-ಸ್ನೇಹಾ ಡಿ.ಎಸ್.
ತ್ತಲು ಕಳೆದು ಅದಾಗಲೇ ಸೂರ್ಯ ತನ್ನ ಮೂಡಣ ಮನೆಯ ಬಾಗಿಲ ತೆಗೆದು ಹೊರಬಂದಾಗಿದೆ. ಆದರೆ ಆ ಪ್ರದೇಶದಲ್ಲಿ ಸೂರ್ಯನ ಕಿರಣವೇ ಮಾಯ ಎನ್ನುವಂತಿದೆ! ಸಹಜ ಪ್ರಶ್ನೆಯೇ ಇರಬಹುದು, ಅದ್ಯಾವುದೆಂದು? ಮಲೆನಾಡು ಪ್ರದೇಶಗಳಲ್ಲಿ, ಅದರಲ್ಲೂ ಚಳಿಗಾಲದಲ್ಲಿ ಸೂರ್ಯರಶ್ಮಿ ಭುವಿಯನ್ನು ಸ್ಪರ್ಶಿಸುವುದೇ ಎಷ್ಟೋ ಸಮಯವಾದ ನಂತರ. ‌

ಪ್ರಕೃತಿ ಎಂದರೆ ಮೊದಲು ನೆನಪಾಗುವುದೇ ಮಲೆನಾಡು ಅಲ್ಲವೇ!? ಕಣ್ಣು ಹಾಯಿಸಲಾಗುವಷ್ಟು, ಅದಕ್ಕೂ ಮೀರಿಯೂ ಅಲ್ಲಿ ತುಂಬಿರುವುದೇ ಹಸಿರು. ಅಂತಹ ಮಲೆನಾಡಿನಲ್ಲಿ ಚಳಿಗಾಲದಲ್ಲಿ, ಚಳಿ ಒಂದು ಮಟ್ಟಿಗೆ ಜಾಸ್ತಿ ಎಂದೇ ಹೇಳಬಹುದು. ಅಲ್ಲಿಯ ಚಳಿಗಾಲದ ಬೆಳ್ಳಂಬೆಳಗಿನ ವಾತಾವರಣವೇ ಅದೆಷ್ಟು ಚಂದವೆಂದರೆ, ಇಬ್ಬನಿಯ ಸರ್ವಾಧಿಪತ್ಯದಲ್ಲಿ ಗೋಚರವಾಗುವುದು ಏನೂ ಇಲ್ಲ! ಹೌದು. ಮಂಜಿನ ಮಧ್ಯದಲ್ಲಿ ತಣ್ಣನೆಯ ಅನುಭವವೇ ಚಂದ! ದೇಹವೇ ಮರಗಟ್ಟುವಂತಹ ಆ ಚಳಿಯಲ್ಲಿ, ವಾತಾವರಣದ ಸುಂದರ ಅನುಭೂತಿ ಅತ್ಯದ್ಭುತವಾದದ್ದು. ಬೆಳಿಗ್ಗೆ ಬೇಗ ಏಳುವುದಂತೂ ದೂರದ ಮಾತು. ಒಂದು ಪಕ್ಷ ಎದ್ದೆವೂ ಅಂತಾದರೆ ಚಳಿಯಲ್ಲಿ ನಡುಗುತ್ತಾ ಕೂರುವುದಕ್ಕೇನು ಅಡ್ಡಿಯಿಲ್ಲ. ಇಬ್ಬನಿ ಕರಗುವಾಗ ಮಳೆಯೇ ಬರುತ್ತಿದೆಯೇನೋ ಎನ್ನುವಂತೆ ಪರಿಸರ ತನ್ನನ್ನು ಮಂಜಿನ ಹನಿಯಿಂದ ಬಿಡಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಹೊರನಿಂತು ಪ್ರಕೃತಿಯ ಆಗು-ಹೋಗುಗಳನ್ನು ಕಾಣುವುದು ನಿಜಕ್ಕೂ ಮಜವಾದ ಸಂಗತಿ.

ಬಾಲ್ಯದಲ್ಲಿ ಚಳಿಗಾಲವೆಂದರೆ ಖುಷಿ! ಅಪ್ಪನೋ, ಅಮ್ಮನೋ ಬೇಗ ಎಬ್ಬಿಸುವುದಕ್ಕಂತೂ ಆ ಸಮಯದಲ್ಲಿ ಬರುತ್ತಿರಲಿಲ್ಲ ಕಾರಣ, ಚಳಿ! “ದೊಡ್ಡವರಿಗೇ ಈ ಚಳಿಯಲ್ಲಿ ಏಳುವುದು ಕಷ್ಟ, ಇನ್ನು ಮಕ್ಕಳು ಎದ್ದಾರೆಯೇ?!” ಎಂಬ ಅವರವರ ಮಾತು ಎಷ್ಟಾದರೂ ಸತ್ಯವೆ. ಶಾಲೆಗೆ ಹೋಗುವಾಗಲೂ ಸ್ವೆಟ್ಟರ್ ಧರಿಸಿ ಓಡುವುದು ರೂಢಿಯಾಗಿತ್ತಲ್ಲದೇ ಅಮ್ಮನ ಒತ್ತಾಯದ ಮೇರೆಗೆ, ಒತ್ತಾಯ ಎನ್ನುವುದಕ್ಕಿಂತಲೂ ಮಿಗಿಲಾಗಿ ಬೈಯ್ಯಿಸಿಕೊಳ್ಳುವುದೊಂದು ಪದ್ಧತಿಯಾಗಿ, ಕಿವಿಗೆ ಹತ್ತಿಯನ್ನೂ ತಲೆ ಇಬ್ಬನಿಯಿಂದ ವದ್ದೆಯಾಗಬಾರದು ಎಂಬ ಹಿತದೃಷ್ಠಿಯಿಂದ ಕರ್ಚಿಪ್ಪನ್ನೋ ಅಥವಾ ಮಫ್ಲರ್ ಅನ್ನೋ ಕಟ್ಟಿ ಕಳುಹಿಸುವುದು ಅಭ್ಯಾಸವಾಗಿ ಹೋಗಿತ್ತು. ಕೊರೆಯುವ ಚಳಿಯಲ್ಲಿ ಕೈ ಮರಗಟ್ಟಿ ಅದನ್ನು ಮಿತ್ರರೊಂದಿಗೆ ಏನೋ ವಿಶೇಷವೆಂಬಂತೆ ಹಂಚಿಕೊಂಡದ್ದು ಸಹ ಇದೆ! ತಣ್ಣಗಿರುವ ಕೈಯನ್ನು ಗೆಳೆಯರ ಕೆನ್ನೆಗೆ ಬೇಕೆಂದೇ ಇಡುವಾಗ, ಅವರ ವಿರೋಧವೂ ಸಹ ಕಣ್ಣಿಗೆ ಕಟ್ಟಿದಂತಿದೆ! 

ಮಲೆನಾಡಿನ ಭಾಗದಲ್ಲಿರುವವರಿಗೆ ಚಳಿಗಾಲದ ಇಂತಹ ಅನುಭವಗಳು ಸದಾ ನೆನಪಿನಲ್ಲಿರುವಂತದ್ದು ಎಂದರೆ ಸರಿಯಾದೀತು. ಈಗಲೂ ಸಹ ಚಳಿಯಿಂದ ರಕ್ಷಿಸಿಕೊಳ್ಳಲು ಹಾಕಿದ ಸ್ವೆಟ್ಟರ್ ಅನ್ನು ತೆಗೆಯುವುದು ಮಧ್ಯಾಹ್ನದ ಸಮಯದಲ್ಲೆ! ಮಳೆಗಾಲದಲ್ಲೂ ಚಳಿಯ ಅನುಭವವಾಗುತ್ತದಾದರೂ, ಚಳಿಗಾಲದ ಚಳಿಯಷ್ಟು ಪ್ರಖರತೆ ಅದಕ್ಕಿರುವುದಿಲ್ಲ. ಮನೆಯಲ್ಲಿ ಮಕ್ಕಳನ್ನು ದೇವರ ಪೂಜೆಗೆಂದು, ಬೆಳಿಗ್ಗೆ ಹೂವು ಕೊಯ್ಯಲಟ್ಟುವುದು ಸಾಮಾನ್ಯದ ಸಂಗತಿ. ಅಂತಹ ಚಳಿಗಾಲದಲ್ಲಿ ಹೂವುಗಳೂ ಕೂಡಾ “ಇಂದು ಸ್ವಲ್ಪ ತಡವಾಗಿ ಅರಳೋಣ” ಎಂದು ನಿರ್ಧರಿಸಿದಂತೆ, ಗಿಡಗಳೆಲ್ಲಾ ಖಾಲಿ ಖಾಲಿ! ಆಗೊಂತರ ಖುಷಿ. ಏಕೆಂದರೆ ಉಳಿದ ದಿನಗಳಲ್ಲಿ ಅದೆಷ್ಟು ಹೂವು ಕೊಯ್ಯಬೇಕಿತ್ತು ಆದರೆ ಚಳಿ ಎಂಬ ಕಾರಣಕ್ಕೆ ಆ ಕೆಲಸ ಸುಗಮ. ಮೂರು ಮತ್ತೊಂದು ಹೂ ಕೊಯ್ದು, “ಹೂವಿಲ್ಲ ಗಿಡದಲ್ಲಿ” ಎಂದರೆ ಅಂದಿನ ಆ ಕಾರ್ಯ ಚಳಿಗೆ ಧನ್ಯವಾದ ಸಮರ್ಪಿಸುವುದರೊಂದಿಗೆ ಸಮಾಪ್ತಿ.

ಮಳೆಗಾಲ ಹಾಗೂ ಚಳಿಗಾಲದ ಸಮಯದಲ್ಲಿ, ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಕಾಣ ಸಿಗುತ್ತಿದ್ದದ್ದು ಕಂಬಳಿ. ಬಿಳಿ ಕಂಬಳಿ, ಕಪ್ಪು ಕಂಬಳಿ, ಪಟ್ಟೆ ಕಂಬಳಿ ಎಂಬ ತರಹೇವಾರಿ ವಿಧಗಳನ್ನು ಆಗಿನ ದಿನಗಳಲ್ಲಿ ಕಾಣಬಹುದಿತ್ತು. ನಿಜಕ್ಕೂ ಕಂಬಳಿಯಷ್ಟು ಬೆಚ್ಚನೆಯ ಅನುಭವ ನೀಡುವುದು ಬೇರೊಂದಿರಲಿಲ್ಲ! ಆರೋಗ್ಯದ ದೃಷ್ಠಿಯಿಂದಲೂ ಅದು ಪ್ರಚಲಿತದಲ್ಲಿತ್ತು. ದೊಡ್ಡವರು ಮಕ್ಕಳನ್ನು ಬೇಗ ಕಂಬಳಿ ಹೊದೆಸಿ ಮಲಗಿಸಿ, ಅವರಿಗೆ ನಿದ್ದೆ ಬಂದ ನಂತರ ತಾವು ಹೊದ್ದು ಮಲಗಿ ಬಿಡುತ್ತಿದ್ದರಂತೆ, ಮಕ್ಕಳಿಗೆ “ನಿನಗೆ ಕಪ್ಪು ಕಂಬಳಿ ಹೊದೆಸುತ್ತೇನೆ” ಎಂಬ ಹಾರಿಕೆಯ ಉತ್ತರವೂ ಅಲ್ಲಿ ಲಭ್ಯ! ಕಪ್ಪು ಕಂಬಳಿ ಎಂದರೆ ಕತ್ತಲೆಯೇ ಕಂಬಳಿಯಂತೆ. ಆದರೆ ಈಗೀಗ ಆ ಕಂಬಳಿಗಳನ್ನು ಕಾಣುವುದು ಅಲ್ಲೋ ಇಲ್ಲೋ ಎಂಬಂತಾಗಿದೆ. ಬದಲಿಗೆ ಉರಿ ಬೆಚ್ಚನೆ ಅನ್ನಿಸುವ ಬ್ಲಾಂಕೇಟ್‌ಗಳು ಮೇಲೆದ್ದು ಬರುತ್ತಿವೆ. ಕಂಬಳಿಯ ಆ ಬೆಚ್ಚಗಿನ ಅನುಭವ ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯ! ಬೇರೆ ಕಡೆಯವರಿಗೆ ಮಲೆನಾಡಿನ ಚಳಿ ಮೈ ನಡುಗಿಸುತ್ತದೆ. ಎಷ್ಟೋ ಮಂದಿ “ಎಂಥಾ ಚಳಿ ಇಲ್ಲಿ” ಎಂದು ನಡುಗುತ್ತಾ ಹೇಳಿದ್ದೂ ಇದೆ. ಅಂಥಹಾ ಚಳಿಯಲ್ಲಿ ಒಂದು ಕಪ್ ಕಾಫಿಯೋ, ಕಷಾಯವೋ ಕೊಡುವ ಬೆಚ್ಚನೆಯ ಅನುಭೂತಿ ಸ್ವರ್ಗವೇ ಕೈಗೆ ಸಿಕ್ಕಿದಂತೆ! 

ಮಲೆನಾಡು ಪ್ರವಾಸಿ ತಾಣಗಳಿಗೆ ಹೆಸರುವಾಸಿಯೂ ಹೌದು. ಒಂದು ಪಕ್ಷ ಚಳಿಗಾಲದ ಸಮಯದಲ್ಲಿ ಪ್ರವಾಸ ಬಂದರೆಂದಾದರೆ, ಫೈರ್ ಕ್ಯಾಂಪ್ ಮಾಡದೆ ಪ್ರವಾಸಿಗರು ಅಲ್ಲಿಂದ ತೆರಳುವುದೇ ಇಲ್ಲ. ಮತ್ತೊಂದು ವಿಶೇಷ ಮಲೆನಾಡಿನ ಭಾಗಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ನಲ್ಲಿ ನೀರಾಗಲಿ ಅಥವಾ ಟ್ಯಾಂಕಿನ ನೀರಾಗಲಿ ಅಲ್ಲಿ ಬಳಕೆಯಲ್ಲಿಲ್ಲ. ನೈಸರ್ಗಿಕವಾಗಿ ಭೂಮಿಯಲ್ಲೇ ಉದ್ಭವಿಸುವ(ಅಬ್ಬಿ ನೀರು) ನೀರನ್ನು ಬಳಸುತ್ತಾರೆ. ಆ ನೀರು ಸಾಮಾನ್ಯವಾಗಿ ತಣ್ಣಗೆ ಇರುತ್ತದೆ. ಚಳಿಗಾಲದ ಅವಧಿಯಲ್ಲಿ ಆ ನೀರು ಇನ್ನೂ ತಣ್ಣಗಾಗಿರುತ್ತದೆ. ಅದೇ ನೀರನ್ನು ಹಂಡೆಯಲ್ಲಿ ಶೇಖರಿಸಿ, ಕಟ್ಟಿಗೆಯ ಬೆಂಕಿ ಕೊಟ್ಟರೆ, ಆ ಬೆಚ್ಚನೆಯ ನೀರು ಸರ್ವಸ್ವವೆನಿಸಿ ಬಿಡುತ್ತದೆ! ಹಲವರು ಒಂದು ದೊಡ್ಡ ಹಂಡೆಯ ನೀರನ್ನೇ, ಚಳಿಯ ತೆಕ್ಕೆಯಿಂದ ತಪ್ಪಿಸಿಕೊಳ್ಳಲೋಸುಗವಾಗಿ ಖಾಲಿ ಮಾಡಿಬಿಡುತ್ತಾರೆ. ಹಂಡೆಯ ಅಡಿ ಹಾಕಿದ ಬೆಂಕಿಯಿಂದ ಚಳಿ ಕಾಯಿಸುವುದು ಮಲೆನಾಡಿನ ಹಳ್ಳೀಮನೆಗಳಲ್ಲಿ ಪ್ರತಿನಿತ್ಯ ಕಾಣುವ ದೃಶ್ಯ. ಮಲೆನಾಡಿನ ಜೀವನಾಡಿಯೆಂದೇ ಅಡಿಕೆ ತೋಟಗಳನ್ನು ಹೇಳಲಾಗುತ್ತದೆ. ಸಾಮಾನ್ಯವಾಗಿ ಕೊನೆಕೊಯ್ಲು ಚಳಿಗಾಲದಲ್ಲೇ ಆಗುವುದರಿಂದ, ತಡರಾತ್ರಿಯವರೆಗೆ ಊರಿನ ಜನರು ಜಗತ್ತಿನ ಸುದ್ದಿಗಳನ್ನು ಹರಟೆ ಹೊಡೆಯುತ್ತಾ, ಅಡಿಕೆ ಸುಲಿಯುವುದು ಚಳಿಗಾಲದ ಪ್ರಮುಖ ಆಕರ್ಷಣೆಯಾಗಿರುತ್ತದೆ. 

ಚಳಿ ಎಷ್ಟು ಚಂದವೋ ಅಷ್ಟೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಮೊದಲೇ ತಿಳಿಸಿದಂತೆ ಮಲೆನಾಡಿನ ಚಳಿ ಕೆಲವೊಮ್ಮೆ ವಿಪರೀತವಾದರೆ ಅದನ್ನು ಸಹಿಸುವುದು ಕಷ್ಟ! ವಯಸ್ಸಾದವರಿಗೆ ಆ ಸಮಯದಲ್ಲಿ, ದೇಹದಲ್ಲಿರಕ್ತ ಹೆಪ್ಪುಗಟ್ಟುತ್ತದೆ. ಇದು ಜೀವವನ್ನು ಕಸಿಯುವ ಕಾರಣವೂ ಆಗಬಹುದು! ಹೃದಯಸ್ತಂಭನದಂತಹ ಘಟನೆಗಳೂ ಚಳಿಗಾಲದ ಸಮಯದಲ್ಲಿ ಜಾಸ್ತಿಯೆಂದೇ ಹೇಳಬಹುದು. ಬೇಸಿಗೆಯಲ್ಲಿ ಸೆಕೆಯೆಂದು ಬೊಬ್ಬಿಡುವವರು, ಚಳಿಗಾಲದ ಸಮಯದಲ್ಲಿ “ಬೇಸಿಗೆಯೇ ಆಗಬಹುದಿತ್ತೇನೋ” ಎಂದು ಪಿಸುಗುಡುವುದುಂಟು. ಇದೆಲ್ಲವನ್ನೂ ಮೀರಿ ಬಹುಶಃ ಮಲೆನಾಡಿನ ಚಳಿಯ ಅನುಭವ ಬೇರೆಲ್ಲೂ ಆಗುವುದಿಲ್ಲ. ಹಲವರಿಗೆ ಬೆಳಿಗ್ಗೆ ವಾಕಿಂಗ್ ಎಂಬ ಅಭ್ಯಾಸವಿರುತ್ತದೆ. ಆದರೆ ಚಳಿಗಾಲದ ಆ ಬೆಳಗಿನಲ್ಲಿ ನೆಲದ ಮೇಲೆ ಕಾಲೂರುವುದೇ ಕಷ್ಟವೆನ್ನುವ ಮಂದಿ, ಚಳಿಗಾಲ ಮುಗಿಯುವವರೆಗೆ ತಮ್ಮ ವಾಕಿಂಗ್ ಅಭ್ಯಾಸವನ್ನು ಬದಿಗಿಡುತ್ತಾರೆ. ಬರೀ ವಾಕಿಂಗ್ ಎಂದಲ್ಲದೇ ಪ್ರತಿನಿತ್ಯದ ಚಟುವಟಿಕೆಗಳು ತಡವಾಗುತ್ತಲೇ ಹೋಗುತ್ತದೆ. 

ಚಳಿಗಾಲವೆಂದರೆ ಹೀಗೆಯೇ! ಒಂದು ಬಗೆಯ ಆಲಸಿತನ, ಬಿಸಿ ಬಿಸಿ ಪದಾರ್ಥಗಳೇ ಬೇಕು ಎನ್ನುವುದು ಹೆಚ್ಚು. ಹಾಸಿಗೆ ಬಿಟ್ಟು ಮೇಲೆಳುವುದೇ ಬೇಡ ಎನ್ನುವ ಮನದ ತುಡಿತ ಒಂದು ಕಡೆ. ಬೇಸಿಗೆಯಲ್ಲಿ ಬಹುಬೇಗನೆ ಹಾಳಾಗುವ ಆಹಾರ ಪದಾರ್ಥಗಳು, ಚಳಿಗಾಲದಲ್ಲಿ ಹಾಗಾಗುವುದಿಲ್ಲ. ರಾತ್ರಿ ಹೆಪ್ಪು ಹಾಕಿಟ್ಟ ಹಾಲು, ಬೆಳಿಗ್ಗೆಯೂ ಯಾವುದೇ ಬದಲಾವಣೆಯಾಗದೆ ಹಾಗೆಯೇ ಇದ್ದೀತು ! ಇದೆಲ್ಲವೂ ಭಾಸ್ಕರನ ಕಿರಣ ಪ್ರಪಂಚವನ್ನು ತಲುಪುವವರೆಗೆ. ನಂತರ ಯಥಾ ಸ್ಥಿತಿಯಾದರೂ, ಮತ್ತೆ ಸಂಜೆಯಾದಾಗ ಮಲೆನಾಡಿನಲ್ಲಿ ಅದೇ ಚುಮು ಚುಮು ಚಳಿ ಮತ್ತೆ ತನ್ನ ಇರುವಿಕೆನ್ನೂ ಪ್ರಚುರಪಡಿಸುತ್ತದೆ. ಮತ್ತೆ ಚಳಿಯಲ್ಲಿ ಒಳಗೆ ಹೊದ್ದು ಕೂರುವುದೇ ಲೇಸು ಎನಿಸುತ್ತದೆ. ಚಳಿಯ ಪ್ರತಾಪ ಸಹಿಸಲು ಮತ್ತೆ ಸಜ್ಜಾಗುವ ಸಮಯ ಬಂದೇ ಬಿಡುತ್ತದೆ. ಇದೇ ಮಲೆನಾಡಿನ ಚಳಿಗಾಲ! 

(ಲೇಖಕರು ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ, ಎಸ್‌ಡಿಎಂ ಕಾಲೇಜು, ಉಜಿರೆ)