-ಸಾಧನಾ ಶಾಸ್ತ್ರಿ
ಮಲೆನಾಡು ಹಸಿರು ಮಳೆ ಚಳಿ ಇದರಲ್ಲೇ ಇದ್ದ ನನಗೆ ನೀನು ಇಲ್ಲಿ ಓದಿದ್ದು ಸಾಕು ಇನ್ನು ಕುಂದಾಪುರದಲ್ಲಿ ಓದು ಅಂತ ಮನೇಲಿ ಎಲ್ಲರೂ ಹೇಳೋಕೆ ಶುರು ಮಾಡಿದಾಗ ಏನು ಕುಂದಾಪುರನ? ಅದೆಲ್ಲಿ ಇದೆ ಅಂತ ಪೆದ್ದಾಗಿ ಕೇಳಿದ್ದೆ. ನಮ್ಮ ಊರಿನ ಮೇಲೆ ಹೋಗುವ ಎಲ್ಲಾ ಬಸ್ಸುಗಳ ನೇಮ್‌ಪ್ಲೇಟ್ ಮೇಲೆ ಕುಂದಾಪುರ ಎಕ್ಸ್ಪ್ರೆಸ್ ಅನ್ನೋದು ಓದಿದ್ದು ಬಿಟ್ಟರೆ, ಆ ಊರನ್ನು ಒಮ್ಮೆಯೂ ನೋಡಿರಲೇ ಇಲ್ಲ! ಮೊದಲ ಬಾರಿಗೆ ಬಸ್ ಕಂಡಕ್ಟರ್ ಅಪ್ಪನ ಬಳಿ ಟಿಕೆಟ್ ಮಾಡಿಸುವಾಗ ಕುಂದಾಪುರಕ್ಕೆ ಎಷ್ಟ್ ಹೊತ್ತು ಬೇಕು ಎಂದಾಗ ಏನಿಲ್ಲ ಒಂದು ಮೂರು ಗಂಟೆ ಅಷ್ಟೇ ! ಎಂದಿದ್ರು ನಾನಾಗಲೇ ಅಯ್ಯೋ ಮೂರಾ ಎಂದು ಸುಸ್ತಾಗಿದ್ದೆ. ಅಂತೂ ಕುಂದಾಪುರ ಎನ್ನುವ ಊರಿಗೆ ನಾನು ಸೇರಿಯಾಗಿತ್ತು. ಬರೀ ತಂಪಿನ ವಾತಾವರಣ ನೋಡಿದ ನನಗೆ ಇಲ್ಲಿನ ಬಿಸಿಲು ನಿನ್ನ ಕೈಲಿ ಆಗಲ್ಲ ಎನ್ನುವಷ್ಟು ಹೆದರಿಕೆ ಮೂಡಿಸಿತ್ತು. ಭಿನ್ನ ಆಚರಣೆ ; ಭಿನ್ನ ಭಾಷೆ ; ಎಲ್ಲವನ್ನೂ ಕಲಿಯುವ ಅನಿವಾರ್ಯ ಇದ್ದೇ ಇತ್ತು.
ಬೇಸ್ತು ಬೀಳಿಸಿದ ಭಾಷೆ:
ಕುಂದಾಪ್ರ ಕನ್ನಡ ಎನ್ನುವ ಭಾಷೆ ಬಿಟ್ಟು ಇಲ್ಲಿನ ಜನಕ್ಕೆ ಬೇರೆ ಭಾಷೆ ಇದೆ ಎನ್ನುವುದು ಗೊತ್ತಿಲ್ಲ. ನನಗೋ ಇವರ ಭಾಷೆ ಅರ್ಥವಾಗದೆ ಆದ ಯಡವಟ್ಟು ಒಂದೆರಡಲ್ಲ. ಮೊದಲ ಬಾರಿ ಕಾಲೇಜಿಗೆ ಹೋಗುವ ಭಯ ಒಂದೆಡೆ. ಹೇಗೋ ಧೈರ್ಯ ಮಾಡಿ ಹೊರಟಾಗ ಜಾಗ್ರತೆ ಅಕಾ ಅಂತ ಸೀನಿಯರ್ ಹೇಳಿದ್ದು ಕೇಳಿ, ಅಕ್ಕಾ ನಾನು ಚಿಕ್ಕವಳು ಯಾಕೆ ಅಕ್ಕಾ ಅಂತೀರಾ ಅಂದಿದ್ದೆ! ಅಯ್ಯೋ ಹೆಣಾ ಅದು ಅಕ್ಕಾ ಅಲ್ದೇ ಅಕಾ ಅಂದ್ರೆ ಆಯ್ತಾ ಅಂತ ಅರ್ಥ ಅಂದಿದ್ರು. ಹೆಣ ಎಲ್ಲಿದೆ ಅಂತ ಮತ್ತೆ ಹೆದರಿ ಕೇಳಿದ್ದಕ್ಕೆ, ಹೆಣ ಅಲ್ವೇ ಹೆಣ್ಣೇ ಅಂತ; ಇಲ್ಲಿ ಭಾಷೆ ಕಲಿದೇ ಹೆಂಗ್ ಬದ್ಕ್ತೆ ನೀನು ಅಂತ ನಕ್ಕಿದ್ದು ಇನ್ನೂ ನೆನಪಿದೆ. ಇಲ್ಲಿನ ಭಾಷೆಯೇ ಹಾಗೆ! ಒಂಥರ ವಿಚಿತ್ರ ಅನ್ನಿಸ್ತಾ ಇದ್ರು ಈಗೀಗ ಅಭ್ಯಾಸ ಆಗಿ ಇಷ್ಟ ಆಗಿದೆ. ಎಲ್ಲವನ್ನೂ ಶಾರ್ಟ್ಕಟ್ ಆಗಿ ಹೇಳೋದು; ಊಟ ಆಯ್ತಾ ಅನ್ನುವ ಬದಲು ಉಂಡ್ಯ, ಬರೆದು ಬರಬೇಕಾ ಅನ್ನೋಕೆ ಬರ್ಕಬರ್ಕ, ಇದಂತೂ ನಾನು ಮೊದಲು ಮಂಗ ಅಂತ ಮಾಡಿದ್ದೆ. ಹೋಗಿ ಅನ್ನೋಕೆ ಹೊಯ್ನಿ! ಕನ್ನಡವ ಬೇರೆ ಭಾಷೆಯ ಅಂತ ಎಷ್ಟೋ ಬಾರಿ ಅನ್ನಿಸಿದ್ದು ಇದೆ ; ಇಲ್ಲಿನ ಜನ ಎಂತ ಬೇಕಾರು ಬಿಡ್ತೋ ಭಾಷಿ ಬಿಡುದಿಲ್ಲ ಅನ್ನೋದು ನಿಜಕ್ಕೂ ಸತ್ಯ . ಮಲೆನಾಡಿನ ಕನ್ನಡಕ್ಕೂ ಇವರ ಶುದ್ಧ ಕರಾವಳಿ ಕನ್ನಡಕ್ಕೂ ಎಷ್ಟು ವ್ಯತ್ಯಾಸ. ಬೈಗುಳ ಕೂಡ ಹಾಗೆ, ಇಲ್ಲಿ ಮಾತಿಗೆ ಮುಂಚೆ ಹೆಕ್ಕ ತಿಂಬವ ಎಂದು ನಗ್ತಾರೆ! ಹ್ವಾಯ್ ಹೆಂಗಿದ್ರಿ ಎಲ್ಲಾ ಸಾಪ ಅಂತ ಹೇಳದೇ ಮಾತು ಶುರುವಾಗಲ್ಲ; ಭಾಷೆ ಕಲಿದೇ ಇದ್ದರೆ ಬೇರೆಯೋದೆ ಇಲ್ಲ ನಮ್ಮ ಜೊತೆಗೆ.
ಕಾಡು-ಕಡಲ ಮಧ್ಯೆ ಜೀವನ:
ಬರೀ ಹಳ್ಳ ಕೊಳ್ಳ ಜಲಪಾತ ಅಲ್ಲಿದ್ದ ನೀರು ಮಾತ್ರವೇ ಚೆಂದ ಎಂದು ತಿಳಿದಿದ್ದ ನನಗೆ ಅದೆಷ್ಟು ನೋಡಿದರೂ ಮುಗಿಯದ ಸಮುದ್ರಗಳ ನೋಡಿ ಅಬ್ಬಾ ಎನಿಸಿತ್ತು. ಕಡಲ ತೀರದ ಊರು ಎಷ್ಟು ಚೆಂದವಿದೆ. ಅತ್ತ ಕಣ್ಣು ಹಾಯಿಸಿದಷ್ಟೂ ದೂರವೂ ಸಮುದ್ರ, ಮರಳ ರಾಶಿಯಲ್ಲಿ ಕುಳಿತು ಅಲೆಗಳ ನೋಡೋದೇ ಖುಷಿ. ಸೂರ್ಯ ಮುಳುಗುವ ಹೊತ್ತು ಕಣ್ಣಿಗೆ ನಿಜಕ್ಕೂ ಹಬ್ಬ. ಮೊದಲೆಲ್ಲ ಈ ಊರು ಅಂತ ಹೇಳುತ್ತಿದ್ದ ನಾನು ದಿನ ಕಳೆದ ಹಾಗೆ ‘ನಮ್ಮ ಕುಂದಾಪ್ರ’ ಎಂದು ಹೇಳಲು ಶುರು ಮಾಡಿದ್ದೆ! ಅತ್ತ ದೊಡ್ಡ ಪಟ್ಟಣವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಊರಿದು. ಇನ್ನೂ ವಿಶೇಷ ಅಂದರೆ ಇಲ್ಲಿ ಕೆಲವು ಊರುಗಳು ನೀರಿನ ಮಧ್ಯೆ ಇರೋದು. ನನಗಂತೂ ಮೊದಲ ಬಾರಿ ಆ ಊರುಗಳನ್ನು ನೋಡಿದಾಗ ಅಬ್ಬಾ ಇವರೆಲ್ಲ ನೀರಿನ ನಡುವೆ ಹೇಗೆ ಇರುತ್ತಾರೆಂದು ಹೆದರಿಕೆ ಆಗಿತ್ತು. ಆಚೆ ಕಾಡು ಇದೆ ಈಚೆ ಕಡಲು ಇದೆ. ಮಧ್ಯದ ಜೀವನ ಇಲ್ಲಿಯವರದ್ದು.
ಇಷ್ಟೆಲ್ಲದರ ಮಧ್ಯೆ ನಂಗೆ ಹಲವು ಬಾರಿ ತಮಾಷೆ ಆಗಿದ್ದು ಕಾಲೇಜಿನ ಹೆಸರು. ಭಂಡಾರಕಾರ್ಸ್ ಎನ್ನುವ ಹೆಸರನ್ನ ನಾನು ಹೆಚ್ಚು ಕಡಿಮೆ ಒಂದು ವರ್ಷ ಭಂಡಾರ್ ಕರ ಕಾಲೇಜು ಎಂದೇ ಹೇಳುತ್ತಿದ್ದೆ. ಎಂತ ನಿನ್ ಕಾಲೇಜಿನ ಹೆಸ್ರು ಹೇಳೋಕೆ ಬರಲ್ವಾ ಅಂತ ಎಷ್ಟೋ ಜನ ನಗ್ತಾ ಇದ್ರು. ಕಾಲೇಜ್ ಹೆಸ್ರು ಹೇಳುಕ್ ಆಗ್ದಿರ್ ಮೇಲ್ ಇಲ್ ಎಂತ ಮಾಡ್ತಿ ಗೆಂಟಿ ಮೆಯ್ಸುಕ್ ಹೋಗ್ ಅಂತ ಜೊತೇಲಿ ಇರೋರು ಹೇಳ್ತಾ ಇದ್ರು. ಗೆಂಟಿ ಅಂದ್ರೆ ದನ ಅಂತ ಈಗೀಗ ಗೊತ್ತಾಗಿದ್ದು.
ತುಸು ಹೆಚ್ಚೇ ಎನ್ನುವಷ್ಟು ದೇವರ ಮೇಲೆ ಭಕ್ತಿ ಇರೋದು ಇಲ್ಲೇ ಅನಿಸುತ್ತದೆ. ಪ್ರತಿ ಕೆಲ್ಸಕ್ಕೂ ದೇವರ ಒಪ್ಪಿಗೆ ಬೇಕು. ದೇವರ ಪ್ರಸಾದ ಆಗದೆ ಇದ್ದರೆ ಎಷ್ಟೇ ಮುಖ್ಯದ ಕೆಲಸವೇ ಆದ್ರೂ ಮಾಡೋದಿಲ್ಲ. ದೈವದ ಮನೆ ಪಂಜುರ್ಲಿ ಗುಳಿಗ ನಾಗಾರಾಧನೆ ಜಾಸ್ತಿ. ಅಂದಹಾಗೆ ಇಲ್ಲೆಲ್ಲ ಹೇಗೆ ಅಂದ್ರೆ ಅವರ ಎಲ್ಲ ಕೆಲಸವನ್ನೂ ಬಿಟ್ಟು ದೇವಸ್ಥಾನಕ್ಕೆ ವಾರಕ್ಕೆ ಒಮ್ಮೆ ಆದ್ರೂ ಇಡೀ ಕುಟುಂಬವೇ ಹೋಗಿ ಬರ್ತಾರೆ. ಇಲ್ಲಿನ ಜನರ ಹಾಗ್ ಯಾರೂ ಹೋಗಲ್ಲ ನಾನು ನೋಡಿದ ಹಾಗೆ.
ಹೋಯ್ ಇಲ್ ಕೇಣಿ ಅಂತಾನೆ ಮಾತು ಶುರು ಮಾಡೋ ಮಂದಿ ಹುಡುಗೀರಾದ್ರೆ ಹೆಣೇ ಅಂತ ಶುರುವಾದರೆ ಹುಡುಗರಿಗೆ ಗಡಾ ಅಂತಾರೆ. ಇದೆಲ್ಲಿಂದ ಈ ಭಾಷೆ ಶುರುವಾಯ್ತು ದೇವ್ರೆ ಅಂತ ಅನ್ನಿಸ್ತಾ ಇರತ್ತೆ. ನಾವು ಹೇಳೋದು ಒಂದಾದರೆ ಇವರಿಗೆ ಅರ್ಥ ಆಗೋದು ಇನ್ನೊಂದು. ಬೇಸಿಗೆ ಬರ್ತಾ ಇದೆ ಅಂದ್ರೆ ಇಲ್ಲಿ ಬೆಂಕಿ ಬಿದ್ದ ಸೆಕೆ ಶುರುವಾದರೆ ಮಳೆಗಾಲದಲ್ಲಿ ಅಷ್ಟೇ ಮಳೆ. ಚಳಿಯೂ ಇರುವ ವಾತಾವರಣ ಯಾರಿಗೇ ಆದ್ರೂ ಬಹಳ ಬೇಗ ಒಗ್ಗಿ ಹೋಗತ್ತೆ. ಜನಗಳೂ ಹಾಗೆ ಕೊಂಚ ಮಾತು ಅರ್ಥ ಆಗಲ್ಲ ಅನ್ನೋದು ಬಿಟ್ರೆ ಎಲ್ಲರಿಗೂ ಮಗಾ ಎಂದು ರಾಶಿ ಪ್ರೀತಿ ಕೊಡ್ತಾರೆ. ಇಷ್ಟೆಲ್ಲಾ ಕುಂದಾಪುರ ಅಂತ ಹೇಳಿ ಶಂಕರ ಮಲ್ಲಿಗೆ ಬಗ್ಗೆ ಹೇಳದೆ ಇದ್ರೆ ಹೇಗೆ ಹೇಳಿ? ಇಲ್ಲಿನ ಘಮ ಘಮ ಮಲ್ಲಿಗೆಗೆ ಎಲ್ಲೆಡೆ ಬೇಡಿಕೆ ಇದೆ. ನಿಮ್ಮೂರಲ್ಲಿ ಏನಿದೆ ಅಂದ್ರೆ ನಾನು ಜಲಪಾತ ಕೋಟೆ ಬೆಟ್ಟ ಅಂತಾ ಇದ್ದೆ. ಆದ್ರೆ ಇಲ್ಲಿನ ಜನ ಹಾಗಲ್ಲ. ಒಂದು ಬೀದಿಗೆ ಒಂದು ದೇವಸ್ಥಾನ! ಕಡಲ ತೀರ ಬಿಟ್ರೆ ನೋಡೋಕೆ ಅಂತ ಇರೋದು ಬರೀ ದೇವಸ್ಥಾನ. ಅದೆಷ್ಟಿದೆ ಅಂತ ಈ ಉರೋರಿಗೆ ಗೊತ್ತಿದೆಯೋ ಇಲ್ಲವೋ ನಂಗೆ ಅನುಮಾನ. ಫಿಶ್ ಫ್ರೈ ತುಂಬಾ ಹೆಸ್ರು ಮಾಡಿದೆ ಅಂತಾರೆ. ಕುಂದಾಪುರ ಹೋಗಿ ಮೀನ್ ತಿಂದೇ ಹಾಗೆ ಬರೋಕೆ ಆಗತ್ತಾ ಅಂತ ಹೇಳಿದ್ದು ನಾನು ತುಂಬಾ ಸಲ ಕೇಳಿದಿನಿ.
ಎಷ್ಟೋ ಕಾಲದ ಇತಿಹಾಸ ಇರೋ ವಂಡಾರು ಕಂಬಳ ನೋಡೋದೇ ಚಂದ. ಈಗೀಗ ಕಾಂತಾರ ಬಂದಮೇಲೆ ಕೆರಾಡಿ ಕಂಬಳ ಅಂತ ಜನ ಹೇಳ್ತಾ ಇದ್ರೂ ವಂಡಾರು ಕಂಬಳದ ಹೆಸರೇ ಬೇರೆ ಇದೆ. ಯಕ್ಷಗಾನಂ ವಿಶ್ವಗಾನಂ ಅನ್ನೋದು ಇಲ್ಲಂತೂ ಸತ್ಯ. ಮಂದಾರ್ತಿ ಮೇಳ, ಸಾಲಿಗ್ರಾಮ, ಪೆರ್ಡೂರು ಮೇಳದ ಆಟ ಇದೆ ಅಂದ್ರೆ ಟಿಕೆಟ್ ವಾರದ ಮುಂಚೆಯೇ ಖಾಲಿ ಅಂತಾರೆ. ನಮ್ಮ ಭಾಷೆ ನಮ್ಮ ಸಂಸ್ಕೃತಿ ಮೇಲೆ ಇವರಿಗೆ ಇರುವ ಅಭಿಮಾನ ನಿಜವಾಗಿಯೂ ನನಗೇ ಇಲ್ಲ. ಹೊಸ ಜನರ ಬಳಿ ನಾವೋ ಅವ್ರ ಭಾಷೇಲಿ ಮಾತಾಡಿ ಹತ್ತಿರ ಆಗುವ ಕಾಲದಲ್ಲಿ ಇಲ್ಲಿನ ಜನ ಹಾಗಲ್ಲ ‘ಜಾಪ್ ಬಿಡ್ ಕುಂದಾಪ್ರ ಕನ್ನಡ ಮಾತಾಡ್’ ಅಂತ ಭಾಷೆಯೇ ಬರದ ನಮಗೂ ಭಾಷೆ ಕಳಿಸಿ ನಮ್ಮನ್ನೂ ಅವರ ಜೊತೆ ಸೇರಿಸಿಕೊಳ್ತಾರೆ.
ಜಾತಿ ವರ್ಗ ಅನ್ನೋದಕ್ಕಿಂತ ಮಾತು ಪ್ರೀತಿ ವಿಶ್ವಾಸ ಮುಖ್ಯ ಅನ್ನೋದು ಇಲ್ಲಿನವರು ಚೆನ್ನಾಗೇ ಅರ್ಥ ಮಾಡಿಕೊಂಡು ಬದಕ್ತಾರೆ. ಕಲೆ ಸಾಹಿತ್ಯ ಸಂಸ್ಕೃತಿ ಎಲ್ಲದರಲ್ಲೂ ಸದಭಿರುಚಿ ಇವರಿಗೆ ಚೆನ್ನಾಗೇ ಇದೆ . ಕಾರಂತರ ಊರು; ಅದು ಎಲ್ಲರಿಗೂ ಹೆಮ್ಮೆಯೇ! ಇದ್ದ ನಾಲ್ಕು ವರ್ಷಗಳಲ್ಲಿ ನಾನು ಇಲ್ಲಿಯ ಹುಡುಗಿಯೇ ಎನ್ನುವಷ್ಟು ಆಪ್ತತೆ ಈ ಊರು ನೀಡಿದೆ. ಎಲ್ ಇರೋದು ಅಂತ ಕೇಳಿದ್ರೆ ಕುಂದಾಪ್ರ ಅಂತ ಹೇಳೋಕೆ ಖುಷಿ ಜೊತೆಗೆ ಹೆಮ್ಮೆಯೂ ಇದ್ದೇ ಇದೆ. ಪೂರ್ತಿ ವಿರುದ್ಧವಾದ ಜಾಗಕ್ಕೆ ಹೊಂದಿಕೊಳ್ಳುವ ಹೊತ್ತಿಗೆ ಆಗುವ ತೊಂದರೆಗಳೇ ಕೊನೆಗೆ ಸದಾ ನೆನಪಿನಲ್ಲಿ ಉಳಿಯುವ ಸುಂದರ ಕ್ಷಣಗಳಾಗಿ ಹೋಗುತ್ತದೆ.
(ಲೇಖಕರು ತೃತೀಯ ವರ್ಷದ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ, ಭಂಡಾರಕರ್ಸ್ ಕಾಲೇಜು, ಕುಂದಾಪುರ)