-ಅಂಜನಾ ಹೆಗಡೆ
"ಎಮ್ಮನೆ ಮಾಣಿ ಶಾಲಿಗೋಗ್ತಾ ಎಂತದೂ ಬತ್ತಿಲ್ಲೆ. ತ್ವಾಟಕ್ಕೋಕ್ಯ ಬೀಡಿ ಸೇದ್ತಾ ಹೊಗೆನೇ ಬತ್ತಿಲ್ಲೆ"
ಜೋರಾಗಿ ಹಾಡುತ್ತ ಸಂಚಿಮಳ್ಳು ಒಡ್ಡೆತಲೆ ಇಳಿಯುವ ಹೊತ್ತಿಗೆ ಸರಸತ್ಗೆ ಊಟ ಮುಗಿಸಿ ಪಾತ್ರೆ ತೊಳೆದು ದೇವರಮನೆಯಲ್ಲಿ ಕವುಚಿಟ್ಟು ಅಲ್ಲೇ ಒಂದು ಕಂಬಳಿ ಹಾಸಿಕೊಂಡು ಅಡ್ಡಾಗಿದ್ದಳು. "ಬ್ಯಾಶ್ಗೆ ಬಂದ್ರೆ ಸಾಕು ಈ ನೊಣದ ಕಾಟ ತಾಳಲಾಗ್ತಿಲ್ಲೆ" ಎಂದು ಗೊಣಗುತ್ತ ಹೆಗಲಮೇಲಿದ್ದ ಟವೆಲ್ಲನ್ನೇ ಮುಖದ ಮೇಲೆ ಹಾಕಿಕೊಂಡು ರಾಮಣ್ಣ ಜಗಲಿಯ ಮೂಲೆಯಲ್ಲಿದ್ದ ಮಂಚದಮೇಲೆ ಮಲಗಿ ಗೊರಕೆ ತೆಗೆಯುತ್ತಿದ್ದ. "ಈ ಸುಟ್ ಹುಡ್ರು ಒಂದ್ ಗಳಿಗೆ ಬಾಯಿ ಮುಚ್ಚಿದ್ರೆ ಗನಾ ನಿದ್ರೆ ಆದ್ರೂ ಬತ್ತಿತ್ತು" ಎಂದು ಮೊಮ್ಮಕ್ಕಳಿಗೆ ಬಯ್ಯುತ್ತಲೇ ಸಾತಜ್ಜಿ ಮಾಳಿಗೆಯಲ್ಲಿ ಹಾಸಿಗೆ ಬಿಡಿಸುತ್ತಿದ್ದವಳು ಸಂಚಿಮಳ್ಳು ಬಂದಿದ್ದು ಗೊತ್ತಾಗಿ ಜಗಲಿಗೆ ಬಂದಳು. ಹಿಮ್ಮಡಿಯ ಜಾಗದಲ್ಲಿ ಸವೆದು ತೂತಾಗಿದ್ದ ಹವಾಯಿ ಚಪ್ಪಲಿಯನ್ನು ಕೈಯಿಂದ ತೆಗೆದು ಕಿಟಕಿಯ ಸರಳುಗಳ ಮಧ್ಯದಲ್ಲಿ ಸಿಕ್ಕಿಸಿಟ್ಟ ಸಂಚಿಮಳ್ಳು "ಓಹೋ ಸಾತಜ್ಜಿ ಆರಾಮಿದ್ಯನೇ?" ಎಂದು ಕೇಳುತ್ತ ಸಂಚಿಯಿಂದ ಎರಡು ಪೇರಲೆಹಣ್ಣು ತೆಗೆದು ಅವಳ ಕೈಗೆ ಕೊಟ್ಟ. ಸಾತಜ್ಜಿ ಅವುಗಳನ್ನು ಸೆರಗಿನಿಂದ ಒರೆಸುತ್ತ, "ಬಂದ್ಯ, ಬಾ. ನೀ ಒಬ್ಬಂವ ಕಡಿಮೆ ಇದ್ದಿದ್ದೆ ಗಲಾಟೆ ಮಾಡಲೆ" ಎನ್ನುತ್ತ ಅಡುಗೆಮನೆಗೆ ಹೋದಳು.
ಇವರಿಬ್ಬರ ಮಾತುಕತೆಯಿಂದ ಆಗಷ್ಟೇ ಕಾಲುಚಾಚಿದ್ದ ಸರಸತ್ಗೆ ಎದ್ದು ಬಟ್ಟಲು, ಎರಡು ನೀರಿನ ಲೋಟಗಳನ್ನು ಇಟ್ಟು ಮಣೆ ಹಾಕುವಷ್ಟರಲ್ಲಿ ಸಂಚಿಮಳ್ಳು ಒಳಗೆ ಬಂದು, "ಅತ್ಗೆ, ಉಚ್ಚೆ ಹೊಯ್ದಿಕ್ಕೆ ಬತ್ನೇ" ಎನ್ನುತ್ತ ಬಚ್ಚಲುಮನೆಗೆ ಹೋದ. ಅವನು ಹಾಗೆ ಹಲುಬುವುದು ಹೊಸತೇನೂ ಅಲ್ಲದ ಕಾರಣ ಸರಸತ್ಗೆ ಅವನ ಮಾತಿಗೆ ಉತ್ತರಿಸದೇ ಮಾಳಿಗೆಯಿಂದ ಟವೆಲ್ಲು ತಂದು ಕಿಟಕಿಯ ಮೇಲಿಟ್ಟಳು. ಕಾಟಾಚಾರಕ್ಕೆ ಕೈಕಾಲುಗಳನ್ನು ಒದ್ದೆ ಮಾಡಿಕೊಂಡು "ಗುಲಾಮ ನನ್ನ ಮಗ ದಿವಾಳಿ ಹನುಮ" ಎಂದು ಗಂಭೀರವಾಗಿ ಹಾಡಿಕೊಳ್ಳುತ್ತ ಒಳಗೆ ಬಂದ ಸಂಚಿಮಳ್ಳು ಟವೆಲ್ಲಿನ ಸುದ್ದಿಗೇ ಹೋಗದೇ ಶರ್ಟು-ಬನಿಯನ್ನು ತೆಗೆದು, ಬನಿಯನ್ನಿನಿಂದಲೇ ಕೈಕಾಲು ಒರೆಸಿಕೊಂಡು ಮಣೆಯಮೇಲೆ ಆಸೀನನಾದ. ಅನ್ನದ ಬಟ್ಟಲಿಗೆ ಕೈಮುಗಿದವನೇ "ಬಡವಾ ನೀ ಮಡಗದಾಂಗಿರು" ಎನ್ನುತ್ತ ಜನಿವಾರವನ್ನು ತೆಗೆದು ಲೋಟದಲ್ಲಿದ್ದ ನೀರಲ್ಲಿ ನೆನೆಸಿಟ್ಟು, ಇನ್ನೊಂದು ಲೋಟದಲ್ಲಿದ್ದ ನೀರನ್ನು ಗಟಗಟ ಕುಡಿದವನೇ ಊಟ ಮಾಡಲಾರಂಭಿಸಿದ. ಸಂಚಿಮಳ್ಳು ಬಂದ ವಿಷಯ ಗೊತ್ತಾಗಿ ಗೋವಿಂದಣ್ಣನ ಮನೆಯಲ್ಲಿ ಕೇರಂ ಆಡುತ್ತಿದ್ದ ಮಕ್ಕಳ ಪಟಾಲಂ ಬಂದು ಅವನನ್ನು ಸುತ್ತುವರಿಯಿತು.
ಸಂಚಿಮಳ್ಳು ಆ ಹೆಸರನ್ನು ಪಡೆದುಕೊಂಡ ಹಿಂದೆ ಹಲವಾರು ಕತೆಗಳಿದ್ದವು. ಅವನು ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ತನ್ನೊಂದಿಗೆ ಹೊತ್ತು ತಿರುಗುತ್ತಿರುವ ಜೋಳಿಗೆಯಂಥ ಸಂಚಿಯಿಂದಾಗಿ ಆ ಹೆಸರು ಬಂತೆಂದು ಹಲವರು ಹೇಳಿದರೆ, ಅವನು ಪ್ರಾಯಕಾಲದಲ್ಲಿ ಸಂಚಿಯಲ್ಲಿ ಚಾಪುಡಿ ಮಾರುತ್ತಿದ್ದನೆಂದು ಇನ್ನು ಕೆಲವರು ಹೇಳುತ್ತಿದ್ದರು. ಸಂಚಿಕೊಪ್ಪದ ಹುಡುಗಿಯೊಬ್ಬಳನ್ನು ಪ್ರೀತಿಸಿ, ಅವಳು ಬೇರೆಯವನನ್ನು ಮದುವೆಯಾದ ಕಾರಣಕ್ಕೆ ಇವನಿಗೆ ಹುಚ್ಚುಹಿಡಿದು ಆ ಹೆಸರು ಬಂತು ಎನ್ನುವ ಕತೆ ಜಾಸ್ತಿ ಪ್ರಚಲಿತದಲ್ಲಿತ್ತು. ಯಾವುದು ನಿಜ, ಯಾವುದು ಕಟ್ಟುಕತೆ ಎಂದು ಪರಾಂಬರಿಸಿ ನೋಡುವಷ್ಟು ಉಮೇದಾಗಲೀ ಅಥವಾ ಅಗತ್ಯವಾಗಲೀ ಯಾರಿಗೂ ಇರಲಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಂಡಕಂಡವರ ಮನೆಗೆ ಹೋಗುತ್ತ, ಯಾರದೋ ಮನೆಯ ಪೇರಲೆಹಣ್ಣು-ಹಲಸಿನಕಾಯಿ ಕೊಯ್ದು ಇನ್ಯಾರಿಗೋ ಕೊಡುತ್ತ ಸಂಚಿಮಳ್ಳು ಮಾತ್ರ ಜಗದ ಜಂಜಡಕ್ಕೆ ಸಿಲುಕದ ಸರದಾರನಂತೆ ಓಡಾಡಿಕೊಂಡಿದ್ದ.
ಊಟ ಮುಗಿಸಿ ಲೋಟದಲ್ಲಿ ಅದ್ದಿಟ್ಟಿದ್ದ ಜನಿವಾರವನ್ನು ಮತ್ತೆ ಹಾಕಿಕೊಂಡವನೇ "ಓ ಅಲ್ಲಿ ಒಡ್ಡೆತಲೆಲ್ಲಿ ಒಂದು ಹಲಸಿನಕಾಯಿ ಇಟ್ಟಿಕ್ಕೆ ಬಂಜಿ. ತಂದ್ಬುಡನ ಬನ್ನಿ" ಎನ್ನುತ್ತ ಮಕ್ಕಳ ಸೈನ್ಯದೊಂದಿಗೆ ಹೊರಬಿದ್ದ. ಒಡ್ಡೆತಲೆಗೆ ಆ ಹೆಸರು ಹೇಗೆ ಬಂತು ಎನ್ನುವ ಪ್ರಶ್ನೆಯನ್ನು ಸಂಚಿಮಳ್ಳು ರಾಮಣ್ಣನ ಹತ್ತಿರ ಪ್ರತಿಸಲ ಬಂದಾಗಲೂ ಕೇಳುತ್ತಿದ್ದ. ತನಗೇ ಗೊತ್ತಿರದ ಒಡ್ಡೆತಲೆ ವಿಷಯವನ್ನು ಇವನಿಗೆ ಹೇಗೆ ವಿವರಿಸುವುದು ಎಂದು ತಲೆಕೆರೆದುಕೊಳ್ಳುತ್ತ ರಾಮಣ್ಣ ವಿಷಯ ಬದಲಾಯಿಸಲು ಪ್ರಯತ್ನಿಸುತ್ತಿದ್ದ. ಈ ಸಲ ಮಾತ್ರ ಪಟ್ಟುಬಿಡದೇ ಸಂಚಿಮಳ್ಳು ಹಲಸಿನಕಾಯಿ ತಂದು ಅಂಗಳದಲ್ಲಿಟ್ಟವನೇ ಅಲ್ಲೇ ಕಟ್ಟೆಯಮೇಲೆ ಕುಳಿತಿದ್ದ ಸಾತಜ್ಜಿಯ ಹತ್ತಿರ ಮತ್ತೆ ಒಡ್ಡೆತಲೆಯ ಸುದ್ದಿ ತೆಗೆದ. ಸಾತಜ್ಜಿ ಒಂದೊಂದೇ ಕೈಬೆರಳುಗಳನ್ನು ಮಡಚುತ್ತ "ಅದು ಸುಮಾರು ಅರವತ್ತು ವರ್ಷದ ಹಿಂದಿನ ಕತೆ. ನೀ ಇನ್ನೂ ಹುಟ್ಟಿದ್ದಿಲ್ಲೆ ಆವಾಗ" ಎನ್ನುತ್ತ ಕವಳದ ಸಂಚಿ ಬಿಚ್ಚಿದಳು.
ಸಾತಜ್ಜಿಯ ಗಂಡ ಪರಮಜ್ಜ ಅಂಕೋಲೆಯ ಕಡೆಯಿಂದ ಗೇರುಬೀಜದ ವ್ಯಾಪಾರಕ್ಕೆಂದು ಬರುತ್ತಿದ್ದವ ಪಟೇಲರ ಮನೆಯೆಂದೇ ಹೆಸರುವಾಸಿಯಾಗಿದ್ದ ದತ್ತಪ್ಪನ ಮನೆಯಲ್ಲಿ ರಾತ್ರಿ ಉಳಿದುಕೊಳ್ಳುವುದು ಸಂಪ್ರದಾಯವಾಗಿತ್ತು. ಗೇರು ಫಸಲು ಚೆನ್ನಾಗಿದ್ದ ಒಂದು ವರ್ಷ ದತ್ತಪ್ಪನ ಕೈಗೆ ಆ ವರ್ಷದ ಫಸಲನ್ನೆಲ್ಲ ಕೊಟ್ಟು ಅತ್ತ ಬೆಟ್ಟವೂ ಅಲ್ಲದ ಬ್ಯಾಣವೂ ಅಲ್ಲದ ಹೊಳೆಪಕ್ಕದ ಹತ್ತು ಎಕರೆ ಜಾಗವನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ. ಗೆಳೆಯನಂತಿದ್ದ ಮನೆಯ ಆಳು ರಾಮಚಂದ್ರನೊಂದಿಗೆ ಇಲ್ಲೇ ಒಂದು ಬಿಡಾರ ಕಟ್ಟಿಕೊಂಡು ಅಷ್ಟಷ್ಟೇ ಜಾಗವನ್ನು ಹದಮಾಡಿ ನಾಲ್ಕೈದು ವರ್ಷಗಳಲ್ಲಿ ಒಂದು ಎಕರೆ ಬಾಳೆತೋಟ ಮಾಡಿ ಅಡಿಕೆಯನ್ನೂ ನೆಟ್ಟಿದ್ದ. ಜೀವವಿರುವವರೆಗೂ ದುಡಿದು ನಾಲ್ಕೆಕರೆ ಅಡಿಕೆತೋಟ, ಎರಡೆಕರೆ ಗೆದ್ದೆ ಮಾಡಿ ರಾಮಚಂದ್ರನೊಂದಿಗೆ ಮಾಳಕಾಯಲೆಂದು ಹೋದವನು ಮಾಳದಲ್ಲೇ ಕೊನೆಯುಸಿರೆಳೆದಿದ್ದ. ಪರಮಜ್ಜನ ಜೀವಮಾನದಲ್ಲಿಯೇ ಎಮ್ಮೆ ದಲ್ಲಾಳಿಯಾಗಿದ್ದ, ಸಾತಜ್ಜಿಗೆ ದೂರದ ಸಂಬಂಧಿಯೂ ಆಗಿದ್ದ ಸಂಚಿಮಳ್ಳುನ ಅಪ್ಪ ಪರಮಜ್ಜನಿಗೆ ಪರಿಚಯವಾಗಿದ್ದು. "ಎಮ್ಮನೆಗೆ ಮೊದಲನೇ ಸಲ ಬಂದಾಗ ನಿಂಗಿನ್ನೂ ನಾಲ್ಕ್ ವರ್ಷ. ಎಮ್ಮೆಕರದ ಸಂತಿಗೆ ಒಡ್ಡೆತಲೆಲ್ಲಿ ಆಟ ಆಡ್ತಿದ್ದೆ" ಎನ್ನುತ್ತ ಎದ್ದುಹೊರಟ ಸಾತಜ್ಜಿಯನ್ನು ಹೋಗಲು ಬಿಡದೇ "ಏ ಸಾತಜ್ಜಿ ನಿಂತ್ಗಳೇ. ಒಡ್ಡೆತಲೆ ಕತೆ ಹೇಳೇ" ಎಂದು ಕೈಹಿಡಿದು ಎಳೆಯಲಾರಂಭಿಸಿದ ಸಂಚಿಮಳ್ಳು.
ಮಳೆಗಾಲದಲ್ಲಿ ಡೊಂಬೆಹೊಳೆ ತುಂಬಿಹರಿದ ನೀರು ಮನೆಯ ಬಾಗಿಲಿಗೆ ಬರದಂತೆ ಪರಮಜ್ಜ, ರಾಮಚಂದ್ರ ಇಬ್ಬರೇ ಸೇರಿ ಒಂದು ಒಡ್ಡು ಕಟ್ಟಿ ಅದಕ್ಕೊಂದು ಬಿದಿರುಗಳದ ಸಂಕವನ್ನೂ ಮಾಡಿಕೊಂಡಿದ್ದರಂತೆ. ಅದಾಗಿ ನಾಲ್ಕೇ ವರ್ಷಕ್ಕೆ ಒಂದು ಮಳೆಗಾಲ ವಿಪರೀತ ಮಳೆಯಾಗಿ ಸಂಕ ಕೊಚ್ಚಿಹೋಗಿ ಇವರಿಗೂ ಹೊರಗಿನ ಪ್ರಪಂಚಕ್ಕೂ ಸಂಪರ್ಕವೇ ಕಡಿದುಹೋಯಿತಂತೆ. "ಅದೇ ವರ್ಷ ನವರಾತ್ರಿಯಲ್ಲೇ ನಿನ್ನ ಅಪ್ಪ ಎಮ್ಮೆ ತಂದಿದ್ದು. ಆ ಎಮ್ಮೆ ಬಂದಿದ್ದೇ ಮನೆ ನಸೀಬೇ ಬದಲಾಗೋತು ನೋಡು. ಹೊಳೆಗೆ ಸೇತುವೆನೂ ಆಗೋತು" ಎಂದ ಸಾತಜ್ಜಿ ಅರವತ್ತು ವರ್ಷಗಳ ಹಿಂದಿನ ಸಂತೋಷವನ್ನು ಮತ್ತೆ ಅನುಭವಿಸುತ್ತಿರುವಂತೆ ಕಾಣಿಸಿದಳು. ಸೇತುವೆ ಕೆಲಸ ಮುಗಿದು, ಎಷ್ಟೇ ಮಳೆಯಾದರೂ ಹೊಳೆಯಿಂದ ನೀರು ಹೊರಗೆ ಹರಿಯದಂತೆ ವ್ಯವಸ್ಥೆಯಾದ ಮೇಲೆ ಪರಮಜ್ಜ, ರಾಮಚಂದ್ರ ಸೇರಿ ಬೆಟ್ಟದಿಂದ ಮಣ್ಣು ತಂದು ಒಡ್ಡು ಇದ್ದ ಜಾಗವನ್ನು ಮಟ್ಟಮಾಡಿ ರಸ್ತೆ ಮಾಡಿದ ಮೇಲೆ ಒಡ್ಡು ಇದ್ದ ಜಾಗ ಒಡ್ಡೆತಲೆ ಆಗಿದ್ದು. ಪರಮಜ್ಜನ ಸಂಸಾರವೂ ಬೆಳೆದು, ರಾಮಚಂದ್ರನ ಮದುವೆಯೂ ಆಗಿ ಅವನೂ ಅಲ್ಲೇ ಗೆದ್ದೆತುದಿಯಲ್ಲಿ ಬಿಡಾರ ಕಟ್ಟಿಕೊಂಡು, ಅವರ ಮನೆಗೂ ಸಂಚಿಮಳ್ಳುನ ಅಪ್ಪನ ಹತ್ತಿರವೇ ಎಮ್ಮೆ ಖರೀದಿಯಾದ ಮೇಲೆ ಅಪ್ಪ-ಮಗನ ಓಡಾಟ ಪರಮಜ್ಜನ ಮನೆಗೆ ಖಾಯಂ ಆಯಿತು.
ಸಂಚಿಮಳ್ಳುನ ಹೆಸರು ಶ್ರೀಪಾದ ಎನ್ನುವುದು ಈಗ ಸಾತಜ್ಜಿಗೆ ಮಾತ್ರ ನೆನಪಿರುವ ವಿಷಯ. ಪಾಟಿಚೀಲವನ್ನು ಬಗಲಿಗೇರಿಸಿಕೊಂಡೇ ಅಪ್ಪನೊಂದಿಗೆ ಊರೂರು ತಿರುಗುತ್ತಿದ್ದ ಶ್ರೀಪಾದನಿಗೆ ಯಾವಾಗ ಮಳ್ಳು ಹಿಡಿದಿದ್ದು ಎನ್ನುವುದು ಮಾತ್ರ ಅವಳಿಗೂ ಗೊತ್ತಿಲ್ಲ. ಪರಮಜ್ಜ ಬಿಡಾರವಿದ್ದ ಜಾಗದಲ್ಲಿ ಹೊಸ ಹೆಂಚಿನಮನೆಯನ್ನು ಕಟ್ಟಿಸಿದ ವರ್ಷ ಹನುಮಂತ ದೇವರನ್ನು ಕರೆಸಿ ದೇವಕಾರ್ಯ ಮಾಡಿಸಿದ್ದ. ಪಲ್ಲಕ್ಕಿ ಹೊತ್ತಿದ್ದ ಅಪ್ಪನೊಂದಿಗೆ ಬಂದಿದ್ದ ಶ್ರೀಪಾದ ರಾತ್ರಿ ಅಲ್ಲಿಯೇ ಉಳಿದವ ಬೆಳಗ್ಗೆ ಮೊದಲನೇ ಪಂಕ್ತಿಗೆ ತೆಳ್ಳೇವು ತಿನ್ನಲು ಶುರುಮಾಡಿ ಕೊನೆಯ ಪಂಕ್ತಿಯಲ್ಲಿ ತಾನು ತಿಂದು ಮುಗಿಸುವವರೆಗೂ ತಿನ್ನುತ್ತಲೇ ಇದ್ದಿದ್ದು ನೋಡಿಯೇ ಸಾತಜ್ಜಿಗೆ ಸಂದೇಹ ಬಂದಿತ್ತು. ಮಧ್ಯಾಹ್ನ ಮಂಗಳಾರತಿಯ ಸಮಯದಲ್ಲಂತೂ ಜೋರಾಗಿ "ಬಕಾಪ್ ಬಕಾಪ್" ಎನ್ನುತ್ತ ಚಪ್ಪಾಳೆ ತಟ್ಟುತ್ತಿದ್ದ ಶ್ರೀಪಾದನನ್ನು ಗಮನಿಸಿದವಳೇ ದೇವಕಾರ್ಯ ಮುಗಿದು ಪಲ್ಲಕ್ಕಿ ಹೊರಡುವ ಸ್ವಲ್ಪ ಸಮಯ ಮೊದಲು ಶ್ರೀಪಾದನ ಅಪ್ಪನ ಕೈಗೆ ಪ್ರಸಾದ ಕೊಡುತ್ತ, "ಕೆರೆಗದ್ದೆ ಜೋಯ್ಸರ ಹತ್ರ ಒಂದು ತಾಯತ ಆದ್ರೂ ಕಟ್ಸು ಶ್ರೀಪಾದಂಗೆ. ಎಮ್ಮೆ ಹಿಡ್ಕ ಬರೀ ಊರೂರು ತಿರಗ್ತಾ ಇದ್ರೆ ಬೆಳೆಯ ಮಾಣಿ ಕೈತಪ್ಪೋಗ್ತ" ಎಂದು ಒಳಧ್ವನಿಯಲ್ಲಿ ಹೇಳಿದ್ದಳು. ತನ್ನ ಅಕ್ಕತಂಗಿಯರೆಲ್ಲ ಐದಾರು ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದರೆ ತನಗೆ ಮಾತ್ರ ಮೂರನೆಯದು ನಿಲ್ಲಲೇ ಇಲ್ಲ ಎನ್ನುವ ಬೇಸರದಲ್ಲಿದ್ದ ಸಾತಜ್ಜಿ ಶ್ರೀಪಾದನನ್ನು ಕೂಡಾ ತನ್ನ ಮಕ್ಕಳನ್ನು ಪ್ರೀತಿಸಿದಂತೆ ಪ್ರೀತಿಸಿದವಳು.
ಅದಾಗಿ ಹಲವು ವರ್ಷಗಳವರೆಗೆ ಅಪ್ಪ-ಮಗ ಪರಮಜ್ಜನ ಮನೆ ಕಡೆ ಬರಲೇ ಇಲ್ಲ. ತಾನು ತಾಯತದ ವಿಷಯವನ್ನು ಹೇಳಿದ್ದು ತಪ್ಪಾಯಿತೇನೋ ಎಂದು ಸಾತಜ್ಜಿಗೆ ಆಗಾಗ ಪಶ್ಚಾತ್ತಾಪವಾಗುತ್ತಲೇ ಇತ್ತು. ಪರಮಜ್ಜ ತೀರಿಕೊಂಡಾಗಲೂ ಅವರು ಬರದೇ ಇದ್ದಾಗ ತನ್ನ ತಪ್ಪಿಗೆ ಪ್ರಾಯಶ್ಚಿತ್ತವೆನ್ನುವಂತೆ ಸಾತಜ್ಜಿ ಕೊಟ್ಟಿಗೆಯಲ್ಲಿ ಹುಟ್ಟಿದ ಆಕಳುಕರುವಿಗೆ ಶ್ರೀಪಾದ ಎಂದು ಹೆಸರಿಟ್ಟಿದ್ದಳು. ಮಗನಂತೆ ಪ್ರೀತಿ ಮಾಡಿಕೊಂಡಿದ್ದ ಶ್ರೀಪಾದನನ್ನು ದೂರಮಾಡಿಕೊಂಡ ನೋವು ಅವಳನ್ನು ಕೊರೆಯುತ್ತಲೇ ಇತ್ತು. ಈ ನಡುವೆ ಎರಡನೇ ಮಗ ಗೋವಿಂದ ಜಮೀನಿನಲ್ಲಿ ಪಾಲು ಬೇಕೆಂದು ಜಗಳವಾಡಿದ್ದು, ಗಂಡ ಪ್ರೀತಿಯಿಂದ ಕಟ್ಟಿಸಿದ್ದ ಮನೆಯೂ ಎರಡು ಭಾಗವಾಗಿಹೋಗಿದ್ದು ಎಲ್ಲ ಸೇರಿ ಸಾತಜ್ಜಿಗೆ ಸಂಸಾರವೇ ಸಾಕಾಗಿಹೋಗಿತ್ತು. ಮೊಮ್ಮಕ್ಕಳೂ ಅವರ ಪಾಡಿಗೆ ಅವರು ಆಟವಾಡುತ್ತ, ಮೂರು ಮೈಲಿ ದೂರವಿದ್ದ ಶಾಲೆಗೆ ನೆನಪಾದಾಗ ಹೋಗುತ್ತ ದೊಡ್ಡವರಾಗುತ್ತಿದ್ದರು. ಮತ್ತೆ ಅವಳು ಶ್ರೀಪಾದನನ್ನು ನೋಡುವ ಹೊತ್ತಿಗೆ ಅವನ ಹೆಸರನ್ನೇ ಎಲ್ಲರೂ ಮರೆತುಹೋಗಿ, ಎಲ್ಲರ ಬಾಯಲ್ಲೂ ಅಂವ ಸಂಚಿಮಳ್ಳು ಆಗಿಹೋಗಿದ್ದ.
ಶ್ರೀಪಾದನ ಅಪ್ಪ ತೀರಿಕೊಂಡ ಮಳೆಗಾಲದಲ್ಲಿಯೇ ಮೇಯಲು ಹೋಗಿದ್ದ ನಾಲ್ಕು ಎಮ್ಮೆ ಮಣಕಗಳು ವಾಪಸ್ಸು ಬರದೇ ಎಮ್ಮೆ ವ್ಯಾಪಾರವನ್ನು ನಿಲ್ಲಿಸಬೇಕಾಗಿ ಬಂತು. ಮನೆಯಿದ್ದ ಒಂದೆಕರೆ ಜಾಗದ ಹೊರತಾಗಿ ಬೇರೆ ಆದಾಯವಿರದ ಕಾರಣ ಶ್ರೀಪಾದನ ಆಯಿ ಸುನಂದಕ್ಕ ಅವರಿವರ ಮನೆಗೆ ಅಡಿಕೆ ಸುಲಿಯಲೋ, ತೋಟದ ಕಳೆ ಕೀಳಲೋ ಹೋಗಲಾರಂಭಿಸಿದಳು. ತಿಂಗಳುಗಟ್ಟಲೆ ಕಳೆದುಹೋದ ಎಮ್ಮೆಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದ ಶ್ರೀಪಾದ ಮನೆಗೆ ಬರುವುದೇ ಅಪರೂಪವಾಗಿಹೋಯಿತು. ತಾನು ಆವತ್ತು ಜನಿವಾರ ತರಲು ಕೆರೆಗೆದ್ದೆಗೆ ಹೋಗದೇ ಇದ್ದಿದ್ದರೆ ಎಮ್ಮೆ ಕಳೆಯುತ್ತಲೇ ಇರಲಿಲ್ಲ ಎನ್ನುವ ಕೊರಗು ಅವನಿಗೆ ಉಳಿದುಹೋಯಿತು. ಕೊಟ್ಟಿಗೆಯ ಕಂಬಕ್ಕೆ ಜೋತುಬಿದ್ದಿದ್ದ ಅವನ ಜನಿವಾರವನ್ನು ಕಂಡ ಸುನಂದಕ್ಕ ಅತ್ತೂಕರೆದು ಹೊಸ ಜನಿವಾರವನ್ನು ಹಾಕಿಸಿದ್ದಳಾದರೂ ಶರ್ಟು-ಬನಿಯನ್ನು ತೆಗೆದಾಗಲೆಲ್ಲ ಕಣ್ಣಿಗೆ ಬೀಳುತ್ತಿದ್ದ ಜನಿವಾರವನ್ನು ತೆಗೆದು ಸ್ನಾನದ ಹಂಡೆಯಲ್ಲೋ, ಚಾ ಲೋಟದಲ್ಲೋ ಮುಳುಗಿಸಿಬಿಡುತ್ತಿದ್ದ. ಮತ್ತೆ ಬನಿಯನ್ನು ಹಾಕಿಕೊಳ್ಳುವಾಗ ಆಯಿಗೆ ಬೇಜಾರಾಗುತ್ತದೆಯೆನ್ನುವ ಒಂದೇ ಕಾರಣಕ್ಕೆ ಎಡಕ್ಕೋ, ಬಲಕ್ಕೋ ಯಾವುದೋ ಒಂದು ಕಡೆ ಅಥವಾ ಕಾಟಾಚಾರಕ್ಕೆ ಕುತ್ತಿಗೆಗೆ ನೇತುಹಾಕಿಕೊಳ್ಳುತ್ತಿದ್ದ. ಸುನಂದಕ್ಕ ಗದ್ದೆನೆಟ್ಟಿಗೆಂದು ಹೋದವಳು ಬಿದ್ದು ಕಾಲು ಉಳುಕಿಕೊಂಡ ಮೇಲಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಕಾಲು ಉಳುಕಿದ್ದೇ ನೆವ, ಅವಳು ಹಾಸಿಗೆಯಿಂದ ಮೇಲೇಳುವ ಲಕ್ಷಣಗಳೇ ಕಾಣಿಸಲಿಲ್ಲ.
ಆಗ ಶ್ರೀಪಾದನ ಸಹಾಯಕ್ಕೆ ಬಂದವಳು ಸಂಚಿಮನೆ ಶಾರದಾ. ಅವಳು ಸುನಂದಕ್ಕನಿಗೆ ಪರಿಚಯವಾಗಿದ್ದು ಬಪ್ಪನಕೊಡ್ಲು ಕೊನೆಕೊಯ್ಲಿನಲ್ಲಿ. ಈಶ್ವರಗೌಡ ಮಗಳ ಮದುವೆ ನಿಕ್ಕಿಮಾಡುವುದಕ್ಕೆ ಇಡಗುಂಜಿಗೆ ಹೋಗುವುದು ನಿಶ್ಚಯವಾಗಿದ್ದ ಕಾರಣ ಕೆಳಗಿನ ಕೇರಿಯ ಕೊನೆಕೊಯ್ಲನ್ನೆಲ್ಲ ಒಂದೇ ವಾರದಲ್ಲಿ ಮುಗಿಸಿಬಿಟ್ಟಿದ್ದ. ಮನೆಗೆ ಇಬ್ಬಿಬ್ಬರಂತೆ ಪಾಲು ಮಾಡಿಕೊಂಡು ಅಡಿಕೆ ಕೊಳೆತುಹೋಗುವುದರೊಳಗೆ ಸುಲಿದು ಮುಗಿಸಿಬಿಡುವ ಯೋಜನೆಯಲ್ಲಿ ಸುನಂದಕ್ಕನಿಗೆ ಜೊತೆಯಾದವಳು ಶಾರದಾ. ಮೊದಮೊದಲು ಒಂದೂ ಮಾತಾಡದೇ ಮೆಟ್ಟುಗತ್ತಿಗೆ ಅಂಟಿಕೊಂಡಿದ್ದ ಶಾರದಾ ಕ್ರಮೇಣ ಸುನಂದಕ್ಕನಿಗೆ ಹೊಂದಿಕೊಂಡಿದ್ದಳು. ಶಾರದಾಳ ಮನೆಯ ಪರಿಸ್ಥಿತಿಯೂ ಇವರ ಮನೆಗಿಂತ ಭಿನ್ನವಾಗೇನೂ ಇರಲಿಲ್ಲ. ಅವಳ ಒಬ್ಬಳೇ ತಂಗಿ ಬಸ್ ಡ್ರೈವರ್ ಮಾದೇವನ ಜೊತೆಗೆ ಓಡಿಹೋದ ಸುದ್ದಿ ಕೇಳಿ ಅವಳ ಆಯಿ ಇಲಿಪಾಷಾಣ ಕುಡಿದು ಪ್ರಾಣಬಿಟ್ಟಿದ್ದಳು. ಇದ್ದ ಅರ್ಧ ಎಕರೆ ತೋಟವನ್ನು ಹಾಳುಬಿಟ್ಟಿದ್ದ ಅಪ್ಪ ಹೆಂಡ ಕುಡಿಯುತ್ತ, ಇಸ್ಪೀಟು ಆಡುತ್ತ ಸಿಕ್ಕಸಿಕ್ಕಲ್ಲಿ ಸಾಲ ಮಾಡಿಕೊಂಡಿದ್ದ. ಶಾರದಾ ಮಾತ್ರ ಅವರ ಕುಟುಂಬಕ್ಕೆ ಅಪವಾದವೆನ್ನುವಂತೆ ನಿರ್ಲಿಪ್ತಳಾಗಿ ಅವಮಾನ, ಕಷ್ಟಗಳನ್ನು ಸಹಿಸಿಕೊಂಡು ಅವರಿವರ ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದಳು.
ಸುನಂದಕ್ಕ ಕೆಲಸಕ್ಕೆ ಬರದೇ ಒಂದು ವಾರ ಕಳೆದಮೇಲೆ ಅವಳನ್ನು ಹುಡುಕಿಕೊಂಡು ಬಂದಿದ್ದ ಶಾರದೆಗೆ ಎದುರಾಗಿದ್ದು ಆಯಿಯ ಹಾಸಿಗೆ ವಸ್ತ್ರ ತೊಳೆದು ಅಂಗಳದಲ್ಲಿ ಒಣಗಿಸುತ್ತಿದ್ದ ಶ್ರೀಪಾದ. ಸುನಂದಕ್ಕ ತನ್ನ ಊದಿಕೊಂಡಿದ್ದ ಕಾಲಿನ ನೋವಿಗೆ ನರಳುತ್ತ ಆಗಲೋ ಈಗಲೋ ಸತ್ತೇಹೋಗುವವಳಂತೆ ಜಗಲಿಯ ಮೇಲೆ ಮಲಗಿದ್ದಳು. ವಯಸ್ಸಿಗೆ ಮೀರಿದ ಉಮೇದಿನಲ್ಲಿ ಕೆಲಸ ಮಾಡುತ್ತಿದ್ದ ಸುನಂದಕ್ಕನನ್ನು ಮಾತ್ರವೇ ನೋಡಿದ್ದ ಶಾರದೆಗೆ ಮಾತೇ ಹೊರಡದೆ ಅವಳಿಗೆ ಸ್ನಾನ ಮಾಡಿಸಿ, ಬಟ್ಟೆ ಬದಲಾಯಿಸಿ, ಕೂದಲು ಬಾಚಿ, ಅಡುಗೆ ಮಾಡಿಟ್ಟು ಮನೆಗೆ ಹೋಗಿದ್ದಳು. ಮರುದಿನದಿಂದ ಅದು ಅವಳ ದಿನಚರಿಯ ಭಾಗವೇ ಆಗಿಹೋಯಿತು. ಬೆಳಗ್ಗೆ ಎದ್ದವಳೇ ತನ್ನ ಮನೆಯ ಕೆಲಸ ಮುಗಿಸಿ ಸುನಂದಕ್ಕನ ಮನೆಗೆ ಬಂದು ಅಡುಗೆ ಮಾಡಿ, ಇಲ್ಲಿಯೇ ಊಟಮುಗಿಸಿ, ಪಾತ್ರೆಯನ್ನೂ ತೊಳೆದಿಟ್ಟು ಬೇರೆ ಮನೆಗಳ ಕೆಲಸಕ್ಕೆ ಹೊರಡುವಳು. ಇಲ್ಲಿಗೆ ಬರಲಾರಂಭಿಸಿದ ಸ್ವಲ್ಪ ದಿನದಲ್ಲಿಯೇ ಶಾರದೆಗೆ ಶ್ರೀಪಾದನ ಮಾನಸಿಕ ಸ್ಥಿತಿ ಅಷ್ಟು ಸರಿಯಾಗಿಲ್ಲವೆನ್ನುವುದು ಅರ್ಥವಾಗಿಹೋಗಿತ್ತು. ಶ್ರೀಪಾದ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದವನಂತೆ "ಕೂಸು ಹೂಸು ಬಿಟ್ಟಿತು. ಒಲೆಯ ಬೂದಿ ಹಾರಿತು. ಅಂಕೋಲೆ ಭಟ್ಟನಿಗೆ ಸುದ್ದಿ ಮುಟ್ಟಿತು" ಎಂದು ಹಾಡುತ್ತ ಅವಳಿಗೆ ಬಾವಿಯಿಂದ ನೀರು ಎತ್ತಿಕೊಡುತ್ತ, ತೆಂಗಿನಕಾಯಿ ಸುಲಿದುಕೊಡುತ್ತ ಹಿಂದೆಮುಂದೆ ಓಡಾಡಿಕೊಂಡಿದ್ದ.
ಆವತ್ತು ಶಾರದಾ ಸುನಂದಕ್ಕನ ಮನೆಗೆ ಬಂದಿದ್ದ ಸಮಯಕ್ಕೆ ಸರಿಯಾಗಿ ಸೊಸೈಟಿಯವರು ಅವಳ ಅಪ್ಪನನ್ನು ಹುಡುಕಿಕೊಂಡು ಬಂದಿದ್ದರು. ಪ್ರತಿಸಲ ಸಾಲದ ವಿಚಾರಣೆಗೆ ಬಂದಾಗಲೂ ಶಾರದಾ ತಾನೇ ಅವರ ಹತ್ತಿರ ಮಾತಾಡಿ ಕಳುಹಿಸಿ, ಅವರಿವರ ಮನೆಯಲ್ಲಿ ಕೆಲಸಮಾಡಿದ ಹಣದಿಂದ ಹೇಗೋ ಅಲ್ಪಸ್ವಲ್ಪ ಸಾಲ ತೀರಿಸುತ್ತಿದ್ದಳು. ರಾತ್ರಿ ಕುಡಿದಿದ್ದು ಇನ್ನೂ ಪೂರ್ತಿಯಾಗಿ ಇಳಿದಿರದಿದ್ದ ಅವಳ ಅಪ್ಪ ತನ್ನ ಸುತ್ತ ಏನು ನಡೆಯುತ್ತಿದೆಯೆನ್ನುವ ಖಬರೇ ಇಲ್ಲದೇ ಸೊಸೈಟಿಯವರ ಮೇಲೆ ಕೂಗಾಡಿದ್ದಲ್ಲದೇ, ಮಗಳನ್ನು ಹುಡುಕಿಕೊಂಡು ಶ್ರೀಪಾದನ ಮನೆಗೂ ಬಂದ. ಜಗಲಿಯ ಮೆಟ್ಟಿಲಿನ ಮೇಲೆ ಕುಳಿತು ಸುನಂದಕ್ಕನ ಕೂದಲು ಬಾಚುತ್ತಿದ್ದ ಶಾರದಾಳ ಜಡೆಯನ್ನು ತನ್ನ ಕೈಗೆ ಸುತ್ತಿಕೊಂಡು ಆಟವಾಡುತ್ತಿದ್ದ ಶ್ರೀಪಾದ, "ಶಾರದಾ ಮೂರಾರದಾ. ಆರದಾ ಕುಬಾರದಾ. ಕಸ್ತೂರಿ ಕಾರದಾ" ಎಂದು ಹಾಡುತ್ತ ಪ್ರಪಂಚ ಮರೆತಿದ್ದ. ಅದನ್ನು ನೋಡಿದ ಶಾರದೆಯ ಅಪ್ಪ "ಒಂದು ಮಗಳು ಡ್ರೈವರನ ಕಟ್ಗ್ಯ ಓಡೋತು. ಇನ್ನೊಂದು ಮಗಳು ಹುಚ್ಚನ ಹಿಂದೆ ಬಿಜ್ಜು. ಬಡದು ಸಾಯಸ್ಬುಡ್ತಿ. ಇಂಥ ಮಕ್ಕ ಇದ್ದರೆಷ್ಟು ಬಿಟ್ಟರೆಷ್ಟು" ಎನ್ನುತ್ತ ಅಂಗಳದಲ್ಲಿ ಬಿದ್ದಿದ್ದ ತೆಂಗಿನಹೆಡೆ ಎತ್ತಿಕೊಂಡು ಇನ್ನೇನು ಶಾರದೆಗೆ ಹೊಡೆದೇಬಿಡುತ್ತಾನೆ ಎನ್ನುವಷ್ಟರಲ್ಲಿ ಶ್ರೀಪಾದ ಎದ್ದುಬಂದಿದ್ದು, ಅವನ ತಲೆಗೆ ಹೊಡೆತ ಬಿದ್ದಿದ್ದು, ಶಾರದೆಯ ಅಪ್ಪನಿಗೆ ಕುಡಿದಿದ್ದೆಲ್ಲ ಒಂದೇ ಸಲಕ್ಕೆ ಇಳಿದು ಅಲ್ಲಿಂದ ಓಡಿಹೋಗಿದ್ದು ಎಲ್ಲ ಒಟ್ಟೊಟ್ಟಿಗೇ ಜರುಗಿದವು.
ಶಾರದಾ ಕೆಳಗಿನಕೇರಿಗೆ ಸುದ್ದಿಮುಟ್ಟಿಸಿ, ಶ್ರೀಪಾದನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ವಾಪಸ್ಸು ಮನೆ ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಮನೆಗೆ ಹೋಗಿ ಬೆಳಗ್ಗೆ ಬರುವುದಾಗಿ ಹೇಳಿ ಹೋದವಳು ಮತ್ತೆ ಊರಿನವರ ಕಣ್ಣಿಗೆ ಕಾಣಿಸಲೇ ಇಲ್ಲ. ಅವಳ ಅಪ್ಪ ಮುರ್ಡೇಶ್ವರದಲ್ಲಿದ್ದ ಅವರ ಹಳೆ ಸಂಬಂಧದ ಪೈಕಿ ಯಾರಿಗೋ ಮದುವೆ ಮಾಡಿ ಕಳುಹಿಸಿದ್ದಾನಂತೆ ಎಂದು ಕೆಲವರು, ಹೊನ್ನಾವರದ ಹತ್ತಿರ ಯಾರೋ ವಯಸ್ಸಾದವರನ್ನು ನೋಡಿಕೊಂಡು ಮನೆಗೆಲಸ ಮಾಡಿಕೊಂಡಿದ್ದಾಳಂತೆ ಎಂದು ಮತ್ಯಾರೋ ಮಾತನಾಡಿಕೊಂಡರು. ತನ್ನ ಕೆಲಸ ತಾನು ಮಾಡಿಕೊಳ್ಳುವಷ್ಟು ಸುಧಾರಿಸಿಕೊಂಡಿದ್ದ ಸುನಂದಕ್ಕ ಇದ್ದಕ್ಕಿದ್ದಂತೆ ಒಂದಿನ ರಾತ್ರಿ ತೀರಿಕೊಂಡಳು. ಅದಾಗಿ ಸುಮಾರು ಒಂದೂವರೆ ವರ್ಷ ಶ್ರೀಪಾದ ಊರಿನಲ್ಲೆಲ್ಲೂ ಕಾಣಿಸಿಕೊಳ್ಳಲಿಲ್ಲ. ಅಂಕೋಲೆಯಲ್ಲಿದ್ದ ಅಕ್ಕನ ಮನೆಯಲ್ಲಿದ್ದಾನೆಂದು ಸುದ್ದಿಯಾಯಿತು; ಶಾರದೆಯನ್ನು ಹುಡುಕಿಕೊಂಡು ಘಟ್ಟದ ಕೆಳಗೆ ಹೋಗಿದ್ದಾನೆಂಬ ಸುದ್ದಿಯೂ ಹರಿದಾಡಿತು. ಅವನು ವಾಪಸ್ಸು ಊರಿಗೆ ಬರುವ ಹೊತ್ತಿಗೆ ಶಾರದೆಯ ಅಪ್ಪನೂ ಕುಡಿದು ಕುಡಿದು ಪ್ರಾಣಬಿಟ್ಟಿದ್ದ. ಹಳೆಯ ಸಂಚಿಯ ತುಂಬಾ ಬಸ್ ಟಿಕೆಟ್ಟು, ವಿಳಾಸದ ಚೀಟಿ, ಯಾವುದೋ ಪೇಪರಿನ ತುಂಡುಗಳನ್ನು ತುಂಬಿಕೊಂಡು ತಿರುಗುತ್ತಿದ್ದ ಶ್ರೀಪಾದನಿಗೆ ತಲೆ ಕೆಟ್ಟಿದೆಯೆನ್ನುವ ಸುದ್ದಿ ಮಾತ್ರ ಖಾಯಂ ಆಯಿತು.
ಶ್ರೀಪಾದನ ವಿಷಯ ರಾಮಣ್ಣನಿಗೆ ಗೊತ್ತಿತ್ತಾದರೂ ಸಾತಜ್ಜಿಯವರೆಗೆ ತಲುಪಿರಲಿಲ್ಲ. ಒಡ್ಡೆತಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಹತ್ತಿರ "ಅಪ್ಪನ ಹತ್ರ ಸಂಚಿಮಳ್ಳು ಬತ್ತಾ ಇದ್ದ ಹೇಳ್ರ ಹೋಗ್ರ. ಒಂದ್ ಕರಿಎಲೆ ತಂಬಾಕು ಕವಳ ಜಡದ್ಬುಡದೆಯಾ" ಎನ್ನುತ್ತ ಸಂಚಿಮಳ್ಳು ಒಡ್ಡೆ ಇಳಿಯುತ್ತಿದ್ದರೆ, "ಸಂಚಿಮಳ್ಳು ಬಂದ ಸಂಚಿಮಳ್ಳು ಬಂದ" ಎನ್ನುತ್ತ ಮಕ್ಕಳು ಓಡಿಬಂದಿದ್ದರು. ಶ್ರೀಪಾದನೇ ಸಂಚಿಮಳ್ಳು ಎನ್ನುವ ಕಲ್ಪನೆಯೇ ಇರದಿದ್ದ ಸಾತಜ್ಜಿ ಇಷ್ಟು ವರ್ಷಗಳ ನಂತರ ಅವನನ್ನು ನೋಡಿದ್ದಕ್ಕೆ ಖುಷಿಪಡಬೇಕೋ, ಅವನ ಅವಸ್ಥೆಗೆ ಮರುಗಬೇಕೋ ಗೊತ್ತಾಗದೆ ಗೊಂದಲದಲ್ಲಿರುವಾಗಲೇ ಅವಳ ಹತ್ತಿರ ಬಂದವನೇ "ಸಾತಜ್ಜಿ ತಗಳೇ ನಿನಗೆ ಹೇಳಿ ಸ್ಪೆಷಲ್ಲು ಜೀರಿಗೆಮಿಡಿ" ಎನ್ನುತ್ತ ಸಂಚಿಯ ತುಂಬ ತುಂಬಿಕೊಂಡಿದ್ದ ಮಾವಿನಕಾಯಿಗಳನ್ನು ಅವಳ ಮಡಿಲಿಗೆ ಸುರಿದ. ಎಮ್ಮೆಕರದ ಬಾಲ ಹಿಡಿದುಕೊಂಡು ಅಂಗಳದ ತುಂಬಾ ಓಡುತ್ತಿದ್ದ ಶ್ರೀಪಾದನ ನೆನಪಾಗಿ ಸಾತಜ್ಜಿ "ಬಾ ಒಳಗೆ. ಊಟ ಮಾಡಲಕ್ಕಡಾ. ಕೈಕಾಲು ತೊಳ್ಕ" ಎಂದು ಹೊಟ್ಟೆತುಂಬ ಊಟ ಬಡಿಸಿದ್ದಳು. ವರ್ಷಗಳಿಂದ ಊಟವನ್ನೇ ಕಾಣದಿರುವವನಂತೆ ಗಬಗಬ ತಿನ್ನುತ್ತಿದ್ದವನನ್ನು "ಇಷ್ಟು ವರ್ಷ ಎಲ್ಲಿದ್ದೆ ಮಾರಾಯಾ? ಅಪ್ಪಯ್ಯ ಆರಾಮಿದ್ನ?" ಎಂದು ಕೇಳಿದ್ದಕ್ಕೆ, "ದೊಡ್ಡ ಆಗ್ತಾ ಇದ್ದಿದ್ನೇ ಮಾರಾಯ್ತಿ. ದೊಡ್ಡಪ್ಪದು ಬ್ಯಾಡದನೇ? ಅಪ್ಪಯ್ಯ ಇಲ್ಲೆ. ಹೋದ ಅಂವ" ಎನ್ನುತ್ತ ಕೈತೊಳೆಯಲು ಎದ್ದುಹೋಗಿದ್ದ.
ಅಲ್ಲಿಂದ ಶುರುವಾಗಿತ್ತು ಸಂಚಿಮಳ್ಳು ಮತ್ತು ಸಾತಜ್ಜಿಯ ಒಡನಾಟ. ಅವನು ಬಣ್ಣಕಟ್ಟಿ ಹೇಳುತ್ತಿದ್ದ ಊರಮೇಲಿನ ಕತೆಗಳನ್ನು ಸಾತಜ್ಜಿ ನಂಬಿದಂತೆ ನಟಿಸುತ್ತ ಕೇಳಿಸಿಕೊಳ್ಳುತ್ತಿದ್ದಳು. ಮುಗಿದುಹೋಗುತ್ತಿರುವ ತನ್ನ ಬದುಕಿಗೆ ಕೊಂಚ ಸಡಗರ ತುಂಬಬಲ್ಲವನೆಂದರೆ ಅದು ಸಂಚಿಮಳ್ಳು ಮಾತ್ರ ಎಂದು ಅವಳು ಬಲವಾಗಿ ನಂಬಿಕೊಂಡಿದ್ದಳು. ಅವನು ಬರದೇ ಬಹಳ ದಿನಗಳಾದರೆ ದೂರ್ವೆ ಕೊಯ್ಯುವ ನೆವದಲ್ಲಿ ಒಮ್ಮೆ ಒಡ್ಡೆತಲೆಗೆ ಹೋಗಿ ಕಣ್ಣುಹಾಯಿಸಿ, "ಇವತ್ತೂ ಬತ್ನಿಲ್ಯಕು" ಎನ್ನುತ್ತ ನಿರಾಸೆಯಿಂದ ಹಿಂದಿರುಗುತ್ತಿದ್ದಳು. "ನಿಂಗೂ ತಲೆ ಕೆಟ್ಟಿದ್ದನೆ, ಆ ಮಳ್ಳು ಬಪ್ಪದು ಕಾಯ್ತಾ ಕುತ್ಗತ್ತೆ?" ಎಂದು ರಾಮಣ್ಣ ಬೈಯುತ್ತಿದ್ದರೂ ಕೇಳಿಸದವಳಂತೆ "ನೆಲೆ ಇಲ್ಲದ ಕಾಯ ಎಲುವಿನ ಹಂದರ. ಬಲದಿ ಸುತ್ತಿದ ಚರ್ಮದ ಹೊದಿಕೆ" ಎಂದು ತನ್ನ ಪಾಡಿಗೆ ತಾನು ಹಾಡುತ್ತ ಕೊಟ್ಟಿಗೆಗೋ, ಅಟ್ಟಕ್ಕೋ ಹೋಗಿಬಿಡುತ್ತಿದ್ದಳು. ಪ್ರತಿಸಲ ಸಂಚಿಮಳ್ಳು ವಾಪಸ್ಸು ಹೋಗುವಾಗಲೂ, "ಲಗೂ ಬಾ. ಇನ್ನೊಂದ್ಸಲ ನೀ ಬಪ್ಪತನಕ ಆನು ಇರ್ತ್ನ ಇಲ್ಯ" ಎನ್ನುತ್ತ ಬೇಸರದಿಂದಲೇ ಬೀಳ್ಕೊಡುತ್ತಿದ್ದಳು.
ಈ ಸಲ ಸಂಚಿಮಳ್ಳು ಸಾತಜ್ಜಿಗೆಂದೇ ಸುದ್ದಿಯೊಂದನ್ನು ತಂದಿದ್ದ. "ನೀ ನಂಬ್ತಿಲ್ಲೆ ಸಾತಜ್ಜಿ. ಶಾರದೆ ಕೆರೆಗದ್ದೆ ಜೋಯ್ಸರ ಮನೆಗೆ ಬಂದಿತ್ತಡಾ. ಅದಕ್ಕೆ ಒಂದು ಮಗನೂ ಇದ್ನಡಾ" ಎನ್ನುತ್ತ ಶಾರದಾ ತನ್ನನ್ನೇ ನೋಡಲು ಬಂದಷ್ಟು ಸಂಭ್ರಮದಲ್ಲಿದ್ದ. "ನಿನ್ನ ಅಪ್ಪನ ಹತ್ರನೂ ಹೇಳಿದಿದ್ದಿ ನಿಂಗೊಂದು ತಾಯತ ಕಟ್ಟಸು ಹೇಳಿ. ಅಂವ ಎನ್ನ ಮಾತು ಕೇಳಿದ್ನಿಲ್ಲೆ. ನಂಬ್ಕೆ ಮುಖ್ಯ ಮನಷಂಗೆ" ಎಂದು ಚಾ ಮಾಡಿಕೊಟ್ಟಿದ್ದಳು ಸಾತಜ್ಜಿ. ಶಾರದೆಯ ಸುದ್ದಿ ಹೇಳಲೆಂದೇ ಇಷ್ಟು ದೂರ ಬಂದಿದ್ದವನಂತೆ ಚಾ ಕುಡಿದವನೇ ಸಂಚಿಯಲ್ಲಿದ್ದ ಸೀತಾಫಲ ತೆಗೆದು ಸಾತಜ್ಜಿಯ ಕೈಯಲ್ಲಿಟ್ಟು ಹೊರಟುನಿಂತ. "ಸಂಚಿಮಳ್ಳು ಹೋಗಡ್ದ. ಉಳ್ಕಳ" ಎಂದು ಕೈಹಿಡಿದು ಎಳೆಯುತ್ತಿದ್ದ ಮಕ್ಕಳ ಕೈಗೆ ಎರಡೆರಡು ರಾಜನೆಲ್ಲಿಕಾಯಿ ಕೊಟ್ಟು, "ಮಕ್ಕಳಿರಾ ಮಕ್ಕಳಿರಾ ಮಕ್ಕಿಗೆದ್ದೆಗೆ ಹೋಗ್ಬ್ಯಾಡಿ. ಹಾವು ಚೇಳು ಕಚ್ತಾವೆ" ಎಂದು ಜೋರಾಗಿ ಹಾಡುತ್ತ ಸಂಚಿಯೊಂದಿಗೆ ಒಡ್ಡೆತಲೆ ಹತ್ತಲಾರಂಭಿಸಿದ.
ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿಯವರಾದ ಅಂಜನಾ ಹೆಗಡೆ ಸದ್ಯ ಬೆಂಗಳೂರು ನಿವಾಸಿ. ಕಥೆ, ಕವಿತೆ, ಪ್ರಬಂಧ, ಅಂಕಣಗಳನ್ನು ಬರೆಯುತ್ತಾರೆ. ಇವರ ಕವನ ಸಂಕಲನ, ಪ್ರಬಂಧ ಸಂಕಲನ ಪ್ರಕಟಗೊಂಡಿದೆ. ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ ‘ಕಾಲದೊಂದೊಂದೇ ಹನಿ’ ನಿರೂಪಿಸಿದ್ದಾರೆ.