-ದಿವ್ಯಶ್ರೀ ಹೆಗಡೆ
ಶೈಕ್ಷಣಿಕ ವರ್ಷ ಪ್ರಾರಂಭವಾಗುವುದೇ ಜೂನ್ ಇಂದ. ಅಂದು ಶಾಲೆಗೆ ಹೋಗಿ ಬರುವೆ ಎಂದು ಬ್ಯಾಗ್ ಬೆನ್ನಿಗೇರಿಸಿ ಹೊರಟ ಸಮಯ. ಮೊದಲ ದಿನ ಶಾಲೆಯ ಪ್ರಾರಂಭೋತ್ಸವ. ಶಾಲೆಗೆ ಹೋಗುವ ಆತುರ ಒಂದೆಡೆ, ಮೊದಲ ದಿನ ಅಲ್ವಾ ಅದಕ್ಕಾಗಿ, ಆಗ "ರಾಜ್ಯದಲ್ಲಿ ಎರಡು ದಿನದ ಒಳಗಾಗಿ ಮಾನ್ಸೂನ್ ಆಗಮನ" ಅಂತಾ ಟಿವಿಯಲ್ಲಿ ಬಂದಂತಹ ಹೆಡ್‌ಲೈನ್ ಕಿವಿ ಪ್ರವೇಶಿಸಿದರೂ ಅಷ್ಟೇನು ಲಕ್ಷ ಕೊಡದೆ ಸಾಗೆ ಬಿಟ್ಟಿದೆ ಪಯಣ ಶಾಲೆ ಕಡೆಗೆ! ಅಮ್ಮ ಮನೆ ಇಂದ ಕೂಗಿದ್ದು ಅಲ್ಪ ಸ್ವಲ್ಪಾ ಕಿವಿಯನ್ನು ತಲುಪಿದೆ "ಮೋಡ ಆಗಿದೆ ಮಳೆ ಬರಬಹುದು ಛತ್ರಿಯನ್ನಾದರೂ ತೆಗೆದುಕೊಂಡು ಹೋಗು ಪುಟ್ಟಾ" ಅಂತಾ, ಆದರೆ ಮೊದಲೇ ಶಾಲೆಗೆ ತಡವಾಗಿದೆ ಈಗ ಮತ್ತೆ ಛತ್ರಿ ಬೇಕಾ? ಎಂದು ಮನಸು ಹೇಳೇ ಬಿಡ್ತು, ಇವತ್ತು ಮಳೆ ಬರಲ್ಲಾ ನನಗೆ ಲೇಟ್ ಆಯ್ತು ಅಂತಾ ಬಾಯಿ ಹೇಳಿಯೇ ಬಿಟ್ಟಿದೆ. ಹಾಗೆ ಕಾಲು ಸಹ ಓಡಿದೆ ಶಾಲೆ ಕಡೆ. ಹಾಗೆ ಹೀಗೆ ಅಂತಾ ಶಾಲಾ ಪ್ರಾರಂಭದ ಉತ್ಸವ ಏನೋ ಮುಗೀತು. ಆದ್ರೆ ಅಂದೇ ಮಳೆರಾಯನ ಪ್ರಾರಂಭ ಅಂತ ಯಾರಿಗ್ ತಾನೇ ಗೊತ್ತಿತ್ತು?! ಮೊದಲೇ ಛತ್ರಿನೂ ಬಿಟ್ಟು ಬಂದಿದೀನಿ ಅಂತಾ ಯೋಚಿಸೋ ಅಷ್ಟರಲ್ಲಿ ಮಳೆರಾಯನ ಒಂದೊಂದೇ ಹನಿ ಭೂಮಿಯನ್ನು ಮುತ್ತಿಕ್ಕಲು ತವಕಿಸುತ್ತಿದೆ. ಸಣ್ಣ ಪ್ರಮಾಣದ ಗುಡುಗು ಅಷ್ಟೇ! 

ಹಾಗೆ ನೋಡ್ ನೋಡೋ ಅಷ್ಟರಲ್ಲಿ ಮಳೆಯ ಆಗಮನವು ಒಂದು ಕಡೆ ಆದರೂ ಮನೆಗೆ ಹೋಗೋ ಕಾತುರಕ್ಕಿಂತ ಮಳೆಯಲ್ಲಿ ಆಡುವ ಆತುರ. ಅದೇ ಸಮಯಕ್ಕೆ ಸರಿಯಾಗಿ ಶಾಲೆಯ ಗಂಟೆ ಟ್ರಣ್.... ಎಂದು ಬಾರಿಸಿದೆ. ಖುಷಿಯೇ ಖುಷಿ! ಬ್ಯಾಗ್ ಬೆನ್ನಿಗೇರಿಸಿ ಓಡಿದ್ದೇ ಓಡಿದ್ದು. ಮಳೆಯಲ್ಲಿ ಕುಣಿಯೊ ಆಸೆಗೆ ಮಳೆಯೂ ಅದಕ್ಕೆ ತಂಪ ಎರಚಿದೆ. ಧೋ..... ಎಂದು ಮಳೆ ಬರ್ತಿದ್ರೆ, ಹೋ ಎಂದು ಕೂಗು ಹಾಕುತಾ ಕುಣಿಯುತ್ತಾ ಸಾಗುತಿದೆ ಪಯಣ ಮನೆಯ ಕಡೆ. ಹಾಗೆ ಹೀಗೆ ಆಟ ಆಡ್ತಾ ಹಳ್ಳ ಕೊಳ್ಳ ದಾಟುತ ಹೊರಟೆವು. ಮೊದಲೇ ಮಳೆಯಲ್ಲಿ ತೊಯ್ದು ಒದ್ದೆ ಆಗಿದ್ದ ಮೈಗೆ ಮತ್ತಷ್ಟು ನೀರನ್ನು ಎರಚುತ ಮನೆಯ ಬಾಗಿಲಿಗೆ ಬರುವಾಗಲೆ ಎದುರಾದ ಅಮ್ಮ. ಆಗ ತಲೆಗೆ ಹೋಯ್ತು ಮಳೆಯಲ್ಲಿ ತೊಯ್ದು ಬಂದಿದೀವಿ ಮನೆಯಲ್ಲಿ ಬೈಗುಳ ಗ್ಯಾರಂಟಿ ಅಂತಾ! ಆದ್ರೂ ಅಮ್ಮನಲ್ಲಿ ಮಳೆಯ ಮೇಲೆಯೇ ಕಂಪ್ಲೇಂಟ್. ನಮಗೆ ಶಾಲೆ ಬಿಟ್ಟಾಗಲೇ ಮಳೆ ಬಂತು ಅಮ್ಮಾ ನಾವು ಮಳೆಯಲ್ಲಿ ನೆನೆಯಬಾರದು ಅಂತಾನೆ ಇದಿದ್ವಿ ಆದ್ರೆ ಏನ್ ಮಾಡೋದು? ಅಂತ ಅಮಾಯಕರಂತೆ ದೂರನ್ನು ನೀಡುತ್ತಾ ಮನೆಯ ಬಾಗಿಲಲ್ಲಿ ಕಾಲಿರಿಸಿದ್ದಷ್ಟೇ ಆಕ್ಶಿಮ್.. ಎಂದು ಸೀನು ಒಂದರ ನಂತರ ಒಂದರಂತೆ. ಆಗ ಶುರುವಾಯ್ತು ಬೈಗುಳಗಳ ಸರಮಾಲೆ! ಬೆಳಿಗ್ಗೆನೇ ಹೇಳಿದ್ವಿ ಛತ್ರಿ ತಗೊಂಡು ಹೋಗು ಅಂತಾ ಅದು ಬೇಡ ಮಳೆ ಬರ್ತಾ ಇದೆ ಅಂತಾ ಅಪ್ಪ ಛತ್ರಿ ತಗೊಂಡು ಬಂದ್ರೆ ನೀವ್ ಯಾವ್ದೋ ರೋಡ ಅಲ್ಲಿ ಬಂದಿದ್ರಿ ಮಳೆಯಲ್ಲಿ ನೆನೆದು ಜ್ವರ ಗಿರ ಹೀಗೆ ಬೈಗುಳ ಮುಂದುವರಿಯುತ್ತಲೇ ಇತ್ತು. 

ಆ ಮೊದಲ ಮಳೆಯ ನೆನಪ ನೆನೆಯುತ ಈ ದಿನ ನಗುವಿನ ಜೊತೆ ಮುಕ್ತಾಯವಾಗುತಿದೆ. ಬಾಲ್ಯದ ನೆನಪಲಿ ನಾನು ನೆನೆಯುತ್ತಾ ನಗುತ್ತಿದ್ದರೆ, ಭುವಿಯು ಇಂದು ತನ್ನ ಮೊದಲ ಮಳೆಗೆ ತಂಪಾಗಿ ನೆನೆದು ನಗುವ ಬೀರುತಿದೆ.

(ಲೇಖಕರು ಅಂತಿಮ ವರ್ಷದ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ, ಎಸ್‌ಡಿಎಂ ಕಾಲೇಜು ಉಜಿರೆ)