರಿನ ಪ್ರದೇಶವಾಗಿದ್ದು, ಹೇಗೆ ಹೋದರೂ 200 ಮೀಟರುಗಳಷ್ಟು ನಡೆದೇ ಸಾಗಬೇಕು. ಸಾಗುವ ಹಾದಿಯಲ್ಲಿ ಅಲ್ಲಲ್ಲಿ ಮನೆಗಳು, ಕಾಫಿ ತೋಟಗಳು ಕಾಣಸಿಗುತ್ತವೆ. ಪುಟ್ಟದಾದ ಮಲೆನಾಡಿನ ಹೆಂಚಿನ ಮನೆಗಳ ವೈವಿಧ್ಯಮಯ ವಿನ್ಯಾಸ, ಕಾಫೀತೋಟದ ಘಮ, ಕಾಫಿ ಗಿಡಗಳಿಗೆ ಮುತ್ತಿಕ್ಕುವ ಜೇನುನೊಣಗಳು, ಸೂರಕ್ಕಿಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ! ಈ ಖುಷಿ ವಾಹನಗಳಲ್ಲಿ ಪಯಣಿಸುವಾಗ ಸಿಗುವುದಿಲ್ಲ ಬಿಡಿ. ಹೀಗೆ ಸಂಜೆ ನಡೆದುಕೊಂಡು ಹೋಗುವಾಗ ನಾವೇನು ಅಂಬಾತೀರ್ಥಕ್ಕೆ ಹೋಗುತ್ತಿದ್ದೆವೇಯೋ ಅಥವಾ ಯಾರದ್ದೋ ತೋಟದೊಳಗೆ ಇಳಿಯುತ್ತಿದ್ದೇವೆಯೋ ಎಂದು ಭಾಸವಾಗುತ್ತದೆ. ಪ್ರದೇಶವಿಡೀ ಸ್ವಚ್ಛಂದವಾಗಿದ್ದು, ಶುದ್ಧ ಗಾಳಿಯನ್ನು ಉಸಿರಾಡಬಹುದು. ಪ್ರಥಮ ಮಳೆಯ ಅಮೃತಸಿಂಚನದ ಫಲವಾಗಿ ಹೊರಸೂಸುವ ಮಣ್ಣಿನ ಘಮವನ್ನು ಆಸ್ವಾದಿಸಲು ಅಂಬಾತೀರ್ಥದಂತಹ ಸ್ಥಳಗಳು ಹೇಳಿಮಾಡಿಸಿದ ಜಾಗಗಳು!

ಅಂಬಾತೀರ್ಥದ ಸಮೀಪ ಬಂದೆವೇನೋ ಎನ್ನಿಸುವಷ್ಟರಲ್ಲಿ ' Danger place - ಈ ಜಾಗದಲ್ಲಿ ಸುಳಿ ಇರುವುದರಿಂದ ಯಾರೂ ಈಜಬಾರದು' ಎಂಬ ಫಲಕವನ್ನು ಕಾಣುತ್ತೇವೆ. ಹೌದು, ಅಂಬಾತೀರ್ಥ ಕಳಸದ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲೊಂದಾಗಿದೆ. ಅದೇನೇ ಇದ್ದರೂ ಪ್ರಕೃತಿಯ ಚೆಲುವು ಗೆಲುವುಗಳನ್ನು ದೂರದಿಂದ ವೀಕ್ಷಿಸಿದರೇ ಚಂದ. ಹೀಗೆ ಕಲ್ಲುಬಂಡೆಗಳ ಮೇಲೆ ಕಾಲಿರಿಸುತ್ತಾ ಸಾಗಿದಾಗ ಸೌಂದರ್ಯದ ಪರಾಕಾಷ್ಠತೆಯನ್ನು ಪ್ರಕೃತಿಯಲ್ಲಿ ಕಾಣುತ್ತೇವೆ. ಜುಳುಜುಳು ನಿನಾದದೊಂದಿಗೆ ಶಿಲೆಗಳ ಮಧ್ಯೆ ಭೋರ್ಗರೆಯುತ್ತಾ ಹರಿಯುವ ಅಂಬಾತೀರ್ಥದ ಸೊಬಗೇ ಬೇರೆಯ ತೆರನಾದದ್ದು. ಸೂರ್ಯಾಸ್ತದ ಆಹ್ಲಾದಕರ ಸಮಯದಲ್ಲಿ ಹೋದರಂತೂ ಸೂರ್ಯನ ಕಿರಣಗಳ ಪ್ರತಿಫಲನವನ್ನು ನೀರಿನಲ್ಲಿ ಕಾಣುತ್ತಾ ಅನುಪಮ ಸೌಂದರ್ಯಾನುಭೂತಿಯನ್ನು ಹೊಂದಬಹುದು. ನೀರಿನ ಮಧ್ಯದಲ್ಲಿರುವ ಕಲ್ಲುಗಳಲ್ಲಿ ಹಲವಾರು ಸುಂದರ ಕೆತ್ತನೆಗಳಿದ್ದು ನಮ್ಮನ್ನೊಮ್ಮೆ ಪ್ರಾಚೀನ ಅವಶೇಷಗಳ ಗರ್ಭದತ್ತ ಸೆಳೆಯುತ್ತದೆ. ಅಂಬಾತೀರ್ಥದ ಒಂದು ಮಗ್ಗುಲಲ್ಲಿರುವ ಪಶ್ಚಿಮಘಟ್ಟದ ಪರ್ವತಶ್ರೇಣಿಗಳನ್ನು ನೋಡಿದರೆ ನಾನೇ ಚೆಂದ ಅಲ್ಲವೇ? ಎಂದು ನಮ್ಮನ್ನು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತದೆ! ನೀರು ಹರಿಯುವ ಪ್ರದೇಶದ ಎಡಭಾಗದಲ್ಲಿ ಕೆಲವು ಮನೆಗಳನ್ನೂ ಕಾಣಬಹುದಾಗಿದೆ. 

ಅಂಬಾತೀರ್ಥದ ಭವ್ಯತೆಯನ್ನು ಕಣ್ತುಂಬಿಸಿಕೊಳ್ಳಲು ನಿಸರ್ಗವೇ ತಾಣವನ್ನು ಒದಗಿಸಿದೆ. ಕಲ್ಲುಬಂಡೆಗಳ ಮೇಲೆ ಕಾಲುಚಾಚಿ ಪ್ರಕೃತಿಯಲ್ಲೊಮ್ಮೆ ಕಳೆದು ಹೋಗಬೇಕು. ನಮ್ಮೆಲ್ಲಾ ದು:ಖದುಮ್ಮಾನಗಳನ್ನು ಮರೆತು ಪರಿಸರವೆಂಬ ಮಾಯಾಲೋಕವನ್ನು ಸ್ಪರ್ಶಿಸಬೇಕು. ಹಾಗೆಂದು ಜಾಗರೂಕತೆಯನ್ನು ವಹಿಸುವುದು ಇಲ್ಲಿ ಅಗತ್ಯವೇ ಆಗಿದೆ. ಮಳೆಗಾಲದಲ್ಲಾದರೆ ಕಲ್ಲುಬಂಡೆಗಳು ಜಾರುವ ಸಂಭವವಿದ್ದು, ಅದರ ಜೊತೆಗೆ ಬಹುತೇಕ ಶಿಲೆಗಳ ಸಮೂಹ ಇಳಿಜಾರಾಗಿಯೇ ರೂಪುಗೊಂಡಿದೆ. ಹಾಗೆ ಹೇಳುವುದಿದ್ದರೆ ನೀರಿಗೆ ಇಳಿಯದಿರುವುದೇ ವಾಸಿ. ಅಲ್ಲಲ್ಲಿ ಹುಟ್ಟಿಕೊಂಡಿರುವ ಸುಳಿಗಳೇ ಇದಕ್ಕೆ ಕಾರಣ. ಸ್ಥಳೀಯರು ಹೇಳುವ ಪ್ರಕಾರ ಇಲ್ಲಿ ವರ್ಷದಲ್ಲಿ ಒಂದಿಲ್ಲೊಂದು ಸಾವು-ನೋವು ಸಂಭವಿಸುತ್ತಲೇ ಇದೆ. ಹಾಗಾಗಿಯೇ ಇದು Most Dangerous Place ಎಂದು ಖ್ಯಾತಿವೆತ್ತಿದ್ದು ಇರಬೇಕು!

ಅಂಬಾತೀರ್ಥದ ಬಹುಮುಖ್ಯ ವಿಶೇಷವೆಂದರೆ ಕನ್ನಡದ ವರನಟ ಎಂದೇ ನೆಗಳ್ತೆಯನ್ನು ಪಡೆದ ಡಾ. ರಾಜಕುಮಾರ್ ಅವರು ನಟಿಸಿದ 'ನಾ ನಿನ್ನ ಮರೆಯಲಾರೆ' ಚಲನಚಿತ್ರದ 'ಎಲ್ಲೆಲ್ಲಿ ನೋಡುವೆ ನಿನ್ನನ್ನೇ ಕಾಣುವೆ' ಎಂಬ ಪದ್ಯದ ಚಿತ್ರೀಕರಣ ನಡೆದದ್ದು ಇದೇ ಅಂಬಾತೀರ್ಥದ ಮಡಿಲಲ್ಲಿ. ಜೊತೆಗೆ ಕನ್ನಡದ ಮತ್ತೊಬ್ಬ ಭರವಸೆಯ ನಟ ರವಿಚಂದ್ರನ್ ಅವರ 'ರಣಧೀರ' ಸಿನೆಮಾದ 'ಯಾರೇ ನೀನು ಸುಂದರ ಚೆಲುವೆ' ಎನ್ನುವ ಹಾಡಿನ ಚಿತ್ರೀಕರಣವೂ ಇಲ್ಲಿ ನಡೆದಿರುವುದು ಅಂಬಾತೀರ್ಥದ ಹೆಗ್ಗಳಿಕೆ. ಸ್ಥಳೀಯರು ಯಾರಾದರೂ ನಮ್ಮೊಡನೆ ಮಾತಿಗೆ ಸಿಕ್ಕಿರೆ ಅಂಬಾತೀರ್ಥದ ಕುರಿತಾದ ಇನ್ನಷ್ಟು ರೋಚಕ ಕಥೆಗಳನ್ನು ನಮ್ಮ ಮುಂದಿಡುತ್ತಾರೆ. ಮಹಾಭಾರತದ ಭೀಮ ಅಂಬಾತೀರ್ಥದಲ್ಲಿ ಜಲಕ್ರೀಡೆಯಾಡಿದನೆಂಬ ಪ್ರತೀತಿ ಇರುವುದರಿಂದ ಪ್ರತೀ ವರ್ಷವೂ ಭೀಮನ ಅಮಾವಾಸ್ಯೆಯ ಸಮಯದಲ್ಲಿ ಇಲ್ಲಿ ಬಗೆಬಗೆಯ ಪೂಜೆಗಳು, ಭೋಜನ ಸಮಾರಾಧನೆಗಳು ಜರಗುತ್ತವೆ. ಅಂಬಾತೀರ್ಥದೊಡನೆ ಊರ ಜನ ಹೊಂದಿರುವ ನಂಟೂ ವಿಶಿಷ್ಠವಾದದ್ದೇ. 

ಕೆಲಸದ ನಡುವೆ ಬಿಡುವಿದ್ದಾಗ ಕಳಸದ ಸ್ಥಳೀಯರು ಇಲ್ಲಿ ಮೀನಿಗಾಗಿ ಹೊಂಚುಹಾಕುತ್ತಾ ಕುಳಿತಿರುತ್ತಾರೆ. ಹಾಗಂತ ಮೀನುಗಾರಿಕೆ ಒಂದು ಉದ್ಯಮವಾಗಿಲ್ಲ. ಸಮಯ ಕಳೆಯುವುದಕ್ಕೊಂದು ಹವ್ಯಾಸವಾಗಿ ಮೀನುಗಾರಿಕೆ ಉಳಿದುಕೊಂಡಿದೆ. ಅಂಬಾತೀರ್ಥದ ಬಲಬದಿಗೆ ಸಾಗುತ್ತಾ ಹೋದರೆ ಕೆಲವು ಕಡೆ ಆಳಗಳಿಲ್ಲದ ಪ್ರದೇಶಗಳಿವೆ. ಅಲ್ಲಿ ಚಿಪ್ಪುಗಳೋ ಇನ್ನಿತರ ದಂಡೆಯ ವಸ್ತುಗಳು ಹೇರಳವಾಗಿ ಲಭ್ಯವಿದೆ. ಕಳಸ ಪೇಟೆಯಿಂದ 8 ಕಿಮೀ ಅಂತರದಲ್ಲಿ 5 ಪ್ರಮುಖ ತೀರ್ಥ ತಾಣಗಳಿದ್ದು ಅವು ಪಂಚತೀರ್ಥಗಳೆಂದೇ ಪ್ರಸಿದ್ಧವಾಗಿವೆ. ಇವು ಹಿಂದೂ ಪುರಾಣಗಳ ಪ್ರಕಾರ ಪ್ರಮುಖ ಸ್ಥಾನವನ್ನು ಪಡೆದಿದ್ದು, ಈ ಪಂಚತೀರ್ಥಗಳು ಅಂಬಾತೀರ್ಥವನ್ನು ಸೇರಿದಂತೆ ವಸಿಷ್ಠ ತೀರ್ಥ,ನಾಗ ತೀರ್ಥ,ಕೋಟಿ ತೀರ್ಥ,ರುದ್ರತೀರ್ಥವನ್ನು ಒಳಗೊಂಡಿದೆ. ಸಾಧ್ಯವಾದರೆ ಕಳಸಕ್ಕೆ ನೀವು ಬಂದಲ್ಲಿ ಪಂಚತೀರ್ಥಗಳನ್ನು ದರ್ಶಿಸಲು ಮರೆಯದಿರಿ.

(ಲೇಖಕರು ಪುತ್ತೂರಿನ ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿ ಮತ್ತು ಹವ್ಯಾಸಿ ಬರಹಗಾರ)